ಸಾವಿರದ ಸತ್ಯ

ಎಷ್ಟಂದರೂ ನಿನಗೆ ನಾಚಿಕೆಯಿಲ್ಲ.
ಹೊತ್ತು-ಗೊತ್ತು, ನೇಮ-ನಿತ್ಯ ಯಾವುದೂ ಇಲ್ಲ.
ಆಡಾಡುತ್ತ ಅಡ್ಡಗಾಲು ; ನಡುವೆ ಒಡ್ಡುವ ಸವಾಲು.
ಓಡುವ ಭರಾಟಿಯಲ್ಲಿ ಬಂಡಿ ಕಳಕೊಂಡಂತೆ
ಕೊಂಡಿ, ಕಡೆಗೀಲು. ತೆರೆದ ಕಣ್ಣು ತೆರೆದಂತೆ
ಬಟಾಬಯಲು. ಹಾಡೇ ಹಗಲು ದಡೋಡೆ:
ಹಿಂದೆ-ಮುಂದೆ ಸುತ್ತಲೂ ಹದ್ದು-ನೆರಳಿನ ಪಹರೆ.
ಚೂರೂ ಗುರುತು ಹತ್ತದ ಮುಖ ಚಹರೆ.
ಯಾರಮುಖಾಂತರವೊ ನಿನ್ನ ಕಂಡಾಗ ಸಂಕಟ, ದುಃಖ
ಮತ್ತೆ ಯಥಾಪ್ರಕಾರ :
ಪಿಸಿನೂಲು ತೆಗೆದು, ಹರಿದಲ್ಲಿ ಎಳೆ ಹಚ್ಚಿ
ಹುರಿ ಮಾಡಿ ಸುತ್ತುವ ಚರಖ-
ಮಗ್ಗದಲ್ಲಿ ಮೆಲ್ಲಗೆ ಬಗ್ಗಿ ನೇಯುವ ಸುಖ.

ಮರೆವೆಯ ಪರದೆಯಾಚೆ ಕಾಡಿನ ದಾರಿ
ಕಾಲಮಾನಕ್ಕೆ ದೂರ.
ತೆರೆ ಎದ್ದಾಗ ಇದ್ದಕ್ಕಿದ್ದಂತೆ ಸನಿಹ, ಒಮ್ಮೆಲೆ ಕ್ರೂರ.
ಹುಟ್ಟಿನ ಬೆನ್ನ ಹುರಿಗುಂಟ ಏರಿ
ತುಟ್ಟತುದಿಗೊಂದು ತರಹ.
ಮುಟ್ಟಿ ನೋಡಿದ ಹಾಗೆ ದಿಟ್ಟತನದನುಭವ.
ಕೊಟ್ಟು ರುಚಿತೋರಿ, ಇಸಗೊಂಡಂತೆ ನಾಲಗೆಯ ರವರವ.
ಇರಬಹುದು ನಿನಗಿದು ಸಹಜ; ಒಂದು ರೀತಿಯ ಮಜ.
ನಮಗೆ ಆಕಸ್ಮಿಕದ ಭಯ.
ಎಲ್ಲಾ ಕಳೆದು ಉಳಿದದ್ದು, ಉಳಿಯದಿದ್ದದ್ದೂ ನಿಜ.
ಒಣಗಿದೆಲೆ, ಬಾಡಿದ ಹೂವು, ಕಳಿತ ಹಣ್ಣು-
ಚಿಗುರು, ಮೊಗ್ಗು, ಹೀಚಿಗೆ ತೆರೆದ ಕಣ್ಣು :
ಹುಳು ಕೊರೆದು, ಬಿರುಗಾಳಿ ಬೀಸಿ ಉದುರಿದರೆ
ಮತ್ತೆ ಮಣ್ಣು.
ಮಂಜಿನೊಳಗಿಂದ ಹೊರಬಿದ್ದ ಮುಂಜಾವು,
ಮಧ್ಯಾಹ್ನ ಏರುವ ಕಾವು-
ಇಳಿದು ಕುಂಟುತ್ತ ಜಾರುವ ಸಂಜೆ-
ಸಾವಿರದ ಸತ್ಯ ; ಒರೆಗಳಚಿದಲಗು.
ಹಗಲೆಲ್ಲ ತೊಗಲಬಾವಲಿ ಹಿಂಡು ತಲೆ-ಕೆಳಗು.
ನುಂಗಬೇಕಾದದ್ದು ಕಹಿ ಗುಳಿಗೆ-
ಸಿಕ್ಕು ನೀರಿನ ಸುಳಿಗೆ, ಮುಳುಗಿ
ಎದ್ದಂತೆ ಗುಳ್ಳಿ : ಕೊನೆಯ ಗಳಿಗೆ.
*
*
*
ಜೋಳದ ಪಾಳಿ
-ಚೆನ್ನವೀರ ಕಣವಿ

ಬೆಳುವಲದ ಹೊಲದ ಉದ್ದಗಲ ಎತ್ತುಗೈ ಎತ್ತರಕೆ
ನಿಂತು ಗರಿಗೆದರಿ-
ಹಾರಿ ಹೋಗುವದಿಲ್ಲ ಆಕಾಶಕ್ಕೆ.
ಬಿರುಸು ನೆಲದೆದೆಗೆ ಬೆವರಿಳಿಸಿ, ಹದಗೊಳಿಸಿ
ಬಿತ್ತಿ ಬೆಳೆದವನ ಕೈ
ಬಿಡುವದಿಲ್ಲ.
ಮೈ ಕೊಡವಿ ಏಳುತ್ತೇನೆ ಮುಗಿಲ ಮುತ್ತಿನ ಹನಿಗೆ.
ಎಡೆ ಹೊಡೆದು, ಸುತ್ತುಮುತ್ತಿನ ಕಳೆಯ ಕಿತ್ತಾಗ
ದಿನಕ್ಕೊಂದು ಗೇಣು ಸುಳಿದೆಗೆದು ಬೆಳೆಯುತ್ತೇನೆ.
ಶಿಸ್ತಿನ ಸಿಪಾಯಿಯಂತೆ ನಿಲ್ಲುತ್ತೇನೆ ಸಾಲಾಗಿ
ಮಸಾರಿಗೆ ಹಸಿರು ಧ್ವಜವನೆತ್ತಿ.
ಹೊಡೆ ಬಿಚ್ಚಿ ಹಗುರಾಗುತ್ತೇನೆ ಹೀಗೆ
ಚರಗ ಚೆಲ್ಲುವ ಸೀಗೆ ಹುಣ್ಣಿಮೆಗೆ.
ಹಕ್ಕಿ ಬಂದು ಕುಕ್ಕಿದರೂ ತೂಗುತ್ತೇನೆ
ತೆನೆಯೊಡನೆ, ಮೆಲ್ಲಗೆ ನೋವಾಗದಂತೆ ;
ಬಾಗುತ್ತೇನೆ ಭೂಮಿತಾಯಿಗೆ ಭಾರವಾಗದಂತೆ.
ಮಾಗುತ್ತೇನೆ ಒಂದಕ್ಕೆ ನೂರು ಸಾವಿರವಾಗಿ
ಕಾಳೆಲ್ಲ ಮುತ್ತಿನ ಗೊಂಡೆಯಾಗಿ.
ಹಂತಿಯ ಹಾಡು ಸೂಸಿ, ಬೀಸುಗಾಳಿಗೆ ಸೋಸಿ
ಕಣಕಣದಲ್ಲಿ ರಾಶಿಯಾಗುತ್ತೇನೆ.
ಅದೇ ಚಣವೆ ದನಕರುಗಳಿಗೆ ಹೊಟ್ಟು ಮೇವಿನ-ಬಣಿವೆ.
ಹಿಟ್ಟಾಗಿ, ಬಳೆಯ ತಾಳಕ್ಕೆ ಗುಟ್ಟಾಗಿ
ಬಡವರಂಗೈ ತುಂಬ ರೊಟ್ಟಿಯಾಗಿ,
ಖಾರ, ಉಳ್ಳಾಗಡ್ಡಿ, ಮೊಸರು, ಬದನೆಯಕಾಯಿ
ಪರಸ್ಪರ ಭೆಟ್ಟಿಯಾಗಿ,
ತುತ್ತು ತುತ್ತಿಗೆ ಶಿವ ಶಿವಾ ಎಂದು
ತುಂಬುತ್ತೇನೆ ಹಸಿದ ಹೊಟ್ಟೆ.
ಇಷ್ಟೂ ಸಿಗದಿದ್ದವರ ಗೋಳು ಕೇಳಿ, ಕಸವಿಸಿಗೊಂಡು
ಸಿಟ್ಟಿನಲ್ಲಿ ಅವುಡುಗಚ್ಚಿ
ನಿಟ್ಟುಸಿರು ಬಿಟ್ಟಿದ್ದೇನೆ.
ಅವರಿಗೆ ಮಾತ್ರ ಗೊತ್ತು ನಿಜವಾದ ನನ್ನ ಬೆಲೆ-
ನೀವೇಕೆ ಏರಿಸುತ್ತೀರಿ, ಹೊಟ್ಟೆ ತುಂಬಿದ ಮೇಲೆ?
ನನ್ನ ಮುಚ್ಚಿಟ್ಟು ಮುಗ್ಗುನಾರಿಸಬೇಡಿ.
ದಯವಿಟ್ಟು ಎಲ್ಲರಿಗೂ ಹಂಚಿ, ಅಡ್ಡ ಬರಬೇಡಿ
ನಾನವರ ದೇವರ ಗುಡಿ.

*
*
*

ಇಳಿದ ಬೆಲೆ
-ಚೆನ್ನವೀರ ಕಣವಿ

ಬೆಲೆ ಭಯಂಕರ
ಇಳಿಯುತ್ತಿವೆ ಒಮ್ಮೆಲೆ:
ಐದೈದು ಪೈಸೆ.
ಇನ್ನೂ ಇನ್ನೂ ಇಳಿಯುತ್ತವಂತೆ
ಹತ್ಹತ್ತು ಪೈಸೆ....
ಹೊಟ್ಟೆ ತುಂಬ ಕೊಟ್ಟಿದ್ದಾರೆ
ಭರವಸೆ.

ಅಂತೂ ದೊಡ್ಡ ಭಾರ ಇಳಿದಂತಾಯ್ತು
ಮನೆಮಂದಿಗೆಲ್ಲ; ಇನ್ನು ನಿಶ್ಚಿಂತೆ....
ಎಂದು ಮಾತಾಡಿಕೊಳ್ಳುತ್ತಿದ್ದರು ಅತ್ತೆ-ಸೊಸೆ:
ರೇಶನ್ ಕಾಳಿನ ಕಲ್ಲು-ಕಸ ಆರಿಸಿ ಚೆಲ್ಲುತ್ತ
ಬೊಗಸೆ ಬೊಗಸೆ.

ಸಂಜೆ ಪೇಟೆಗೆ ಹೋಗಿ, ಎಲ್ಲಾ ಕಡೆಗು
ಧಾರಣಿ ಕೇಳಿ
ಸಣ್ಣ ಕೈಚೀಲದ ತುಂಬ ಸಾಮಾನು ತಂದಾಗ
ಗಂಡನ ಕಿಸೆಯಲ್ಲಿ ಉಳಕೊಂಡಿತ್ತು ಹೇಗೊ
ಗಾಳಿಗೆ ಹಾರಿ ಹೋಗದೆ-
ಒಂದು ನಯಾಪೈಸೆ.

*
*
*
ಬರಹಕ್ಕಿಳಿಸಿದರು: ಕಿಶೋರ್ ಚಂದ್ರ
ಪರಿಶೀಲನೆ : ಕಿಶೋರ್ ಚಂದ್ರ