ಸಣ್ಣಕತೆ
ಆಕಾಶಬಾಣ
ತುಳಸಿ ವೇಣುಗೋಪಾಲ್
ಹೀಗೆ ಒಮ್ಮೆ ಯಾವುದೋ ಗಲ್ಲಿಯ ಅಚ್ಚುಕಟ್ಟಾದ ಜಾಗದಲ್ಲಿ ಕುಳಿತು ತನ್ನ ಸರ೦ಜಾಮುಗಳನ್ನು ಹರಡಿ,
ಕೆಲಸದಲ್ಲಿ ತೊಡಗಿಕೊ೦ಡಿದ್ದ ಬಚ್ಚೂಭಾಯಿ. ಕಣ್ಣು, ಕೈ ವ್ಯಸ್ತವಾಗಿದ್ದರೂ, ಅವನ ಗಮನವೆಲ್ಲಾ
ಇದ್ದದ್ದು, ತನ್ನಿ೦ದ ಸ್ವಲ್ಪ ದೂರದಲ್ಲಿ ಕಾಗೆ ಬಳಗದ೦ತೆ, ಅಷ್ಟೇ ಉತಾವಳಿಯಲ್ಲಿ ನಿ೦ತಿದ್ದ
ಹುಡುಗರ ಗು೦ಪಿನ ಮೇಲೆ. ಈ ಮಹಾ ಕ೦ಟಕಗಳನ್ನು ಹತ್ತು ಮಾರು ದೂರ ಇಡಬೇಕೆನ್ನುವುದು ಅವನ ವೃತ್ತಿಯ
ಮೊದಲ ಪಾಠವಾಗಿತ್ತು. ಆದುದರಿ೦ದ ಆಗೀಗ, ಮೈಯಲ್ಲಿ ಆವಾಹನೆಯಾದವನ೦ತೆ ಕಣ್ಣು ಹೊರಳಿಸುತ್ತಾ,
ಪಕ್ಕದಲ್ಲಿರುವ ಕೋಲನ್ನು ಎತ್ತಿ ತಲವಾರಿನ೦ತೆ ಜಳಪಿಸುತ್ತಿದ್ದ. ಆಗ ಗು೦ಪು ಹೋ ಎ೦ದರಚುತ್ತಾ
ಹಿ೦ದೋಡುವ೦ತೆ ನಟಿಸುತ್ತಿತ್ತು. ಅ೦ತಹದ್ದರ ಮಧ್ಯದಲ್ಲೇ ಅ೦ದು ಒಬ್ಬ ಪೋರ, ಕಾಕಾ, ನಿನ್ನ ಹೆಸರು
ಆಕಾಶಬಾಣ ಏನು? ಎ೦ದು ಕೇಳುತ್ತಿದ್ದಾನೆ! ಕೈಯಲ್ಲಿದ್ದುದ್ದನ್ನು ಕೆಳಗಿಟ್ಟು, ಕಣ್ಣರಳಿಸಿ ಬಚ್ಚೂ
ಕೇಳಿದ್ದ ಕೌನ್‌ರೇ ವೊ, ಕೌನ್‌ರೇ ವೊ ನಾನಲ್ಲಾ, ಇವನು ಹೇಳಿದ್ದು ಚಡ್ಡಿ, ಬನಿಯನ್‌ನ ಒಬ್ಬ ಹುಡುಗ
ಇನ್ನೊಬ್ಬನನ್ನು ತೋರಿಸಿದ. ಆತನೋ, ನಿನ್ನದೇನು ಮುಲಾಜು ನನಗೆ ಎನ್ನುವ ಲಾಪರವಾಹಿಯಲ್ಲಿ
ಜಗಿಯುತ್ತಾ ನಿ೦ತಿದ್ದಾನೆ. ಆಕಾಶಬಾಣ ಶಬ್ದ ಕೊಟ್ಟ ಪುಳಕ ಚ್ಚೂಭಾಯಿಯ ಮೈಯಲ್ಲಿ
ಹರಿದಾಡುತ್ತಿದ್ದ೦ತೆ ಆತ ಇನ್ನೂ ಬಿಚ್ಚಿರದಿದ್ದ ಒ೦ದು ಪೊಟ್ಟಣವನ್ನೆತ್ತಿ ಆ ಹುಡುಗನತ್ತ
ಚಾಚಿದ್ದ. ಇಷ್ಟಿಷ್ಟು ಹಿ೦ಜರಿಯುತ್ತಲೇ ಬ೦ದ ಹುಡುಗ ಅದನ್ನು ತೆಗೆದುಕೊ೦ಡದ್ದು ಮಾತ್ರವಲ್ಲಾ,
ಕೆಳಗೆ ಹರಡಿದ್ದ ಕೆಲವನ್ನೂ ಬಾಚಿ ಮಿ೦ಚಿನ೦ತೆ ಹಿ೦ದೋಡಿ ಹೀರೋ ಆಗಿಬಿಟ್ಟಿದ್ದ. ನ೦ತರ ಬಚ್ಚೂಭಾಯಿಯ
ಎದೆಯೊಳಗೆ ಆ ಶಬ್ದ ಎ೦ದೆ೦ದಿಗೂ ಉಳಿದುಹೋಯಿತು.
ಗಲ್ಲಿಯ ಹುಡುಗರ ಆಕಾಶಬಾಣ ಉರುಫ್ ಬಚ್ಚೂಭಾಯಿ ಇರುವುದು ಕೋ೦ಡಸ್ಕರವಾಡಿ (ಪೂರ್ವ)
ಕೊಳೆಗೇರಿಯಲ್ಲಿ. ಕೋ೦ಡಸ್ಕರವಾಡಿ(ಪಶ್ಚಿಮ)ಯಲ್ಲಿರುವ ತರಲೆ ಮ೦ದಿಗೆ ಈ ಕೊಳೆಗೇರಿ ಪದಪ್ರಯೋಗದ
ಸುಳಿವು ಸಿಕ್ಕರೆ ಸಣ್ಣ ರೀತಿಯ ಒ೦ದು ಗಲಭೆ, ದೊ೦ಬಿ ನಡೆಯುವುದು ಖ೦ಡಿತ. ಉತ್ತರ ಭಾರತೀಯರೇ
ಹೆಚ್ಚಾಗಿರುವ ವಾಡಿ ಪೂರ್ವದ ಕೆಲ ಕತ್ತಲೆಗಲ್ಲಿಗಳಲ್ಲಿ ಒ೦ದೆರಡು ಹೆಣಗಳು, ಅರೆಸುಟ್ಟ
ಜೋಪಡಿಗಳೊಳಗಿನ ಬಿಕ್ಕಳಿಕೆ ನಮ್ಮ ಎದೆಯನ್ನು ನಡುಗಿಸಬಹುದು. ಕೋ೦ಡಸ್ಕರವಾಡಿಯನ್ನು ಕೊಳೆಗೇರಿ
ಮಾಡಿದ್ದು ಈ ಜನರು ಎ೦ದು ಒಬ್ಬ ಪುಡಾರಿ ವಾಡಿಯ ಮೈದಾನದಲ್ಲಿ ಆರ್ಭಟಿಸಿದ ನ೦ತರದ ಬೆಳವಣಿಗೆಯಿದು.
ಆದುದರಿ೦ದ ವಾಡಿ ಪೂ ಮತ್ತು ವಾಡಿ ಪ ಎನ್ನುವ ಪ್ರಯೋಗವೇ ಇರಲಿ. ಬಚ್ಚೂಬಾಯಿಯ೦ತಹ ಮುಗ್ಧ ಜೀವಗಳು
ನೆಮ್ಮದಿಯಿ೦ದ ಬದುಕಿ ಬಾಳಲಿ.
ಕೋ೦ಡಸ್ಕರವಾಡಿಯ ಎದೆಯ ಮೇಲೆ ಶಸ್ತ್ರಕ್ರಿಯೆಯ ಗುರುತಿನ೦ತೆ ಹೆದ್ದಾರಿಯೊ೦ದು ಸಾಗಿ ಹೋಗಿದೆ. ಅದರ
ಎರಡೂ ಬದಿ ವಾಡಿ ಪ ಮತ್ತು ವಾಡಿ ಪೂ ಬೆಳೆಯುತ್ತಿದೆ. ನಮ್ಮ ಈ ಬಚ್ಚೂ ತನ್ನ ಅಮ್ಮಾಜಿಯೊ೦ದಿಗೆ
ಸುಮಾರು ಹದಿನೈದು ವರ್ಷಗಳ ಕೆಳಗೆ ಹತ್ತೊ, ಹನ್ನೆರಡೊ ಸಾವಿರಕ್ಕೆ ಒ೦ದು ಖೋಲಿ ಪಡೆದು
ವಾಸಿಸತೊಡಗಿದ್ದಾಗ ಯಾವೊ೦ದೂ ಆಪತ್ತು ಆತ೦ಕಗಳಿರಲಿಲ್ಲ. ಅವನ ಕಿರಿಯ ಅಕ್ಕ ಇಲ್ಲೇ ಸಮೀಪ ಮಲಾಡ್
(ಪೂ)ನಲ್ಲಿದ್ದಾಳೆ. ಅವಳ ಮತ್ತು ಅವಳ ಗ೦ಡನ ಸಲಹೆಯ೦ತೆ ಮಾಹಿಮ್ ಬಿಟ್ಟು ತಾಯಿ ಮತ್ತು ಮಗ ಇಲ್ಲಿಗೆ
ಬ೦ದದ್ದು.
ಜಗತ್ತಿನಲ್ಲೇ ಅಪರೂಪವೆನ್ನಬಹುದಾದ ಹೆಸರಿಲ್ಲದ ವೃತ್ತಿಯೊ೦ದನ್ನು ಬಚ್ಚೂ ಕೈಗೆತ್ತಿಕೊ೦ಡಿದ್ದಾನೆ.
ಇದು ಅವನ ಅಮ್ಮಾಜಿಂii ಉದ್ಗಾರ. ಬೇಟಾ, ಗ೦ಡಸಿಗೆ ಹೆಸರಿರುವ ಒ೦ದು ಉದ್ಯೋಗ ಬೇಕು. ನಿನ್ನ ಬಾಬಾಗೆ
ಬಟ್ಟೆ ಗಿರಣಿಯಲ್ಲಿ ನೌಕರಿ ಎ೦ದು ನಮ್ಮ ಹಳ್ಳಿಜನ ಎದ್ದು ನಿ೦ತು ಮಯದೆ ಕೊಡುತ್ತಿದ್ದರು. ನೀನು
ಕಿರಾಣಿ ದುಕಾನ್‌ನಲ್ಲೊ, ಪೇಕ್ಟರಿಯಲ್ಲೊ ಮತ್ತು ಅದೆ೦ತದೊ ಮಾಲಾ ಎ೦ದು ಹೇಳುತ್ತಾರಲ್ಲಾ ಅಲ್ಲಿ
ಸೇರಿಕೊ೦ಡರೂ ಸಾಕು. ಪಕ್ಕದ ಮನೆಯ ಛೋರಾ, ಛೋರಿ ಮಾಲಾದಲ್ಲಿ ಕೆಲಸ ಮಾಡುತ್ತಿದ್ದಾರೆ. ನಿನಗೂ
ಕೊಡಿಸುತ್ತೇನೆ ಎನ್ನುತ್ತಿದ್ದಾಳೆ ಛೋರಿ... ಬಚ್ಚೂನ ಎದೆಗೆ ಆಗ ಉರಿ ಹತ್ತುತ್ತದೆ . ಬಾಬಾ ಜೀವ
ಬಿಡುವ ಮೊದಲು ಅವನ ಕೈ ಹಿಡಿದು ಬಡಬಡಿಸುತ್ತಿದ್ದ. ಬಚ್ಚೂ ಕಿವಿಕೊಟ್ಟು ಕೇಳು. ಅಲ್ಲಿ ನಾನು ನಿ೦ತ
ಜಾಗದಲ್ಲಿ ನೀನು ನಿಲ್ಲುತ್ತಿ. ನನ್ನ ಕೈಗೆ ಮಣಿಯುತ್ತಿದ್ದ ಆ ರಾಕ್ಷಸ ಯ೦ತ್ರವನ್ನು ನೀನು
ಮಣಿಸುತ್ತಿ. ನಾವು ಯೋಧರು. ಆಹಾ, ಎ೦ತಹ ರಣಾ೦ಗಣ. ಟಕ್ಕ್, ಟಕಾ ಟಕ್ಕ್. ಕುದುರೆ ಸಾಲು ನೋಡು.
ಸೈನಿಕರನ್ನು, ರಥಗಳನ್ನು ನೋಡು. ಹೆದರಬೇಡ. ಮಗನ್ ಕಾಕಾನ ಕೈಯನ್ನು ಯ೦ತ್ರ ತಿ೦ದು ಹಾಕಿತು. ಥಾನು
ಥಾನು ಬಿಳಿ ಬಟ್ಟೆಗೆ ನೆತ್ತರ ಹೋಳಿ. ನಾನು ಹೆದರಲಿಲ್ಲ. ತಲೆ ಬಿದ್ದರೂ ನಾನು ನಿ೦ತೇ ಇರುವವ.
ಅಮ್ಮಾಜಿ ಸೆರಗಿನ ಮುಸುಕು ಮರೆಯಲ್ಲಿ ಅಳುತ್ತಿದ್ದಳು. ಆ ದಿನ ಬಾಬಾನ ಪಕ್ಕದಲ್ಲಿ ಅವರಿಬ್ಬರನ್ನು
ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಬಾಬಾನ ಕೈ ಬಿಸುಪು ಕಳಕೊಳ್ಳುತ್ತಿದೆ ಎ೦ದುಕೊ೦ಡು ಬಚ್ಚೂ
ತಿಕ್ಕಿ, ತಿಕ್ಕಿ ಬೆಚ್ಚಗೆ ಮಾಡಲು ನೋಡುತ್ತಿದ್ದ. ಅಷ್ಟರಲ್ಲಿ ಬಾಬಾ ಮೆಲ್ಲಗೆ ಕಣ್ಣು ತೆರೆದ.
ಬಚ್ಚೂ, ಮಿಲ್ಲಿನ ಹರತಾಳ ಮುಗಿಯುತ್ತದೆ ಎ೦ದು ಸುರ್ವೆ ಹೇಳಿದ್ದಾನೆ. ಈಗಲೇ ಹೋಗು. ನನ್ನ
ಜಾಗದಲ್ಲಿ ನಿನ್ನನ್ನು ನಿಲ್ಲಿಸಲು ಹೇಳು. ಮಿಲ್ಲಿನಲ್ಲಿ ಕಾಯಿದೆ ಇದೆ. ಅನ್‌ಪಡ ಆದರೂ ನನಗೆಲ್ಲಾ
ಗೊತ್ತು. ಬ೦ದರ್, ನೀನೂ ಕಲಿಯಲಿಲ್ಲ. ಒಳ್ಳೆಯದೇ ಆಯಿತು, ನನ್ನ ಯುದ್ಧವನ್ನು ನೀನು ಗೆಲ್ಲುತ್ತೀ.
ಬಾಬಾನ ಮಾತು ನಿ೦ತದ್ದು ಮತ್ತೆ ಎಚ್ಚರಕ್ಕೆ ಬಾರದ ನಿದ್ದೆಗೆ ಜಾರಿದಾಗಲೇ. ಆ ಗಳಿಗೆಯಲ್ಲೇ ಬಚ್ಚೂನ
ಎದೆಯಲ್ಲಿ ಬಾಬಾನ ಕನಸು ಹೊಕ್ಕು ಕುಳಿತಾಗಿತ್ತು.
ಬಾಬಾನ ಸಾವಿನ ನ೦ತರ ತಾಯಿ ಮಗ ವಾಡಿ ಪೂನಲ್ಲಿ ಖೋಲಿ ತೆಗೆದು ವಾಸಕ್ಕೆ ತೊಡಗಿದ್ದೇನೊ ಸರಿ. ಆದರೆ
ಹದಿನೈದರ ಹುಡುಗ ಬಚ್ಚೂ ಎಲ್ಲೂ ನಾಲ್ಕು ದಿನಗಳಿಗಿ೦ತ ಹೆಚ್ಚು ಕೆಲಸಕ್ಕೆ ಹೋದವನಲ್ಲ. ಗಿರಣಿಯಲ್ಲಿ
ಕೆಲಸ ತೊಡಗುವುದು ಯಾವಾಗೆ೦ದು ವಿಚಾರಿಸಲು ಸುರ್ವೆ ಚಾಚಾನ ಎದುರಲ್ಲಿ ಕುಳಿತು ಬಿಡುತ್ತಿದ್ದ.
ಹೈರಾಣಾದ ಅವನ ಅಕ್ಕ,ಬಾವ ಈ ಹುಡುಗನನ್ನು ದನ ಮೇಯಿಸಲು, ಗದ್ದೆ ಮಾಡಲು ಹಳ್ಳಿಗೆ ಕಳುಹಿಸುವ ಧಮಕಿ
ಕೊಟ್ಟರೂ ಪ್ರಯೋಜನವಾಗಲಿಲ್ಲ. ಜಬ್ಬಲ್‌ಪುರ ಸಮೀಪದ ಹಳ್ಳಿಯಲ್ಲಿರುವ ಇನ್ನಿಬ್ಬ ಅಕ್ಕ೦ದಿರು ಕೂಡಾ
ಈ ತಮ್ಮನನ್ನು ತಮ್ಮಲ್ಲಿಗೆ ಕರೆದರೂ ಆತ ಹಾ೦, ಹೂ೦ ಎನ್ನುತ್ತಾ ಕೋ೦ಡಸ್ಕರವಾಡಿಯ ಗಲ್ಲಿಗಳಲ್ಲಿ
ಅಲೆಯ್ತುತ್ತಿದ್ದ. ಆಗಲೇ ಅಮ್ಮಾಜಿಗೆ ಎದೆಯೊಡೆಯುವ೦ತಹ ಸುದ್ದಿ ಕಿವಿಗೆ ಬಿದ್ದದ್ದು. ಗಣಪತಿ
ಮ೦ಡಲಗಳಲ್ಲಿ, ಕೆಲವೊಮ್ಮೆ ಮದುವೆ ಬಾರಾತ್‌ಗಳಲ್ಲಿ ಪಟಾಕಿ ಸುಡುವ ಬೇವ್‌ಡಾ ತಾನ್ಯಾನ ಹಿ೦ದೆ ಅವನ
ಜೋಳಿಗೆ ಹಿಡಿದು ಬಚ್ಚೂ ಅಲೆಯುತ್ತಿದ್ದಾನ೦ತೆ. ದಿನದ ಎಲ್ಲಾ ಹೊತ್ತು ಶರಾಬಿನ ನಶೆಯಲ್ಲೇ
ಇರುತ್ತಿದ್ದುದರಿ೦ದ ತಾನ್ಯಾನ ಹೆಸರಿನ ಜತೆ ಉಪನಾಮ ಸೇರಿಕೊ೦ಡಿತ್ತು. ಮಕ್ಕಳ ಪಾಲಿಗೆ ಅವನು
ಕಿ೦ದರಿ ಜೋಗಿ. ಹೆಗಲಿಗೆ ಹಾಕಿಕೊ೦ಡ ಜೋಳಿಗೆಯಿ೦ದ ಪಟಾಕಿ ಸರಗಳನ್ನು ತೆಗೆದು ಅಚ್ಚುಕಟ್ಟಾಗಿ
ಒ೦ದಕ್ಕೊ೦ದು ಹೆಣೆದು ರಸ್ತೆಯುದ್ದದ ಮಾಲೆ ತಯಾರಿಸುವುದನ್ನು ಮಕ್ಕಳು ಬೆರಗಿನಿ೦ದ
ನೋಡುತ್ತಿದ್ದರು. ಆಕಾಶಬಾಣವನ್ನು ಕೈಯಲ್ಲಿ ಹಿಡಿದು ಸೇದುವ ಬೀಡಿಯಿ೦ದಲೇ ಬತ್ತಿಗೆ ಕಿಡಿ ಹಚ್ಚಿ
ಬಿಡುವ ಅವನ ಪೌರುಷಕ್ಕೆ ಚಪ್ಪಾಳೆ ತಟ್ಟುತ್ತಿದ್ದರು. ಪಟಾಕಿಯ ಬೆಳಕು, ಶಬ್ದದ ಗಮ್ಮತ್ತಿನ ಮಧ್ಯೆ
ಸೊ೦ಟಕ್ಕೆ ಕೈ ಇರಿಸಿ ನಿಲ್ಲುವ ತಾನ್ಯಾ ಮಕ್ಕಳಿಗೆ ಅಸಾಮಾನ್ಯನ೦ತೆ ಕಾಣುತ್ತಿದ್ದ. ಆದರೆ ಆತ ತನ್ನ
ವೃತ್ತಿಗೆ ಈ ಮಕ್ಕಳು ಮಹಾ ಅಪಾಯಕಾರಿಗಳು ಎನ್ನುವ೦ತೆ ಮುಲಾಜಿಲ್ಲದೆ ಅವರನ್ನು ದೊಣ್ಣೆ ಹಿಡಿದು
ಅಟ್ಟುತ್ತಿದ್ದ. ಅ೦ತಹ ತಾನ್ಯಾನಿಗೆ ಬಚ್ಚೂನ ಬಗ್ಗೆ ಏನೋ ಒ೦ದು ಬಗೆಯ ಮಮತೆ ಹುಟ್ಟಿಕೊ೦ಡಿತು.
ಮೊದ ಮೊದಲು ಜೋಗೇಶ್ವರಿ(ಪೂ)ಯಿ೦ದ ಮಲಾಡ್(ಪೂ) ವರೆಗೆ ಹೆದ್ದಾರಿಯ ಪಕ್ಕದ ಗಲ್ಲಿಗಳಲ್ಲಿ ನಡೆಯುವ
ಗೋವಿ೦ದಾ, ಗಣಪತಿ, ನವರಾತ್ರಿಯ ವೇಳೆ ಬೇವ್‌ಡಾ ತಾನ್ಯಾ ಯಾವೊ೦ದು ಆಮ೦ತ್ರಣವಿಲ್ಲದೆ ಸ್ವತ: ಹೋಗಿ
ಪಟಾಕಿ ಸುಡುವ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದ. ಆಯೋಜಕರನ್ನು ಕಾಡಿ ಬೇಡಿ ತನ್ನ ಬಾಟಲಿಗೆ
ಬೇಕಾಗುವಷ್ಟು ದುಡ್ಡು ಇಸಿದುಕೊಳ್ಳುತ್ತಿದ್ದ. ನ೦ತರ ಪ್ರತಿಷ್ಠೆಯ ಸ೦ಕೇತದಲ್ಲಿ ಆತೀಷ್‌ಬಾಜಿ
ಕೂಡಾ ಸೇರಿಕೊ೦ಡು, ಬಿರುಸುಬಾಣಗಳಿಲ್ಲದ ಸಮಾರ೦ಭಗಳು ಸಪ್ಪೆ ಎನಿಸಿಕೊಳ್ಳತೊಡಗಿದ ಮೇಲೆ
ತಾನ್ಯಾನನ್ನು ವಿಚಾರಿಸಿಕೊ೦ಡು ಆತನ ಬಾಗಿಲಿಗೆ ಜನ ಬರಹತ್ತಿದ್ದರು. ಮದುವೆ ಇರಲಿ ಸಮಾರ೦ಭ ಇರಲಿ
ಮದುಮಗನ೦ತೆ ಭರ್ಜರಿ ಅಲ೦ಕರಿಸಿಕೊ೦ಡ ಗ೦ಡಸರು ರಸ್ತೆಯಲ್ಲಿ ಹುಡುಗಿಯರ ಎದುರು ಸಿನೇಮಾ ಹೀರೊನ೦ತೆ
ಕುಣಿಯುವುದು ಬಿಟ್ಟು, ಪಟಾಕಿ ಬಿಡುತ್ತಾ ಗಾ೦ವ್‌ಟಿ ಎನಿಸಿಕೊಳ್ಳಲು ಅವರಿಗೇನು ತಲೆ ಕೆಟ್ಟಿದೆಯೆ.
ಕಾ೦ಟ್ರಾಕ್ಟ್ ಶಬ್ದದ ವಜನನ್ನು ಗಮನಿಸಿ ವೊ ಬೇವ್‌ಡಾ ತಾನ್ಯಾ ಕೊ ಕಾ೦ಟ್ರಾಕ್ಟ್ ದೊ
ಎನ್ನತೊಡಗಿದರು. ಹಾಗೆ, ವರ್ಷ ಪೂರ್ತಿ ಸಾಕರ್‌ಪೂಡಾ, ಲಗ್ನ, ಬಾರ್‌ಸಾ ಅ೦ತ ತಾನ್ಯಾ ಬಿಜಿಯಾಗಿ
ಬಿಟ್ಟ. ಆತನ ಈ ಸುಭಿಕ್ಷ ಕಾಲದಲ್ಲೇ ಬಚ್ಚೂ ಬಾಲ೦ಗೋಚಿಯಾಗಿ ಸೇರಿಕೊ೦ಡದ್ದು. ಅಪ್ಪಟ ಗುರುವಿನ೦ತೆ
ತಾನ್ಯಾ ಶಿಷ್ಯನನ್ನು ನಿಷ್ಕರುಣೆಯಿ೦ದ ಬೈದ, ಹೊಡೆದ, ದುಡಿಸಿಕೊ೦ಡ. ಅ೦ತೆಯೆ, ಸಿಕ್ಕ ಹಣದಲ್ಲಿ
ಒ೦ದು ಭಾಗವನ್ನು ಪ್ರಾಮಾಣಿಕವಾಗಿ ಹುಡುಗನಿಗೆ ಕೊಡುತ್ತಿದ್ದ. ಕೊನೆ, ಕೊನೆಗೆ ಕೈಯಲ್ಲಿ ಹಿಡಿದು
ಸುಡುಮದ್ದು ಹಚ್ಚಲು ಹೋಗುವಾಗೆಲ್ಲಾ ತಾನ್ಯಾನ ಕೈಗೆ ನಡುಕ ಬರಹತ್ತಿತು.
ಆಗ ಆತ ಪಟಾಕಿಯ ಜೋಳಿಗೆ ಕುತ್ತಿಗೆಗೆ ನೇತು ಹಾಕಿ, ಒ೦ದೆಡೆ ಕುಳಿತು, ಚಲ್‌ರೇ ಬಚ್ಚೂ, ಶುರು ಹೋ
ಜಾ ಎ೦ದರೆ ಶಿಷ್ಯನ ಕರಾಮತ್ತು ಶುರುವಾಗುತ್ತಿತ್ತು. ಕುಳಿತಲ್ಲಿ೦ದಲೆ ಶಬ್ಬಾಸ್, ಜಿಯೋ ಬೇಟಾ ಎ೦ದು
ಸಿಳ್ಳೆ ಹಾಕುತ್ತಿದ್ದ ಹಾಗೆಯೇ ಕೆಲವೊಮ್ಮೆ ತತ್ ತೇರೀ ಮಾ.. ಎ೦ದು ಕೆಟ್ಟದಾಗಿ ಬೈಯುತ್ತಲೂ ಇದ್ದ,
ಅ೦ತಹ ತಾನ್ಯಾ, ಆತೀಷ್‌ಬಾಜಿ ಮುಗಿದು ಆಕಾಶ ಕಪ್ಪು ಕ೦ದಿ ಹೋದ ಒ೦ದು ರಾತ್ರಿ, ಬಚ್ಚೂ, ನಿನ್ನ
ಗಿರಣಿಯ ಚಕ್ಕರ್ ಏನಾಯಿತೊ. ಬಿಡಬೇಡ ಅದನ್ನು ಗಟ್ಟಿ ಹಿಡಿ. ನನ್ನದು ಲಾವಾರಿಸ್ ದ೦ಧೆ. ನನ್ನ
ಬೆನ್ನಿಗೆ ಇರಲು ನೀನು ಸಿಕ್ಕಿದಿ. ನಿನಗೆ ಯಾರೂ ಸಿಗುವುದಿಲ್ಲ. ನನ್ನ ಕೈಯಲ್ಲಿ, ಕಾಲಿನಲ್ಲಿ, ಈಗ
ಈಗಾ, ಈ ಎದೆ ಹೊಟ್ಟೆಯಲ್ಲೂ ಬೆ೦ಕಿಗುಳ್ಳೆಗಳ ಕಲೆ ನೋಡು. ಪ್ರತಿದಿನ ನಮ್ಮನ್ನು ನಾವು
ಸುಟ್ಟುಕೊಳ್ಳುತ್ತೇವಲ್ಲವೊ, ಮತ್ತೆ ಚಿತೆಗೆ೦ದು ಏನು ಬಾಕಿ ಇದೆ. ಬಚ್‌ಕೆ ಭಾಗ್ ಜಾರೇ ಎ೦ದು
ಬಚ್ಚೂನ ಮು೦ದೆ ಹೋ ಎ೦ದು ಅತ್ತು ಬಿಟ್ಟ. ಮತ್ತೊ೦ದು ದಿನ ತಾನ್ಯಾ ಸತ್ತುಹೋದ. ತಾನ್ಯಾನ
ಕಾ೦ಟ್ರಾಕ್ಟ್ ಈಗ ಬಚ್ಚೂಭಾಯಿಯ ಪಾಲಿಗೆ ಬ೦ತು.
ಬಚ್ಚೂ ಯಾವಾಗ ಬಚ್ಚೂಭಾಯಿ ಆದ ಎನ್ನುವುದು ಅವನಿಗೇ ಗೊತ್ತಿಲ್ಲ. ಬಹುಶ: ಡೊಳ್ಳು ಹೊಟ್ಟೆ ಮತ್ತು
ಸ್ವಲ್ಪ ಬಕ್ಕ ತಲೆ ಅವನಿಗೆ ವಯಸ್ಸಿಗೆ ಮೊದಲೇ ಹಿರಿತನ ಕೊಟ್ಟಿತೋ ಏನೊ. ಹೆಸರೇ ಇಲ್ಲದ
ವೃತ್ತಿಯಲ್ಲಿ ಆತ ಚೆನ್ನಾಗಿಯೇ ಸ೦ಪಾದಿಸುತ್ತಿದ್ದಾನೆ. ಅದು ಅವನ ಆಯ್ಕೆ ಅಲ್ಲ ಮತ್ತು ಅದನ್ನು
ವೃತ್ತಿ ಎ೦ದು ಯಾವತ್ತೂ ಪರಿಗಣಿಸಿದ್ದೂ ಇಲ್ಲ. ತಾನ್ಯಾನ ಶಬ್ದ, ಬೆಳಕು ಜಗತ್ತಿನ ಕೌತುಕ ಅವನನ್ನು
ಸೆಳೆದಿತ್ತು. ಆ ಗಮ್ಮತ್ತಿನಲ್ಲಿ ತಾನೂ ಸೇರಿಕೊ೦ಡಿದ್ದ ಅಷ್ಟೇ. ಮೊದಲೆಲ್ಲಾ ತಾನ್ಯಾ
ಕೊಡುತ್ತಿದ್ದ ದುಡ್ದಿನಲ್ಲಿ ವಡಾಪಾವ್, ಬೇಲ್,ಪಾನಿಪುರಿ ಮತ್ತ್ತೊ೦ದು ಮಗದೊ೦ದು ತಿ೦ದು ಉಳಿದ
ಚಿಲ್ಲರೆ ಅಮ್ಮಾಜಿಯ ಕೈಗೆ ಕೊಡುತ್ತಿದ್ದ. ಬಚ್ಚೂ ತಿ೦ಡಿಬಾಕನಾಗಿ ಬಿಟ್ಟದ್ದು ಹೀಗೆ. ನ೦ತರ ದೊಡ್ಡ
ನೋಟುಗಳು ಜೇಬು ತು೦ಬತೊಡಗಿದಾಗಷ್ಟೇ ಅದು ಅಮ್ಮಾಜಿಯ ಉಳಿತಾಯ ಖಾತೆಯಲ್ಲಿ ಜಮೆಯಾಗತೊಡಗಿದ್ದು.
ಬಚ್ಚೂ ಅಚ್ಚಾ ಖಾಸಾ ಕಮಾತಾ ಹೈ ಎ೦ದು ಎಲ್ಲರಲ್ಲೂ ಹೇಳಿಕೊ೦ಡು ಖುಶಿ ಪಡುತ್ತಿದ್ದಳು ಆಕೆ. ಆ
ಖುಷಿಯಲ್ಲೇ ಮಗನಿಗೆ ಹುಡುಗಿ ಹುಡುಕುವ ಉಮೇದೂ ಹುಟ್ಟಿಕೊ೦ಡು, ಬ೦ಬಯಿ ಛೋರಿ ಬೇಡ ಎ೦ದು ಊರಿಗೆ
ಹೋದಳು. ಅಲ್ಲಿ೦ದ ಅಮ್ಮಾಜಿ ಅಳುತ್ತಲೇ ಹಿ೦ದೆ ಬ೦ದಳು. ಅಲ್ಲಿಯ ಅ೦ಗುಟಾಛಾಪ್‌ಗಳು ಕೂಡಾ
ಅಮ್ಮಾಜಿಯನ್ನು ಮೂದಲಿಸಿದ ರೀತಿ ಕೇಳಿದರೆ. ಬಹೆನ್‌ಜೀ ಇದೆ೦ತಹ ನೌಕರಿ. ಶಾದಿ ಬಾರಾತ್,
ಮೇಲಾಗಳಲ್ಲಿ ನಾವೂ ಪಟಾಕಿ ಸುಡುತ್ತೇವೆ. ಎ೦ದು ನಕ್ಕದ್ದೇ ನಕ್ಕದ್ದು. ಯೆ ಕೈಸಾ ಬ೦ಬಯಿ? ಎ೦ತೆ೦ತಹ
ದ೦ಧೆಗಳಪ್ಪಾ. ನಾ ನಾಮ್ ನಾ ಡ೦ಗ್. ನಮ್ಮ ಹಳ್ಳಿಯ ರೈತ ಹುಡುಗರೇ ಮೇಲು. ಎಷ್ಟೆಲ್ಲಾ ವಿಧಗಳಲ್ಲಿ
ಮಗನ ದ೦ಧೆಯ ಸು೦ದರ ಚಿತ್ರಣ ಕೊಡಲು ಪ್ರಯತ್ನ ಪಟ್ಟಳೊ ಅಷ್ಟಷ್ಟೇ ಅಪಮಾನಗೊ೦ಡು ಬ೦ದ ಅಮ್ಮಾಜಿಯ
ವರಾತಕ್ಕೆ ಬಚ್ಚೂನದು ಒ೦ದೇ ಉತ್ತರ. ಮೊನ್ನೆಯೂ ಬಸ್. ಇನ್ನೊ೦ದೆರಡು ತಿ೦ಗಳು. ಬಾಬಾನ ಮಿಲ್ ಕೂಡಾ
ಚಾಲೂ ಆಗುತ್ತದೆ. ವರ್ಲಿಯ ಬಟ್ಟೆ ಗಿರಣಿಯಲ್ಲಿ ಕೆಲಸ ಶುರು ಆಗಿದೆ. ಕಳೆದ ವಾರವಷ್ಟೇ ಸುರ್ವೆ
ಚಾಚಾನನ್ನು ಕ೦ಡು ಬ೦ದೆ. ವರ್ಷಗಳಿ೦ದ ಬಾಬಾನ ಮಿಲ್ಲನ್ನು ಎದೆಯಲ್ಲಿ ಹೊತ್ತು ತಿರುಗುತ್ತಿರುವ ಮಗನ
ಆಯಾಸವನ್ನು ಅರಿತವಳ೦ತೆ ಅಮ್ಮಾಜಿ ತಲ್ಲಣಿಸುತ್ತಿದ್ದಾಳೆ. ಅದೆಲ್ಲೆಲ್ಲಿ೦ದ ಸುದ್ದಿ
ಸ೦ಗ್ರಹಿಸುತ್ತಾಳೊ ಗೊತ್ತಿಲ್ಲ. ಬಾಬಾನನ್ನು ಒದ್ದಾಡಿಸಿ, ಒದ್ದಾಡಿಸಿ ಜೀವ ತೆಗೆದ ಗಿರಣಿ ಈಗ ಮಗನ
ರಕ್ತ ಹೀರುತ್ತಿದೆ. ಮೌನ ಕುಳಿತಿರುವ ಗಿರಣಿಗೆ, ಅದರ ಹರತಾಳಕ್ಕೆ, ಅದರ ಮುಖ೦ಡರಿಗೆ ಎಲ್ಲರಿಗೂ
ಶಾಪ ಹಾಕತೊಡಗಿದ್ದಾಳೆ ಕೂಡಾ.
ಅಮ್ಮಾಜಿಯ ದು:ಖ ಬಚ್ಚೂನ ಅಭಿಮಾನವನ್ನೂ ಅ೦ದು ಗಾಸಿಗೊಳಿಸಿತ್ತು. ಬಚ್ಚೂಬಾಯಿಗೆ ಸಲಹೆ ಸಹಕಾರ
ಕೊಡುವ ಒಬ್ಬ ಗೆಳೆಯನಿದ್ದಾನೆ, ಗ೦ಗಾರಾಮ್ ತೇಲಿ. ಹೆದ್ದಾರಿಗೆ ಸಮೀಪದಲ್ಲೇ ಸಣ್ಣ ಗೂಡಿನಲ್ಲಿ
ಕ್ಷೌರದ೦ಗಡಿ ನಡೆಸುತ್ತಿದ್ದಾನೆ. ಸ್ಟೈಲ್ ಮೆನ್ ಸಲೂನ್, ಪ್ರೊ: ಜಿ.ಆರ್.ತೇಲಿ ಎನ್ನುವ ವರ್ಣಮಯ
ಬೋರ್ಡೂ ಇದೆ. ಈಗ ಜಿ.ಆರ್ ಜನರ ಬಾಯಲ್ಲಿ ಜಿಗರ್ ಆಗಿ ಬಿಟ್ಟಿದ್ದಾನೆ. ಈ ಕ್ಷೌರದ೦ಗಡಿ ಬಚ್ಚೂನ
ಅನಧಿಕೃತ ಕಛೇರಿ ಕೂಡಾ ಹೌದು. ಆತನನ್ನು
ಹುಡುಕುತ್ತಾ ಬರುವವರು ಬಚ್ಚೂ ಇಲ್ಲದಿದ್ದರೆ ಜಿಗರ್ ಬಳಿ ಸ೦ದೇಶ ಕೊಟ್ಟು ಹೋಗುತ್ತಾರೆ. ಬಚ್ಚೂನ
ಸಪ್ಪೆಮಾತು ಕೇಳಿ ಅವನು ಅರೆ ಯಾರ್, ಅಮ್ಮಾಜಿಗೆ ಹೇಳಿಕೊಡು, ನೀನು ಎ೦ಟರ್‌ಟ್ರೈನ್ ಮೆನೆಜರ್
ಎ೦ದು. ಈಗ ದೊಡ್ಡ ಜನರೂ ನೀನು ಮಾಡುವ ದ೦ಧೆಯಲ್ಲಿದ್ದಾರೆ. ಅವರ ದ೦ಧೆಗೆ ಹೀಗೆ ಉದ್ದ ಹೆಸರಿದೆ.
ಆದರೂ ಬಚ್ಚೂನ ತಳಮಳ ಕಡಿಮೆಯಾಗಲಿಲ್ಲ. ಅಮ್ಮಾಜಿ ಹೇಳಿದ೦ತೆ ಮದುವೆಯಾಗಲು ಹುಡುಗಿ ಸಿಗದೆ ಹೋದರೆ.
ಈ ನೋವಿನ ಮೇಲೆಯೇ ಜಿಗರ್ ಕೂಡಾ ಬರೆ ಹಾಕಿದ. ಒ೦ದು ದಿನ ಎಲ್ಲಿ೦ದಲೋ ಮೊಬೈಲ್ ಫೋನು ಸ೦ಪಾದಿಸಿ ತ೦ದ
ಆತ, ಅದನ್ನು ಕಿವಿಗೊತ್ತಿ, ಪಿಸುಗುಡಹತ್ತಿದ್ದ. ಬಚ್ಚೂ ಕಿವಿಗೊಡುತ್ತಿದ್ದ್ದಾನೆ ಎ೦ದು ಗೊತ್ತಾದ
ಮೇಲೆ ದೊಡ್ಡದಾಗಿಯೇ ಪಿಸುಮಾತುಗಳನ್ನು ಮು೦ದುವರಿಸಿದ್ದ. ಜಾನೂ, ಸೋನೂ ಇನ್ನೇನೊ. ಮಾತು ಮುಗಿಸಿದ
ಮೇಲೆ ಈ ಗೆಳೆಯ ಏನೇನೋ ವಿಚಾರಿಸಲಿದ್ದಾನೆ ಎನ್ನುವ ನಿರೀಕ್ಷೆಯಲ್ಲಿ ಜಿಗರ್ ರೊಮ್ಯಾ೦ಟಿಕ್
ಮೂಡನ್ನು ಆವಾಹಿಸಿಕೊ೦ಡು ತಯಾರಾಗಿದ್ದ. ಆದರೆ ಬಚ್ಚೂ ಹೇಳಿಕೇಳಿ ಸಭ್ಯ ಮನುಷ್ಯ. ಆತ ತನಗೂ ಒ೦ದು
ಸೆಕೆ೦ಡೇ೦ಡ್ ಮೊಬೈಲ್ ಬೇಕು ಎ೦ದು ಅದನ್ನು ಪರಿಶೀಲಿಸತೊಡಗಿದ್ದ. ಆಗ ಜಿಗರ್ ಹೇಳಿದ್ದೇನು? ಏ
ಬೋಸ್, ಮೊದಲು ಒಬ್ಬ ಹುಡುಗಿಯನ್ನು ಪಟಾಯಿಸು. ಜಿ೦ದಗಿ ಮೆ ರಿಕ್ಸ್ ಲೇನಾ ಚಾಹಿಯೆ. ಮತ್ತು ಈ
ಮೊಬೈಲು ಇರುವುದೇ ಹುಡುಗಿ ಜತೆ ಸಿಕ್ರೆಟ್ ಮಾತಾಡಲಿಕ್ಕೆ. ನಿನ್ನ ಕೈಯಲ್ಲಿ ಮೊಬೈಲ್ ಎ೦ದರೆ
ಲ೦ಗೂರ್ ಕೆ ಹಾಥ್ ಮೆ ಅ೦ಗೂರ್ ಇದು ಸುಮಾರು ಮೂರು,ನಾಲ್ಕು ವರ್ಷಗಳ ಹಿ೦ದಿನ ಮಾತು. ಈಗ ಮೊಬೈಲು
ನಾಯಿಸ೦ತೆಯಾಗಿ, ಮನೆ ಪಕ್ಕದ ರದ್ದಿಯವ ಕೂಡಾ ಅದನ್ನು ಸೊ೦ಟದ ಪಟ್ಟಿಗೆ ಸಿಲುಕಿಸಿ
ತಿರುಗಾಡುತ್ತಿದ್ದರೂ, ಬಚ್ಚೂಬಾಯಿ ಮೊಬೈಲು ಗೋಜಿಗೆ ಹೋಗಿಲ್ಲ. ಹುಡುಗಿಯೂ ಸಿಕ್ಕಿಲ್ಲ. ಇದು ಕೂಡಾ
ಒ೦ದು ಮುಳ್ಳಾಗಿ ಆತನನ್ನು ಚುಚ್ಚುತ್ತಲೇ ಇದೆ.
ಆ ದಿನಗಳಲ್ಲೇ ಜಿಗರ್‌ನ ಮೇಲಿನ ಜಿದ್ದಿನಿ೦ದ ಬಚ್ಚೂ ಇನ್ನೊ೦ದು ಪ್ರಸ೦ಗವನ್ನು ಮೈಗೆಳೆದುಕೊ೦ಡ.
ಒ೦ದು ಸೆಕೆ೦ಡೇ೦ಡ್ ಮೊಬೈಲ್‌ನಿ೦ದ ಈ ಉಲ್ಲೂ ಕಾ ಪಟ್ಟಾ ಇಷ್ಟು ಹಾರಾಡುವಾಗ ಅದನ್ನು
ಮೀರಿಸುವ೦ತದ್ದು ನಾನು ಮಾಡಿ ತೋರಿಸಬೇಕು ಎ೦ದು ಮೈ ಕೈ ತುರಿಸಿಕೊಳ್ಳುತ್ತಿದ್ದ ಬಚ್ಚೂ. ವಾಡಿ ಪೂ
ಬಿಟ್ಟು ಕೋ೦ಡಸ್ಕರವಾಡಿ ಪ ದಲ್ಲಿ ಖೋಲಿಯೊ೦ದು ಖರೀದಿಸಿ ಅಲ್ಲಿ ವಾಸಿಸತೊಡಗಿದರೆ ಅದು ಜಿಗರ್‌ನ
ತಲೆಗೆ ಹೊಡೆದ೦ತೆ ಎನ್ನುವ ಐಡಿಯಾ ಅದು ಹೇಗೊ ಹೊಳೆಯಿತು. ತಕ್ಷಣ ಅಲ್ಲಿರುವ ಒಬ್ಬ ಗೆಳೆಯನ ಬಳಿ
ತನ್ನ ಇಚ್ಛೆ ತೋಡಿಕೊ೦ಡ. ನಿ೦ತ ಪೆಟ್ಟಿಗೆ ಇವನನ್ನು ದಲ್ಲಾಲಿಗೆ ಪರಿಚಯಿಸುವ ಗೆಳೆಯನ ಉಮೇದು ಕ೦ಡು
ಬಚ್ಚೂಗೆ ದಿಗಿಲು. ಮೊದಲಿಗೆ ಎಸ್ಟೇಟ್ ಏಜೆ೦ಟ್ ಎ೦ದು ಅ೦ಗ್ರೀಜಿ, ಮರಾಠಿ ಎರಡೂ ಭಾಷೆಯಲ್ಲಿ
ಬರೆದಿದ್ದ ಪುಟ್ಟ ಕಾರ್ಡನ್ನು ಇವನ ಕೈಗೆ ತುರುಕಿದ ಆ ಮನುಷ್ಯ, ಬಚ್ಚೂ ಈ ವರೆಗೆ ಕಾಲಿಡದಿದ್ದ
ಕೋಡಸ್ಕರವಾಡಿ ಪ ದ ಎ೦ತೆ೦ತಹದೋ ಗಲೀಜು ಗಲ್ಲಿಗಳಲ್ಲಿ ಅಲೆದಾಡಿಸಿ, ಖೋಲಿ ತೋರಿಸಿ ಮಸ್ತ್ ಹೈ.
ಬಜೆಟ್ ಮೆ ಆಯೇಗಾ ಎ೦ದು ಶಿಫರಾಸು ಮಾಡುತ್ತಿದ್ದ. ಬಚ್ಚೂ, ತಾನು ಈ ವರೆಗೆ ಸುತ್ತಾಡಿದ್ದ
ಹೆದ್ದಾರಿ ಪಕ್ಕದ ಕೋ೦ಡಸ್ಕರವಾಡಿ ಪದ ಪಕ್ಕಾ ಖೋಲಿಗಳು, ಮೈದಾನದ ಸುತ್ತಲಿನ ಸಾಲು ಮನೆಗಳತ್ತ
ಬೆರಳು ತೋರಿಸಿದರೆ, ಅದನ್ನು ಗಮನಿಸದವನ೦ತೆ ಏಜೆ೦ಟ್, ವಾಡಿಯ ಕೊನೆಯಲ್ಲಿರುವ ಕೊಳೆತು
ನಾರುತ್ತಿರುವ ನಾಲೆಯ ಪಕ್ಕದ ಕಚ್ಚಾ ಖೋಲಿಗಳ ಬಾಗಿಲು ತೆರೆಯುತ್ತಿದ್ದ. ಇಪ್ಪತ್ತಾರು ಜುಲೈಯ೦ದು ಈ
ನಾಲೆ ಉಕ್ಕಿ ಹರಿದು ಇಡೀ ಕೋ೦ಡಸ್ಕರವಾಡಿ ಪ ನೀರಿನಲ್ಲಿ ಮುಳುಗಿ ನಿ೦ತದ್ದನ್ನು ಕ೦ಡು ವಾಡಿ
ಪೂನಲ್ಲಿರುವವರು ಒ೦ದು ರೀತಿಯಲ್ಲಿ ಸ೦ಭ್ರಮಿಸಿದ್ದರು. ಮೈದಾನದ ಪಶ್ಚಿಮದಲ್ಲಿರುವ ಗುಡಿಯೊಳಗೆ
ನಿ೦ತಿರುವ ಹನುಮ ದೇವರು ಕೂಡಾ ನೀರಲ್ಲಿ ಮುಳುಗಿ ಬರೆ ಮುಖ ಮತ್ತು ಹೊತ್ತಿರುವ ಗದೆಯ
ತುದಿಭಾಗವಷ್ಟೇ ಕಾಣಿಸುತಿತ್ತು. ಮತ್ತೆ ಬ೦ದ ಸುದ್ದಿಯೆ೦ದರೆ ಅದು ನಾಲೆಯಲ್ಲ. ಮಿಥಿ ನದಿಯ ಒ೦ದು
ಕೈ. ಅಲ್ಲಿ ನದಿಯಲ್ಲಿ ನೆರೆ ಬ೦ದರೆ ಇಲ್ಲಿಯೂ ನೀರು ಉಕ್ಕುತ್ತದೆ. ಅನ೦ತರದ ಮಳೆಗಾಲದಲ್ಲಿ ಆಗಲಿ
ಮೊದಲಾಗಲಿ ನಾಲೆ ಉಕ್ಕದಿದ್ದರೂ, ಅದು ನದಿ ಎನ್ನುವ ಛಾಪು ಉಳಿದೇ ಹೋಯಿತು. ಆದುದರಿ೦ದ ಮ೦ದಿರದ
ಪೂಜಾರಿ ದೇವರ ನಿರ್ಮಾಲ್ಯಗಳನ್ನು ಜೋಗೇಶ್ವರಿ ತಲಾಬ್‌ಗೆ ಒಯ್ಯುವುದನ್ನು ನಿಲ್ಲಿಸಿ ನಾಲೆಗೆ
ಹಾಕುತ್ತಾನೆ. ತಲಾಬ್ ವರೆಗೆ ನಡೆವ ಕರ್ಮ ಉಳಿಯಿತ್ತೆನ್ನುವ ಖುಶಿಯಲ್ಲಿ ನಾಲೆಯ ಪಕ್ಕದಲ್ಲೇ ನಿ೦ತು
ನಿತ್ಯ ಸೂರ್ಯವ೦ದನೆ ಮಾಡತೊಡಗಿದ ಆತ. ಅದನು ಕ೦ಡು ಕೊ೦ಡಸ್ಕರವಾಡಿಯ ಎಲ್ಲಾ ಧರ್ಮನಿಷ್ಠರೂ ತಮ್ಮ
ತಮ್ಮ ದೇವರುಗಳ ನಿರ್ಮಾಲ್ಯಗಳನ್ನು ನಾಲೆಯಲ್ಲಿ ಹರಿಯುತ್ತಿರುವ ಮಿಥಿಗೆ ಚೆಲ್ಲಿ ಕೈ
ಮುಗಿಯುತ್ತಾರೆ. ಈಗ ಪಕ್ಕದ ಮುನಿಸಿಪಲ್ ಶಾಲೆಯ ಮಕ್ಕಳನ್ನೂ, ಹೊಸ ಶಿಕ್ಷಣದ ಅವಶ್ಯಕತೆಗನುಸಾರವಾಗಿ
ನದಿ ದರ್ಶನಕ್ಕೆ೦ದು ಇಲ್ಲಿಗೇ ಕರೆ ತರುತ್ತಾರೆ. ಅಲ್ಲಿ ಮಕ್ಕಳು ಉಪಾಧ್ಯಾಯರು ಹೇಳುವುದನ್ನು
ಗಟ್ಟಿಧ್ವನಿಯಲ್ಲಿ ಉರು ಹೊಡೆಯುತ್ತಾರೆ. ನದಿಯ ನೀರು ಹರಿಯುತ್ತದೆ. ಅದು ಕುಡಿಯಲು ಯೋಗ್ಯವಾಗಿದೆ.
ನದಿಯ ನೀರನ್ನು ಶೋಧಿಸಿ, ಕುದಿಸಿ ಕುಡಿಯಬೇಕು. ನದಿಯ ನೀರನ್ನು ಮಲಿನಗೊಳಿಸಬಾರದು.... ಹಾಗೆ೦ದು
ನಾಲೆಯ ಅಕ್ಕಪಕ್ಕದಲ್ಲಿ ಹುಲುಸಾಗಿ ಬೆಳೆದಿರುವ ದಟ್ಟ ಪೊದೆಗಳ ಮರೆಯಲ್ಲಿ ಬಹಿರ್ದೆಶೆ ಹೋಗುವವರು
ತಮ್ಮ ಪಾಡಿಗೆ ಅಲ್ಲಿ ಹೋಗುವುದನ್ನು ನಿಲ್ಲಿಸಿಲ್ಲ. ಇದನ್ನೆಲ್ಲಾ ನೋಡಿರುವ, ಕೇಳಿರುವ
ಬಚ್ಚೂಬಾಯಿಗೆ ಈ ಮಿಥಿನದಿಯ ಪಕ್ಕದಲ್ಲಿ ಮನೆ ಮಾಡುವ ಧೈರ್ಯ ಹೇಗೆ ಬರಬೇಕು.
ಬಚ್ಚೂಬಾಯಿಗೆ ವಾಡಿ ಪದಲ್ಲಿ ಖೋಲಿ ಹುಡುಕುವ ಹುಚ್ಚು ಇಳಿದುಹೋದರೂ, ಗೆಳೆಯ ಮತ್ತು ಏಜೆ೦ಟ್
ಬಿಡಬೇಕಲ್ಲಾ. ಒ೦ದು ತಿ೦ಗಳು ಬಚ್ಚೂನನ್ನು ಬಗಲಿಗಿರಿಸಿ ಸುತ್ತಿದ್ದು ಸುಮ್ಮನೆಯಲ್ಲವಲ್ಲ. ಒ೦ದು
ರೀತಿಯ ಧಮಕಿಯಲ್ಲೇ ಏಜೆ೦ಟ್ ಈಗ ವಾಡಿ ಪೂನಲ್ಲೇ ಹೊಸ ಖೋಲಿ ತೋರಿಸತೊಡಗಿದ. ಕೊನೆಗೆ
ಆದದ್ದೇನೆ೦ದರೆ, ಒ೦ದು ಅರ್ಧ ಮೀಟರಿನಷ್ಟು ಹೆದ್ದಾರಿ ದೂರದಿ೦ದ ಕಾಣುತ್ತಿರುವ೦ತಹ ಜಾಗದಲ್ಲಿ,
ಎರಡು ಖೋಲಿಗಳನ್ನು ಏಜೆ೦ಟ್ ಇವನ ತಲೆಗೆ ಕಟ್ಟಿ ಬಿಟ್ಟ. ಬಚ್ಚೂ ತಾನಿರುವ ಖೋಲಿಯನ್ನು, ಜತೆಗೆ
ಮೂವತ್ತು ಸಾವಿರದಷ್ಟು ಹಣವನ್ನೂ ಖುಶಿಯಿ೦ದಲೇ ಕೊಟ್ಟ. ಏಕೆ೦ದರೆ ಏಜೆ೦ಟ್‌ನ ಪ್ರಕಾರ, ಅಷ್ಟು
ಕಡಿಮೆ ಬೆಲೆಗೆ, ಹೈವೇ ಸಮೀಪ ಎರಡು ಖೋಲಿಗಳು ಸಿಕ್ಕಿದ್ದು ಡಿಸ್‌ಸ್ಟ್ರೆಸ್ ಸೇಲ್‌ನಿ೦ದಾಗಿ, ಅದೂ
ಬಚ್ಚೂನ ಅದೃಷ್ಟದಿ೦ದ. ಎರಡು ಖೋಲಿಗಳನ್ನು ಕೂಡಿಸಿ ಏಜೆ೦ಟ್, ಅದನ್ನು ವನ್ ಬಿಎಚ್‌ಕೆ ಎ೦ದು
ಮಾರ್ಪಡಿಸಿಕೊಟ್ಟ. ಅದಕ್ಕಾಗಿ ಬಚ್ಚೂ ಮತ್ತೆ ಐದು ಸಾವಿರ ಕೊಡಬೇಕಾಗಿ ಬ೦ತು. ಇನ್ನು ಮು೦ದೆ ಬಚ್ಚೂ
ಖೋಲಿ ಎ೦ದು
ತಡವರಿಸುವ ಬದಲು ತನ್ನದು ವನ್ ಬಿಎಚ್‌ಕೆ ಎ೦ದೇ ಹೇಳಬೇಕು ಎ೦ದೆಲ್ಲಾ ಗಾಳಿ ಹಾಕಿ, ನಿನ್ನ ಈ
ಗೆಳೆಯನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ನಾನು ಹೀಗೆ ಒ೦ದು ತಿ೦ಗಳು ನಿದ್ದೆ ಬಿಟ್ಟು ಮೆಹನತ್
ಮಾಡಬೇಕಾಯ್ತು. ನನಗೆ ಹಣ ಮುಖ್ಯ ಅಲ್ಲ. ಪೈಸಾ ಕ್ಯಾ, ಆತಾ ಹೈ, ಜಾತಾ ಹೈ. ರಿಲೇಶನ್ ಇ೦ಪೋರ್ಟೆ೦ಟ್
ಹೈ. ಸಹೀ ಬೋಲ್ ರಹಾ ಹೂ೦ ನಾ. ಬಚ್ಚೂ ಸುಮ್ಮನೆ ನಕ್ಕ. ಏಕೆ೦ದರೆ ಕಳೆದ ಒ೦ದು ವಾರದಿ೦ದ ಅಮ್ಮಾಜಿ
ಅವನ ಹೆಡ್ಡತನಕ್ಕೆ, ದಡ್ಡತನಕ್ಕೆ ಹೇಳಬಾರದ ಮಾತುಗಳನ್ನೆಲ್ಲಾ ಕಕ್ಕುತ್ತಿದ್ದಾಳೆ. ಬಾಬಾನ ಬೆವರಿನ
ಗಳಿಕೆಯನ್ನು ಉಡಾಯಿಸಿದೆಯಲ್ಲೋ ಮೂಳಾ ಎ೦ದು ಆಕೆ ಅತ್ತದ್ದೇ ಅತ್ತದ್ದು. ಹಳೆ ಖೋಲಿಯಲ್ಲಿನ ಹಾಗೆ ಈ
ವನ್ ಬಿಎಚ್‌ಕೆಯಲ್ಲೂ, ಗಲ್ಲಿಯ ಕೊನೆಯಲ್ಲಿರುವ ಸ೦ಡಾಸಿನ ಬಾಗಿಲು ತೆರೆದಾಗ ಓಡಬೇಕಾಗಿ ಬರುವುದು
ತಪ್ಪಲಿಲ್ಲ.
ಈಗ ತಾಯಿ ಮತ್ತು ಮಗ ಇಬ್ಬರೂ ವನ್ ಬಿಎಚ್‌ಕೆ ಮನೆಗೆ ಹೊ೦ದಿಕೊ೦ಡರು. ಬಚ್ಚೂ ತಪ್ಪಿಯೂ ಖೋಲಿ ಎ೦ದು
ಹೇಳದೆ ಇರುವುದರಿ೦ದ, ಅವನ ಖುಶಿಗಾಗಿ ವನ್ ಬಿಎಚ್‌ಕೆ ಎ೦ದೇ ಹೇಳೋಣ. ಆದರೆ ತೀರದ ಒ೦ದು ದು:ಖ
ಅವನಿಗೆ ಇದೆ. ಅದೇನೆ೦ದರೆ ಏಜೆ೦ಟ್ ಹೇಳಿದ ಡಿಸ್‌ಸ್ಟ್ರೆಸ್ ಸೇಲ್ ಶಬ್ದ ಉಚ್ಚರಿಸಲು ಎಷ್ಟು ಮಾತ್ರ
ಪ್ರಯತ್ನ ಪಟ್ಟರೂ ನಾಲಗೆ ಹೊರಳುವುದೇ ಇಲ್ಲ. ತನ್ನ ವನ್ ಬಿಎಚ್‌ಕೆ ಕುರಿತು ಎಲ್ಲರ ಬಳಿ,
ಅದರಲ್ಲೂ ಜಿಗರ್‌ನ ಹತ್ತಿರ ಹೇಳುತ್ತಿರುವಾಗ ಈ ಒ೦ದು ಶಬ್ದ ಕೈ ಕೊಟ್ಟದ್ದನ್ನು ನೆನಸಿಕೊಳ್ಳುವಾಗ
ಬಚ್ಚೂಬಾಯಿ ಖಿನ್ನನಾಗುವುದಿದೆ. ಅವನ ವನ್ ಬಿಎಚ್‌ಕೆಯ ಬೆಡ್ ರೂಮ್‌ನಲ್ಲಿ ಈಗ ಒ೦ದು ಮ೦ಚ,
ಮೆತ್ತಗಿನ ಹಾಸಿಗೆ, ದಿ೦ಬು ಇವೆ. ಸ್ಟೀಲ್ ಕಪಾಟೂ ಇದೆ. ಹಾಲ್‌ನಲ್ಲಿ ನಾಲ್ಕು ಕುರ್ಚಿ, ಟೀಪಾಯ್
ಮತ್ತೊ೦ದು ಪುಟ್ಟ ಮೇಜು. ಅದರ ಮೇಲೆ ಟಿವಿ, ಕಲರ್ ಟಿವಿ (ಬರೇ ಟಿವಿ ಎ೦ದರೆ ಬಚ್ಚೂಬಾಯಿಯ ಮುಖ
ಸಪ್ಪಗಾಗಬಹುದು)ಇದೆ. ಕಿಚನ್‌ನಲ್ಲಿ ಅಮ್ಮಾಜಿಗೆ ಗ್ಯಾಸ್‌ನಲ್ಲಿ ಅಡುಗೆ ಮಾಡುವ ವ್ಯವಸ್ಥೆ ಇದೆ.
ಬ೦ದ ನೆ೦ಟರ ಬಳಿ ಥ೦ಡಾ ಚಲೇಗಾ ಎ೦ದು ಹೆಮ್ಮೆಯಿ೦ದ ಕೇಳಲು ಫ್ರಿಡ್ಜ್ ತ೦ದಿಟ್ಟಿದ್ದಾನೆ.
ಇಷ್ಟೆಲ್ಲಾ ಸೌಭಾಗ್ಯಗಳ ನಡುವೆ ಅಮ್ಮಾಜಿ ನಿಟ್ಟಿಸಿರು ಬಿಡುತ್ತಾ ಹೇಳುತ್ತಿರುತ್ತಾಳೆ, ಬೇಟಾ,
ನಮ್ಮ ಬಿರಾದರಿಯಲ್ಲಿ ನಿನ್ನ ಪ್ರಾಯದ ಹುಡುಗರೆಲ್ಲಾ ಎರಡು, ಮೂರು ಮಕ್ಕಳ ಅಪ್ಪ೦ದಿರಾಗಿದ್ದಾರೆ.
ನಿನ್ನ ತಲೆಯೊಳಗಿನ ಈ ಮಿಲ್ಲಿನ ಭೂತದಿ೦ದ ಬಿಡುಗಡೆ ಎ೦ದೋ
ಇತ್ತೀಚೆಗಷ್ಟೇ ಬಚ್ಚೂ ಸುರ್ವೆ ಚಾಚಾನನ್ನು ಕ೦ಡು ಬ೦ದಿದ್ದಾನೆ. ಬಾಬಾ ಬದುಕಿದ್ದಷ್ಟು ವರ್ಷ...
ಬದುಕಿದ್ದೇನು, ಹಾಸಿಗೆಯಲ್ಲಿದ್ದಷ್ಟು ಕಾಲ ಚಾಚಾ ಪ್ರತೀ ವಾರ ತಪ್ಪದೆ ಬರುತ್ತಿದ್ದರು. ಅವನು
ಅಲ್ಲೇ ಕುಳಿತು ಅವರು ಮಾತಾಡಿಕೊಳ್ಳುತ್ತಿದ್ದ
ಗಿರಣಿ, ಹರತಾಳ, ಕೋರ್ಟು, ಕೇಸು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ಅವರು ಎ೦ತೆ೦ತಹದೊ ಸುದ್ದಿ
ತರುತ್ತಿದ್ದರು. ಹಸಿವೆಯಿ೦ದ ಬಳಲಿದವರು, ಆಘಾತದಿ೦ದ ಹಾಸಿಗೆ ಹಿಡಿದು ನವೆಯುತ್ತಿರುವವರು,
ಸಾವನ್ನು ಬರ ಮಾಡಿಕೊ೦ಡವರು, ಎರಡನೆಯ ದ೦ಧೆಗಿಳಿದವರು, ಶಾಲೆ ತೊರೆದು ಹೊಟೇಲುಗಳಲ್ಲಿ ಎ೦ಜಲು
ಬಳಿಯುವ ಮಕ್ಕಳು, ಮನೆಯ ಗ೦ಡಸರ ಎದುರಲ್ಲೂ ಸೆರಗಿನಲ್ಲಿ ಮುಖ ಮರೆಯಿಸಿ ನಿಲ್ಲುವ ಹೆ೦ಗಸರು ಯಾರದೋ
ಮನೆಯಲ್ಲಿ ಪರಿಚಾರಿಕೆ ಮಾಡುತ್ತಿರುವುದು.
ಬಾಬಾ ಸದ್ದು ತೆಗೆದು ಮಕ್ಕಳ೦ತೆ ಅತ್ತು ಬಿಡುತ್ತಿದ್ದರು. ಅಡುಗೆಕೋಣೆಯ ಬಾಗಿಲ ಮರೆಯಲ್ಲಿ ನಿ೦ತೇ
ಅಮ್ಮಾಜಿ ಒಮ್ಮೆ ವಿನ೦ತಿಸಿದ್ದಳು. ಭೈಯಾ, ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ,
ಗಿರಣಿಯ ಮಾತು ಅವರ ಮು೦ದೆ ಆಡಬೇಡಿ.
ರಾತ್ರಿ ಹಗಲು ಅವರು ಅದೇ ಗು೦ಗಿನಲ್ಲಿ ಬಡಬಡಿಸುತ್ತಾ ಇರುತ್ತಾರೆ. ಇರುವಷ್ಟು ದಿನ ನೆಮ್ಮದಿಯಲ್ಲಿ
ಇರಲಿ. ಬಾಬಾ ಅಮ್ಮಾಜಿಗೆ ಕೆಟ್ಟದಾಗಿ ಬೈದರು. ಹಿ೦ದೆ೦ದೂ ಬಾಬಾ ಆ ರೀತಿ ಕೋಪಿಸಿಕೊ೦ಡದ್ದನ್ನು
ಬಚ್ಚೂ ಕ೦ಡಿರಲಿಲ್ಲ. ಅಮ್ಮಾಜಿಯ ಮಾತಿಗೆ ಚಾಚಾ ಬೇಸರ ಪಡಲಿಲ್ಲ. ಬಾಬಾ ಸಾಯುವ ವರೆಗೆ ಬರುವುದನ್ನು
ನಿಲ್ಲಿಸಲೂ ಇಲ್ಲ.
ಕೋ೦ಡಸ್ಕರವಾಡಿಗೆ ಬ೦ದ ನ೦ತರ ಬಚ್ಚೂ ಬಾರಿ ಬಾರಿ ಸುರ್ವೆ ಚಾಚಾನನ್ನು ಕಾಣಲು ಹೋಗುತ್ತಲೆ ಇದ್ದ.
ನ೦ತರ ತಿ೦ಗಳಿಗೊಮ್ಮೆ, ಮತ್ತೆ ಭೇಟಿಯ ಅ೦ತರ ಹೆಚ್ಚುತ್ತಾ ಹೋಗಿದೆ. ಚಾಚಾನ ಧ್ವನಿಯೂ ನಡುಗ
ಹತ್ತಿದ್ದು ಗಮನಕ್ಕೆ ಬ೦ದ ಬಳಿಕ ಆತ ಹಿ೦ಜರಿಯತೊಡಗಿದ್ದ. ನಿನ್ನ ಬಾಬಾನ ಇಚ್ಛೆ
ನೆನಪಿಟ್ಟುಕೊ೦ಡಿದ್ದೀಯಲ್ಲ. ಈಗಿನ ಹುಡುಗರಿಗೆ ಮೈ ಮುರಿದು ದುಡಿಯುವುದು ಬೇಕಾಗಿಲ್ಲ. ನಿನ್ನ
ಗಿರಣಿಯಲ್ಲಿ ಯಾರಿಗೆ ಬೇಕಿದೆ ಕೆಲಸ ಎ೦ದು ಮುಖಕ್ಕೆ ಉಗುಳುತ್ತಾರೆ. ಸಿಕ್ಕಿದಷ್ಟು
ಬಾಚಿಕೊ೦ಡು ಬೇರೆ ಕಡೆ ದುಡಿಯಲಿಕ್ಕೇನು ಸ೦ಕಟ ಎ೦ದು ಕೇಳುತ್ತಾರೆ. ಹೇಳದೆ ಇರಲಾಗದ ನೋವನ್ನು ಚಾಚಾ
ತನ್ನ ಮು೦ದೆ ತೋಡಿಕೊಳ್ಳುತ್ತಿದ್ದಾರೇನೊ ಎನ್ನುವ ಸ೦ಶಯ ಬಚ್ಚೂಗೆ ಬರತೊಡಗಿತ್ತು. ಕಳೆದ ಬಾರಿ
ಹೋದಾಗ ಅವರು ತೀರಾ ಹೈರಾಣದ೦ತೆ ಅನಿಸಿತ್ತು. ಇವನು ಮತ್ತೆ ಮಿಲ್ ಶುರುವಾಗುವ ಮಾತು ಎತ್ತಿ,
ವರ್ಲಿಯಲ್ಲಿ, ಮತ್ತೊ೦ದೆಡೆ ಕೆಸ ಆರ೦ಭ ಆಗಿದೆ ಎನ್ನುವ ಸುದ್ದಿ ಕೊಟ್ಟು ಆ ಮುಖದಲ್ಲಿ ಗೆಲುವು
ಅರಸಿದ್ದ. ಚಾಚಾ ಸುಮ್ಮನೆ ತಲೆಯಾಡಿಸುತ್ತಾ ಕುಳಿತು ತನಗೆ ತಾನೇ ಹೇಳತೊಡಗಿದ್ದರು. ಎಷ್ಟೆಷ್ಟು
ದೊಡ್ಡ ದೊಡ್ಡ ಯ೦ತ್ರಗಳಿದ್ದವು, ನಾನು, ನಿನ್ನ ಬಾಬಾ... ಗಿರಣಿ ತು೦ಬಾ ಕಾರ್ಮಿಕರು. ಒ೦ದೇ
ಕುಟು೦ಬದ ಸದಸ್ಯರ೦ತೆ. ಹೇಗೆ ಮಣಿಸುತ್ತಿದ್ದೆವು. ಈಗ ಯ೦ತ್ರ ಕಾರ್ಮಿಕನನ್ನು ಒದೆಯುತ್ತಿದೆ
ಎನ್ನುತ್ತಿದ್ದಾರಲ್ಲೊ, ಹೌದೇನೊ ಬಚ್ಚೂ ಇವನಿಗೆ ಅದೆಲ್ಲಾ ಸ೦ಗತಿ ಗೊತ್ತಿಲ್ಲ. ಇವನೋ ಹೇಳಿಕೇಳಿ ಒ
ಬುದ್ಧು ಮನುಷ್ಯ. ಗಲಿಬಿಲಿಯಿ೦ದ ಹೌದು, ಹೌದು ಎ೦ದು ಬಾಯಿ ತಪ್ಪಿ ಹೇಳಿ, ನ೦ತರ ಮರುಗಿದ. ಚಾಚಾ
ಮತ್ತೆ ಮಾತೇ ಆಡಲಿಲ್ಲ. ಇವನು ಎ೦ದಿನ೦ತೆ ಪಾದ ಮುಟ್ಟಿ ನಮಸ್ಕರಿಸಿ ಹೊರಬ೦ದ ನ೦ತರ ಅನಿಸಿತ್ತು,
ಚಾಚಾಗೆ ಹಣದ ಅಗತ್ಯವೇನಾದರೂ ಇರಬಹುದೇ. ಇಷ್ಟರ ವರೆಗೆ ಬಚ್ಚೂಗೆ ಅದು ಹೊಳೆದೇ ಇರಲಿಲ್ಲ.
ಹಿರಿಯರನ್ನು ನೋಡಲು ಹೋಗುವಾಗ ಖಾಲಿ ಕೈಯಲ್ಲಿ ಹೋಗಬೇಡ ಎ೦ದು ಅಮ್ಮಾಜಿ ತಾಕೀತು ಮಾಡಿದ ನ೦ತರ ಆತ
ಏನಾದರೂ ಹಣ್ಣು ತೆಗೆದುಕೊ೦ಡು ಹೋಗುವುದಿತ್ತು. ಅದರಿ೦ದ ಮಗ, ಸೊಸೆಯ೦ದಿರಿಗೆ ಅಪಮಾನ
ಆಗುತ್ತಿದೆಯ೦ತೆ ಎ೦ದು ಚಾಚಾ ನೇರವಾಗಿಯೆ ಹೇಳಿದ ಬಳಿಕ ಕೈ ಬೀಸಿಕೊ೦ಡು ಹೋಗುತ್ತಿದ್ದ. ಹಿ೦ದೆಲ್ಲಾ
ಇವನು ಹೋದಾಗ ಅ೦ಗೈಯಲ್ಲಿ ಹತ್ತರ ಕೆಲ ನೋಟಿರಿಸಿ ಮುಷ್ಠಿ ಬಿಗಿಯುತ್ತಿದ್ದರು, ಯಾರಿ೦ದಲೋ
ಅಡಗಿಸಿಕೊಡುವ೦ತೆ. ತನ್ನಿ೦ದ ಹಾಗೆ ಸಾಧ್ಯವಾದೀತೊ ಎನ್ನುವ ತಳಮಳದೊ೦ದಿಗೆ ಮತ್ತೆ ಖೋಲಿ
ಹೊಕ್ಕಿದ್ದ. ಏನು ಮರೆತು ಹೋದಿ ಎ೦ದಾಗ ಹುಡುಕುವವನ೦ತೆ ಹಾಸಿಗೆಯ ಮೇಲಿದ್ದ ಮ೦ಕಿಕ್ಯಾಪ್ ಕೈಗೆತ್ತಿ
ಅದರೊಳಗೆ ಕೈಯಲ್ಲಿಟ್ಟುಕೊ೦ಡಿದ್ದ ನೋಟಿನ ಪುಡಿಕೆ ಹಾಕಿ ಏನಿಲ್ಲ ಎನ್ನುತ್ತಾ ಹೊರ ಬ೦ದಿದ್ದ.
ಸುರ್ವೆ ಚಾಚಾನ ತೀಕ್ಷ್ಣ ನೋಟ ತನ್ನ
ಹರ್‌ಕತ್ತನ್ನು ಗಮನಿಸಿದರೂ ಏನೂ ಹೇಳದೆ ಹೋದದ್ದು ಬಚ್ಚೂನ ಕಣ್ಣಲ್ಲಿ ನೀರು ತರಿಸಿತ್ತು.
ಇವತ್ತು ಕೋ೦ಡಸ್ಕರವಾಡಿ ಪದಲ್ಲಿರುವ ಮೈದಾನದಲ್ಲಿ ಸ೦ಭ್ರಮವೋ ಸ೦ಭ್ರಮ. ಈ ಕ್ಷೇತ್ರದಿ೦ದ
ಆರಿಸಿಹೋಗಿದ್ದ ಜನನಾಯಕನ ಅದೃಷ್ಟ. ಆಳುವ ಸರಕಾರ ಬಿದ್ದು ಹೋಗಲು ಇ೦ತಹದ್ದೇ ಗುರುತರ ಕಾರಣಗಳು
ಇದೀಗ ಬೇಕಾಗಿಲ್ಲವಲ್ಲ. ಹಾಗೆಯೇ ಇಲ್ಲಿಯೂ ನಡೆದು ಹಳೆಯದು ನೆಗೆದು ಬಿದ್ದು, ಹೊಸ ಸರಕಾರ ಬ೦ತು.
ಅದರಲ್ಲಿ ಈ ಜನನಾಯಕನಿಗೆ ಮ೦ತ್ರಿ ಪದವಿ ದಕ್ಕಿತು. ಇದು ನಡೆದು ಏಳೆ೦ಟು ತಿ೦ಗಳೇ ಕಳೆದಿವೆ. ಮಾನ್ಯ
ಮ೦ತ್ರಿಯನ್ನು ಕರೆದು ಅದ್ದೂರಿಯ ಸನ್ಮಾನ ನೀಡಬೇಕೆ೦ದು ಕೋ೦ಡಸ್ಕರವಾಡಿ ಸೇರಿದ೦ತೆ, ಈ
ಕ್ಷೇತ್ರದೊಳಗೇ ಬರುವ ಸುತ್ತಮುತ್ತಲಿನ ಹಲವಾರು ವಾಡಿಗಳ, ಕೇರಿಗಳ ಮ೦ದಿ ನಿಶ್ಚಯಿಸಿ, ಅವರ ಮನೆ
ಬಾಗಿಲಿಗೆ, ಕಛೇರಿಗೆ ಲೆಕ್ಕವಿಲ್ಲದಷ್ಟು ಬಾರಿ ಅಡತಾಕಿದ್ದರು. ಆದರೆ
ಅವರು ತಮ್ಮ ಹೊಸ ಪದವಿಯ ಜವಾಬ್ದಾರಿ ನಿರ್ವಹಿಸುವಲ್ಲಿ ಎಷ್ಟು ವ್ಯಸ್ತರಿದ್ದರೆ೦ದರೆ ಹೋದ
ಪ್ರತಿನಿಧಿಗಳಿಗೆ ಮುಖ ತೋರಿಸಲೂ ಪುರುಸೊತ್ತಿರಲಿಲ್ಲ. ತಮ್ಮ ಅ೦ಧೇರಿ (ಪ)ದಲ್ಲಿರುವ ಕಛೇರಿಯಲ್ಲಿ,
ಮನೆಯಲ್ಲಿ ಕುಳಿತೇ ಹೇಗೆ ಈ ವಾಡಿಗಳ, ಕೇರಿಗಳ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ೦ದು ಅವರ ಪಾರ್ಟಿ
ಕಾರ್ಯಕರ್ತರು ಸ೦ದರ್ಭ ದೊರೆತಾಗೆಲ್ಲಾ ಇದೇ ಮೈದಾನದ ವೇದಿಕೆಯಲ್ಲಿ ರಸಮ೦ಜರಿಯನ್ನೋ, ಸಿನೇಮಾ
ಪ್ರದರ್ಶನವನ್ನೋ ಏರ್ಪಡಿಸಿ ಪ್ರಜೆಗಳಿಗೆ ಮನದಟ್ಟಾಗಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಮಧ್ಯಾವಧಿ ಚುನಾವಣೆಗೆ ಇನ್ನು ಕೆಲ ತಿ೦ಗಳುಗಳಷ್ಟೆ ಇವೆ ಎನ್ನುವಾಗ, ಮಾನ್ಯ ಮ೦ತ್ರಿಗೆ
ಪುರುಸೊತ್ತಾಗಿ, ಅವರು ದೊಡ್ಡ ಮನಸ್ಸು ಮಾಡಿ, ತನ್ನನ್ನು ಗೆಲ್ಲಿಸಿ ಕಳುಹಿಸಿದ್ದ ಜನರಿ೦ದ ಸನ್ಮಾನ
ಸ್ವೀಕರಿಸಲು ಇವತ್ತು ಬರಲಿದ್ದಾರೆ.
ವಾರದ ಹಿ೦ದೆಯೇ ಪಾರ್ಟಿಯ ಪ್ರಧಾನ ಕಾರ್ಯಕರ್ತ ಕಾ೦ಬ್ಳೆ, ಬಚ್ಚೂಭಾಯಿಯನ್ನು ಕರೆಯಿಸಿ, ಇವತ್ತು
ಸ೦ಜೆ ಮಾನ್ಯ ಮ೦ತ್ರಿಯವರಿಗೆ ನೀಡುವ ಸನ್ಮಾನದ ವೇಳೆ ನಡೆಯಬೇಕಾದ ಆತೀಷ್‌ಬಾಜಿಯ ಬ್ಲೂಪ್ರಿ೦ಟ್
ತಯಾರಿಸಿದ್ದ. ಬಚ್ಚೂಭಾಯಿ, ನಮ್ಮ ಮರ್ಯಾದೆ ಈಗ ನಿನ್ನ ಕೈಯಲ್ಲಿದೆ. ಮಾನ್ಯ ಮ೦ತ್ರಿಯವರೂ ದ೦ಗಾಗಿ
ಬಿಡುವ೦ತಹ ಆತೀಷ್
ಬಾಜಿ ನಡೆಯಬೇಕು. ಕೋ೦ಡಸ್ಕರವಾಡಿಯಲ್ಲಿ ನಡೆದ ಸನ್ಮಾನದ ಸುದ್ದಿ ಮ೦ತ್ರಾಲಯವನ್ನೂ ತಲಪಬೇಕು.
ಬಚ್ಚೂಭಾಯಿ ಹೇಳಿದ ಅರೆ ಕಾ೦ಬ್ಳೆ ಸಾಬ್. ಇದೇನು ಮೊದಲ ಬಾರಿಯಾ ನಿಮ್ಮ ಪಾರ್ಟಿಗಾಗಿ ನಾನು ಆತೀಷ್
ಬಾಜಿ ಮಾಡುತ್ತಿರುವುದು.
ನೀವು ಹೇಗೆ ಆದೇಶ ನೀಡುತ್ತಿರೊ ಅದೇ ರೀತಿ ನಡೆಯಿಸಿ ಕೊಡುವವ ನಾನು. ಕ೦ಪ್ಲೇಟ್ ಕಾ ಮೌಕಾ ಹೀ ನಹೀ
ಮಿಲೇಗ. ಬಚ್ಚೂ ಇಷ್ಟೊ೦ದು ವಿಧೇಯತೆಯಿ೦ದ ಮಾತನಾಡಲು ಕಾರಣವೂ ಇದೆ. ಹೀಗೆ ವೇದಿಕೆಯಲ್ಲೊಮ್ಮೆ ಇದೇ
ಪ್ರಧಾನ ಕಾರ್ಯಕರ್ತ ಮು೦ಬಯಿಯಲ್ಲಿ ಗಿರಣಿಗಳು ಮುಚ್ಚಿದ ಮೇಲೆ ಕಾರ್ಮಿಕರ ಸ್ಥಿತಿ, ಅವರಿಗೆ ನ್ಯಾಯ
ಒದಗಿಸಲು ಕ್ಷೇತ್ರದ ಜನನಾಯಕ, ಈಗ ಮಾನ್ಯ ಮ೦ತ್ರಿಯಾದ ಮೇಲೆ ಎಷ್ಟು
ಶ್ರಮಿಸುತ್ತಿದ್ದಾರೆನ್ನುವುದನ್ನು ಭಾವುಕತೆಯಿ೦ದ ಹೇಳುತ್ತಿರುವಾಗ ಬಚ್ಚೂಬಾಯಿ ಅಲ್ಲೇ ಕರಗಿ
ಹೋಗಿದ್ದ. ತಾನು ಓಟು ನೀಡಲು ಹೋಗದೆ, ಯಾವುದೊ ಮದುವೆ ದಿಬ್ಬಣದಲ್ಲಿ ಪಟಾಕಿ, ಬಿರುಸು ಬಾಣ
ಹಚ್ಚುತ್ತಾ, ಇಡೀ ದಿನ ಅಲ್ಲೇ ಇದ್ದ. ಅದೊ೦ದು ಮಾರ್ವಾಡಿ ಮದುವೆ ಪಾರ್ಟಿ. ಅದ್ದೂರಿಂii ಆತೀಷ್
ಬಾಜಿ ಇತ್ತು. ಆ ಉಮೇದಿನಿ೦ದ ಓಟು ಕೊಡುವುದಕ್ಕೂ ಹೋಗದೆ ಇದ್ದ ತನ್ನ ಬೇಜವಾಬ್ದಾರಿತನವನ್ನು ಬಚ್ಚೂ
ಈಗ ಹಳಿಯುತ್ತಾನೆ. ಆ ಅಪರಾಧಿಭಾವದೊ೦ದಿಗೇ ಆತ ಕಾ೦ಬ್ಳೆ ಮತ್ತು ಅವನ ಮಾನ್ಯ ಮ೦ತ್ರಿಯ
ಅಭಿಮಾನಿಯಾಗಿ ಬಿಟ್ಟಿದ್ದ.
ಈ ಕಾ೦ಬ್ಳೆಯೇ ವರ್ಲಿಯ ಬಟ್ಟೆ ಗಿರಣಿಯಲ್ಲಿ ಕೆಲಸ ಶುರುವಾದದ್ದು ಮತ್ತು ಅದು ಮಾನ್ಯ ಮ೦ತ್ರಿಯವರ
ಶ್ರಮದಿ೦ದ ಎನ್ನುವ ಸುದ್ದಿ ಕೊಟ್ಟದ್ದು. ಆಗ ಬಚ್ಚೂಭಾಯಿ, ಪರೇಲ್‌ನಲ್ಲಿರುವ ತನ್ನ ಬಾಬಾನ ಮಿಲ್
ಕುರಿತು, ಕಳೆದ ಹದಿನೈದು ವರ್ಷಗಳಿ೦ದ ಅಲ್ಲಿ ಬಾಬಾನ ಜಾಗದಲ್ಲಿ ನಿ೦ತು ದುಡಿಯುವ ನಿರೀಕ್ಷೆ,
ಎಲ್ಲವನ್ನೂ ಮನ ಮಿಡಿಯುವ೦ತೆ ನಿವೇದಿಸಿ, ಅದನ್ನು ಮಾನ್ಯ ಮ೦ತ್ರಿಗಳ ಕಿವಿಗೆ ಹಾಕಲು
ವಿನ೦ತಿಸಿಕೊ೦ಡಿದ್ದ. ಆ ದಿನ ಕಾ೦ಬ್ಳೆ ನೀಡಿದ ಆಶ್ವಾಸನೆ ಮುದುಡುತ್ತಿದ್ದ ಕನಸುಗಳು ಮತ್ತೆ
ಚಿಗುರುವ೦ತೆ ಮಾಡಿತ್ತು. ಮಾನ್ಯ ಮ೦ತ್ರಿಗಳ ಸ್ವಾಗತಕ್ಕೆ ಹಿ೦ದೆ೦ದೂ ತೋರಿಸದ೦ತಹ ವರ್ಣಮಯ
ಆತೀಷ್‌ಬಾಜಿಯ ಪ್ಲಾನನ್ನು ಕಾರ್ಯಕರ್ತನಿಗೆ ತೋರಿಸಿ, ಅವನು ಅದನ್ನು ಪಾಸ್ ಮಾಡಿದಾಗ ಬಚ್ಚೂಭಾಯಿಗೆ
ಸಮಧಾನವಾಗಿತ್ತು.
ಇವತ್ತು ಬೆಳಿಗ್ಗೆಯೇ ಬಚ್ಚೂಬಾಯಿ, ಕಾ೦ಬ್ಳೆ ಮತ್ತು ಅವನ ತೈನಾತಿಯೊಬ್ಬನನ್ನು ಭುಲೇಶ್ವರ
ಮಾರ್ಕೆಟ್‌ಗೆ ಕರೆದೊಯ್ದು ತನ್ನ ಗುರುತಿನ ಅ೦ಗಡಿಗಳಿ೦ದ ಸುಡುಮದ್ದುಗಳನ್ನು ರಿಯಾಯತಿ ದರದಲ್ಲಿ
ಖರೀದಿಸಿ ಕೊಟ್ಟ. ಪ್ರಧಾನ ಕಾರ್ಯಕರ್ತ ಅ೦ಗಡಿಯವರೇ ಬೇಸತ್ತು ಹೋಗುವ ರೀತಿಯಲ್ಲಿ ಪಕ್ಕಾ ಬಿಲ್
ಮತ್ತು ಕಚ್ಚಾ ಬಿಲ್ ಮಾಡಿಸುತ್ತಿರುವುದನ್ನು ಬಚ್ಚೂ ವಡಾಪಾವ್ ತಿನ್ನುತ್ತಲೇ ನೋಡಿದ. ಅವನ ಪಾಲಿಗೆ
ಅದು ಹೊಸ ಸ೦ಗತಿಯೇನೂ ಅಲ್ಲ. ಆದರೆ ಇವತ್ತು ಸ್ವಲ್ಪ ಕಸಿವಿಸಿಯಾಯಿತು. ಬಡವರ ಬ೦ಧು ನಮ್ಮ ಮಾನ್ಯ
ಮ೦ತ್ರಿಗಳ ಪ್ರಧಾನ ಕಾರ್ಯಕರ್ತ ಎ೦ದು ಕರೆಯಿಸಿಕೊಳ್ಳುತ್ತಿರುವ ಈ ಕಾ೦ಬ್ಳೆ ಯಾಕೆ ಹೀಗೆ
ಮಾಡುತ್ತಿದ್ದಾನೆ ? ಈಗಷ್ಟೇ ಮಾರ್ಕೆಟ್‌ನ ಉದ್ದಕ್ಕೂ ಪರಿಚಯದ ಅ೦ಗಡಿಗಳಲ್ಲಿ ಅವನನ್ನು
ಹೊಗಳುತ್ತಿರುವಾಗ ನಮ್ರತೆಯಿ೦ದ ನಾನು ಜನರ ಸೇವಕ ಎ೦ದು ಹೇಳಿದವ, ಈಗ ತನ್ನ ಮೂಗು ಕತ್ತರಿಸಿಬಿಟ್ಟ
ಎ೦ದೆಲ್ಲಾ ಯೋಚಿಸುತ್ತಾ ಸಪ್ಪೆ ಕುಳಿತ ಬಚ್ಚೂಬಾಯಿ. ಆದರೆ ಟ್ಯಾಕ್ಸಿಯಲ್ಲಿ ವಾಪಾಸು ಬರುತ್ತಾ
ಪರೇಲ್ ಫ್ಲೈಓವರ್ ದಾಟುತ್ತಿರುವಾಗ ಕ೦ಡ ದೃಶ್ಯದಿ೦ದ ಬಚ್ಚೂ ರೋಮಾ೦ಚನಗೊ೦ಡ. ಪ್ರತಿಬಾರಿ ಈ
ದಾರಿಂiiಲ್ಲಿ ಹೋಗುವಾಗ, ತೆರೆದುಕೊಳ್ಳುವ ಅವನ ಬಾಬಾನ ಜಗತ್ತು, ಈಗ ಮೌನಗೊ೦ಡಿರುವ
ಸಾಮ್ರಾಜ್ಯವನ್ನು ಕಣ್ಣೆವೆ ಪಿಳುಕಿಸದೆ ತು೦ಬಿಕೊಳ್ಳುವುದನ್ನು ಎ೦ದೂ ತಪ್ಪಿಸಿಕೊ೦ಡವನೇ ಅಲ್ಲ.
ಬಾಬಾ ಮಾಡುತ್ತಿದ್ದ ವರ್ಣನೆಯಿ೦ದಲೇ ಅವನ ಜಗತ್ತಿನ ಚಿತ್ರವನ್ನು ಮನಸ್ಸಿನಲ್ಲಿ ಬರೆದಿಟ್ಟಿದ್ದ
ಬಚ್ಚೂ, ಮೊದಲಬಾರಿ ಈ ಹಾರುರಸ್ತೆಯಲ್ಲಿ ಸಾಗುತ್ತಾ, ಆ ಚಿತ್ರ ಸಾಕಾರಗೊಳ್ಳುತ್ತಿರುವುದನ್ನು ಕ೦ಡು
ಪುಳಕಿತಗೊ೦ಡಿದ್ದ. ಅರಮನೆ ಸಾಲಿನ೦ತಹ ಕಲ್ಲಿನ ಕಟ್ಟಡ, ತೆರೆದ ವಿಶಾಲ ಅ೦ಗಳ, ಅದರಾಚೆಯ ಹಸಿರು
ಮರಗಳ ಸಾಲು, ಕೊಳದಲ್ಲಿ ಮರಕತದ೦ತೆ ಹೊಳೆಯುತ್ತಿರುವ ನೀರು, ಅಣಿಗೊಳಿಸಿ ನಿಲ್ಲಿಸಿದ೦ತೆ ತೋರುವ
ಹೊಗೆಕೊಳವೆಗಳು. ಈಗ ಮಾತ್ರ ಯುದ್ಧದ ನ೦ತರ ಹರಡಿ ಬಿಡುವ ವಿಷಣ್ಣತೆಯಲ್ಲಿ ಮೌನವಾಗಿ ನಿ೦ತಿದ್ದವು.
ಆದರೆ ಇವತ್ತು ಅ೦ಗಳದಲ್ಲಿ, ಕಟ್ಟಡದಲ್ಲಿ ಅಲ್ಲಲ್ಲಿ ಜನರು ಅಡ್ಡಾಡುತ್ತಿದ್ದಾರೆ. ಅವರಲ್ಲಿ ತಾನೂ
ಸೇರಿಕೊಳ್ಳಲಿದ್ದೇನೆ ಎನ್ನುವ ಖುಶಿಯಲ್ಲಿ ಸೀಟಿನಿ೦ದ ಕು೦ಡೆ ಎತ್ತಿ, ಎತ್ತಿ ಬಾಗಿ ನೋಡಿ
ಟ್ಯಾಕ್ಸಿ ಡ್ರೈವರ್‌ನಿ೦ದ ಬೈಯಿಸಿಕೊ೦ಡರೂ ಬೇಸರಿಸಲಿಲ್ಲ. ಹಿ೦ದಿನ ಸೀಟಿನಲ್ಲಿ ಕುಳಿತಿದ್ದ
ಕಾ೦ಬ್ಳೆ ಮತ್ತು ತೈನಾತಿ ಮಧ್ಯೆ ಬಿಸಿಯಾದ ಚರ್ಚೆ ನಡೆಯುತ್ತಿದ್ದು, ಬಚ್ಚೂ ಅವರ ಗಮನ ಸೆಳೆಯಲು
ಪ್ರಯತ್ನಿಸಿ ಸೋತು ಹೋದ.
ಅವರು ಕೊ೦ಡಸ್ಕರವಾಡಿ ತಲುಪಿದಾಗ ನಡು ಮಧ್ಯಾಹ್ನ ದಾಟಿತ್ತು. ಬಚ್ಚೂ ಪ್ರಧಾನ ಕಾರ್ಯಕರ್ತನ ಎರಡೂ
ಕೈ ಬಿಗಿ ಹಿಡಿದು ಮನದು೦ಬಿ ಹೇಳಿದ ಕಾ೦ಬ್ಳೆ ಸಾಬ್, ನಿಮ್ಮ ಮತ್ತು ಮಾನ್ಯ ಮ೦ತ್ರಿಗಳ ಈ ಉಪಕಾರ
ಎ೦ದೂ ಮರೆಯಲಾರೆ. ನಾನು ಕಣ್ಣಾರೆ ನೋಡಿದೆ, ಮಿಲ್‌ನಲ್ಲಿ ಕೆಲಸ ತೊಡಗಲಿದೆ ಕಾ೦ಬ್ಳೆಗೆ ಇವನ ಮಾತಿನ
ತಲೆಬುಡ ಅರ್ಥವಾಗದಿದ್ದರೂ, ಸರಿ, ಸರಿ ಎ೦ದು ಬೆನ್ನು ತಟ್ಟಿದ. ಬಚ್ಚೂಗೆ ಮನೆಗೋಡಿ ಅಮ್ಮಾಜಿಗೆ
ತಾನು ಕ೦ಡದ್ದನ್ನು ತಿಳಿಸುವ ತವಕ. ಆದರೆ ಕಾರ್ಯಕರ್ತ ತಡೆದ. ಬಚ್ಚೂಬಾಯಿ, ಸ೦ಜೆ ಆರರ ಒಳಗೆ ಎಲ್ಲಾ
ರೆಡಿಯಾಗಬೇಕು. ಊಟ, ಚಹಾದ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ. ಪಾರ್ಟಿ ಆಫೀಸಿನ ಹೊರಗಿನ ಜಗಲಿಯಲ್ಲಿ
ನಿನ್ನ ಕೆಲಸಕ್ಕೆ ತೊಡಗು ಎ೦ದು ಅವಸರ ಮಾಡಿ ಅವನು ಹೋಗಿಬಿಟ್ಟ. ಮೈದಾನದ ಸರೀ ನೇರಕ್ಕಿರುವ ಪಾರ್ಟಿ
ಆಫೀಸು ಎನ್ನುವ ಗೂಡಿನ ಹೊರಜಗಲಿಯ ಅಸಾಧ್ಯ ಸೆಕೆಗೆ ಬೆವರಿಳಿಸುತ್ತಾ ಬಚ್ಚೂ ಪಟಾಕಿ ಸರಕ್ಕೆ ಸುತಲಿ
ಬಾ೦ಬ್ ಸೇರಿಸಿ ಕಟ್ಟುವ ಕೆಲಸಕ್ಕೆ ತೊಡಗಿದ. ದಾಲ್ ಕಿಚಡಿ, ಪೋಳಿ ಬಾಜಿ ತಿ೦ದ ಬಳಿಕ ಚಹಾ
ಬರಬಹುದೆ೦ಬ ನಿರೀಕ್ಷೆಯಲ್ಲಿದ್ದ ಆತ. ಚಹಾ ಬರಲಿಲ್ಲ. ಬದಲಿಗೆ ಅವನ ಅಸಹನೆ ಹೆಚ್ಚಿಸುವ೦ತೆ ಆಫೀಸಿನ
ಒಳಗಿನಿ೦ದ ಹುರಿದ ಕೋಳಿ, ಬಿರಿಯಾನಿಯ ಪರಿಮಳ ಬರತೊಡಗಿತ್ತು. ಆತನ ಕೆಲಸದ ಸುಳಿವು ಹತ್ತಿದವರ೦ತೆ
ಸುತ್ತಲೂ ಹೊ೦ಚು ಹಾಕತೊಡಗಿರುವ ಮಕ್ಕಳ ಗು೦ಪು ಬೇರೆ ರೇಗಿಸಹತ್ತಿತ್ತು.
ಬಚ್ಚೂಬಾಯಿಯ ಗುರು ಆತನಿಗೆ ನೀಡಿದ ಈ ವೃತ್ತಿಯ ಮೊತ್ತಮೊದಲ ಪಾಠ ಎ೦ದರೆ ಈ ಸೈತಾನ್ ಮಕ್ಕಳನ್ನು
ಮೈಲುದೂರದಲ್ಲಿ ಇಡುವುದು. ಈ ಕೆಲಸದ ವೇಳೆ ಗ೦ಡಾ೦ತರ ಏನಾದರೂ ಸ೦ಭವಿಸುವುದಿದ್ದರೆ ಅದು ಇವುಗಳಿ೦ದ
ಮಾತ್ರ. ಅವುಗಳ ಕಾರನಾಮದಿ೦ದ ತಾನು ಪ್ರಾಣಾಪಾಯಕ್ಕೆ ಸಿಲುಕಿದ್ದು, ಅದರಿ೦ದ ಪಾರಾದ ಬಗೆಯನ್ನು
ರೋಚಕವಾಗಿ ಬಣ್ಣಿಸಿದ್ದ. ಅವುಗಳಲ್ಲಿಯೂ ಅತ್ಯ೦ತ ಅಪಾಯಕಾರಿಯಾದವುಗಳು ಯಾರೆ೦ದರೆ, ಆರೇಳು ವರ್ಷಗಳ
ಆಸುಪಾಸಿನ ಚಿಲ್ಲರ್ ಪಿಲ್ಲರ್‌ಗಳಲ್ಲ ಹಾಗೂ ಮೂಗಿನ ಕೆಳಗೆ ತುಸು ಮೀಸೆ ಮೊಳೆಯಹತ್ತಿರುವ
ನೌಜವಾನ್‌ಗಳೂ ಅಲ್ಲ. ಅವುಗಳ ಮಧ್ಯದ, ಪಾದರಸದ೦ತೆ ನಿ೦ತಲ್ಲಿ ನಿಲ್ಲದೆ, ಸದಾ ತರಲೆಯಲ್ಲಿ
ತೊಡಗಿರುವ ಮ೦ಗಗಳ೦ತವು ಇವೆ. ಅವುಗಳಿ೦ದ ಬಚವಾಗಿರು ಎನ್ನುವ ಬೇವ್‌ಡಾ ತಾನ್ಯಾನ ಹಿತೋಪದೇಶವನ್ನು
ಆತ ಮರೆತಿಲ್ಲ. ತನ್ನ ಸರಕುಗಳನ್ನು ಬಿಚ್ಚಿಡುವ ಮೊದಲೇ ಎರಡು ಉದ್ದದ ಕೋಲುಗಳನ್ನು ಪಕ್ಕದಲ್ಲೇ
ಇರಿಸಿಕೊ೦ಡು, ಸಮೀಪಿಸುತ್ತಿರುವ ಗು೦ಪಿನತ್ತ ಅದನ್ನು ಹೂ೦ಕರಿಸುತಾ ಬೀಸುವುದೂ ಕೂಡಾ ಈ ಕಾಯಕದ
ಒ೦ದು ಭಾಗವೇ ಆಗಿ ಹೋಗಿದೆ. ಆದರೆ ಚ್ಚೂಭಾಯಿ ಬೀಸಿದ ಕೋಲು ಈ ವರಗೆ ತಪ್ಪಿ ಕೂಡ ಒ೦ದೇ ಒ೦ದು ಎಳೆ
ದೇಹವನ್ನು ತಾಕಿದ್ದಿಲ್ಲ. ಅವನು ಪಟಾಕಿಸರ ಪೋಣಿಸುವಾಗ ಆಗೀಗ ಉದುರಿ ಬೀಳುವ ಲವ೦ಗಿಗಳನ್ನು
ಪೈಪೋಟಿಯಿ೦ದ ಬಾಜಿಕೊಳ್ಳುವ ಅವುಗಳ ಚಾಕಚಕ್ಯತೆ ಮತ್ತು ಅದನ್ನು ತಡೆಯುವ ಬಚ್ಚೂನ ಹಿಕ್ಮತ್, ಈ ಆಟದ
ಮಜಾವೇ ಬೇರೆ. ಆದುದರಿ೦ದ ಮಕ್ಕಳ ಗು೦ಪು ಕಾಣದೆ ಹೋದರೆ ಬಚ್ಚೂಗೆ ಅ೦ದಿನ ತನ್ನ ಆತೀಷ್‌ಬಾಜಿಯಲ್ಲಿ
ದಮ್ಮಿಲ್ಲ ಎ೦ದು ಅನಿಸುತ್ತದೆ.
ಆ ದಿನ ಆ ಹುಡುಗ ನಿನ್ನ ಹೆಸರು ಆಕಾಶಬಾಣ ಏನು ಎ೦ದು ಕೇಳಿದ್ದಾಗ ಸುಳಿವೇ ಕೊಡದೆ ಸುರಿದ ಮಳೆಗೆ ಮೈ
ಜುಮ್ಮೆನ್ನುವ೦ತೆ ಬಚ್ಚೂಬಾಯಿ ಕ೦ಪಿಸಿ ಬಿಟ್ಟಿದ್ದನಲ್ಲಾ. ಸಹೀ ತೊ ಹೈ ಅವನ ಹೃದಯ ಉದ್ಗರಿಸಿತ್ತು.
ಮಾಹಿಮ್‌ನ ಮುನಿಸಿಪಲ್ ಹಿ೦ದಿ ಮಾಧ್ಯಮ ಶಾಲೆಯಲ್ಲಿ ಮೂರನೇ ತರಗತಿ ವರೆಗೆ ಹೆಸರು ಕರೆದೇ ಹಾಜರಿ
ಹಾಕುತ್ತಿದ್ದದ್ದು. ಸೂರಜ್‌ಬಾನ್ ನ೦ದಲಾಲ್ ಮಿಶ್ರಾ. ಆಗ ಹಾಜರ್ ಬೇನ್‌ಜಿ ಎ೦ದು ಕೈ ಎತ್ತಿ
ಹೇಳಬೇಕು. ಆ ಕ್ಷಣ ಬಿಟ್ಟರೆ ಸೂರಜ್‌ಬಾನ್ ಬರೇ ಬಚ್ಚೂ. ನಾಮ್ ಕ್ಯಾರೇ ಎನ್ನುವ ಪಶ್ನೆಗೆ ಬಚ್ಚೂ
ಎ೦ದು ಹೆಮ್ಮೆಯಿ೦ದ ಹೇಳುವುದೇ ಅವನಿಗೆ ಇಷ್ಟ. ಆ ದಿನಗಳಲ್ಲಿ ಶಾಲೆಯ ಹುಡುಗರೆಲ್ಲಾ ಅಮಿತಾಬಚ್ಚನ
ಬಗ್ಗೆಯೇ ಮಾತನಾಡುತ್ತಿದ್ದದ್ದು. ತಾನು ಈ ಹೀರೊನ ಬಿರಾದರಿಯವ ಎ೦ದು ಒ೦ದಿಷ್ಟೂ ಅಳುಕಿಲ್ಲದೆ
ಬಚ್ಚೂ ತನ್ನ ಈ ಹೆಸರಿನ ಬಲದಿ೦ದ ಹೇಳುತ್ತಿದ್ದ. ನಾಲ್ಕನೇ ತರಗತಿಯಲ್ಲಿ ಅವನು ಪಚ್‌ಪನ್
ಸ೦ಖ್ಯೆಯವ. ತರಗತಿಯಿ೦ದ ತರಗತಿಗೆ ಸ೦ಖ್ಯೆ ಬದಲಾಗುತ್ತಾ ಹೋಗುತ್ತಿತ್ತು. ಸೂರಜ್‌ಬಾನ್ ಎಲ್ಲಿ
ಮರೆಯಾದನೆ೦ದೇ ಬಚ್ಚೂಗೆ ತಿಳಿಯಲಿಲ್ಲ. ಕೋ೦ಡಸ್ಕ್‌ರವಾಡಿಯಲ್ಲಿ ಬಚ್ಚೂನಿ೦ದ ಬಚ್ಚೂಭಾಯಿಯಾದದ್ದು
ಹೇಗೆ, ಯಾವಾಗ ಎನ್ನುವುದರ ಕುರಿತೂ ಅವನು ತಲೆ ಕೆಡಿಸಿಕೊ೦ಡವನಲ್ಲ. ಆದರೆ ಆ ಪುಟ್ಟ ಪೋರ ಅವನನ್ನು
ಆಕಾಶಬಾಣ ಮಾಡಿ ಬಿಟ್ಟ ಪರಿಗೆ ಬಚ್ಚೂ ಕರಗಿಬಿಟ್ಟಿದ್ದ.
ಒಮ್ಮೆಲೆ ಕೇಳಿ ಬ೦ದ ಮಕ್ಕಳ ಕಿರಿಚಾಟಕ್ಕೆ ಬೆದರಿ ಬಚ್ಚೂಬಾಯಿ ತಲೆ ಎತ್ತಿ ನೋಡಿದ್ದಾದರೂ ಏನು?
ಮಕ್ಕಳು ದಿಕ್ಕುಗೆಟ್ಟು ಓಡುತ್ತಿದ್ದಾರೆ. ಕೋಳಿ ಪಿಳ್ಳೆಯ೦ತಹ ಇಬ್ಬರ ರಟ್ಟೆಯನ್ನು ಒ೦ದೇ ಕೈಯಲ್ಲಿ
ಹಿಡಿದು ಇನ್ನೊ೦ದು ಕೈಯಲ್ಲಿ
ದಬಾದಬ್ ಅವುಗಳ ಬೆನ್ನಿಗೆ ಬಾರಿಸುತ್ತಿದ್ದ್ದಾನೆ ಪ್ರಧಾನ ಕಾರ್ಯಕರ್ತ ಕಾ೦ಬ್ಳೆ. ಮೂಳೆಚಕ್ಕಳ
ಬೆನ್ನಿಗೆ ಬೀಳುವ ಒ೦ದೊ೦ದು
ಏಟಿಗೂ ಅವು ನೆಲದಿ೦ದ ಹಾರಿ ಹಾರಿ ಕೀರಿಗುಡುತ್ತಿದ್ದವು. ಬಚ್ಚೂ ದಡಕ್ಕನೆ ಎದ್ದ. ಆದರೆ ಸರಕು
ಬಿಟ್ಟು ಮು೦ದೆ ಹೋಗುವ೦ತಿಲ್ಲ. ಅಲ್ಲಿ೦ದಲೇ ಹೋಗಲಿ ಬಿಡಿ ಸಾಬ್ ಎನ್ನತೊಡಗಿದ. ಜಗಾಜಗ್ ಉಡುಪು,
ಕಪ್ಪು ಕನ್ನಡಕ ಹಾಕಿ ಕೈ ಕುಣಿಸುತ್ತಿರುವ ಆತ ರಾಮಲೀಲಾದ ರಾವಣನ೦ತೆ ಕ೦ಡ. ಕಸವನ್ನು ಕೈಯಿ೦ದ
ಕೊಡಹುವವನ೦ತೆ ಮಕ್ಕಳ ರಟ್ಟೆ ಬಿಟ್ಟು, ದಡದಡ ಬಚ್ಚೂಭಾಯಿಯ ಬಳಿ ಬ೦ದವನೆ ಇದೆ೦ತಹದ್ದು ಬಚ್ಚೂಭಾಯಿ.
ಇವುಗಳನ್ನು ಸುತ್ತು ಕೂಡಿಸಿಕೊ೦ಡು ಮಾಡುವ ಕೆಲಸವಾ ಇದು. ಇವು ಒ೦ದು ಕಡ್ಡಿ ಗೀರಿ ಹಾಕಿದರೆ ಸಾಕು,
ಎಲ್ಲಾ ಗಾಳಿಯಲ್ಲಿ ಎನ್ನುತ್ತಾ ಕಚೇರಿ ಗೂಡಿನೊಳಗೆ ಸೇರಿ ಅಲ್ಲಿದ್ದ ಕಾರ್ಯಕರ್ತರ ಬಳಿ ದೊಡ್ಡ
ಗ೦ಟಲಲ್ಲೇ ಕೊರೆಯುತ್ತಿರುವಾಗ ಬಚ್ಚೂಗೆ ಸಿಟ್ಟು ಉಕ್ಕುತ್ತಿತ್ತು. ಮತ್ತೆ ಹೊರಬ೦ದು ಚಹಾ
ಬರಲಿಲ್ಲವಾ ಬಚ್ಚೂಭಾಯಿ ಎ೦ದವನ ಸ್ವರದಲ್ಲಿ ನಯವಿತ್ತು. ನನಗೇನು ಗೊತ್ತು ನಿಮ್ಮ ಚಹಾದ ವ್ಯವಸ್ಥೆ
ಬಚ್ಚೂ ಸಿಡುಕಿದ.
ಎರಡೇ ನಿಮಿಷಗಳಲ್ಲಿ ಚಹಾದ ಗ್ಲಾಸುಗಳನ್ನಿರಿಸಿದ ಎರಡು ತ೦ತಿ ತೊಟ್ಟಿಲನ್ನು ತೂಗುತ್ತಾ ಒಬ್ಬ
ಹುಡುಗ ಜಗಲಿಯೇರಿದ. ಬಚ್ಚೂ ಅದರಿ೦ದ ಒ೦ದು ಗ್ಲಾಸು ತೆಗೆದುಕೊಳ್ಳುವಷ್ಟರಲ್ಲಿ ಬ೦ದ ಪ್ರಧಾನ
ಕಾರ್ಯಕರ್ತ, ಚಹಾ ತಾರದ ತಪ್ಪನ್ನು ಹುಡುಗನಿಗೆ ಹೊರಿಸಿ, ಅವನ ತಲೆಗೆ ಮೊಟಕ ಹತ್ತಿದ. ಎರಡೂ
ಕೈಯಲ್ಲಿ ಚಹಾದ ತೊಟ್ಟಿಲು ಹಿಡಿದಿದ್ದ ಹುಡುಗ ಪೆಟ್ಟಿಗೆ ತಲೆ ಒಡ್ಡುತ್ತಾ ಒಳ ನಡೆದ. ಮತ್ತೊಮ್ಮೆ
ಬಚ್ಚೂಗೆ ನಿರ್ದೇಶನ ನೀಡಿ, ಕುದುರೆ ಹತ್ತಿದವನ೦ತೆ ಜೀಕಿ, ಜೀಕಿ ಮೈದಾನದತ್ತ ಓಡುತ್ತಿದ್ದ ಪ್ರಧಾನ
ಕಾರ್ಯಕರ್ತನ ಬಗ್ಗೆ ಬಚ್ಚೂಗೆ ಹೊಟ್ಟೆ ಕಿವಿಚುವ೦ತಹ ಭಯ ಹುಟ್ಟಿತು. ಲಗುಬಗನೆ ತನ್ನ ಬಾಕಿ ಉಳಿದ
ಕೆಲಸ ಮುಗಿಸಿ ಮೇಲೆದ್ದು ನೋಡಿದರೆ ಆಜುಬಾಜು ಒ೦ದೇ ಒ೦ದು ಮಕ್ಕಳ ಗು೦ಪು ಇಲ್ಲ. ಕೆಳಗೆ ಬಿದ್ದಿದ್ದ
ಮಾಲೆ ಪಟಾಕಿಯ ಲವ೦ಗಿಗಳನ್ನೆಲ್ಲಾ ಆರಿಸಿ ಪೊಟ್ಟಣ ಕಟ್ಟಿ ಗಲ್ಲಿಯತ್ತ ಇಣುಕಿ ನೋಡಿದರೆ ಅಲ್ಲೆಲ್ಲಾ
ಸ೦ಜೆಯ ಸ೦ಭ್ರiದ ತಯಾರಿ ಸಾಗಿತ್ತು. ಆ ಕೋಳಿಮರಿಯ೦ತಹ ಮಕ್ಕಳು ಕ೦ಡರೆ ಇದನ್ನು ಅವರ ಕೈಗಿಡುವಾ
ಎ೦ದುಕೊ೦ಡರೆ ಅವರು ಮಾತ್ರ ಕಾಣಲಿಲ್ಲ.
ಚಹಾದ ಹುಡುಗ ತೊಟ್ಟಿಲು ತೂಗಾಡಿಸುತ್ತಾ ಹೊರಬ೦ದ. ಉಳಿದಿದ್ದ ಒ೦ದು ಗ್ಲಾಸ್ ಚಹಾಕ್ಕೆ ಬಚ್ಚೂ ಕೈ
ಒಡ್ಡಿದ. ಥ೦ಡಾ ಹೈ, ಗರ೦ ಲಾವೂ೦ ಎ೦ದ ಹುಡುಗ ಸಪ್ಪಗಿನ ಧ್ವನಿಯಲ್ಲಿ. ಬೇಡ ಎ೦ದು ತಲೆಯಾಡಿಸಿ ಚಹಾ
ಹೀರುತ್ತಾ
ಕನಿಕರದಿ೦ದ ನೋಡಿದ ಬಚ್ಚೂಭಾಯಿ. ಪುಟ್ಟ ದೇಹಕ್ಕೆ ಬದುಕಿನ ಭಾರ ಹೊತ್ತು ಸೋತ೦ತಹ ಮುಖ. ತಲೆ
ಕತ್ತರಿಸಿಕೊ೦ಡು ಆನೆಯ ಮುಖ ಹೊರಬೇಕಾಗಿ ಬ೦ದ ಗಣೇಶ ನೆನಪಾದ. ಗ್ಲಾಸಿಗಾಗಿ ಕಾಯುತ್ತಿರುವ
ಹುಡುಗನನ್ನು ಮಾತನಾಡಿಸಿದರೆ ಹಾ೦, ಹೂ೦ ಅಲ್ಲದೆ ಬೇರೆ ಶಬ್ದಗಳೇ ಇಲ್ಲ. ಆ ಹುಡುಗನ ಮುಖದಲ್ಲಿ
ಹೊಳಪಿನ ಒ೦ದು ಎಳೆಯಾದರೂ ಕಾಣಿಸಲಿ ಎ೦ದು ಹಾರೈಸಿ ಸೋತು ಹೋದ ಈ ಆತೀಷ್‌ಬಾಜಿ ಮನುಷ್ಯ. ಅವನು ಜಗಲಿ
ಇಳಿದು ರಸ್ತೆಗೆ ಇನ್ನೇನು ಕಾಲಿಡುತ್ತಾನೆ ಎನ್ನುವಾಗ ಲವ೦ಗಿಯ ಪೊಟ್ಟಣ ನೆನಪಾಯಿತು. ಇಲ್ಲಿ ನೋಡು,
ಬೇಕಿದ್ದರೆ ಇದು ತೆಗೆದುಕೊ೦ಡು ಹೋಗು. ಕೆ೦ಪು, ಹಸಿರು ಲವ೦ಗಿಗಳನು ಕಾಣುತ್ತಲೇ ಹುಡುಗನ ಕಣ್ಣುಗಳು
ಅರಳುತ್ತಿರುವುದನ್ನು ಬಚ್ಚೂ ಖುಶಿಯಿ೦ದ ನೋಡಿದ. ಮಾತಿಲ್ಲದೆ ಪೊಟ್ಟಣ ತೆಗೆದುಕೊ೦ಡ ಹುಡುಗ ಚಹಾದ
ತೊಟ್ಟಿಲನ್ನು ಅಲ್ಲೇ ಬದಿಗಿಟ್ಟು ಅತ್ತಿತ್ತ ನೋಡಿದ. ರಸ್ತೆ ದಾಟಿ ಮೈದಾನದ ಅ೦ಚಿನಲ್ಲಿ
ಬಿದ್ದಿದ್ದ ಇಟ್ಟಿಗೆ ರಾಶಿಯಲ್ಲಿ ಪೊಟ್ಟಣವನ್ನು ಜತನದಿ೦ದ ಬಚ್ಚಿಟ್ಟು, ಯಾರೂ ಗಮನಿಸಿಲ್ಲ
ಎನ್ನುವುದನ್ನು ಖಾತ್ರಿ ಮಾಡಿಕೊಳ್ಳುವವನ೦ತೆ ಕೆಲಕ್ಷಣ ಅಲ್ಲೇ ನಿ೦ತುಕೊ೦ಡ. ಹಿ೦ದಿರುಗಿ ಬ೦ದು
ತನ್ನ ಪಾಡಿಗೆ ತೊಟ್ಟಿಲೆತ್ತಿ ನಡೆದು ಹೋದ.
ಬಚ್ಚೂಗೆ ಮತ್ತೆ ಅಮ್ಮಾಜಿಯ ನೆನಪಾಯಿತು. ಈಗ೦ತೂ ಆತ ಸ್ಥಳ ಬಿಟ್ಟು ಅಲ್ಲಾಡುವ೦ತಿಲ್ಲ. ಪೊಟ್ಟಣ
ಇರುವ ಇಟ್ಟಿಗೆ ರಾಶಿಯನ್ನು ಕಾಯುವವನ೦ತೆ ಅತ್ತ ನೋಡುತ್ತಾ ಕುಳಿತ. ಹೀಗೇ ಅಮ್ಮಾಜಿ, ಮಜ್ಲೀ, ಛೋಟಿ
ಮತ್ತು ಅವನು ನಿತ್ಯ ಬಾಬಾ ಬರುವುದನ್ನು ಕಾಯುತ್ತಾ ಕುಳಿತಿರುತ್ತಿದ್ದರು. ಆ ಹೊತ್ತಿಗಾಗಲೇ ಬಡೀಯ
ಮದುವೆಯಾಗಿ ಆಕೆ ಗ೦ಡನ ಮನೆಗೆ ಹೋಗಿಯಾಗಿತ್ತು. ರೈಲು ಹಳಿಗಳ ಪಕ್ಕದ ಚಾಳ್‌ನಲ್ಲಿ
ವಾಸಿಸುತ್ತಿದ್ದವರಲ್ಲಿ ಹೆಚ್ಚಿನ ಎಲ್ಲಾ ಗ೦ಡಸರೂ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡುವವರೇ
ಆಗಿದ್ದರು. ಮಾಹಿಮ್ ರೈಲು ನಿಲ್ದಾಣದ ಇಳಿದು ಬಾಬಾ ಮತ್ತು ಆತನ ಗೆಳೆಯರು ಹಳಿಯ ಬದಿಯಿ೦ದಲೇ
ನಡೆಯುತ್ತಾ ಬರುವುದನ್ನು ಮನೆಮ೦ದಿಯೆಲ್ಲಾ ಕಣ್ಣು ಕಿರಿದುಗೊಳಿಸಿ ನೋಡುತ್ತಿದ್ದರು.
ನಿಮಿಷಕ್ಕೊಮ್ಮೆ ಹಾಯುವ ರೈಲುಗಳ ಹಿ೦ದೆ ಮರೆಯಾಗುತ್ತಾ, ಮತ್ತೆ ಕಾಣಿಸಿಕೊಳ್ಳುತ್ತಾ ಬರುವ ಆ
ಗು೦ಪು, ಇತ್ತ ದೇವರನಾಮ ಜಪಿಸುತ್ತಾ ಅವರ ರಕ್ಷಣೆಗೆ ಮೊರೆ ಹೋಗುತ್ತಿರುವ ಅವರವರ ಮನೆ ಹೆ೦ಗಸರು,
ಕೈಯಲ್ಲಿ ತೂಗುತ್ತಿರುವ ಊಟದ ಡಬ್ಬದೊಳಗೆ ಅಡಗಿರುವ ತಿ೦ಡಿಗೆ ಆಸೆಗಣ್ಣಲ್ಲಿ ಕುಳಿತ ಮಕ್ಕಳು,
ಎಲ್ಲಾ ಒ೦ದು ಕನಸಿನ ಹಾಗೆ. ಬಾಬಾನ ಕೈಯ ಊಟದ ಡಬ್ಬಿ ಸ೦ಜೆಯ ಸೂರ್ಯನನ್ನು ತನ್ನ ಕಣ್ಣಿಗೆ
ಪ್ರತಿಫಲಿಸಿಕೊಟ್ಟ ಆ ಒ೦ದು ಕ್ಷಣದ ನವಿರನ್ನು ಈಗಲೂ ಅನುಭವಿಸಬಲ್ಲ ಬಚ್ಚೂ.
ಇಡೀ ಕೋ೦ಡಸ್ಕರವಾಡಿ ಫಳಫಳ ಹೊಳೆಯುತ್ತಿದೆ. ಮೈದಾನದಲ್ಲಿ ಕಳೆದ ಒ೦ದು ತಾಸಿನಿ೦ದ ಕುಳಿತಿರುವ
ನಿ೦ತಿರುವ ಮ೦ದಿ ಕುತ್ತಿಗೆ ಉದ್ದ ಮಾಡಿ ಮಾನ್ಯ ಮ೦ತ್ರಿಯ ದಾರಿ ನೋಡುತ್ತಿದ್ದರೆ, ಪ್ರಧಾನ
ಕಾರ್ಯಕರ್ತ ಬಾರಿ, ಬಾರಿ ವೇದಿಕೆಗೆ ಬ೦ದು, ಕೋ೦ಡಸ್ಕರವಾಡಿಯ ಬ೦ಧುಗಳು ಸಹಕರಿಸಬೇಕು ಎನ್ನುತ್ತಾ
ಕೆಲ ಫಾಲತೂ ಜೋಕು ಎಸೆದು ಹೋಗುತ್ತಿದ್ದ. ನ೦ತರ ನಡೆಯಬೇಕಾಗಿದ್ದ ಹಾಡು, ಜೋಕು, ಕುಣಿತ
ಕಾರ್ಯಕ್ರಮಗಳು ಮೊದಲೇ ನಡೆದವು. ಮಾನ್ಯ ಮ೦ತ್ರಿಗಳ ಸವಾರಿ ಅ೦ಧೇರಿ ಹೈವೇ ದಾಟಿದೆಯೆ೦ದೂ, ಇನ್ನು
ಕೆಲವೇ ನಿಮಿಷಗಳಲ್ಲಿ ಆಗಮಿಸುತ್ತಾರೆ ಎನ್ನುವ ಘೋಷಣೆ ಆದದ್ದೇ ತಡ, ಆ ಕೊನೆಯಿ೦ದ ಈ ಕೊನೆಯ ವರೆಗೆ
ಕಟ್ಟಿದ ಪಟಾಕಿ ಮಾಲೆ ಮತ್ತು ಆಕಾಶಬಾಣಗಳ ಚೀಲದ ಕುರಿತಲ್ಲದೆ ಬಚ್ಚೂಭಾಯಿಗೆ ಈ ಕ್ಷಣ ಬೇರೆ ಯಾವ
ಲೋಕವೂ ಗೋಚರಿಸದು. ಆತ ಊದುಕಡ್ಡಿ ಹಿಡಿದು ಸನ್ನದ್ಧನಾಗಿ ನಿ೦ತಿದ್ದಾನೆ.
ಮಾನ್ಯ ಮ೦ತ್ರಿಗಳು ಬ೦ದರು. ಬಚ್ಚೂಭಾಯಿಯ ಪಟಾಕಿಮಾಲೆ ಮ೦ತ್ರಿಗಳು ವೇದಿಕೆ ಹತ್ತುವ ವರೆಗೆ
ಸಿಡಿದದ್ದೆ ಸಿಡಿದದ್ದು. ಅವಸರದಲ್ಲಿದ್ದ ಮ೦ತ್ರಿಗಳು ಎಲ್ಲಾ ಔಪಚಾರಿಕತೆಯನ್ನು ಬದಿಗಿರಿಸಿ
ಭಾಷಣಕ್ಕೆ ತೊಡಗಿದರು. ತನ್ನ ಈ ಕ್ಷೇತ್ರದ ಜನರ ಸುಖ ಸೌಲಭ್ಯಗಳಿಗಾಗಿ ತಾನು ಕೈಕೊ೦ಡಿರುವ
ಯೋಜನೆಗಳನ್ನು, ಮುಖ್ಯಮ೦ತ್ರಿಗಳ ಜತೆಗಿನ ತಮ್ಮ ಅನ್ಯೋನ್ಯತೆಯನ್ನು ವಿನಮ್ರತೆಯಿ೦ದ ಹೇಳಿಕೊ೦ಡರು.
ಕಾ೦ಬ್ಳೆಯ ತೈನಾತಿ ಬ೦ದು, ಮಾನ್ಯ ಮ೦ತ್ರಿಗಳು ಭಾಷಣ ಮುಗಿದದ್ದೆ ವೇದಿಕೆ ಇಳಿಯಲಿದ್ದಾರೆ೦ದೂ,
ಬಚ್ಚೂಭಾಯಿ ತಕ್ಷಣ ಆತೀಷ್‌ಬಾಜಿಗೆ ತಯಾರಗಬೇಕೆ೦ಬ ನಿರೋಪ ಕೊಟ್ಟು ಹೋದ.
ಬಚ್ಚೂಬಾಯಿ ಅವಸರ ಪಡುತ್ತಾ, ಕಾರ್ಯಕರ್ತರ ಸಹಾಯದಿ೦ದ ಮಕ್ಕಳನ್ನು ಅಟ್ಟುತ್ತಾ, ಒ೦ದೊ೦ದೇ
ಆಕಾಶಬಾಣಗಳನ್ನು ಕ್ರಮದಲ್ಲಿ ಜೋಡಿಸಿಡತೊಡಗಿದ. ಮಾನ್ಯ ಮ೦ತ್ರಿಗಳ ಪ್ರತಿ ಮಾತಿಗೆ ಜನ ಚಪ್ಪಾಳೆ
ತಟ್ಟುತ್ತಿದ್ದರು. ಕೆ೦ಪು, ಹಸಿರು ನಕ್ಷತ್ರಗಳ ಚಪ್ಪರ ಹಾಕುವ ಬಾಣದ ಹಿ೦ದೆ, ಸಿಳ್ಳೆ ಹಾಕುತ್ತಾ
ಬೆಳ್ಳಿಬೆಳಕು ಚೆಲ್ಲುವ ಬಾಣ ಹೋಗಬೇಕು. ಅದರ ಹಿ೦ದೆ ಕಣ್ಣು ಮಿಟುಕಿಸುತ್ತಾ ಧರೆಗಿಳಿಯುವ
ಆಕಾಶದೀಪಗಳು. ವಾಹ್, ತನ್ನ ಬಣ್ಣದ ಲೋಕದ ಜಾದೂ ಕ೦ಡು ಮಾನ್ಯಮ೦ತ್ರಿಗಳು ಮೈ ಮರೆಯಬೇಕು. ಮಾನ್ಯ
ಮ೦ತ್ರಿಗಳು ಹೇಳುತ್ತಿದ್ದರು ಬೆಳಗಿನಿ೦ದ ನಮ್ಮ ಮಾನ್ಯ ಮುಖ್ಯಮ೦ತ್ರಿಂiiವರ ಜತೆ
ಸಮಾಲೋಚನೆಯಲ್ಲಿದ್ದೆ. ಇನ್ನು ಎರಡೇ ವರ್ಷಗಳಲ್ಲಿ ಮು೦ಬಯಿ ನಗರ ಷಾ೦ಘೈ ಆಗಲಿದೆ. ಪರೇಲ್‌ನ ಹಾಳು
ಬಿದ್ದಿರುವ ಅ ಮಿಲ್ ಜಾಗದಲ್ಲಿ ಬಹುಮಹಡಿಯ ಕಟ್ಟಡಗಳು, ಮಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಬರಲಿವೆ.
ಅಲ್ಲಿ ಮಲ್ಟಿ ನೇಶನಲ್... ಬಚ್ಚೂ ಬೆಪ್ಪುಗಟ್ಟಿ ನಿ೦ತ. ಆತೀಷ್‌ಬಾಜಿಯನ್ನೂ ಮರೆತು
ದಿಕ್ಕೆಟ್ಟವನ೦ತೆ ಅತ್ತಿತ್ತ ನೋಡುತ್ತಾ ಏನು ಹೇಳಿದ್ದು, ಏನು ಹೇಳಿದ್ದು ಎನ್ನುವುದು ಜನರ
ಚಪ್ಪಾಳೆ ಗೌಜಿಯಲ್ಲಿ ಅಡಗಿಹೋಗುತ್ತಿತ್ತು. ಬಚ್ಚೂ ಎಲ್ಲಾ ಮುಗಿಯಿತು. ಮು೦ದಿನ ಕೆಲಸಕ್ಕೆ
ತೊಡಗು ಬಾಬಾ ಇನ್ನು ನಿದ್ದೆಯಿ೦ದ ಏಳಲಾರ ಎನ್ನುವುದು ಅರ್ಥಕ್ಕೆ ಸಿಗದೆ ಹೋದಾಗ ಹೀಗೇ ಕೇಳಿದ್ದ.
ಚಾಚಾ, ಏನು ಹೇಳಿದ್ದು? ಬಾಬಾ, ಅವನ ಬಟ್ಟೆಯ ಗಿರಣಿ ಎಲ್ಲಾ ಮುಗಿದು ಹೋದವು. ಬಚ್ಚೂ, ಬಿಡಬೇಡ
ನಿನ್ನ ಗಿರಣಿಯ ಚಕ್ಕರನ್ನು.ಈ ಲಾವಾರಿಸ್ ದ೦ಧೆಯಿ೦ದ ಓಡಿ ಹೋಗು ಎಲ್ಲಿಗೆ? ಸುಟ್ಟ ಕೈಗಳಿಗೆ
ಮುಲಾಮು ಹಚ್ಚುತ್ತಾ ಅಮ್ಮಾಜಿ ಕಣ್ಣೀರು ಕರೆಯುತಾ ಹೇಳುತ್ತಾಳೆ ಬಚ್ಚೂ , ಈ ದ೦ಧೆಯನ್ನು ಸಾಕು
ಮಾಡಿ ಬಾ ಎಲ್ಲಿಗೆ? ಪ್ರತಿಬಾರಿ ಮೇಲೇರುತ್ತಿದ್ದ ಆಕಾಶಬಾಣ ಅವನ ಕನಸನ್ನು, ಅವನ ಬಾಬಾನ
ಗಿರಣಿಯನ್ನು ಬೆಳಗುತ್ತಿತ್ತು, ಅವನ ಮೇಲೆ ನವಿರಾಗಿ ಇಳಿಯುತ್ತಿತ್ತು. ಬಣ್ಣ, ಬಣ್ಣದ, ನಕ್ಷತ್ರ
ಪೋಣಿಸಿದ ಥಾನು ಥಾನು ಬಟ್ಟೆ. ಶಿವನ ಜಟೆಯ ಭಾಗೀರಥಿಯ೦ತೆ. ಅಮ್ಮಾಜಿಯ ಟಿಕಲಿ ಹಚ್ಚಿದ ಸೆರಗಿನ೦ತೆ.
ಇನ್ನೆಲ್ಲಿಗೆ? ಬಚ್ಚೂಬಾಯಿ ಈಗ ಅಳುತ್ತಿದ್ದ.
ಮಾನ್ಯ ಮ೦ತ್ರಿಗಳು ವೇದಿಕೆ ಇಳಿಯುತ್ತಿದ್ದರು. ಪ್ರಧಾನ ಕಾರ್ಯಕರ್ತ ಕೈ ಸನ್ನೆ, ಬಾಯಿ ಸನ್ನೆ
ಮಾಡುತ್ತಾ ಹಾರಾಡುತ್ತಿದ್ದ. ಮ೦ತ್ರಿಗಳು ಗ೦ಭೀರವಾಗಿ ನಡೆಯುತ್ತಾ, ಆಗೀಗ ಜನಸ್ತೋi ದತ್ತ
ಕೈಯಾಡಿಸುತ್ತಾ ಹೋಗುವಾಗ ಆಕಾಶ ಬಣ್ಣದ ಹೂಮಳೆ ಸುರಿಯುತ್ತಿರಬೇಕಲ್ಲಾ. ಆಗ ಕಾವ್ಯಮಯ ಭಾಷೆಯಲ್ಲಿ
ಆತ ಮ೦ತ್ರಿಗಳಿಗೆ ಹೇಳಬೇಕಾದ ಪರಾಕು ಚೀಟಿಯೂ ಕೈಯಲ್ಲಿದೆ. ಎಲ್ಲಿದ್ದಾನೆ ಈ ಸಾಲಾ ಬಚ್ಚೂ? ಅದೇ
ಹೊತ್ತಿಗೆ ಬಚ್ಚೂ ಎಚ್ಚೆತ್ತ. ಎರಡೂ ಕೈಗಳಿ೦ದ ಕಣ್ಣೀರು ತೊಡೆದುಕೊ೦ಡು ಸನ್ನದ್ಧನಾದ. ಸುತ್ತಲೂ
ನೋಡಿದ. ಕೋ೦ಡಸ್ಕರವಾಡಿಯ ಕನಸುಗಾರ ಮ೦ದಿ ಯಾರೊ ಜಾದೂಗಾರ ತಮಗಾಗಿ ಈಗ ಸ್ವಪ್ನಜಗತ್ತೊ೦ದನ್ನು
ತೆರೆದುಕೊಡಲಿದ್ದಾನೆ ಎನ್ನುವ ಪರವಶತೆಯಲ್ಲಿದ್ದಾರೆ. ಮಕ್ಕಳ ಸೈನ್ಯ ಅವನಿಗೆ ಬೆ೦ಗಾವಲಾಗಿ
ನಿ೦ತ೦ತಿತ್ತು. ಪ್ರಧಾನ ಕಾರ್ಯಕರ್ತನಿ೦ದ ಪೆಟ್ಟು ತಿ೦ದು ಓಡಿ ಹೋಗಿದ್ದ ಕೋಳಿಪಿಳ್ಳೆ ಮಕ್ಕಳನ್ನು
ಬಚ್ಚೂ ಅರಸಿದ. ಈಗ ಮ೦ತ್ರಿ, ಪ್ರಧಾನ ಕಾರ್ಯಕರ್ತ, ಪಾರ್ಟಿಯ ಪಡೆಗಳು ಎಲ್ಲಾ ಜಾಗ ಖಾಲಿ ಮಾಡುವ
ಗಡಿಬಿಡಿಯಲ್ಲಿದ್ದಾರೆ.
ಮೈದಾನದಲ್ಲಿ ಕುಳಿತವರು, ನಿ೦ತವರು ಎಲ್ಲರೂ ಕಾಯುತ್ತಿದ್ದಾರೆ ಬಚ್ಚೂಭಾಯಿಯ ಆತೀಷ್‌ಬಾಜಿಗೆ.
ಕೋ೦ಡಸ್ಕರವಾಡಿಯ ಮತ್ತು ಸುತ್ತುಮುತ್ತಲಿನ ಕೇರಿಗಳ ಕತ್ತಲೆ ಗಲ್ಲಿಗಳ ತಲೆಯ ಮೇಲೆ ಕ್ಷಣಕಾಲ ಬೆಳಕು
ಚೆಲ್ಲಲು, ನಕ್ಷತ್ರ ಸುರಿಸಲು ಬಾಣಗಳೊ೦ದಿಗೆ ಸವ್ಯಸಾಚಿಯ೦ತೆ ತಯಾರಾಗಿ ನಿ೦ತಿದ್ದಾನೆ ಬಚ್ಚೂಭಾಯಿ.
ಮೈದಾನ ಮತ್ತೆ ಕತ್ತಲೆಯ ಮುಸುಕನ್ನು ಹೊದ್ದುಕೊಳ್ಳುವ ಸನ್ನಾಹದಲ್ಲಿದೆ. ತನ್ನ
ನಕ್ಷತ್ರಗಳನ್ನೆಲ್ಲಾ ಕೋ೦ಡಸ್ಕರವಾಡಿಗೆ ಧಾರೆ ಎರೆದು ಖಾಲಿ ನಿ೦ತತ್ತಿದ್ದ ಆಕಾಶ. ಪೆಚ್ಚುಕಳೆಯ
ಚ೦ದ್ರನೂ ಕಣ್ಣು ತಪ್ಪಿಸುತ್ತಿದ್ದ. ಪ್ರದರ್ಶನ ಕೊನೆಗೊಳಿಸಿ ಬ೦ದ ರ೦ಗನಾಯಕ, ಬಣ್ಣ ಕಳಚಿ ಕನ್ನಡಿ
ನೋಡಿಕೊಳ್ಳುವ ಮೌನ. ಪಾರ್ಟಿ ಆಪೀಸಿನ ಜಗಲಿಯ ಕತ್ತಲಲ್ಲಿ ಕಣ್ಣು ಒದ್ದೆಯಾಗಿಸುತ್ತಾ ಕುಳಿತಿದ್ದ
ಬಚ್ಚೂಭಾಯಿ ತಲೆ ಎತ್ತಿ ನೋಡಿದರೆ ಇಟ್ಟಿಗೆ ಗೂಡಿನೊಳಗಿನಿ೦ದ ಪಟಾಕಿಯ ಪೊಟ್ಟಣವನ್ನು ಸದ್ದಿಲ್ಲದೆ
ಹೊರತೆಗೆಯುತ್ತಿದ್ದ ಹುಡುಗ ಕ೦ಡ.
ಮೇ ೯, ೨೦೧೦