ಮಿಂಚುಳ
ಮೊಗಳ್ಳಿ ಗಣೇಶ್
ಪ್ರಾರಂಭಿಸಿದ್ದು : ೧-೧೨-೨೦೦೯ಸಣ್ಣವನಿದ್ದಾಗ ನಮ್ಮೂರ ಕೆರೆ ಬಯಲಲ್ಲೆಲ್ಲ ಅಲೆಯುವಾಗ ನೀರಿನ ಸಾಲುಗಲಲ್ಲಿ ನಳ್ಳಿ ಸೀಗಡಿ
ಮೀನುಗಳ ಹಿಡಿಯುವ ಆಟ ಆಡಿ ಮಹಾಮತ್ಸ್ಯಗಳನ್ನೆಲ್ಲ ಮಣಿಸಿ ಉಸಿರುಗಟ್ಟಿಸಿ ಸದೆಬಡಿದಂತೆ
ಸಾಹಸಪಟ್ಟು; ಕೊನೆಗೆ ಏನನ್ನೂ ಹಿಡಿಯಲಾರದೆ ಮೈತುಂಬ ಬರಿ ಬಗ್ಗಡಗೊಂಡು ತಿಳಿನೀರ ಕೆರೆಯಲ್ಲಿ
ಹಾಯಾಗಿ ಈಜಾಡಿ ಏರಿಗೆ ಬಂದು ನೊಚ್ಚಗಾಗುವಂತೆ ಮೈಕಾಯಿಸಿಕೊಂಡು ಮತ್ತೆ ನೀರಲ್ಲಿ ಮಿಂದು ಮನಸ್ಸು
ದಣಿಯುವತನಕ ಕೆರೆಯ ಅಂಗಳದಲ್ಲೆ ಸುತ್ತಿ: ಹಬ್ಬಿದ ಹಸಿರು ಗದ್ದೆಗಳ ದೂರಕ್ಕೂ ದಿಟ್ಟಿಸುತ್ತಿದ್ದೆ.
ಆ ಕಡೆಯಿಂದ ತೂರಿ ಬರುವ ಹಸಿರು ಗದ್ದೆಗಳ ತಂಗಾಳಿಯನ್ನು ಕುಡಿದು ಅಲ್ಲೆಲ್ಲ ಹಾರಾಡುವ ಬಣ್ಣದ
ನೀರಕ್ಕಿಗಳನ್ನು ಗದರಿಸಿ ಹಾರಿಸಿ ಶಿಳ್ಳೆ ಹೊಡೆದು ಎಂತದೋ ಆನಂದದಲ್ಲಿ ತೇಲುತ್ತಿದ್ದೆ. ನಮ್ಮೂರ
ತಿಳಿನೀರ ಕೆರೆ ವಿಶಾಲವಾದ ಸರೋವರದಂತೆಯೇ ಇತ್ತು. ಅದರಲ್ಲಿ ಯಾವತ್ತೂ ತರಾವರಿ ಬಣ್ಣದ ಹಕ್ಕಿಗಳು
ಬೀಡು ಬಿಡುತ್ತಿದ್ದವು. ಆ ಹಕ್ಕಿಗಳ ಕಲರವ ನೀರಿನಲೆಯಲ್ಲಿ ತೇಲಿ ಬಂದು ಗಾಳಿಯಲ್ಲಿ ಮಿಂದು ನನ್ನ
ಮನದಾಳದಲ್ಲಿ ತಂಗುತ್ತಿತ್ತು. ಕೆರೆಯ ದಡದ ಉದ್ದಕ್ಕೂ ಬಿದ್ದಿರುತ್ತಿದ್ದ ಬಗೆಬಗೆಯ ಹಕ್ಕಿಗಳ
ರೆಕ್ಕೆ ಪುಕ್ಕಗಳನ್ನು ಆಯ್ದು ಹಣೆಗೆ ಕಟ್ಟಿಕೊಂಡರೆ ನನ್ನ ಮನಸ್ಸಿಗೆ ರೆಕ್ಕೆ ಮೂಡುತ್ತಿದ್ದವು.
ಆ ಕೆರೆಯ ಸಂಬಂಧದಲ್ಲಿ ಆಗಾಗ ಯಾರೊ ಪೇಟೆ ಕಡೆಯಿಂದ ತುಫಾಕಿಯನ್ನು ಹೆಗಲಿಗೇರಿಸಿಕೊಂಡು ಎದೆ ಮೇಲೆ
ಢಮಗುಡುವಂತೆ ಬುಲೆಟ್‍ಗಾಡಿಯಿಂದ ಬಂದು ಕೆರೆ ಏರಿ ಮೇಲೆ ನಿಂತು ಆ ನೀರಕ್ಕಿಗಳ ಕಡೆ ಗುರಿಯಿಟ್ಟು
ಮಹಾಗುರಿವೀರನಂತೆ ಒಂದೇ ಏಟಿಗೆ ಎಲ್ಲವನ್ನೂ ಮುಕ್ಕುವಂತೆ ಢಮಾರ್ ಎಂದು ಗುಂಡು ಹಾರಿಸಿದರೆ: ಆಗ ಆ
ವಿಶಾಲವಾದ ಕೋಮಲವಾದ ತಿಳಿ ನೀಲಿಯ ಹಿತವಾದ ಅಲೆಗಳ ಕೆರೆಯೇ ದಂಗಾಗಿ ಹಕ್ಕಿಗಳು ಆಕಾಶದ ಕಡೆ
ದಿಕ್ಕಾಪಾಲಗಿ ಚದುರಿಹೋಗುತ್ತಿದ್ದವು. ಅವನು ಏರಿ ಮೇಲೆ ಬರುವುದನ್ನು ಕಂಡ ಕೂಡಲೆ ನಳ್ಳಿಗಳು ಬಿಲ
ಸೇರಿಕೊಂಡಂತೆ ಹುಡುಗರು ಅವಿತುಕೊಳ್ಳುತ್ತಿದ್ದರು. ಅ ಮನುಷ್ಯನನ್ನು ನೋಡುತ್ತಿದ್ದಂತೆಯೇ ನಾನು
ಬಟ್ಟೆ ಒಗೆಯುತ್ತಿದ್ದ ಹೆಂಗಸರ ಕಡೆಗೆ ಓಡುತ್ತಿದ್ದೆ. ಕೆರೆಯ ಏರಿ ಮೇಲೆ ಕುಳಿತು ಬೆಚ್ಚಗೆ ಮೈ
ಕಾಯಿಸಿಕೊಳ್ಳುತ್ತಾ ಅವರ ತೊಡೆಗಳ ಕಡೆಗೇ ಏನೂ ಕಾಣದವನಂತೆ ನೋಡುತ್ತಿದ್ದೆ. ಕೆರೆಯ ದಡದಲ್ಲಿ
ಸಾಲುಸಾಲಾಗಿ ಹೆಂಗಸರು ಬಟ್ಟೆತೊಳೆಯುತ್ತಾ ತೊಡೆ ಕಾಣುವಂತೆ ಸೀರೆಯನ್ನು ಎತ್ತಿಕಟ್ಟಿ ಸೆರಗನ್ನು
ಬಿಗಿಸು ಸೊಂಟಕ್ಕೆ ಸಿಕ್ಕಿಸಿಕೊಂಡು ಏದುಸಿರಾಡುತ್ತಿರುವಂತೆಯೇ ನನ್ನೊಳಗೆ ಉಸಿರಾಟದ ಲಯ
ತಪ್ಪಿದಂತಾಗುತ್ತಿತ್ತು. ಆ ಹೆಂಗಸರ ತೊಡೆಗಳ ಮೂಲೆಗೇ ಕಣ್ಣೂ ಮನಸ್ಸೂ ಸಾದ್ಯಂತ ತೀವ್ರವಾಗಿ ಇಣುಕಿ
ನೋಡುತ್ತಿದ್ದವು. ಕಣ್ಣಿಗೆ ಏನೂ ಕಾಣಿಸದಿದ್ದರೂ ಮನಸ್ಸಿನ ನೂರಾರು ಅಕ್ಷಿ ಪಟಲದ ಮೇಲೆ ರಂಗು
ರಂಗಾಗಿ ಏನೇನೋ ಕಾಣುತ್ತಿತ್ತು. ಮನಸ್ಸಿನ ಕೈಕಾಲುಗಳು ಅಲ್ಲೆಲ್ಲ ತೂರಿ ತಡಕಾಡಿ
ದಣಿಯುತ್ತಿದ್ದವು.
ಆ ಹೆಂಗಸರೆಲ್ಲ ನೀರಿನಲೆಯಲೆಯಂತೆ ನನ್ನ ಕಡೆ ಗಮನಿಸುತ್ತಲೇ ಇರಲಿಲ್ಲ. ಅವರ ಬಣ್ಣ ಚೆಂದದ ತರಾವರಿ
ತೊಡೆಗಳು ನನ್ನ ಕಣ್ಣುಗಳನ್ನೇ ಬಲವಾಗಿ ತಮ್ಮೆಡೆಗೆ ಸೆಳೆದು ತೊಡೆಸಂದಿಯಲ್ಲಿ ಬಚ್ಚಿಟ್ಟುಕೊಂಡು
ನಗಾಡಿ ಸರಸದ ಚಕ್ಕಳಗುಳಿಯಾಡಿಸಿದಂತಾಗುತ್ತಿತ್ತು. ಏನೋ ಪುಳಕ ಮೆಲ್ಲನೆ ಮಿಡಿಯುತ್ತಿತ್ತು. ಆ
ತುಫಾಕಿದಾರ ಕ್ಯಾಮರಾದಿಂದ ಕೆರೆಯ ತಾವರೆ ಹೂವುಗಳನ್ನು ಸೆರೆಹಿಡಿಯುತ್ತಲೇ ಆ ಹೆಂಗಸರನ್ನೂ ಎಲ್ಲೋ
ಬಂಧಿಸುತ್ತಿದ್ದಾನೆನಿಸುತ್ತಿತ್ತು. ಅವನು ಯಾರೊಂದಿಗೂ ಮಾತಾಡುತ್ತಿರಲಿಲ್ಲ. ಭಾಗಶಃ ತುಫಾಕಿಯ
ಜೊತೆ ಅವನಿಗೆ ಮಾತನಾಡಲು ಚೆನ್ನಾಗಿ ಬರುತ್ತಿತ್ತೆಂದು ಕಾಣುತ್ತದೆ. ಅಪಾರ ಪ್ರೀತಿಯ ತಾಯಂತೆ
ಹೊಕ್ಕುಳಬಳ್ಳಿಯಿಂದ ಬಿಗಿದುಕೊಂಡಂತೆ ತುಫಾಕಿಯನ್ನು ಆತ ಯಾವತ್ತೂ ನೇತಾಕಿಕೊಂಡಿರುತ್ತಿದ್ದ. ಆಗಾಗ
ಬೈನಾಕುಲನಿಂದ ಕೆರೆಯ ತೆರೆ ತೆರೆ ತೆರೆಗಳನ್ನು ಎಣಿಸುತ್ತಿದ್ದಂತೆಯೇ ಆ ಹೆಂಗಸರ ಕಡೆಗೂ
ದೂರದಿಂದಲೇ ದಿಟ್ಟಿಸುತ್ತಿದ್ದ. ಯಾಕೋ ಅವನನ್ನು ಕಂಡರೆ ಭಯವಾಗಿ ಆಗಾಗ ಕನಸಲ್ಲೂ ಬಂದು
ಹೆದರಿಸುತ್ತಿದ್ದ.