ಹೊಸ ಭರವಸೆ, ಹುಟ್ಟಿಸಿರುವ ಹುಡುಗರು...

ಕುಂವೀಯವರ ಶಾಮಣ್ಣ ಕಾದಂಬರಿಯ ಉಳಿದ ಭಾಗಗಳನ್ನು ಪ್ರಕಟಿಸಲಾಗಿದೆ.
-ಸಂ
16-09-2010

ಎರಡು ವರ್ಷಗಳೇ ಮುಗಿದವೇನೊ-ಕನ್ನಡಸಾಹಿತ್ಯ.ಕಾಂ ಅಪ್‌ಡೇಟ್ ಮಾಡಿ. ತಲೆಯಲ್ಲಿ ನೂರು ಚಟುವಟಿಕೆಗಳು, ಎಲ್ಲವೂ ಆದ್ಯತೆಪಟ್ಟಿಗೆ ಸೇರಬೇಕಾದ ಚಟುವಟಿಕೆಗಳೆ. ಮನಸ್ಸಿನಲ್ಲಿ ಇಂತಹ ಚಟುವಟಿಕೆ ನಡೆದಾಗ, ಸಂಪನ್ಮೂಲಗಳ ಕೊರತೆಯೂ ಸೇರಿಕೊಂಡರೆ, ಅನಿಶ್ಚಿತತೆ ನೆಲೆಯಾಗಿ ಬಿಡುತ್ತದೆ. ಎಲ್ಲವೂ ಅರ್ಧಂಬರ್ಧವಾಗಿ ನಿಲ್ಲುತ್ತದೆ. ಬಹುಶಃ ಕನ್ನಡಸಾಹಿತ್ಯ.ಕಾಂಗೆ ಆದದ್ದೂ ಅದೆ. ಕನ್ನಡಸಾಹಿತ್ಯ.ಕಾಂ ನ ಮುಂಚೂಣಿಯಲ್ಲಿರುವ ನನ್ನದೊಬ್ಬನದೆ ಈ ಸ್ಥಿತಿ ಎಂದೇನೂ ಅಲ್ಲ. ಎಲ್ಲರದೂ ಇದೇ ಸ್ಥಿತಿ. ಕಾರಣಗಳು ಸಾಕು:

ಆದ್ಯತೆಗಳನ್ನು ಗುರುತಿಸುವುದು ಈಗ ಮುಖ್ಯ, ಅದರಂತೆ ಒಂದು ವೇಳಾಪಟ್ಟಿಯೂ ಬೇಕಾಗಿದೆ.

  • ಮುಂದಿನ ಪ್ರಕಟಣೆಗಳ ವೇಳಾ ಪಟ್ಟಿ
  • ಅದಕ್ಕೆ ಬೇಕಾಗಿರುವ ಪಠ್ಯದ ಅಂದರೆ ಕೀಲೀಕರಣದ ಸಿದ್ಧತೆ
  • ನಿಗದಿತ ವೇಳೆಗೆ ಸರಿಯಾಗಿ ಸಂಚಿಕೆಗಳ ಪ್ರಕಟಣೆ
  • ಇವುಗಳನ್ನು ಸಾಧಿಸಲು ಕನಿಷ್ಠ ಇನ್ನೂ ಒಂದೆರಡು ತಿಂಗಳುಗಳಾದರೂ ಬೇಕು. ನಂತರ, ನನಗೆ ಕನ್ನಡಸಾಹಿತ್ಯ.ಕಾಂ ನಿಂದ ಬಿಡುಗಡೆ. ಸಂವಾದ.ಕಾಂ ಕಡೆ ಹಾಗು ಇತರ.ಕೋ.ಇನ್ ಕಡೆಗೆ ಗಮನ ಹರಿಸಬಹುದು. ಕನ್ನಡಸಾಹಿತ್ಯ.ಕಾಂ ನೋಡಿಕೊಳ್ಳಲು ಬೇಕಾದ ಹುಡುಗರ ಪಡೆಯಂತೂ ಕಣ್ಣಿಗೆ ಕಾಣುತ್ತಿದೆ. ಭರವಸೆಯೂ ಇದೆ.

* * *

Kishore and M N S Rao

ಭರವಸೆ ಮೂಡಿಸಿ, ನಾನು ಇದ್ದೇನೆ ಎಂದದಿದ್ದ ಕಿಶೋರ್ ಚಂದ್ರ ಎಂದೂ ಮಾತಿಗೆ ತಪ್ಪಲಿಲ್ಲ. ಯಾರೂ ಏನಾದರೂ ಆಗಲಿ, ಏನಾದರೂ ಮಾಡಿಕೊಳ್ಳಲಿ ಕನ್ನಡಸಾಹಿತ್ಯ.ಕಾಂ ಬಗೆಗೆ ಶ್ರದ್ಧೆ ಕಡಿಮೆಯಾಗದಂತೆ ಏಕಪ್ರಕಾರವಾಗಿ ದುಡಿದಂತಹ ವ್ಯಕ್ತಿ. ಈ ಹುಡುಗನ ಮುಖದಲ್ಲಿ ಇರುವ ಮುಗುಳ್ನಗೆಯಂತೆಯೇ, ಎಂದೂ ಶಿಸ್ತು ಮಾಸಲೇ ಇಲ್ಲ. ಆದುದರಿಂದಲೇ, ಕಿಶೋರನಿಗೆ ಈ ಸಂಚಿಕೆಯನ್ನು ಅರ್ಪಣೆ ಮಾಡುತ್ತಿದ್ದೆನೆ.

ಬರಿಯ ಹುಡುಗರೇ ಇದ್ದರೆ ಸಾಕೆ? ನಮ್ಮ ಜೊತೆಗೆ ಇರುವ ಹಿರಿಯ ಜೀವ ಎಂ ಎನ್ ಎಸ್ ರಾವ್. ಅವರ ಮುಂದೆ ಉಳಿದವರೆಲ್ಲ ಕುಬ್ಜವಾಗಿದ್ದರೆ ಅದು ನನ್ನ ದೃಷ್ಟಿದೋಷವಲ್ಲ. ಕಿಶೋರ್ ಮತ್ತು ರಾವ್‌ರವರ ಬಗೆಗೆ ಈಗಾಗಲೇ ಬರೆದಿದ್ದನ್ನೇ ಇಲ್ಲಿ ದಾಖಲಿಸುತ್ತಿದ್ದೇನೆ:

"

ಕೀಲೀಕರಣ ಎಷ್ಟು ಕಠಿಣ ಅಥವ ಸುಲಭ ಎಂದು ಕಂಡುಕೊಳ್ಳಲು ಒಂದು ಸರಳವಾದ ಉಪಾಯ ಮಾಡಿದೆ. ಯು ಆರ್ ಅನಂತಮೂರ್ತಿಯವರ ಪೂರ್ವಾಪರ (೧/೮ ಕ್ರೌನ್?)ದಲ್ಲಿ, ಪೂರ್ತಿ ಅಚ್ಚುಪುಟವನ್ನು ಆಯ್ಕೆ ಮಾಡಿಕೊಂಡೆ (ಬಿಚ್ಚುಕಟ್ಟು: ಪುತಿನರ ರಸಪ್ರಜ್ಞೆ, ಪುಟ ೬೩):

ಹೊಸ ಬಗೆಯಲ್ಲಿ ಸಾಧಿಸಬೇಕಾಗಿದೆ ಎಂದು ಅನ್ನಿಸುತ್ತದೆ. ಇದಾಗದಿದ್ದಲ್ಲಿ ಕಾವ್ಯ ಅದೇ ಹಳೆಯ ಎರಕದಲ್ಲಿ ಹೊಯ್ದು ಸಾಲಭಂಜಿಕೆಗಳಂತಿರುತ್ತದೆ; ಅಥವಾ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತದೆ. ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ‘ಕ್ರಾಂತಿ’ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು. ಅವನಿಗೆ ನಿಜವಾಗಿ ಕ್ರಾಂತಿ ಬೇಕಾಗಿಲ್ಲ; ಆದರೆ ತನ್ನ ರೋಷಾವೇಶಗಳನ್ನು ವ್ಯಕ್ತಪಡಿಸಲೊಂದು ನೆವಬೇಕು. ವ್ಯವಸ್ಥೆಯ ಅಗತ್ಯವನ್ನೂ ಬದಲಾವಣೆಯ ಅನಿವಾರ್‍ಯತೆಯನ್ನೂ ಏಕಕಾಲದಲ್ಲಿ ಅನುಭವಿಸುವಾತ ಮಾತ್ರ ಕ್ರಾಂತಿಕಾರಿಯಾಗಬಲ್ಲ. ಕ್ರಾಂತಿಯನ್ನು ಕುರಿತು ಚಿಂತಿಸಬಲ್ಲವರೆಲ್ಲರೂ ಕಾನ್ರಾಡ್‌ನ ‘ದಿ ಸೀಕ್ರೆಟ್ ಏಜೆಂಟ್’ ಓದಬೇಕು. ಅಲ್ಲೊಬ್ಬ ತನ್ನ ಮೈಯ ಮೇಲೆಲ್ಲ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ತನ್ನನ್ನೂ ತನ್ನ ಸುತ್ತಲಿನವರನ್ನೂ ಏಕಕಾಲದಲ್ಲಿ ಕೊಲ್ಲಬಲ್ಲ ಅರಾಜಕತಾನಾದದ ಉಗ್ರ, ತಪಸ್ವಿಯಿದ್ದಾನೆ. ಅರಾಜಕತಾವಾದಿಗಳ ಸಂಘಲಾಭದ ಮುಖೇನ ಜರ್ಮನರಿಗೆ ಗುಪ್ತಚಾರನಾದವನೊಬ್ಬನೂ ಬರುತ್ತಾನೆ. ಅವನ ಹೆಂಡತಿ ತನ್ನ ಮೂರ್ಖ ತಮ್ಮನೊಬ್ಬನನ್ನು ಅಕ್ಕರೆಯಿಂದ ಸಾಕುತ್ತಿರುವ ಸಂಸಾರಿ ಹೆಣ್ಣು. ದುರ್ಬಲ ಮನಸ್ಸಿನ ಈ ತಮ್ಮನನ್ನು ಅವನ ಕರುಣೆ ಮೀಟಿ, ಉನ್ಮಾದಕ್ಕೆ ಒಳಪಡಿಸಿ, ಅವಳ ಖದೀಮ ಗಂಡ ಬಾಂಬ್‌ಸ್ಪೋಟ್ ಒಂದರಲ್ಲಿ ಅವನನ್ನು ಬಳಸಿಕೊಂಡು ಸಾಯಿಸುತ್ತಾನೆ. ಹೆಂಡತಿ ಪೆದ್ದಳಾದರೂ ಇದನ್ನು ತಿಳಿದೊಡನೆಯೇ ಮಾಂಸ ಕೊಯ್ಯುವ ಅಡಿಗೆ ಮನೆ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಅಸ್ವಸ್ಥ ಪೋಲಂಡಿನ ಕಾನ್ರಾಡ್ ಅರಾಜಕ ಕ್ರಾಂತಿಕಾರತೆಯ ರುಚಿತಿಳಿದಿದ್ದ ಸಂಪ್ರದಾಯವಾದಿ. ಸುಖಜೀವಿಗಳಾದ ಉದಾರವಾದಿಗಳು ತಮ್ಮ ಪಾಪಪ್ರಜ್ಞೆಯಿಂದಾಗಿ ಕ್ರಾಂತಿಯ ಮಾತಾಡುವವರನ್ನು ಬೆಂಬಲಿಸುವುದು; ಮೊಡ್ಡು ಜನರ ಜೀವನಪ್ರೀತಿ ಸತ್ಯನಿಷ್ಠೆಗಳು; ಬಿರುಕುಗಳನ್ನು ಉಪೇಕ್ಷಿಸುವ ವ್ಯವಸ್ಥೆಯ ದಡ್ಡತನ; ವಿನಾಶವನ್ನು ಪ್ರೀತಿಸುವ ಮನೋವ್ಯಾಧಿ ಗ್ರಸ್ತರು ಸಾಮಾಜಿಕ ಅನ್ಯಾಯಗಳನ್ನು ದುರುಪಯೋಗಪಡಿಸಿಕೊಂಡು ಹೇಗೆ ಕಿಚ್ಚೆಬ್ಬಿಸುವುದರಲ್ಲೇ ಆಸಕ್ತರಾಗಿರುತ್ತಾರೆಂಬ ದಿಗಿಲು - ಇವೆಲ್ಲವನ್ನೂ ರಕ್ತಕ್ರಾಂತಿ, ಕೊಲೆ, ಉತ್ಪಾತಗಳ ನಮ್ಮ ಕಾಲಕ್ಕೆ ಅನನ್ಯವೆಂಬಂತೆ ಕಾನ್ರಾಡ್ ಕಾಣಿಸಿದವನು. ವ್ಯವಸ್ಥೆಯ ಪ್ರೀತಿಯನ್ನೂ, ವಿನಾಶದ ಆಕರ್ಷಣೆಯನ್ನೂ ತನ್ನೊಳಗೇ ಕಂಡುಕೊಂಡವನು ಕಾನ್ರಾಡ್. ಆದ್ದರಿಂದಲೇ ಅವನು ಕೊಡುವ ‘ಸ್ವಕೇಂದ್ರ ಮುಕ್ತಿ’ಯ ರಸಪ್ರಜ್ಞೆ ನಮಗೆ ಗಾಢವಾದ ಅನುಭವವಾಗುತ್ತಾದೆ. ಕ್ಲಾಸಿಕಲ್ ಕವಿಗಳು ಮಾತ್ರ ವ್ಯವಸ್ಥೆಯನ್ನೂ ಹೊಗಳಬಲ್ಲವರು. ಉದಾಹರಣೆಗೆ ಪಂಪ ಮತ್ತು ಕಾಳಿದಾಸ. ನಮ್ಮ ಕಾಲದ, ಪ್ರಾಯಶಃ ಅನಿವಾರ್‍ಯದ, ದುರಂತವೆಂದರೆ ಈ ಬದಲಾವಣೆಯ ಯುಗದಲ್ಲಿ ಹುಟ್ಟಿದ ಅತ್ಯುತ್ತಮ ಲೇಖಕರು ಬಿಚ್ಚುವುದರಲ್ಲಿ, ಕೊಳಕನ್ನು ನಾಶಮಾಡುವುದರಲ್ಲಿ, ಹರಿಯುವುದರಲ್ಲಿ ಎಷ್ಟು ಆಸಕ್ತರಾಗಿರುತ್ತಾರೋ, ಅಷ್ಟೇ ಹೊಸ ವ್ಯವಸ್ಥೆಯ ನಿರ್ಮಾಣದಲ್ಲಿ ಆಸಕ್ತರಾಗಿರುವುದಿಲ್ಲ. ತಮ್ಮ ಬರವಣಿಗೆಯ ತೀವ್ರತೆಗಾಗಿ ಅವರು ಈ ಬೆಲೆ ತೆತ್ತಿರುತ್ತಾರೆ. ರಷ್ಯನ್ ಕವಿ ಮಯಾಕೊವೆಸ್ಕಿ ಕ್ರಾಂತಿಪೂರ್ವ ಮತ್ತು ಕ್ರಾಂತಿ ಸಮಯದಲ್ಲಿ ಎಷ್ಟು ಲವಲವಿಕೆಯಿಂದ ದೇಶವನ್ನು ಬಿಗಿದಿದ್ದ ಸರಪಳಿಗಳನ್ನು ಕಡಿದು ಹಾಕಿದನೋ, ಅಷ್ಟೇ ತೀವ್ರವಾಗಿ ಹೊಸ ಉಕ್ಕಿನ ಕಾರ್ಖಾನೆಗಳನ್ನು ತೆರೆಯುವುದರ

- ಈ ಮೇಲಿನ ಕನ್ನಡ ಪಠ್ಯವನ್ನು http://www.webworldindex.com/countcharacters.htmರಲ್ಲಿ ಅಂಟಿಸಿದಾಗ ಪದಗಳ ಮಧ್ಯದ ಜಾಗವನ್ನೂ ಸೇರಿಸಿದಂತೆ ಒಟ್ಟು ೨೫೦೭ ಕ್ಯಾರೆಕ್ಟಾರ್‌ಗಳಿವೆ ಎಂದು ತೋರಿಸಿತು. ಅಂದರೆ, ಭರ್ತಿ ಪುಟವೊಂದನ್ನು ಕೀಲೀಕರಣ ಮಾಡಲು, ೨೫೦೭ ಬಾರಿ ಕೀ ಬೋರ್ಡ್ ಮೇಲೆ ಕೈಬೆರಳುಗಳು ಅಡ್ಡಾಡಬೇಕಾಗುತ್ತದೆ. ಅಂದರೆ ಸುಮಾರು ೬೦೦ ಪುಟ ಕೀಲೀಕರಣ ಮಾಡಲು ೨೫೦೭*೬೦೦=೧೫೦೪೨೦೦ (ಅಂದರೆ ಹದಿನೈದು ಲಕ್ಷ ನಾಲ್ಕು ಸಾವಿರದ ಇನ್ನೂರು ಬಾರಿ ಕೈಬೆರಳುಗಳು ಆಡಬೇಕು), ಸಂಖ್ಯೆಯನ್ನು ನೋಡಿದರೆ ಎಂಥವರನ್ನಾದರೂ ಭಯಭೀತಗೊಳಿಸುತ್ತದೆ. ಯುವಕರಾದರೋ ಅವರವರ ಧ್ಯಾನ-ಆಅಸಕ್ತಿಗಳಿ ಅವರವರಿಗೆ, ಯುವ ವಿವಾಹಿತರಾದರೋ ನೂರಾರು ಗೋಜಲುಗಳು. ವೃದ್ದರಾದರೂ ವ್ಯಾಧಿಗಳು . ನನ್ನ ವಯಸ್ಸು ೫೪. ನನಗೂ ನೂರಾರು ವ್ಯಾಧಿಗಳು. ಕೀ ಬೋರ್ಡ್ ಮೇಲೆ ಕೈಬೆರಳುಗಳು ವಿಶ್ರಾಂತಿ ರಹಿತವಾಗಿ ಆಡಲಾರದು.
*
*
*
ಎಂ ಎನ್ ಸತ್ಯನಾರಾಯಣರಾವ್‌ರನ್ನು ಎಂಎನ್‌ಎಸ್ ಎಂದೇ ಕರೆಯುತ್ತೇವೆ. ಅವರ ವಯಸ್ಸು ೭೪. ಶಾಮಣ್ಣ ಕುಂಇಯವರ ಕಾದಂಬರಿ- ಸುಮಾರು ೬೦೦ ಪುಟಗಳು. (ಪುಸ್ತಕ ಕಣ್ಮರೆಯಲ್ಲಿರುವುದರಿಂದ ಪುಟಗಳ ನಿಖರತೆಯನ್ನು ಖಚಿತಪಡಿಸಿ ಹೇಳುತ್ತಿಲ್ಲ, ಒಟ್ಟಾರೆ ೫೭೦ ರ ಮೇಲೆ). ಇಡಿ ಕೃತಿಯನ್ನು ಕೀಲೀಕರಣಗೊಳಿಸಿದ್ದಾರೆ. ಕಡಿಮೆ ಕಲಸವಲ್ಲ. ಇವರ ಮುಂದೆ ನಾನಂತೂ ಕುಬ್ಜನಾದೆ. ಕೆ‌ಎಸ್‌ಸಿಯ ಮುಂದುವರಿಕೆ ನನ್ನಿಂದ ಅಸಾಧ್ಯ ಎಂದಿರುವಾಗ ಇಂತಹವರ ಇಂತಹ ಕೆಲಸ ನನ್ನನ್ನು ಹುರಿದುಂಬಿಸಿತು. ಉಳಿದವರನ್ನೂ ಹುರಿದುಂಬಿಸುತ್ತದೆ ಎಂದೆನ್ನುವುದು ನನ್ನ ನಿರೀಕ್ಷೆ. ಸಂವಾದ.ಕಾಂ, ಕಬಡ್ಡಿ ಚಿತ್ರದ ಬಗೆಗೆ ಸಂವಾದ ಕಾರ್ಯಕ್ರಮ ಇಟ್ಟುಕೊಂಡಿದ್ದಾಗ ಎಂಎನ್‌ಎಸ್‌ರವರಿಗೆ ಶಾಲು ಹೊದಿಸಿ ಒಂದು ಸಣ್ಣ ಸನ್ಮಾನವನ್ನು ಮಾಡಿದ್ದೆವು. ‘ರಾವ್‌ಜಿ, ಇದಕ್ಕಿಂತಲೂ ಹೆಚ್ಚಿನ ಗೌರವ ನಿಮಗೆ ಸಿಗಬೇಕಾಗಿತ್ತು. ನಮ್ಮ ಮಿತಿಗಳನ್ನು ಅರ್ಥ ಮಾಡಿಕೊಂದಿರುವ ನಿಮ್ಮ ಹೃದಯ ದೊಡ್ಡದು.’
*
*
*
ಕಿಶೋರ್ ಚಂದ್ರ -ನನಗಿಂತಲೂ ೨೦ ವರ್ಷಕ್ಕೆ ಕಿರಿಯ. ಈತನ ಶ್ರದ್ಧೆ, ಶಿಸ್ತು ನನ್ನನ್ನು ಸದಾ ಬೆರಗುಗೊಳಿಸಿದೆ. ಕೆ‌ಎಸ್‌ಸಿ ಅಪ್‌ಡೇಟ್ ಆಗಲಿ ಬಿಡಲಿ, ತಾವು ವಹಿಸಿಕೊಂಡಿರುವ ಕೀರ್ಲೀಕರಣದ ಕಾರ್ಯವನ್ನು ಮುಗಿಸಿ ಫೈಲುಗಳನ್ನು ರವಾನಿಸಿಬಿಡುತ್ತಿದ್ದರು. ಈ ಬಾರಿಯ ಅಪ್‌ಡೇಟ್ ಮತ್ತು ಡಾಟಾವನ್ನು ಕ್ರಮಬದ್ಧಗೊಳಿಸಲು ಅಪಾರವಾಗಿ ಶ್ರಮ್ಸಿದ್ದಾರೆ. ಬಹುಶಹ್ ಇಂತವರಿಲ್ಲದಿದ್ದರೆ, ನಾನೊಬ್ಬನೆ ಎಂದೆನ್ನುವ ಭಾವವೇ ನಲುಗಿಸಿಬಿಡುತ್ತಿತ್ತೇನೊ.. ಧನ್ಯವಾದಗಳು, ಕಿಶೋರ್ ಚಂದ್ರ

*
*
*

ಈ ಸಂಚಿಕೆಯಲ್ಲಿ...

ಕುಂವೀಯವರ ಒಂದು ಅದ್ಭುತ ಕಾದಂಬರಿಗಳಲ್ಲಿ ‘ಶಾಮಣ್ಣ’ ಸಹ ಒಂದು. ಬೃಹತ್ ಹೊತ್ತಿಗೆಗಳಲ್ಲಿ ನಿಮಗೆ ತಾಳ್ಮೆ ಇದ್ದರೆ, ಭಾಷೆ, ಪರಿಸರವೆಲ್ಲವೂ ಹೇಗೆ ಒಂದು ಸೃಜನಶೀಲ ಪ್ರಕ್ರಿಯೆಯಾಗಿ ಮೂಡುತ್ತಾ ಹೋಗುತ್ತದೆ ಎಂದೆನ್ನುವ ಕೌತುಕಕ್ಕೆ ನಿಮ್ಮನ್ನು ನೀವು ತೆರೆದಿಟ್ಟುಕೊಳ್ಳಬಹುದು. ಒಮ್ಮೆಲೆಗೆ ಇಡಿ ಕಾದಂಬರಿಯನ್ನು ಒಂದೆಡೆ ಕೊಟ್ಟುಬಿಟ್ಟರೆ, ಸ್ವಾರಸ್ಯ ಎಲ್ಲಿ ಕೆಡುತ್ತದೋ ಎಂದೆನ್ನುವುದರಿಂದ ಇನ್ನೂರು ಪುಟಗಳನ್ನು ತುಣುಕು ತುಣುಕಾಗಿ ನೀಡಿದ್ದೇವೆ.

ಹಾಗೆಯೆ ವೈಯಕ್ತಿಕವಾಗಿ ಹೆಚ್ಚು ಆಪ್ತವಾದ ಸಂದೀಪ ನಾಯಕರ, ಅಬ್ದುಲ್ ರಷೀದರ ಸಣ್ಣಕತೆಗಳೊಂದಿಗೆ ಶೀರ್ಷಿಕೆಯೇ ಇಲ್ಲದ ಮಮತಾ ಸಾಗರ್‌ಳ ಐದು ಕವನಗಳು ಇವೆ. ಅವುಗಳನ್ನು ಓದಿದದನಂತರ ಈ ಸಾಲನ್ನು ಇಲ್ಲಿ ಗಟ್ಟಿಯಾಗಿಯೇ ಹೇಳಬಹುದು: `ಮಮ್ತಾ, ನಾನು ನಿನ್ನ ಅಭಿಮಾನಿ'.
-ಶೇಖರ್‌ಪೂರ್ಣ
೨೦-೦೫-೨೦೧೦