ಸಣ್ಣ ಕತೆ
ಕಪ್ಪು ಹುಡುಗನ ಹಾಡು
ಅಬ್ದುಲ್ ರಶೀದ್
ಕಾಫಿ ತೋಟದ ಕಪ್ಪು ನೆರಳು ಬಾವಿಯ ಸುತ್ತ ಚಾಚಿಕೊಂಡು ನೆರಳಿನ ಸಂದಿ ಸಂದಿನಲ್ಲಿ ಸೂರ್ಯನ ಬೆಳಕು ಇಣುಕುತ್ತಿತ್ತು.
ಕೊಡಪಾನಕ್ಕೆ ಹಗ್ಗ ಪೋಣಿಸಿ ಸರ್ರನೆ ಬಾವಿಯೊಳಕ್ಕೆ ಇಳಿಸಿದ ರಭಸಕ್ಕೆ ನೀರು ಅಲೆಅಲೆಯಾಗಿ ಹಮೀದೆಗೆ
ತನ್ನ ಮುಖ ಬಾವಿಯೊಳಗೆ ಕದಡಿ ಕದಡಿ ಕಂಡು ಹೆದರಿಕೆಯಾಯಿತು. ತಟ್ಟನೆ ತಲೆ ಎತ್ತಿದ.
ದನ ಕಾಯುವ ಕೊರಗ ನೀರಿನ ತೊಟ್ಟಿಯ ಹತ್ತಿರ ಬಗ್ಗಿ ನಿಂತುಕೊಂಡು ಕರುವಿಗೆ ನೀರು ಕುಡಿಸುತ್ತಿದ್ದ.
ಕೆಳಗೆ ಹಸಿರು ಹುಲ್ಲು ಬಾಣೆ ಕಾಣಿಸಿತು. ಹಸಿರು ಹುಲ್ಲು ಸೂರ್ಯನ ಬಿಸಿಲಿಗೆ ಹೊಳೆಯುತ್ತಿತ್ತು. ಬಾಣೆಯ
ನಡುವೆ ನೇರಳೆಯ ಮರ ನೆಟ್ಟಗೆ ನಿಂತುಕೊಂಡು ಅದರ ರೆಂಬೆಯಲ್ಲಿ ಕಟ್ಟಿಕೊಂಡಿದ್ದ ಬೇಣದ ಗೂಡು ಬೆಳ್ಳಗೆ
ಕಾಣುತ್ತಿದ್ದಂತೆ ಹಮೀದೆಗೆ ಇವತ್ತು ಸಂತೆಯ ದಿನ ಅಂತ ನೆನಪಾಯಿತು.
ನೇರಳೆ ಮರದ ಕೆಳಗೆ ತಾನು ಒಟ್ಟಿ ಹಾಕಿದ್ದ ಇಟ್ಟಿಗೆಯ ಚೂರುಗಳು ಕೆಂಪಗೆ ಕಾಣುತ್ತಿದ್ದವು.
ಕಲ್ಲು ಕೂಡಿಸಿ ಇಡು. ಸಂತೆಯ ದಿನ ನನಗೆ ಸಾಲೆಗೆ ರಜೆ. ಅವತ್ತು ಕಲ್ಲು ಹೊಡೆದು, ಬೇಣದ ಗೂಡು ಬೀಳಿಸಿ
ಬಿಡುವ, ಅಂತ ಐಟರ ಮಗ ಬಷೀರು ಅಂದಿದ್ದ.....ಇವತ್ತು ಸಂತೆಯ ದಿನ....ದನ ಮೇಯಿಸುವ ಕೊರಗನಿಗೆ ರಜೆ....ಮೇಯುವ
ದನಗಳಿಲ್ಲದೆ ಬಾಣೆ ಬೋಳು ಬೋಳಾಗಿ ಕಾಣುತ್ತಿತ್ತು. ಹನೀದು ಕೊರಗನ ಕಡೆ ನೋಡಿದ. ಅವ ನೆಲದಲ್ಲಿ ಕುಮ್ಟುಕೊಂಡು
ನೀರು ಕುಡಿಯುವ ಕರುವಿನ ಹೊಟ್ಟೆಯ ಕೆಳಗಿಂದ ‘ಇಸ್’ ಅಂತ ಉಣ್ಣಿ ಹುಳುಗಳನ್ನು ಕಿತ್ತು ಕಿತ್ತು ಕೊಂದು
ಹಾಕುತ್ತಿದ್ದ. ಕರು ಬಾಲ ಅಲ್ಲಾಡಿಸುತ್ತ ತೊಟ್ಟಿಯೊಳಕ್ಕೆ ಮೂತಿ ಚಾಚಿಕೊಂಡಿತ್ತು.
ಹಮೀದೆಗೆ ಬಾವಿಯೊಳಗಿಂದ ಕೊಡದಲ್ಲಿ ನೀರು ತುಂಬಿದ ‘ಗುಳುಗುಳು’ ಸದ್ದು ಕೇಳಿಸಿತು. ಹೊತ್ತು ಮೀರುತ್ತಿದೆ
ಅನಿಸಿ ಬಷೀರು ಬೇಣದ ಗೂಡಿಗೆ ಕಲ್ಲು ಹೊಡೆಯಲು ತನ್ನನ್ನೆ ಕಾಯುತ್ತಿರಬಹುದು ಅಂದುಕೊಂಡು ಬಾಯಿಯ ತಿಟ್ಟೆಗೆ
ಕಾಲುಕೊಟ್ಟು ನೀರು ಎಳೆಯತೊಡಗಿದ. ರಾಟೆ ‘ಜೀಕ್ ಜೀಕ್’ ಅಂತ ಸದ್ದು ಮಾಡುತ್ತಾ ಕೊಡಪಾನ ಮೇಲಕ್ಕೆ ಬಂದಂತೆ
ಕೊಡವನ್ನು ಎಳೆದು ತಿಟ್ಟೆಯ ಮೇಲೆ ಇಟ್ಟು ನಂತರ ಎತ್ತಿಕೊಂಡು ಹೋಗಿ ನೀರಿನ ತೊಟ್ಟಿಗೆ ‘ಸೊರ್’ ಅಂತ
ಸುರಿದ ಸದ್ದಿಗೆ ಕರು ಒಮ್ಮೆಲೆ ಬೆಚ್ಚಿ ತಲೆ ಮೇಲೆತ್ತಿ ನೋಡಿ ಮತ್ತೆ ನೀರಿಗೆ ಬಾಯಿ ಹಾಕಿತು. ಕೊರಗ
ಉಣ್ಣಿ ಹೆಕ್ಕುತ್ತಿದ್ದವನು ಇವನನ್ನೇ ನೋಡುತ್ತಾ ತಮಾಷೆಯಾಗಿ,
“ಏ ಹಮೀದೆ, ಇಲ್ಲಿ ಬಾ ಹಮೀದೆ,
ಸತ್ತ ನಾಯಿ ತೊಗಲು ಕಳಚಿ,
ಏಒಪ್ಪಿ ಹೊಲಿಯೋ ಹಮೀದೆ....” ಎಂದು ಹಾಡುತ್ತಾ ನಗತೊಡಗಿದ. ಹಾಡುತ್ತಿರುವ ಅವನ ಕಪ್ಪು ಮುಖ ಹಮೀದೆಗೆ
ಸಿಟ್ಟು ಬರಿಸಿದೆ. ಇದೇ ಕೊರಗ ನಿನ್ನೆ ಬಾಣೆಯಲ್ಲಿ ದನ ಮೇಯಿಸುವಾಗ ಹತ್ತಿರಕ್ಕೆ ‘ಹಮೀದೆ, ಇಲ್ಲಿ
ಬಾ’ ಅಂತ ಕರೆದು ‘ಹಮೀದು ನಿನ್ನನ್ನು ಐಟರ ಹೆಂಡತಿ ಮರಿಯ ಇಂಞ್ ಬೇಡುವವಳ ಹತ್ತಿರದಿಂದ ತೌಡಿಗೆ ಕೊಂಡದ್ದು
ಗೊತ್ತ?’ ಅಂತ ತಮಾಷೆ ಮಾಡಿ ನಕ್ಕಿದ್ದ. ಹಮೀದೆಗೆ ಅಳು ಬರುವಂತಾಯಿತು. ಕೊರಗ ನಗುತ್ತಲೇ ಇದ್ದ. ಅವನನ್ನು
ನೋಡುತ್ತಾ ಅಲ್ಲಿ ನಿಂತಿರುವುದಕ್ಕೆ ಆಗಲಿಲ್ಲ. ತಟಕ್ಕನೆ ಕೊಡ ಎತ್ತಿಕೊಂಡು ಬಾವಿಯ ಹತ್ತಿರಕ್ಕೆ ಹೋಗಿ
ಕೊಡವನ್ನು ಮತ್ತೊಮ್ಮೆ ಇಳಿಸಿದ. ‘ಸಿಟ್ಟಾ ಹಮೀದೆ’ ಅಂತ ನಗುವುದು ಕೇಳಿಸಿತು.
ಹಮೀದೆ ನೀರು ತುಂಬಿ ಎಳೆಯತೊಡಗಿದ. ನೀರನ್ನು ಮತ್ತೆ ಕೊರಗನ ತೊಟ್ಟಿಗೆ ತುಂಬಲಿಕ್ಕೆ ಮನಸ್ಸು ಬರಲಿಲ್ಲ.
ಅವ ಮತ್ತೆ ತಮಾಷೆ ಮಾಡಬಹುದು ಅನಿಸಿ ಕೊಡವನ್ನು ಭುಜದ ಮೇಲೆ ಎತ್ತಿಕೊಂಡು ಐಟರ ಮನೆಕಡೆ ಹೆಜ್ಜೆಹಾಕತೊಡಗಿದ.
ಕೊಡದಿಂದ ತಣ್ಣಗಿನ ನೀರು ‘ಚಿಳಕ್ ಚಿಳಕ್’ ಅಂತ ಚಿಮ್ಮಿ ಚಿಮ್ಮಿ ಮುಖದ ಮೇಲೆ, ಎದೆಯ ಮೇಲೆ ಸಿಡಿದು
ತಟಗುಳಿ ಇಡತೊಡಗಿತು. ಹಿಂದಿನಿಂದ ಕೊರಗ ‘ಹೋಗಲೋಬೇಡವೋ ಹುಡುಗ’ ಅಂತ ಬೊಬ್ಬೆ ಹಾಕುತ್ತಾ ಕರುವನ್ನು
ತೋಳಲ್ಲಿ ಅವಚಿಕೊಂಡು ಬರುತ್ತಿದ್ದ.
ಬಷೀರು ಬಾಣೆಗೆ ಹೋಗಲಿಕ್ಕೆ ಕಾಯುತ್ತಿರಬಹುದು ಅನಿಸಿ ಬೇಗ ಬೇಗ ಹೆಜ್ಜೆ ಹಾಕತೊಡಗಿದವನಿಗೆ ಮೆಟ್ಟಿಲಿನ
ಮೇಲಿನಿಂದ ಸಾರಾ ತಾತ ಖಾಲಿ ಬುಟ್ಟಿ ಹೊತ್ತುಕೊಂಡು ಬರುವುದು ಕಾಣಿಸಿ, ಕಣ್ಣಿನ ರೆಪ್ಪೆಗೆ ತಣ್ಣಗಿನ
ಹನಿಯೊಂದು ಸಿಡಿದು, ನೋಟ ಮಂಜು ಮಂಜಾದಂತಾಯಿತು.
ಸಾರಾ ತಾತ ಸಂತೆಗೆ ಅಂತ ಸಂತೆಪೇಟೆಗೆ ಹೊರಟಿದ್ದಳು. ತಾತ ಯಾವತ್ತೂ ಸಂತೆಯಿಂದ ಬರುವಾಗ ಹುರಿಯಕ್ಕಿ
ಬೆಲ್ಲ ತರುತ್ತಾಳೆ.....ಹಮೀದು ಮಂಜು ಮಂಜು ಕಣ್ಣಲ್ಲೆ ನೋಡಿದ. ಸಾರಾ ತಾತ ತನ್ನತ್ತಲೇ ನೆಗಾಡಿಕೊಂಡು
ಮೆಟ್ಟಿಲಿಳಿದು ಬರುತ್ತಿದ್ದಳು. ಹಮೀದು ಮೆಟ್ಟಿಲಿನ ಒಂದೊಂದೆ ಪಡಿಗಳನ್ನು ಹತ್ತತೊಡಗಿದ. ಹಿಂದಿನಿಂದ
ಕೊರಗ ಸಿಳ್ಳು ಹೊಡೆಯುತ್ತಾ ಕರುವನ್ನು ಹೊತ್ತುಕೊಂಡು ಬರುತ್ತಿದ್ದ. ಹಮೀದು ಹತ್ತಿರ ತಲುಪುತ್ತಿದ್ದಂತೆ
ಸಾರಾ ತಾತ ‘ನಿಲ್ಲು ಮೋನೆ’ ಅಂತ ಖಾಲಿ ಬುಟ್ಟಿಯನ್ನು ಮೆಟ್ಟಿಲಲ್ಲಿಟ್ಟು ಅಲ್ಲೇ ನಿಂತುಕೊಂಡಳು. ಹಮೀದು
ಭುಜದಿಂದ ಕೊಡಪಾನ ಇಳಿಸಿ ಕುತೂಹಲದಿಂದ ನೋಡಿದ. ತಾತಾ ಹತ್ತಿರಕ್ಕೆ ಬಂದಳು.
ಹಮೀದಿಗೆ ಯಾಕೆ ಗೊತ್ತಾಗಲಿಲ್ಲ. ತಾತಾ ತಲೆ ನೇವರಿಸುತ್ತಾ ‘ಮೋನೇ.....ಸಂತೆಗೆ ಬರುತ್ತೀಯಾ?’ ಅಂತ
ಕೇಳಿದಳು. ಹಮೀದಿಗೆ ‘ಸಂತೆ’ಯೆಂಬ ಸಂಗತಿಯಿಮ್ದ ತೀರಾ ಖುಷಿ ಅನಿಸಿತು. ಕೊಡಪಾನದ ಕಡೆ ನೋಡಿದ. ಮೆಟ್ಟಿಲ
ಕೆಳಗಿನಿಂದ ಕೊರಗ ಸಿಳ್ಳು ಹಾಕುತ್ತಿರುವುದು ಹತ್ತಿರ ಹತ್ತಿರವಾಗಿ ಕೇಳುತ್ತಿತ್ತು. ಸಾರಾ ತಾತಾ ತಲೆ
ತಡವುತ್ತಲೇ ಇದ್ದಳು.ಹಮೀದೆಗೆ ಇದು ಯಾಕೆ ಹೀಗೆ ತಾತಾ ಸಾರಾ ಕಂಡಾಗಲೆಲ್ಲಾ ತಲೆ ತಡವಲಿಕ್ಕೆ ತೊಡಗುವುದು
ಗೊತ್ತಾಗಲಿಲ್ಲ. ತಾತಾ ಕೂದಲೊಳಕ್ಕೆ ಕೈಯಾಡಿಸುವಾಗ ತುಂಬಾ ಚೆಂದವಾಗುತ್ತಿತ್ತು. ಅವ ಮಾತಾಡದೆ ನಿಂತುಕೊಂಡ.
ತಾತಾ ಇನ್ನೊಮ್ಮೆ ‘ಬರುತ್ತೀಯಾ ಮೋನೇ’ ಅಂದಳು. ಹಮೀದಿಗೆ ಬಷೀರು ಅಲ್ಲಿ ಐಟರ ಮನೆಯಲ್ಲಿ ಕಾಯುತ್ತಿರುವುದು
ನೆನಪಾಯಿತು. ಕೊರಗ ಮೆಟ್ಟಿಲು ಹತ್ತುತ್ತಾ ಹತ್ತಿರಕ್ಕೆ ತಲುಪಿದ್ದ. ಅವನ ತೋಳಲ್ಲಿದ್ದ ಕರು ‘ಅಂಬಾ’
ಅಂತ ಕೂಗು ಹಾಕಿದ್ದು ಕೇಳಿತು. ಕೊರಗ ತನ್ನನ್ನು ಹೀಗೆ ಕೊಡಪಾನ ನೆಲದಲ್ಲಿಟ್ಟು ತಾತಾನ ಹತ್ತಿರ ನಿಂತುಕೊಂಡಿರುವುದನ್ನು
ನೋಡಿದರೆ ಹೋಗಿ ಐಟರ ಹತ್ತಿರ ಚಾಡಿ ಹೇಳಿ ಬೈಗುಳ ತಿನ್ನಿಸಬಹುದು ಅಂತ ಭಯವಾಯಿತು. ‘ಇಲ್ಲ ತಾತಾ, ನಾನು
ಸಂತೆಗೆ ಬರೋಲ್ಲ’ ಅನ್ನಬೇಕೆನಿಸಿತು. ಹೇಳಲಾಗಲಿಲ್ಲ.
ಸಂತೆ ತುಂಬ ಚೆಂದ ಇರುತ್ತದೆ, ಅಂತ ಬಷೀರು ಹೇಳಿದ್ದ. ಸಂತೆ ಪೇಟೆಯ ಟಾರು ರಸ್ತೆಯ ಆಕಡೆ ಎರಡು ಕಡೆ
ಅಂಗಡಿಗಳಿವೆ ಅಂದಿದ್ದ.
ಹಮೀದು ತಾತಾಳ ಮುಖವನ್ನೇ ನೋಡಿದ. ತಾತಾ ‘ಬಾ ಮೋನೇ, ಹೋಗುವಾ’ ಅಣ್ಣ ತಟ್ಟನೆ ತಬ್ಬಿಕೊಂಡಳು. ಮೆಟ್ಟಿಲಿನ
ಮೇಲಿಂದ ತಣ್ಣಗಿನ ಗಾಲಿ ಬೀಸಿತು. ಹಮೀದಿಗೆ ಮೈ ಬೆಚ್ಚಗಾಯಿತು. ಹಾಗೆಯೇ ತಾತಾಳ ಮಡಿಲಲ್ಲಿ ಹುದುಗಿಕೊಂಡವನಿಗೆ
ಕೊರಗ ಮೆಟ್ಟಿಲು ಹತ್ತಿಕೊಂಡು ಹತ್ತಿರ ಬಂದಿ ನಿಂತದ್ದು ನೋಡಿ ಹೆದರಿಕೆಯಾಯಿತು. ತಾತಾಳ ಮಡಿಲಿನಿಂದ
ಬಿಡಿಸಿಕೊಂಡು ಓಡಲು ನೋಡಿದ. ತಾತಾ ಬಿಡಲಿಲ್ಲ. ಇನ್ನಷ್ಟು ಗತ್ಟಿಯಾಗಿ ತಬ್ಬಿಕೊಂಡಿದ್ದಳು. ಕೊರಗ
ಜೋರಾಗಿ ನಗುವುದು ಕೇಳಿಸಿತು. ಅವನ ಕೈಯಲ್ಲಿದ್ದ ಕರು ಕೂಗು ಹಾಕುತ್ತಿತ್ತು. ಕೊರಗನ ನಗು ಜೋರಾಗಿತ್ತು.
‘ಓಹೋ....ಇದೇನು? ತೌಡಿಗೆ ಕೊಂಡ ಕುಟ್ಟಿಯ ಜೊತೆ ತಾತಾಳ ಜಂಬರ’ ಅನ್ನುತ್ತಾ ನಗುತ್ತಿದ್ದುದು ಹಮೀದಿಗೆ
ತಾತಾನ ಮಡಿಲಿನೊಳಗಿಂದ ಕೇಳಿಸಿತು. ಕೊರಗ ‘ನಡೆಯಲಿ ನಡೆಯಲಿ. ತಾತಾ ಮಕ್ಕಳ ಆಟ’ ಅಂತ ಹೊರಟುಹೋದ. ಹೆದರಿಕೆಯಿಂದ
ತಾತಾಳ ಮಡಿಲಲ್ಲಿ ಹುದುಗಿದ್ದ ಹಮೀದೆಯ ನೆತ್ತಿಗೆ ಎರಡು ಬಿಸಿ ಹನಿಗಳು ಉದುರಿದಂತಾಯಿತು. ಅವನಿಗೆ
ಗಾಬರಿಯಾಗಿ ತಾತಾಳ ಮುಖವನ್ನೇ ನೋಡಿದ. ತಾತಾ ಅಳುತ್ತಿದ್ದಳು.
ಅವಳ ಕಣ್ಣಿಂದ ಇಳಿಯುವ ನೀರು ಕೆನ್ನೆಯಿಂದ ಉರುಳಿ ಕೆಳಗೆ ಬೀಳುತ್ತಿತ್ತು. ಹಮೀದೆಗೆ ಅರ್ಥವಾಗಲಿಲ್ಲ.
‘ತಾತಾ ಯಾಕೆ ಅಳೋದು.....?’ ಹೆದರಿಕೆಯಾಗತೊಡಗಿದ ಕೊರಗ ಮೆಟ್ಟಿಲ ಮೇಲಿಂದ ಇವರನ್ನೇ ತಿರುಗಿನೋಡುತ್ತಾ
ಮರೆಯಾದ. ಹೆದರಿಕೆಯಾಗತೊಡಗಿತು. ಹಮೀದೆಗೆ ಬಷೀರು ಕಾಯುತ್ತಿರುವುದು ನೆನಪಾಯಿತು.
‘ನಾನು ಹೋಗುತ್ತೇನೆ ತಾತಾ, ಹೊತ್ತಾಯಿತು’ ಅಂತ ಮಡಿಲಿನಿಂದ ಬಿಡಿಸಿಕೊಳ್ಳಲು ನೋಡಿದ, ಆಗಲಿಲ್ಲ. ತಾತಾ
ಗಟ್ಟಿಯಾಗಿ ತಬ್ಬಿಕೊಂಡಿದ್ದಳು.
ಬಷೀರುವಿನ ಹತ್ತಿರ ಮಾತು ಕೊಟ್ಟು ಆಗಿತ್ತು. ಈಗ ಹೇಳದೇ ಕೇಳದೆ ಸಂತೆಗೆ ಹೋದರೆ ಅವನು ಬಯ್ಯುತ್ತಾನೆ.
ಹಮೀದೆಗೆ ಈಗ ತಾತಾ ಸಂತೆಗೆ ಕರೆಯುತ್ತಿರುವುದನ್ನು ನೋಡಿ ಏನೂ ಹೇಳಲಾಗಲಿಲ್ಲ.
‘ಇಲ್ಲ ತಾತಾ, ನಾನು ಬರೋಲ್ಲ’ ಅಂದೇ ಬಿಟ್ಟ, ತಾತಾ ‘ಯಾಕೆ ಮೋನೆ? ನನ್ನ ಹತ್ತಿರ ಕೋಪಾನಾ?’ ಅಂತ ಮತ್ತೆ
ಅಳುವಂತೆ ತೋರಿತು. ಹಮೀದು ತಾತಾನ ಮುಖ ನೋಡಿದ. ಕಣ್ಣು ಒರೆಸಿಕೊಳ್ಳುತ್ತಿದ್ದಳು. ಪಾಪ ಅನಿಸಿತು......ತಾತಾ
ಯಾಕೆ ನನ್ನನ್ನು ಕಂಡ ಕೂಡಲೇ ಹೀಗೆ ಆಡುವುದು? ಮಾತಾಡದೇ ಹಮೀದು ತಾತಾಳ ಮುಖವನ್ನೇ ನೋಡುತ್ತಾ ನಿಂತ
ಆಕೆ ಮತ್ತೆ ತಲೆ ನೇವರಿಸತೊಡಗಿದಳು. ತಾತಾಳ ಮಡಿಲಿಗೆ ಒರಗಿಕೊಂಡು ಯೋಚಿಸುತ್ತಾ ನಿಂತವನಿಗೆ ಮೆಟ್ಟಿಲ
ಮೇಲಿಂದ ಟಪ......ಟಪ ಚಪ್ಪಲಿಯ ಸದ್ದು ಕೇಳಿಸಿತು.
ಬಷೀರು ಮೆಟ್ಟಿಲು ಇಳಕೊಂಡು ಮೇಲಿನಿಂದ ‘ಹಮೀದೆ’ ಅಂತ ಕೂಗುತ್ತಾ ಬರುತ್ತಿದ್ದವನು, ಹಮೀದು ಸಾರಾ ತಾತಾಳನ್ನು
ತಬ್ಬಿಕೊಂಡು ನಿಂತಿರುವುದನ್ನು ಕಂಡು ಕೂಗು ನಿಲ್ಲಿಸಿ ಅಚ್ಚರಿಯಿಂದ ಇವರನ್ನೇ ನೋಡತೊಡಗಿದ.
ತಾತಾ ಮೆಲ್ಲಗೆ ಹಮೀದುವನ್ನು ಅಪ್ಪುಗೆಯಿಂದ ಸಡಿಲಿಸಿ ‘ಬರುತ್ತೀನಿ ಮೋನೇ’ ಅಂತ ಖಾಲಿ ಬುಟ್ಟಿ ಹೊತ್ತುಕೊಂಡು
ಮೆಟ್ಟಿಲಿಳಿಯುತ್ತಾ ಹೊರಟೇಹೋದಳು.
ಬಷೀರು ಈಗ ಹಮೀದುವಿನ ಮುಖವನ್ನೇ ನೋಡತೊಡಗಿದ. ಹಮೀದಿಗೆ ನಾಚಿಕೆಯೆನಿಸಿತು. ಬಷೀರು ಅಚ್ಚರಿಯಿಂದಲೇ
ನೋಡಿದ. ಹಮೀದಿಗೆ ನಿಲ್ಲಲಾಗಲಿಲ್ಲ ಬಾಣೆಯ ಮೇಣದ ಗೂಡಿನ ನೆನಪಾಯಿತು. ‘ಬಾ ಬಷೀರು. ಬೇಣದ ಗೂಡಿಗೆ
ಕಲ್ಲು ಹೊಡೆಯುವ’ ಅನ್ನುತ್ತಾ ಅವನ ಕೈ ಹಿಡಕೊಂಡು ಮೆಟ್ಟಲು ಇಳಿಯುತ್ತಾ ಓಡತೊಡಗಿದ.
ನೀರಿನ ಕೊಡಪಾನ ಮೆಟ್ಟಲಲ್ಲಿ ಹಾಗೆಯೇ ಬಿಸಿಲಿಗೆ ಹೊಳೆಯುತ್ತಿತ್ತು. ಅವರಿಬ್ಬರು ಬಾಣೆಯ ಕಡೆ ಓಡತೊಡಗಿದರು.
ಬಷೀರು ಬಾಣೆಯವರೆಗೆ ಓಡಿಕೊಂಡು ಬಂದವನು ಒಮ್ಮೆಲೇ ಹಮೀದು ಸಾರಾ ತಾತಾ ನಿನ್ನನ್ನು ಅಪ್ಪಿಕೊಂಡಿದ್ದದು
ಯಾಕೆ? ಅಂತ ಕೇಳಿಬಿಟ್ಟ. ಹಮೀದೆಗೆ ಒಂದು ಥಾರಾ ಆಯಿತು. ಉತ್ತರ ಕೊಡಲಿಕ್ಕೆ ಆಗಲಿಲ್ಲ. ಬೇಣ ಗೂಡು
ಕಟ್ಟಿಕೊಂಡಿದ್ದ ನೇರಳೆಯ ಮರದ ಕೆಳಗೆ ನೋಡೊದ. ಮರದ ಕೆಳಗೆ ಒಟ್ಟಿ ಹಾಕಿದ್ದ ಇಟ್ಟಗೆಯ ಚೂರುಗಳು ಕೆಂಪಗೆ
ಕಾಣಿಸಿದವು.
ಬಷೀರು ಪ್ರಶ್ನೆ ಕೇಳಿದವನು ಇವನನ್ನೇ ನೋಡುತ್ತಿದ್ದ. ಹಮೀದಿಗೆ ಗಲಿಬಿಲಿಯಾಗತೊಡಗಿತು. ಸಾರಾ ತಾತಾ
ತನನ್ನು ಅಪ್ಪಿಕೊಂಡು ಕಣ್ಣ ನೀರು ಸುರಿಸಿದ್ದು ಯಾಕೆ?
ಬಷೀರು ಹುಲ್ಲುಗರಿಕೆಯೊಂದನ್ನು ಎಳೆದು ಕಿತ್ತು ಹಲ್ಲಲ್ಲಿ ಕಚ್ಚುತ್ತಾ ಇವನನ್ನೇ ನೋಡುತ್ತಿದ್ದ. ಹಮೀದಿಗೆ
ಅತ್ತ ಕಡೆ ನೋಡಲಾಗಲಿಲ್ಲ. ಬಷೀರು ಮತ್ತೆ ಕೇಳಿದ.
‘ಹಮೀದು, ಸಾರಾ ತಾತಾ ನಿನ್ನ ಉಮ್ಮವಾ?’ ಹನೀದೆಗೆ ಒಮ್ಮೆಲೇ ಮೈಬೆಚ್ಚಗಾದ ಹಾಗಾಯಿತು. ‘ಸಾರಾ ತಾತಾ
ನನ್ನ ಉಮ್ಮವಾ?’ ಹಾಗಾದರೆ ಈ ದನ ಮೇಯಿಸುವ ಕೊರಗ ತನನ್ನು ಬೇಡುವವಳ ಮಗು ಎಂಬ ತಮಾಷೆ ಮಾಡುವುದು ಯಾಕೆ?’
ಹಮೀದೆಗೆ ಅಳು ಬರುವಂತಾಯಿತು.
ಬಾಣಲೆಯಲ್ಲಿ ದನ ಮೇಯಿಸುತ್ತಾ ನೇರಳೆ ಮರದ ಕೆಳಗೆ ಕುಳಿತಿರುತ್ತಿದ್ದ ಮುದರ ನನ್ನನ್ನು ಕಂಡ ಕೂಡಲೇ
ಏನೋ ಬೇಡುವವಳ ಮಗನೆ ಅಂತ ಬೆನ್ನಿಗೆ ಗುದ್ದಿ ನೋವು ಮಾಡುವುದು ಯಾಕೆ? ಹಮೀದುವುಗೆ ಈಗ ಬಷೀರು ತಾತಾ
ನಿನ್ನ ಉಮ್ಮನಾ? ಅಂತ ಕೇಳುತ್ತಿರುವುದನ್ನು ನೋಡಿ ಖುಷಿಯಾಗತೊಡಗಿತ್ತು.
ತನ್ನನ್ನು ಸಾರಾ ತಾತಾ ಹೆತ್ತಿರಬಹುದಾ? ಕೊರಗ ‘ಹಮೀದೆ ನಿನ್ನನ್ನು ಬೇಡುವವಳು ಹೆತ್ತು ರೈಟರ ಹೆಂಡತಿಗೆ
ಮಾರಿದ್ದು,ಗೊತ್ತಾ?’ ಅಂದಿದ್ದ.ಈಗ ಬಷೀರುವಿಗೆ ಸಾರಾ ತಾತಾ ತನ್ನ ಉಮ್ಮ’ಅಂತ ಹೇಳಿದ್ದು ಯಾರು?
ಬಷೀರು ಇವನ ಕಣ್ಣನ್ನೇ ನೋಡುತ್ತಿದ್ದ. ಸಾರಾ ತಾತಾ‘ಸಂತೆಗೆ ಬರುತ್ತೀಯಾ ಮೋನೇ’ ಅಂತ ಕೇಳಿದ್ದು ನೆನಪಾಯಿತು.
ಇವತ್ತೂ ಸಂತೆಯಿಂದ ಬರುವಾಗ ಬುಟ್ಟಿಯಿಂದ ಹುರಿಯಕ್ಕಿ ಬೆಲ್ಲದ ಕಟ್ಟು ಕೊಟ್ಟು‘ ತಿನ್ನು ಮೋನೇ’ ಎನ್ನುತ್ತಾಳೆ.
ಹಮೀದೆಗೆ ತಟ್ಟನೆ ತಾವು ಬಂದಿರುವುದು ಬೇಣದ ಗೂಡಿಗೆ ಕಲ್ಲು ಎಸೆಯಲಿಕ್ಕೆ ಅಂತ ನೆನಪಾಯಿತು. ಬಷೀರುವುನ
ಕಡೆ ನೋಡಿದ. ಅವನೂ ಇವನನ್ನೇ ನೋಡುತ್ತಿದ್ದ. ನೇರಳೆಯ ಟೊಂಗೆಯಲ್ಲಿ ಗಾಳಿ ಜೋರಾಗಿ ಬೀಸಿ ಗೂಡು ಅಲ್ಲಾಡಿಸಿದಾಗ
ಬೇಣದ ಹುಳುಗಳು ಒಮ್ಮೆಲೇ ಗೂಡಿನೊಳಗಿಂದ ಹೊರಬಂದು ಗೂಡೆಲ್ಲಾ ಕಪ್ಪಾಗಿಬಿಡುತ್ತಿತ್ತು.
ಈಗ ಒಮ್ಮೆಗೇ ಈ ಇಟ್ಟಿಗೆ ಚೂರುಗಳನ್ನೆಲ್ಲಾ ಬೀಸಿ ಎಸೆದು ಗೂಡನ್ನು ಚೂರು ಚೂರು ಮಾಡಬೇಕು ......ಹಮೀದೆಗೆ
ಖುಷಿಯಾಯಿತು. ಬಷೀರು ಅದನ್ನು ಒಂದು ಕ್ಷಣ ನೋಡಿದವನು ಮತ್ತೆ ತಿರುಗಿ ‘ಹಮೀದೆ, ನಿನ್ನನ್ನು ಹೆತ್ತದ್ದು
ಸಾರಾ ತಾತಾ ಅಲ್ಲವಾ? ನಿಜ ಹೇಳು’ ಅಂದ. ಹಮೀದೆಗೆ ಅಳು ಬಂತು.
ಬಷೀರು ‘ಹೇಳುವುದಾದರೆ ಬೇಗ ಹೇಳು. ಈಗ ಬೇಣದ ಗೂಡಿಗೆ ಕಲ್ಲು ಹೊಡೆದು ಒಂದೇ ಸಲಕ್ಕೆ ಬೀಳಿಸುವ’ ಅಂದ.
ಬಷೀರು ಕುಳಿತಲ್ಲಿಂದ ಅಲ್ಲಾಡಲಿಲ್ಲ.
ಬಷೀರು ಹಾಗಾದರೆ ನಾಳೆ ನೀನು ಇದರ ಅಡಿಯಿಂದಾಗಿ ಶಾಲೆಗೆ ಹೋಗುವಾಗ ಬೇಣದ ಹುಳುಗಳು ಕಚ್ಚಿ ಸಾಯಿಸಲಿ,
ನೋಡು’ ಎಂದು ಹೆದರಿಸಿದ. ಬಷೀರು ಏನೂ ಅನ್ನದೆ ಇವನನ್ನೇ ನೋಡುತ್ತಿದ್ದ. ಹಮೀದಿಗೆ ಕೋಪ ಬಂದಿತ್ತು.
೧ಬಷೀರು ನೀನು ಕಲ್ಲು ಹೊಡೆಯಲಿಕ್ಕೆ ಬರುತ್ತೀಯಾ ಇಲ್ಲವೋ?’ ಬಷೀರು ಈಗಲೂ ಮಾತಾಡಲಿಲ್ಲ. ‘ಮತ್ತೆ ಕಲ್ಲು
ಸೇರಿಸಿ ಇಡಲಿಕ್ಕೆ ಯಾಕೆ ಹೇಳಿದೆ?’ ಇನ್ನೂ ಜೋರಾಗಿ ಬೊಬ್ಬೆ ಹಾಕಿ ಕೇಳಿದ.
ಬಷೀರು ಏನೂ ಅನ್ನಿಸದವನ ಹಾಗೆ ‘ಹಮೀದೆ ನಾನು ಹೋಗುತ್ತೇನೆ. ಸಾರಾ ತಾತಾ ಸಂತೆಯಿಂದ ಬಂದರೆ ಹುರಿಯಕ್ಕಿ
ಬೆಲ್ಲ ತಂದರೆ.....ಬಾ ಹೋಗುವಾ’ ಅಂತ ಕೂತಲ್ಲಿಂದ ಎದ್ದು ನಿಂತಹಮೀದು ‘ಬೇಡವೋ ಬಷೀರು ಒಂದೊಂದಾದರೂ
ಕಲ್ಲು ಹೊಡೆದು ಹೋಗುವಾ ಬಾ’ ಅಂದ. ಬಶೀರು ಕೇಳಲಿಲ್ಲ. ‘ನಾನು ಹೋಗುವೆ’ ಅಂದವನೇ ಬಾಣೆಯ ಹುಲ್ಲಿನ
ಮೇಲೆ ಹೆಜ್ಜೆ ಹಾಕುತ್ತಾ ಮನೆಯ ಕಡೆ ಓಡತೊಡಗಿದ.
ಹಮೀದೆಗೆ ಬಾಣೆಯೆಲ್ಲಾ ಒಬ್ಬನೇ ಅನಿಸಿ ಕಣ್ಣಲ್ಲಿ ನೀರು ತುಂಬಿತು. ಬಷೀರು ಬಾಣೆಯ ಕೊನೆಯ ತಿರುವಿನಲ್ಲಿ
ಮಾಯವಾಗಿದ್ದು ಕಂಡಿತು.
ಹಮೀದು ಈಗ ಒಬ್ಬನೇ ನೇರಳೆಯ ಮರದ ಕಡೆಗೆ ನೋಡತೊಡಗಿದ. ಸಂಜೆಯ ಬೆಳಕಿಗೆ ಗೂಡು ಹಳದಿಗಟ್ಟಿತ್ತು. ಹುಳುಗಳು
ದೂರ ದೂರದಿಂದ ಹಾರಿಬಂದು ಗೂಡಿನೊಳಕ್ಕೆ ಸೇರಿಕೊಳ್ಳುತ್ತಿದ್ದವು. ಮರದ ಕೆಳಗೆ ಇಟ್ಟಿಗೆಯ ಚೂರುಗಳು
ಕಪ್ಪಾಗಿ ಕಾಣತೊಡಗಿದವು.
ಹಮೀದೆಗೆ ಸಾರಾ ತಾತಾಳ ನೆನಪಾಯಿತು. ಬಷೀರುವಿಗೆ ಯಾರು ಹೀಗೆ ಹೇಳಿರಬಹುದು? ಕೊರಗನೇ ಅನಿಸಿತು. ಈ
ದನ ಕಾಯುವ ಆಡಿಯ ಪೋಲೆಯು ಎಲ್ಲವನ್ನೂ ಚಾಡಿ ಹೇಳಿ ಚಾಡಿ ಹೇಳಿ ಹಾಳು ಮಾಡುತ್ತಿದ್ದಾನೆ ಅನಿಸಿ, ತಾನು
ಒಬ್ಬನೇ ಎಲ್ಲ ಇಟ್ಟಿಗೆ ಚೂರುಗಳನ್ನು ಎತ್ತಿಎತ್ತಿ ಬೇಣದ ಗೂಡಿನ ಕಡೆಗೆ ಬೀಸಿ ಹೊಡೆಯಬೇಕು ಎನಿಸಿತು.
ಕೊರಗ ಅದೇ ಮರದ ನೆರಳಿನಲ್ಲಿ ಕುಳಿತುಕೊಂಡು ದನ ಮೇಯಿಸುತ್ತಿದ್ದ. ತನ್ನನ್ನು ಕಂಡ ಕೂಡಲೇ ಷರಟಿನ ತುದಿ
ಹಿಡಿದು ನಿಲ್ಲಿಸಿ,
‘ಹಮೀದೇ ಹಮೀದೇ
ಇಲ್ಲಿ ಬಾ, ಹನೀದೇ
ಬೇಡುವ ಹೆಂಗಸು ತೌಡಿಗೆ ಮಾರಿ
ಓಡಿ ಹೋದಳು ಹಮೀದೇ’ ಅಂತೆಲ್ಲಾ ಹಾಡುತ್ತಿದ್ದ.
ತಾನು ಕೊರಗನ ಕೈಯಿಂದ ತಪ್ಪಿಸಿಕೊಂಡು ಓಡಿ ಬಂದರೂ ಕೊರಗನ ಹಾಡು ಇನ್ನೂ ಕೇಳಿಸುತ್ತಿತ್ತು.....
ಹಮೀದೆಗೆ ಅಳು ಒತ್ತರಿಸಿ ಬಂದಿತು. ಮತ್ತೆ ಬೇಣದ ಗೂಡಿನ ಕಡೆ ನೋಡಿದ. ಗೂಡಿನ ಮೇಲಿಂದ ಸೂರ್ಯನ ಬೆಳಕು
ಮರೆಯಾಗಿ, ಇನ್ನೂ ಮೇಲಕ್ಕೆ ಮರದ ತುದಿಯಲ್ಲಿ ಬೆಳಗುತ್ತಿತ್ತು. ಬಾಣೆಯ ತುಂಬಾ ಕೆಂಪು ಬೆಳಕು ತುಂಬಿಕೊಂಡಿತ್ತು.
ಇಷ್ಟು ಹೊತ್ತಿಗೆ ಸಾರಾ ತಾತಾ ಸಂತೆಯಿಂದ ಬಂದಿರಬಹುದು ಅನಿಸಿತು. ತಾತಾ ಹುರಿಯಕ್ಕಿ ಬೆಲ್ಲದ ಪೊಟ್ಟಣ
ಕೈಯಲ್ಲಿ ಹಿಡಕೊಂಡು ರೈಟರ ಮನೆಯಲ್ಲಿ ತನ್ನನ್ನು ಕಾಯುತ್ತಿರಬಹುದು.....ತಾತಾ ಹುರಿಯಕ್ಕಿ ಕೊಡಲು
ಬಂದರೆ ಕೈಯಿಂದ ಕಿತ್ತು ಬಿಸಾಕಿ ತಾತಾ ನೀನೇ ಅಲ್ಲವ ನನ್ನ ಉಮ್ಮಾ? ಅಂತ ಜೋರಾಗಿ ಬೊಬ್ಬೆ ಹೊಡೆದು
ಅವಳ ಹಿಂದೆಯೇ ಲೈನಿನ ಮನೆಗೆ ಓಡಿ ಹೋಗಬೇಕೆನಿಸಿತು. ವೇಗವಾಗಿ ಹೆಜ್ಜೆ ಹಾಕಿ ಬಾಣೆ ದಾಟತೊಡಗಿದ.
ಹಮೀದು ರೈಟರ ಮನೆಯ ಹತ್ತಿರ ತಲುಪಿದಾಗ ಕತ್ತಲಾಗತೊಡಗಿತ್ತು. ಮನೆಯ ಒಳಗೆ ಲೈಟು ಹಾಕಿದ್ದರು. ಹಮೀದಿಗೆ
ಸಾರಾ ತಾತಾಳ ನೆನಪಾಗಿ ಓಡಿಕೊಂಡು ಬಂದವನು ಬಾಗಿಲ ಹತ್ತಿರ ಸಾರಾ ತಾತಾ ಬುಟ್ಟಿ ಹಿಡಕೊಂಡು ನಿಂತಿರುವುದನ್ನು
ನೋಡಿ ಅಲ್ಲೇ ಮೆಟ್ಟಿಲಲ್ಲಿ ಕಲ್ಲಿನ ಹಾಗೆ ನಿಂತುಕೊಂಡ. ತಾತಾ ಬಾಗ್ಲ ಹತ್ತಿರದಿಂದ ಇವನ ಮುಖವನ್ನು
ನೋಡುತ್ತಿದ್ದಳು ಹಮೀದೆ ತಲೆ ತಗ್ಗಿಸಿದ. ಅವನಿಗೆ ‘ತಾತಾ ನೀನು ನನ್ನ ಉಮ್ಮಾ ಅಲ್ಲವಾ?’ ಅಂತ ಕೇಳಬೇಕೆನಿಸಿತ್ತು.
ತಲೆ ಎತ್ತಿ ನೋಡಿದ. ತಾತಾಳ ಬುಟ್ಟಿಯಲ್ಲಿ ಹುರಿಯಕ್ಕಿ ಬೆಲ್ಲ ಇರಬಹುದೆನಿಸಿತು. ತಾತಾ ಸಂತೆಗೆ ಹೋಗುವಾಗ
ತನನ್ನು ತಬ್ಬಿಕೊಂಡದ್ದು ನೆನಪಾಯಿತು. ಇನ್ನೊಮ್ಮೆ ಈ ತಾತಾಳನ್ನು ತಬ್ಬಿಕೊಳ್ಳುವಾ ಅನಿಸಿತು.
ತಾತಾ ಇವನ ಕಣ್ಣನ್ನೇ ನೋಡುತ್ತಾ ‘ಎಲ್ಲಿ ಹೋಗಿದ್ದೆ ಮೋನೇ? ನಾನು ನಿನ್ನನ್ನೇ ಕಾಯುತ್ತಿದ್ದೆ’ ಅಂದಳು.
ಹಮೀದೆಗೆ ನಾಚಿಕೆಯಾಯಿತು. ಬಷೀರು ಬಾಣೆಯಲ್ಲಿ ‘ಸಾರಾ ತಾತಾ ನಿನ್ನ ಉಮ್ಮ ಅಲ್ಲವಾ?’ ಅಂದಿದ್ದ. ಮೆಲ್ಲಗೆ
ಮೆಟ್ಟಿಲು ಹತ್ತಿ ಬಾಗಿಲು ದಾಟಿ ಒಳಕ್ಕೆ ಓಡಲು ನೋಡಿದ.ಬಾಗಿಲ ಹತ್ತಿರ ತಾತಾ ಇವನನ್ನು ಬಾಚಿ ಅವಚಿಕೊಂಡು,ಸೊಂಟದ
ಹತ್ತಿರಕ್ಕೆ ತಬ್ಬಿಕೊಂಡಳು.
ಹಮೀದೆಯ ಮೂಗಿಗೆ ಸಾರಾ ತಾತಾಳ ಮಡಿಲಿನಿಂದ ಏನೋ ಪರಿಮಳದ ಹಾಗೆ ತೇಲಿ ಬಂತು.ತಾತಾಳ ಮಡಿಲಿನೊಳಕ್ಕೆ
ಹುದುಗಿಕೊಂಡ. ತಾತಾಳ ಕೈ ಮೆಲ್ಲಗೆ ಮತ್ತೆ ಅವನ ತಲೆಯನ್ನು ಸವರಿತು.
ತಾತಾ‘ ಮೋನೇ ಇಲ್ಲಿ ನೋಡು ’ಅಂದಳು.ಹಮೀದು ತಲೆಯೆತ್ತಿ ನೋಡಿದ. ತಾತಾ ಬುಟ್ಟಿಯಿಂದ ಪ್ಲಾಸ್ಟಿಕ್ ಕಟ್ಟೊಂದನ್ನು
ಹೊರಕ್ಕೆ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದಳು.ಹಮೀದೆಗೆ ಕುತೂಹಲವಾಯಿತು. ತಾತಾ ಕಟ್ಟಿನೊಳಗಿಂದ
ಬಿಳಿಯ ಸಣ್ಣ ಲುಂಗಿಯೊಂದನ್ನು ಹೊರತೆಗೆದಳು. ‘ಇದು ಏನು ಮೋನೇ’ ಅಂದಳು.ಹಮೀದೆಗೆ ಈಗಲಾದರೂ‘ತಾತಾ ನೀನು
ನನ್ನ ಉಮ್ಮಾನ?’ ಅಂತ ಕೇಳ ಬೇಕೆನಿಸಿತು. ಕಣ್ಣಲ್ಲಿ ನೀರು ತುಂಬಿಕೊಂಡು ಕೇಳಲಾಗಲಿಲ್ಲ. ಹೊರಕ್ಕೆ
ನೋಡಿದ. ಹೊರಗೆ ಕತ್ತಲು ತುಂಬಿಕೊಂಡು, ಕಾಫಿ ತೋಟದಲ್ಲಿ ಕುಟ್ರ ಹಕ್ಕಿಗಳು ಸಾಲಾಗಿ ಕೂಗು ಹಾಕುತ್ತಿದ್ದವು.
ತಾತಾ ‘ತಕ್ಕೋ ಮೋನೆ’ ಅಂತ ಕಟ್ಟನ್ನು ಕೈಗೆ ಕೊಟ್ಟಳು. ಹಮೀದೆ ತಾತಾಳ ಕನ್ಣನ್ನೇ ನೋಡಿದ. ತಾತಾ ತಟ್ಟನೆ
ತಟ್ಟದಿಂದ ಕಣ್ಣು ಒರೆಸಿಕೊಂಡು ‘ನಾನೂ ಬರುತ್ತೀನಿ ಮೋನೆ’ ಅನ್ನುತ್ತಾ ಮೆಟ್ಟಲು ಇಳಿದು ಮರೆಯಾದಳು.
ಹಮೀದೆ ಮೆಟ್ಟಲಲ್ಲಿ ನಿಂತುಕೊಂಡೆ ಅತ್ತ ಕಡೆ ನೋಡಿದ. ತಾತಾಳ ಬಿಳಿಯ ತಟ್ಟದ ತುದಿ ಅವನಿಗೆ ತಿರುವಲ್ಲಿ
ಕಾಣಿಸಿ ಮರೆಯಾಯಿತು. ಕೈಯಲ್ಲಿನ ಲುಂಗಿಯ ಪ್ಲಾಸ್ಟಿಕ್‌ನ ಕಟ್ಟು ಬೀಸುವ ಗಾಳಿಗೆ ‘ಜಿಟಿ ಜಿಟಿ’ ಸದ್ದು
ಮಾಡುತ್ತಿತ್ತು. ಕತ್ತಲಾಚೆಯಿಂದ ಜೀರುಂಡೆಗಳ ಧ್ವನಿ ಕೇಳಿಸಿತು. ಕೈಯಲ್ಲಿದ್ದ ಲುಂಗಿಯ ಕತ್ಟನ್ನು
ಏನು ಮಾಡುವುದು ಗೊತ್ತಾಗಲಿಲ್ಲ. ಬಷೀರುವಿಗೆ ತೋರಿಸೋದಾ ಅನಿಸಿತು. ಬಾಗಿಲು ದಾಟಿ ಒಳಕ್ಕೆ ಹೋದ.
ಬಷೀರು ಕುರ್ಚಿಯಲ್ಲಿ ಪುಸ್ತಕ ಹಿಡಿದುಕೊಂಡು ಏನೋ ಯೋಚಿಸುತ್ತಿದ್ದ. ಹಮೀದು ಲುಂಗಿಯ ಪ್ಲಾಸ್ಟಿಕ್ಕಿನ
ಪಿಟಿಪಿಟಿ ಸದ್ದು ಮಾಡಿದ. ಬಷೀರು ಏನೋ ಕೇಳಿಸದವನಂತೆ ಎತ್ತಲೋ ನೋಡುತ್ತಿದ್ದ. ಹಮೀದು ‘ಬಷೀರು ನೋಡೋ
ಹೊಸ ಲುಂಗಿ’ ಅಂತ ಅವನ ಭುಜ ತಟ್ಟಿ ಹೇಳಿದ. ಒಮ್ಮಗೇ ಎಚ್ಚೆತ್ತುಕೊಂಡ ಬಷೀರು ಏನೂ ಹೇಳದೇ ಇವನತ್ತಲೇ
ನೋಡಿದ. ಹಮೀದಿಗೆ ವಿಚಿತ್ರ ಅನ್ನಿಸಿತು. ಬಷೀರು ನೋಡೋ ಇದು ಸಾರಾ ತಾತಾ ಸಂತೆಯಿಂದ ತಂದುಕೊಟ್ಟದ್ದು’
ಅಂತ ಹೇಳಬೇಕೆಂದುಕೊಂಡಿದ್ದ. ಆದರೆ ಬಷೀರು ಲುಂಗಿಯ ಕಡೆಗೆ ನೋಡಲೇ ಇಲ್ಲ. ಹಮೀದಿಗೆ ನಿರಾಶೆಯಾಯಿತು.
ಅಷ್ಟರಲ್ಲಿ ತಟ್ಟನೆ ಬಷೀರು ಮೆಲ್ಲಗೆ ಇವನ ಕಿವಿಯ ಹತ್ತಿರ ಬಂದು,
‘ಹಮೀದೆ ಕೊರಗನ ಕೊಟ್ಟಿಗೆಯಲ್ಲಿ ಕರು ಇತ್ತಲ್ಲ? ಅದರ ತಾಯಿ ಹಗ್ಗ ಕಿತ್ತು ಕಾಡಿಗೆ ಓಡಿಹೋಗಿದೆಯಂತೆ’
ಅಂದುಬಿಟ್ಟ.
ಹಮೀದೆಗೆ ಒಮ್ಮಲೇ ಹೆದರಿಕೆಯಾಯಿತು. ಬಷೀರುವಿನ ಕಣ್ಣಲ್ಲೂ ಹೆದರಿಕೆ ತುಂಬಿಕೊಂಡಿತ್ತು. ಬಷೀರು ಯಾಕೆ
ಹೆದರುತ್ತಿದ್ದಾನೆ? ಹಮೀದಿಗೂ ಏನೋ ಅನಿಸಿತು. ಹೇಳಲಾಗಲಿಲ್ಲ. ತಾಯಿ ಹಸುವನ್ನು ಓಡಿಹೋಗಲು ಬಿಟ್ಟಿದ್ದಕ್ಕೆ
ಕೊರಗನ ರೈಟರು ಸರೀ ಬೈದಿರಬಹುದು ಅನ್ನಿಸಿತು. ತಾನು ಸಾರಾ ತಾತಾಳ ಕೈಯಿಮ್ದ ಲುಂಗಿ ತಕ್ಕೊಂಡದ್ದು
ಗೊತ್ತಾದರೆ ರೈಟರಿಗೆ ಸಿಟ್ಟು ಬರಬಹುದಾ? ಅನ್ನಿಸಿತು.
ಬಷೀರು ಮತ್ತೆ ಕುರ್ಚಿಯಲ್ಲಿ ಪುಸ್ತಕ ಹಿಡಕೊಂಡು ಕೂತ. ಹಮೀದಿಗೆ ಲುಂಗಿ ಕೈಯಲ್ಲಿ ಹಿಡಕೊಂಡಿರಲು ಹೆದರಿಕೆಯಾಯಿತು.
ಮೆಲ್ಲನೆ ಹಿತ್ತಲಿನ ಒಲೆಯ ಹತ್ತಿರ ಹೋದ.
ಹಿತ್ತಲ ಕಡೆಯಿಂದ ಒಳಕ್ಕೆ ನುಗ್ಗಿದ ಹಮೀದಿಗೆ ಕೊರಗ ಹಿತ್ತಲಿನ ಹಂಡೆಯ ಒಲೆಗೆ ಉರಿ ಹಚ್ಚುತ್ತಾ ಕೂತಿರುವುದು
ಕಂಡು ತಮಾಷೆ ಅನಿಸಿತು. ಕೊರಗ ರೈಟರ ಕೈಯಿಂದ ಸಮಾ ಬೈಗಳ ತಿಂದು ಇಲ್ಲಿ ಬಂದು ಕೂತಿದ್ದಾನೆ ಅನಿಸಿತು.
ಕೊಟ್ಟಿಗೆಯ ಕಡೆಯಿಂದ ಕರು ಅಂಬಾ ಎಂದು ಕೂಗು ಹಾಕುತ್ತಿರುವುದು ಕೇಳಿಸಿತು. ಈಗ ಕಾಡಿಗೆ ಹೋಗಿರುವ
ಹಸು ಅಲ್ಲಿ ಏನು ಮಾಡುತ್ತಿರಬಹುದು?
ಕೊರಗ ನನ್ನನ್ನು ಹತ್ತಿರ ಕರೆದು ‘ಬೇಡುವವಳ ಮಗ’ ಎಂದು ತಮಾಷೆ ಮಾಡಬಹುದಾ ಅನ್ನಿಸಿ ಕೊರಗನಿಗೆ ಹಾಗೆಯೇ
ಆಗಬೇಕು, ಹೆದರಿಬಿಟ್ಟಿದ್ದಾನೆ, ಎಂದುಕೊಂಡ. ಹೊಸ ಲುಂಗಿಯನ್ನು ಅವನಿಗೆ ತೋರಿಸಬೇಕೆನಿಸಿತು. ‘ನೋಡೋ
ನನ್ನ ಹೊಸ ಲುಂಗಿ’ ಅಂತ ಪ್ಲಾಸ್ಟಿಕ್ಕಿನ ಪಿಟಪಿಟ ಸದ್ದು ಮಾಡಿದ. ಕೊರಗ ನಿದ್ದೆಯಿಂದ ಎದ್ದವನಂತೆ
ಮುಖ ಮಾಡಿದಾಗ ಹಮೀದಿಗೆ ಧೈರ್ಯ ಬಂತು. ‘ಕೊರಗಾ ಈ ಲುಂಗಿ ತಾತಾ ಸಂತೆಯಿಂದ ತಂದುಕೊಟ್ಟದ್ದು’ ಅಂತ
ಕೂಗು ಹಾಕಿದ. ಕೊರಗನ ಮುಖ ಒಮ್ಮೆಗೇ ಕಪ್ಪಿಟ್ಟಿತು. ಹಮೀದಿಗೆ ಯಾಕೆ ಅಂತ ಗೊತ್ತಾಗಲಿಲ್ಲ. ಕೊರಗನಿಗೆ
ಹೊಟ್ಟೆ ಉರಿಯಾ? ಅನಿಸಿತು. ಕೊರಗ ಮತ್ತೆ ಒಲೆಗೆ ಒಣ ಪುರಲೆ ತುರುಕಿಸತೊಡಗಿದ. ಅವನ ಕಪ್ಪಗಿನ ಮುಖ
ಬೆಂಕಿಯೆದುರಲ್ಲಿ ಹೆದರಿಕೆ ಅನಿಸಿ ಮೆಲ್ಲಗೆ ಅಡಿಗೆ ಮನೆಯ ಬಾಗಿಲು ಸರಿಸಿ ಒಳಕ್ಕೆ ಹೋದ. ಅಡುಗೆಯ
ಒಲೆಯ ಹತ್ತಿರ ರೈಟರು ಚಳಿಕಾಯಿಸುತ್ತಾ ಕೂತಿದ್ದರು. ರೈಟರ ಹೆಂಡತಿ ಅಕ್ಕಿ ಅರೆಯುತ್ತಿದ್ದರು. ಹಮೀದೆ
ಮೂಲೆಯಲ್ಲಿ ನಿಂತುಕೊಂಡ. ಹೊಸ ಲುಂಗಿಯ ಕಟ್ಟು ರೈಟರು ನೋಡಿದರೆ ಎಂದು ಅವನಿಗೆ ಹೆದರಿಕೆಯಾಗತೊಡಗಿತ್ತು.
ರೈಟರು ತಮ್ಮ ಕಾಲುಗಳನ್ನಿ ಉರಿಯುತ್ತಿದ್ದ ಅಡಿಗೆ ಒಲೆಯ ಮುಂದೆ ಚಾಚಿಕೊಂಡು,
‘ಮರಿಯಾ, ನಾಳೆ ಕಾಡಿಗೆ ಹೋಗಿ ಹಸುವನ್ನು ಹುಡುಕಿಕೊಂಡು ಬರುತ್ತೇನೆ ಎಣೇ’ ಎಂದರು. ರೈಟರ ಹೆಂಡತಿ
ಅರೆಯುತ್ತಿದ್ದಲ್ಲಿಂದ ತಲೆಯೆತ್ತಿ ನೋಡತೊಡಗಿದರು. ಅವರು ಓಡಿ ಹೋದ ಹಸುವನ್ನು ನೆನೆದು ಅಳುತ್ತಿದ್ದಾರೆ
ಅನಿಸಿತು. ಹಮೀದಿಗೆ ಅಲ್ಲೂ ನಿಲ್ಲಲಾಗಲಿಲ್ಲ. ರೈಟರ ಹೆಂಡತಿ ಅಳುವುದು ಹೊಸದು ಅನಿಸಿತು. ಮೆಲ್ಲಗೆ
ಅಲ್ಲಿಂದ ದಾಟಿ ಒಳಕೋಣೆಯ ಕಡೆ ಹೋದ. ಲುಂಗಿಯ ಕಟ್ಟು ಎಲ್ಲಿಡುವುದು ಗೊತ್ತಾಗಲಿಲ್ಲ. ಮೆಲ್ಲಗೆ ಬಷೀರುವಿನ
ಹತ್ತಿರ ಬಂದ. ಬಷೀರುವಿನ ಕೈಯಲ್ಲಿ ಪುಸ್ತನ ಇನ್ನೂ ಇತ್ತು. ಬಷೀರು ತಲೆಯೆತ್ತಿ ನೋಡತೊಡಗಿದ. ಹಮೀದು
ಏನೂ ಅನ್ನದೆ ಮತ್ತೆ ಹಿತ್ತಲ ಕಡೆ ಹೋದ. ಹಿತ್ತಲ ಒಲೆಯಲ್ಲಿ ಕೊಳ್ಳಿಗಳು ಉರಿಯುವ ‘ಚಿಟಿ ಚಿಟಿ’ ಸದ್ದಿ
ಕೇಳಿಸಿತು.
ಒಲೆಯ ಹತ್ತಿರ ಹೋಗಿ ಲುಂಗಿ ಕೈಯಲ್ಲಿ ಹಿಡಕೊಂಡು ಕೊರಗನ ಉರಿಯುವ ಮುಖವನ್ನೇ ನೋಡುತ್ತಾ ನಿಂತ. ಕೊರಗ
ನೆಲದಲ್ಲಿ ಅಂಡು ಊರಿಕೊಂಡು, ಮೊಣಕಾಲಮೇಲೆ ಕೈಚಾಚಿ ಬೆಂಕಿಯನ್ನೇ ನೋಡುತ್ತಿದ್ದ. ಹಮೀದೆಗೆ ಲುಂಗಿಯ
ಕಟ್ಟು ಭಾರವಾಗುತ್ತಿದ್ದಂತೆ ಆಯಿತು. ಸಾರಾ ತಾತಾ ಅದನ್ನು ಕೈಗೆ ಕೊಡುವಾಗ ಅತ್ತದ್ದು ನೆನಪಾಯಿತು.
ಹಮೀದಿಗೆ ತಡೆಯುವುದಕ್ಕೆ ಆಗಲಿಲ್ಲ. ಬೆಂಕಿಯ ಉರಿಯಲ್ಲಿ ಕೊರಗನ ಮುಖ ಮಿನುಗುತ್ತಿತ್ತು. ಲುಂಗಿಯನ್ನೂ
ಬೆಂಕಿಯಲ್ಲಿ ಸುಟ್ಟು ಬಿಡುವಾ ಅನಿಸಿತು.
ಹಮಿದು ನೇರವಾಗಿ ಬೆಂಕಿಯ ಹತ್ತಿರ ನಡೆದವನೇ ಕೊರಗನ ಕಾಲು ಬದಿಯಿಂದ ನುಸುಳಿ ಲುಂಗಿಯ ಕಟ್ಟನ್ನು ಉರಿಯುವ
ಬೆಂಕಿಗೆ ಹಾಕಿಬಿಟ್ಟ.
ಕೊರಗನಿಗೆ ಕಣ್ಣ ಮುಂದೆ ದಿಗ್ಗನೆ ಬೆಂಕಿ ಹೊತ್ತಿಕೊಂಡಿತು. ಅವನ ಕಣ್ಣು ಮುಂದೆಯೇ ಲುಂಗಿಯ ಕತ್ಟು
ಉರಿಯುತ್ತಿತ್ತು. ಕೊರಗ ಎರಡೂ ಕಣ್ಣು ಬಿಟ್ಟುಕೊಂಡು ಹಮೀದೆಯನ್ನೇ ನೋಡತೊಡಗಿದ. ಹಮೀದು ಸಣ್ಣಗೆ ನಡುಗುತ್ತಿದ್ದ.
ಕೊರಗನ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳತೊಡಗಿತು. ಹಮೀದು ತಡೆಯಲಾರದೆ ಬಿಕ್ಕಿಬಿಕ್ಕಿ ಅಳತೊಡಗಿದ.
ಕೊರಗನಿಗೆ ಇನ್ನು ತಡೆಯಲಿಕ್ಕೆ ಆಗಲಿಲ್ಲ. ನಿಂತುಕೊಂಡು ಅಳುತ್ತಿದ್ದ ಹಮೀದೆಯನ್ನು ಬಾಚಿ ತಬ್ಬಿಕೊಂಡದ್ದು
‘ಯಾ ಹಮೀದೆ’ ಅನ್ನುತ್ತಾ ‘ನಿನ್ನ ಅಪ್ಪ ನಾನು ಹಮೀದೆ. ನೀನು ನನ್ನ ಮಗ ಹಮೀದೆ. ನಿನ್ನ ಉಮ್ಮಾ ಸಾರಾ
ತಾತಾ ಹಮೀದೆ’ ಅನ್ನುತ್ತಾ ಹಾಡುವಂತೆ ಅಳತೊಡಗಿದ.
ಹಮೀದೆಯ ಅಳು ತಟ್ಟನೆ ನಿಂತು ಹೋಯಿತು. ಅವ ಮಡಿಲಿನಿಂದಲೇ ಅಚ್ಚರಿಯಿಂದ ಕೊರಗನ ಮುಖ ನೋಡಿದ. ಅವನಿಗೆ
‘ಅಪ್ಪ’ ಎಂಬ ಸಂಗತಿ ತೀರಾ ಹೊಸದಾಗಿ ಕಂಡಿತು. ಕೊರಗ ‘ನಿನ್ನ ಉಮ್ಮಾ ಸಾರಾ ತಾತಾ’ ಅಂದದ್ದು ಕೇಳಿ
ಖುಷಿಯಾಯಿತು. ಇಲೆಯ ಕಡೆ ನೋಡಿದ. ಸಾರಾ ತಾತಾ ಸಂತೆಯಿಂದ ತಂದು ಕೊಟ್ಟ ಹೊಸ ಲುಂಗಿ ಕಟ್ಟು ಒಂದು ಕಡೆಯಿಂದಲೇ
ಉರಿಯುತ್ತಾ ಬೂದಿಯಾಗತೊಡಗಿತು. ಲುಂಗಿಯ ಬಗ್ಗೆ ಪಾಪಾ ಅನಿಸಿತು.
ಕೊರಗ ಹಮೀದೆಯ ತಲೆ ತಡವುತ್ತಾ ಅಳುತ್ತಲೇ ಇದ್ದ.
‘ಯಾ ಹಮೀದೇಽಽಽ
ನಿನ್ನ ಅಪ್ಪ ನಾನು ಹಮೀದೇಽಽಽ
ನೀ ನನ್ನ ಮಗಾ ಹಮೀದೇಽಽಽ
ನಿನ್ನ ಉಮ್ಮಾ ಸಾರಾ ತಾತಾ ಹಮೀದೇಽಽ’
* * * *
ಕೊಟ್ಟಿಗೆಯಿಂದ ಕರು ಅಂಬಾ ಅಂತ ಕೂಗು ಹಾಕತೊಡಗಿತು.
ರೈಟರು ಹಸುವನ್ನು ಹುಡುಕಿಕೊಂಡು ಹಗ್ಗ ಎತ್ತಿಕೊಂಡು ಕಾಡಿಗೆ ಸಂಜೆಯೇ ಹೋಗಿ ಬಿಟ್ಟಿದ್ದರು.ಕೊಟ್ಟಿಗೆಯಲ್ಲಿ
ಕರು ತಾಯಿಗೆ ಕೂಗು ಹಾಕುತ್ತಿತ್ತು.
ದೊಡ್ಡ ಕಿತ್ತಲೆ ಹಣ್ಣಿನ ಹಾಗೆ ಹೊಳೆಯುವ ಚಂದ್ರನ ಬೆಳಕು ಕಾಫಿಯ ರೆಂಬೆಗಳಲ್ಲಿ ಹೊಳೆಯುತ್ತಿತ್ತು.ಕಾಫಿ
ಗಿಡಗಳ ಅಡಿಯಲ್ಲಿ ಬೆಳಕು _ನೆರಳು, ಬೆಳಕು_ನೆರಳು ಬಲೆ ಹರಡಿತ್ತು.ಸಾರಾ ತಾತಾ ಹಮೀದುವನ್ನು ಕೈ ಹಿಡಿದುಕೊಂಡು
ರೈಟರ ಮನೆಯ ಕಡೆ ನಡೆಯುತ್ತಿದ್ದರು. ಒಬ್ಬರಿಗೆ ಇರಲು ಹೆದರಿಕೆಯಾಗುತ್ತದೆ ಅಂತ ಸಾರಾತಾತಾಳನ್ನು ಕರೆದುಕೊಂಡು
ಬರಲು ರೈಟರ ಹೆಂಡತಿ ಹಮೀದುವನ್ನು ಲೈನಿಗೆ ಕಳಿಸಿದ್ದಳು.
ಹೊಳೆಯುವ ಬೆಳಕಿನಲ್ಲಿ ಹಮೀದು ತಾತಾಳ ಮುಖ ನೋಡಿದ. ಅವನಿಗೆ ಚಂದ್ರನ ನೆನಪಾಯಿತು. ತಾತಾಳ ಕಿವಿಯಲ್ಲಿನ
ಬೆಳ್ಳಿಯ ಆಲಿಕತ್ತು ಬೆಳ್ಳಗೆ ಮಿನುಗುತ್ತಿದ್ದವು. ‘ತಾತಾ ನನ್ನ ಉಮ್ಮ ಅಲ್ಲವಾ?’ ಹಮೀದು ತಾತಾಳ ಕೈ
ಅಮುಕಿ ಹಿಡಿದ. ತಾತಾ ಬೇಗ ಬೇಗ ಹೆಜ್ಜೆ ಹಾಕತೊಡಗಿದಳು.
ಅವರು ರೈಟರ ಮನೆಯ ಹತ್ತಿರಕ್ಕೆ ತಲುಪಿದಾಗ ಕೊಟ್ಟಿಗೆಯ ಕಡೆಯಿಂದ ಕೊರಗ ಪೀಪಿ ಊದುತ್ತಿರುವುದು ಕೇಳಿಸಿತು.
ಪೀಪಿಯ ಹಾಡು ಅಲೆಅಲೆಯಾಗಿ ಕಾಫಿ ಗಿಡಗಳ ಮೇಲೆ ಅಲೆದಾಡುತ್ತಿತ್ತು. ಅವರು ಇನ್ನೂ ಹತ್ತಿರ ಬರುತ್ತಿದ್ದಂತೆಯೇ
ಕೊಟ್ಟಿಗೆಯೊಳಗಿನಿಂದ ಕರು ‘ಅಂಬಾ’ ಎನ್ನುತ್ತಿರುವುದು ಕೇಳಿಸತೊಡಗಿತು. ಬಾಣೆಯ ಮೇಲಿನಿಂದ ಬೆಳದಿಂಗಳ
ಹಕ್ಕಿಗಳು ಕೀ ಕೀ ಕೀ....ಅಂತ ರೆಕ್ಕೆ ಬಡಿಯುತ್ತಾ ತೇಲುತ್ತಾ ಹಾಡುತ್ತಿದ್ದವು. ತಾತಾ ಹಮೀದುವಿನ
ನುಖ ನೋಡಿದಳು. ಅವನು ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗಳನ್ನು ನೋಡುತ್ತಿದ್ದ.
ರೈಟರ ಮನೆಯನ್ನು ತಲುಪಿದಾಗ ರೈಟರ ಹೆಂಡತಿ ಕಾಯುತ್ತಿದ್ದರು. ಕೊಟ್ಟಿಗೆಯ ಕಡೆಯಿಂದ ಕೊರಗನ ಪೀಪಿಯ
ಹಾಡು ಬಾಗಿಲಿಗೆ ಬಡಿಯುತ್ತಿತ್ತು. ರೈಟರ ಹೆಂಡತಿ ಬಾಗಿಲಿನ ಅಗುಳಿ ತೆಗೆದು ಇವರು ಒಳಗೆ ಬಂದ ಕೂಡಲೆ
ಬಾಗಿಲು ಹಾಕಿಕೊಂಡು ಅಡಿಗೆ ಕೋಣೆಗೆ ಊಟಕ್ಕೆ ಕರೆದುಕೊಂಡು ಹೋದರು.
ಹಮೀದು ಸದ್ದಿಲ್ಲದೆ ಉಣ್ಣಿತ್ತಿದ್ದ ತಾತಾಳ ಮುಖವನ್ನೇ ನೋಡುತ್ತಾ ಮೆಲ್ಲಗೆ ಅನ್ನ ತುತ್ತು ಮಾಡಿ ನುಂಗತೊಡಗಿದ.
ಅಡಿಗೆ ಕೋಣೆಯ ಮಾಡಿನ ಸದ್ದಿನಿಂದ ಕೊರಗನ ಪೀಪಿಯ ಹಾಡು ಕೇಳಿಬರುತ್ತಿತ್ತು.
ಆಮೇಲೆ ಅವರೆಲ್ಲ ಮಲಗುವ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಮಲಗಿದರು. ರೈಟರ ಹೆಂಡತಿ ಬಷೀರು ಮಂಚದಲ್ಲಿ
ಮಲಗಿದರು. ಕೆಳಗೆ ಚಾಪೆಯಲ್ಲಿ ಕಂಬಳಿ ಹಾಸಿ, ಸಾರಾ ತಾತಾಳ ಪಕ್ಕದಲ್ಲಿ ಹಮೀದು ಮಲಗಿದ್ದ. ರೈಟರ ಹೆಂಡತಿ
ದೀಪ ಆರಿಸಿದರು.
ಬಷೀರು ಮಂಚದಿಂದ ತಟ್ಟನೆ ‘ತಾತಾ ಒಂದು ಕಥೆ ಹೇಳು’ ಅಂದ.
ಕತ್ತಲಲ್ಲಿ ಮಾಡಿನ ಎಡೆಯಿಂದ ಚಂದ್ರನ ಬೆಳಕು ಇಣಕುತ್ತಿತ್ತು. ಕೊರಗನ ಪೀಪಿ ಗಾಳಿಯೊಳಗಿಮ್ದ ತೇಲಿ
ಬರುತ್ತಿತ್ತು.
ಬೆಳದಿಂಗಳ ಹಕ್ಕಿಯ ಕೂಗು ಕೀ ಕೀಽಽಽ....ಹಮೀದು ತಾತಾಳನ್ನು ತಬ್ಬಿಕೊಂಡು ಖುಷಿಯಿಂದ ತಾನೂ ‘ಕಥೆ ಹೇಳು
ತಾತಾ’ ಅಂದನು. ತಾಯಿ ಅವನ ತುಟಿಯನ್ನು ಸವರುತ್ತಾ ಶುರು ಮಾಡಿದರು. ಹಮೀದು ತಾತಾಳ ಮಡಿಲಲ್ಲಿ ಕೈಯಾಡಿಸುತ್ತಾ
ಹೂಗುಟ್ಟತೊಡಗಿದ.
.... ಹಿಂದೆ ಒಂದಾನೊಂದು ಕಾಲದ ಹಿಂದೆ ‘ಮುತ್ತುಪುರ’ ಎಂಬ ಊರಿನಿಂದ ಹತ್ತು ಮಾರು ದೂರದಲ್ಲಿ ‘ಮುತ್ತಾರೆ
ಮಾಲೆ’ ಎಂಬ ಸ್ವರ್ಣದ ಮಹಲು. ಮಹಲಿನ ಒಳಗೆ ಮಾಳಿಗೆಯಲ್ಲಿ ‘ಮುತ್ತುಮೋಳು’ ಎಂಬ ಬೆಳದಿಂಗಳಿನಂಥಹ ಹುಡುಗಿ.
ಅವಳಿಗೆ ಏಳು ಜನ ಅಣ್ಣಂದಿರು. ಒಬ್ಬ ಆಕಾಶ ರಾಜ....ಒಬ್ಬ ಮಲೆ ರಾಜ....ಮತ್ತೊಬ್ಬ ಬೀಸುವ ಗಾಳಿಗೆ
ರಾಜ....ಮತ್ತೊಬ್ಬ ಚಿನ್ನದ ಗಣಿಗಳಿಗೆ ರಾಜ....ಮಗದೊಬ್ಬ....
ಎಲ್ಲರೂಽಽ ಸೇರಿ ತಮ್ಮ ಚಿನ್ನದಮ್ತಹ ತಂಗಿ ಮುತ್ತುಮೋಳುವಿನ ಮಡಿಗೆ ಮಾಲೆ ನೇಯಲಿಕ್ಕೆ ಅಂತ ಮುತ್ತುಗಳನ್ನು
ತರಲು ಏಳು ಮಲೆಗಳ ಆಚೆ ಏಳು ಆಕಾಶಗಳ ಆಚೆ, ಆರು ಕಡಲುಗಳ ದಾಟಿ ಅದರ ಆಚೆ ಹಾಲು ಕಡಲಿನೊಳಕ್ಕೆ ಮುಳುಗಿ
ಮುತ್ತಿ ಹೆಕ್ಕಲಿಕ್ಕೆ ಅಂತ ಹೋದರು.
ಹೋಗುವ ಮೊದಲು ಮುತ್ತುಮೋಳುವನ್ನು ಮಾಳಿಗೆಯ ಮೇಲೆ ಮಲ್ಲಿಗೆ ಪಲ್ಲಂಗದಲ್ಲಿ ಕೂರಿಸಿ ‘ಮುತ್ತುಮೋಳೇ
ನಿನಗೆ ಮುತ್ತು ತರಲಿಕ್ಕೆ ಏಳು ಕಡಲಿನಾಚೆಗೆ ಹೋಗುತ್ತಿದ್ದೇವೆ. ಮೋಳೇ, ನಾವು ಬರುವವರೆಗೆ ನೀ ಈ ಮಾಳಿಗೆ
ಬಿಟ್ಟು ಹೊರಗೆ ಹೋಗಬೇಡ, ಹೋದರೆ ಕಾಗೆ ಕುಕ್ಕುವುದು. ಕೆಳಗೆ ಇಳಿಯಬೇಡ, ಇರುವೆ ಮುತ್ತುವುದು. ‘ಮುತ್ತಾರೆ
ಮಾಲೆ’ ದಾಟಬೇಡ. ಕಳ್ಳರು ಎತ್ತಿಕೊಂಡು ಒಯ್ಯುವರು’ ಅಂತ ಜಾಗ್ರತೆ ಹೇಳಿ ಆರು ಮಾಸ ಕಳೆದು ಏಳನೇ ಮಾಸದಲ್ಲಿ
ಬರುವುದಾಗಿ ಹೇಳಿ ಹೊರಟರು....
‘....ಮುತ್ತುಮೋಳು ಮಲ್ಲಿಗೆಯ ಪಲ್ಲಂಗದಲ್ಲಿ ಕಾಯುತ್ತಾ ಕುಳಿತಳು’
‘ಮಾಸ ನಾಲಕ್ಕಾಯಿತು....ಐದಾಯಿತು....ಆರು ಮಾಸವೂ ಅಮುಗಿಯಿತು. ಮುತ್ತು ಹೆಕ್ಕಲು ಹೋದ ಅಣ್ಣಂದಿರು
ಬರಲೇ ಇಲ್ಲ. ಮೋಳುವಿಗೆ ಹಸಿವಾಗತೊಡಗಿತು. ಏಳು ಮಾಸವೂ ಮುಗಿದು, ಎಂಟನೆಯ ಮಾಸ ಹಿಡಿಯಿತು....ದಾಹದಿಂದ
ಗಿಳಿಯ ಕೊಕ್ಕಿನ ಹಾಗಿನ ಕೆಂಪಗಿನ ತುಟಿಗಳು ಒಣಗೆ ಕೆರೆಯ ನೆಲದ ಹಾಗೆ ಬಿರುಕು ಬಿಡತೊಡಗಿತು.... ಮೋಳು
ಮಾಳಿಗೆಯಲ್ಲಿ ಕಾಯುತ್ತಲೇ ಇದ್ದಳು.’
‘....ಹಸಿವಾಗಿ ಒಣಗಿದ ಮಲ್ಲಿಗೆಯ ಹುಡಿ ಅನ್ನವಾಯಿತು-ಕಿತ್ತಳೆಯ ರಸ ನೀರಾಯಿತು....ಕಣ್ಣನೀರು ಎಣ್ಣೆಯಾಯಿತು....ಕೈಯ
ಉಗುರು ಬಾಚಣಿಗೆಯಾಯಿತು, ಅಣ್ಣಂದಿರು ಕಾಣಲೇ ಇಲ್ಲ. ಮೋಳುವಿನ ನಿಟ್ಟುಸಿರು ಕಪ್ಪು ಕಾಡಿಗೆಯಾಯಿತು.
‘....ಹೀಗೆಯೇ ಇರುವ ಹೊತ್ತಿನಲ್ಲಿ ಮೆಲ್ಲೆ ಒಂದಾನೊಂದು ದಿನ ರಾತ್ರಿ ಮೋಳುವಿಗೆ ಮಾಳಿಗೆಯ ಕಿಟಿಕಿಯಿಂದ
ಪೀಪಿ ಊದುವ ಸದ್ದೊಂದು ಕೇಳಿ ಬಂತು....
‘....ಆ ಪೀಪಿಯ ಹಾಡು ಏಳು ಮಲೆಗಳನ್ನೂ ಒಂದು ಮಾಡುತ್ತಿತ್ತು. ಏಳೂ ಸಮುದ್ರದ ನೀರಿನಂತೆ ಹರಿಯುತ್ತಿತ್ತು.
ಏಳು ಆಕಾಶದಲ್ಲಿ ಹಾರುವ ಹಕ್ಕಿಗಳು ಒಮ್ದು ಕಡೆ ಸೇರಿ ಹಾಡುವಂತೆ ಮುತ್ತುಮೋಳುವಿನ ಕಿವಿಯೊಳಕ್ಕೆ ಪೀಪಿಯ
ಹಾಡು ತಲುಪಿತು.
‘ಹೂಂ’
ಹಮೀದಿಗೆ ತಾನು ಏಳು ಆಕಾಶದಲ್ಲಿ ತೇಲುತ್ತಿರುವಂತೆ ಅನ್ನಿಸುತ್ತಿತ್ತು. ಹೊರಗಿನಿಂದ ಕೊರಗನ ಪೀಪಿಯ
ಸದ್ದು ಏಳುಮಲೆಗಳ ಮೇಲಿನಿಂದ ತೇಲಿ ಬರುವಂತೆ ಕೇಳಿ ಬಂತು. ಮಾಡಿನಿಂದ ಇಳಿಯುತ್ತಿರುವ ಚಂದ್ರನ ಬೆಳಕಲ್ಲಿ,
ತನ್ನ ತಲೆಯಲ್ಲಿ ಕೈಯಾಡಿಸುತ್ತಿರುವ ತಾತಾ ಮುತ್ತುಮೋಳು ಆಗಿರಬಹುದಾ ಅನ್ನಿಸಿತು.
ತಾತಾ ಮುಂದುವರೆಸಿದಳು.
‘.......ಮುತ್ತುಮೋಳು ಕಿಟಕಿಯಿಮ್ದ ತಲೆ ಹೊರಗೆ ಚಾಚಿ ಹುಡುಕತೊಡಗಿದಳು. ಹಾಡು ಮಾತ್ರ ಕೇಳಿಸುತ್ತಿತ್ತು.
ಹಾಡುಗಾರ ಕಾಣಿಸಲಿಲ್ಲ. ಮೋಳುವಿಗೆ ಹಾಡುಗಾರನಿಗಾಗಿ ಮೋಹವಾಗತೊಅಗಿತು.
‘ಮೋಳು ಹಾಡನ್ನು ಹುಡುಕುತ್ತಾ ಮಾಳಿಗೆಯ ಒಂದು ಮೆಟ್ಟಿಲು ಇಳಿದಳು....ಹಾಡು ಹತ್ತಿರವಾದಾಗಾಯಿತು.
ಇನ್ನೊಂದು ಮೆಟ್ಟಿಲು ಇಳಿದಳು....ಮತ್ತೂ ಹತ್ತಿರ ಕೇಳಿಸಿತು. ಇನ್ನೊಂದು ಇನ್ನೊಂದು ಇಳಿದಳು.....
‘.....ಮುತ್ತಾರೆ ಮಾಲೆಯ ಹೂದೋಟದಲ್ಲಿ ಹಾಡುಗಾರ ಇರುವಂತೆ ಅನಿಸಿತು. ಹೂದ್ಟಕ್ಕೆ ಕಾಲಿಟ್ಟಳು....ತರಕಾರಿ
ತೋಟದಿಮ್ದ ಕೇಳಿಸಿತು. ಅಲ್ಲಿಗೆ ಹೋದಳು.... ಹಣ್ಣಿನ ತೋಟದಿಂದ ಹಾಡತೊಡಗಿತು. ಅಲ್ಲಿಗೆ ಹೋದರೆ ಮುತ್ತಾರೆ
ಮಾಲೆಯ ಬೇಲಿಯಾಚೆ ಕೇಳಿಸಿತು....
‘ಮುತ್ತುಮೋಳು ಬೇಲಿ ದಾಟಿದಳು. ಕಾಲುದಾರಿಗೆ ಬಂದಳು. ಹಾಡು ಕಾಡಿನ ನಡುವೆ ಕೇಳಿಸತೊಡಗಿತು. ಬೆಳ್ಳಗಿನ
ಬೆಳದಿಂಗಳಿನಲ್ಲಿ ಕಪ್ಪು ಕಾಡಿನ ನಡುವೆ ಮೋಳು ಅಲೆಯುತ್ತಾ ಹೋದಳು. ಅಲ್ಲಿ ಮತ್ತೊಂದು ಕಾಲುದಾರಿ.
‘ಮೋಳುವಿನ ಕಾಲು ಕಲ್ಲಲ್ಲಿ ಎಡವಿ ಮುಳ್ಳಲ್ಲಿ ನಡೆದು ಕೆಂಪಗಿನ ರಕ್ತ ಚಿಮ್ಮತೊಡಗಿತು. ಹಣೆಯಲ್ಲಿ
ಬೆವರು ಮುತ್ತಿನ ಸಾಲುಗಟ್ಟಿತು.
‘ಹಾಡು ಕಾಡಿನ ನಡುವಿಂದ ಮರಗಳ ಮೇಲಿಂದ ಮುತ್ತುಮೋಳುವನ್ನು ಅಲೆಸುತ್ತಿತ್ತು.
‘ಮೋಳು ನಡೆಯುತ್ತಾ ನಡೆಯುತ್ತಾ ಕಪ್ಪು ಕಾಡಿನ ನಡುವೆ ಹಸಿರು ಹುಲ್ಲಿನ ಬಾಣೆಗೆ ಬಂದಳು. ಅಲ್ಲಿ ಹಚ್ಚಗಿನ
ಹಸಿರು ಹುಲ್ಲು, ಅದರ ನಡುವೆ ನೇರಳೆಯ ಗೊಂಚಲು ಗೊಂಚಲಿನ ಹಣ್ಣಿನ ಮರ. ಅದರಡಿಯಲ್ಲಿ ಕಪ್ಪಗಿನ ಹುಡುಗನೊಬ್ಬ
ಪೀಪಿ ಊದುತ್ತಾ ಹಾಡುತ್ತಿದ್ದಾನೆ. ಹಾಲು ಕರೆಯಿವ ಹಸುಗಳೆಲ್ಲವೂ ಕೊರಳಿಗೆ ಗಂಟೆ ಕಟ್ಟಿಕೊಂಡು ಅಲ್ಲಾಡಿಸುತ್ತಾ
ಮೇಯುತ್ತಿವೆ.
‘ಮುತ್ತುಮೋಳುವಿಗೆ ಪೀಪಿ ನುಡಿಸುತ್ತಿರುವ ಕಪ್ಪು ಹುಡುಗನನ್ನು ನೋಡುತ್ತಲೇ ಮೋಹದಿಂದ ಪ್ರಜ್ಞೆ ತಪ್ಪಿತು.
ಹಸಿರು ಹುಲ್ಲಲ್ಲಿ ಉರುಳಿಬಿದ್ದಳು.
‘ಪೀಪಿ ನುಡಿಸುವ ಕಪ್ಪು ಹುಡುಗ ಕೆಂಚಗಿನ ಗೂಳಿಯೊಂದನ್ನು ಏರಿಕೊಂಡು ಹಾಡುತ್ತಾ ಹಾರಿಬಂದು.....ಬಂದವನೇ
ಮುತ್ತುಮೋಳುವನ್ನು ಮಲ್ಲಿಗೆಯ ಹಾಗೆ ಎತ್ತಿಕೊಂಡು ಏಳು ಮಲೆಯ ಮೇಲಿನ ತನ್ನ ಹೂ ಮಲೆಗೆ ಎತ್ತಿಕೊಂಡು
ಹೋದ....’
ಹಮೀದೆಗೆ ಈ ಲೋಕದಲ್ಲಿ ತಾನೊಬ್ಬನೇ ತಾತಾನ ಕಥೆಗೆ ಹೂಂಗುಟ್ಟುತ್ತಿರುವಂತೆ ಅನಿಸಿ ಮೈ ‘ಜುಂ’ ಅಂದಿತು.
ಅವನಿಗೆ ಕಥೆ ಮುಗಿಯಿತು ಅಂತ ರೋಮಾಂಚನವಾಗುತ್ತಿದ್ದಂತೆಯೇ ತಾತಾ ಬಾಚಿ ತಬ್ಬಿಕೊಂಡು ಮತ್ತೂ ಹೇಳತೊಡಗಿದಳು.
‘ಕಥೆ ಮುಗಿಯಲಿಲ್ಲ ಮೋನೇ....ಮುತ್ತುಮೋಳು ಹೂಮಲೆಯಿಂದ ‘ಮುತ್ತಾಮಾಲೆ’ ಮಹಲಿಗೆ ಹಿಂದಿರುಗಲು ಮಲೆಯಿಂದ
ಇಳಿದಾಗ ಅವಳ ಕೈಲೊಂದು ಕೂಸಿತ್ತು.
‘ಕೂಸಿಗೆ ಆಡಲಿಕ್ಕೆ ಬಾಯಿ ಇರಲಿಲ್ಲ. ಕೇಳಲಿಕ್ಕೆ ಕಿವಿ ಇರಲಿಲ್ಲ. ಹೇಲಲಿಕ್ಕೆ ಕುಂಡೆ ಇರಲಿಲ್ಲ.
ಮೈತುಂಬಾ ತರತರದ ಕಣ್ಣಿಗಳು. ಒಮ್ದು ಬಂಗಾರದ ಕಣ್ಣು. ಒಂದು ಬೆಳ್ಳಿಯ ಕಣ್ಣು. ಒಂದು ನವಿಲಿನ ಕಣ್ಣು.
ಒಂದು ಸೂರ್ಯನ ಕಣ್ಣು. ಒಂದು ಮೀನಿನ ಕಣ್ಣು.... ಮಾಂಸದ ಮುದ್ದೆಯ ತುಂಬ ಥರಥರದ ಕಣ್ಣು. ಮುತ್ತುಮೋಳುವನ್ನು
ನೋಡುತ್ತಾ ಮೋಳುವಿಗೆ ಭಯವಾಯಿತು. ಮುತ್ತು ತರಲಿಕ್ಕೆ ಹೋದ ಅಣ್ಣಂದಿರ ನೆನಪಾಯಿತು. ಮಗುವನ್ನು ಎತ್ತಿಕೊಂಡು
‘ಮುತ್ತಾರೆಮಹಲ’ನ್ನು ಕಾಡಿನಲ್ಲಿ ಹುಡುಕುತ್ತಾ ಹೋದಳು.
‘ಕಾಡಲ್ಲಿ ಒಂದು ಕಾಲುದಾರಿ. ಅಲ್ಲಿಗೆ ಇನ್ನೊಂದು ಕಾಲುದಾರಿ ಸೇರಿ ಮತ್ತೊಂದು ಕಾಲು....ಮುತ್ತುಮೋಳುವಿಗೆ
ಸುತ್ತೀಽಽಽ....ಸುತ್ತೀಽಽಽ....ಸುತ್ತೀಽಽಽ ಜೀವ ಸತ್ತು ಹೋದ ಹಾಗಾಯಿತು. ಮಗುವಿಗೆ ಹಸಿವಾಗಿ ಕಣ್ಣಿಮ್ದ
ನೀರು ಬರತೊಡಗಿತು.‘ಮುತ್ತಾರೆಮಾಲೆ’ ಸಿಗಲೇ ಇಲ್ಲ.
‘ಮೋಳುವಿಗೆ ಸುತ್ತೀ ಸುತ್ತಿ ಸುಸ್ತಾಯಿತು. ಕಾಡಿನ ನಡುವೆ ಕಪ್ಪು ಮಣ್ಣಲ್ಲಿ ಮಗುವನ್ನು ಎತ್ತಿಕೊಂಡು
ಕುಳಿತಳು. ಕಾಡಲ್ಲಿ ಕತ್ತಲಾಯಿತು....ಗಾಳಿ ಬೀಸಿತು....ಆಕಾಶದಲ್ಲಿ ಮೋಡ ಕಟ್ಟಿ ಮಳೆ ಸುರಿಯತೊಡಗಿತು.
ಮೋಳು ಮಗುವನ್ನು ತಬ್ಬಿಕೊಂಡು ಕುಳಿತೇ ಇದ್ದಳು. ಮಳೆ ಹನಿಯಾಗಿ ಹನಿಯಿತು....ಹನಿಯಾಗಿ ಸುರಿಯಿತು....ಹೊಳೆಯಾಗಿ
ಹರಿಯಿತು.....ಮೋಲು ಕದಲಲೇ ಇಲ್ಲ.
‘ರಾತ್ರಿ ಬೆಳಕಾಯಿತು....ಮಳೆ ಬಿಸಿಲಾಯಿತು. ಕಪ್ಪು ಪೀಪಿಯ ಹುಡುಗ ಬೆಳಾಽಽಗೆ ಹಸುಗಳನ್ನು ಅಟ್ಟಿಕೊಂಡು
ಬಂದವನು ಅಲ್ಲಿ ಕೌತುಕದ ಗಿಡವೊಂದನ್ನು ಕಂಡ....
‘ಮುತ್ತುಮೋಳು ಪುಟ್ಟ ಕಾಫಿಯ ಗಿಡವಾಗಿ ಹೋಗಿದ್ದಳು. ಅವಳ ಕೂಸಿನ ಥರಥರದ ಕಣ್ಣುಗಳು ಒಂದೊಂದು ಕಾಫಿಯ
ಮುತ್ತುಗಳಾಗಿ, ಹೂಗಳಾಗಿ, ಬೆಳ್ಳಗೆ ಅರಳಿದ್ದವು....ಅಲ್ಲಿ ಕಾಫಿ ಕಾಡಾಯಿತು.....’
ಹಮೀದೆಗೆ ನಂಬಲಿಕ್ಕೇ ಆಗಲಿಲ್ಲ. ಸಾರಾ ತಾತಾಳೇ ‘ಮುತ್ತುಮೋಳು’ ಖಂಡಿತಾ ಅನಿಸಿತು, ತಾತಾಳ ಕೆನ್ನೆಯಲ್ಲಿ
ಕೈಯಾಡಿಸಿದ, ಬಿಸಿ ಕಣ್ಣೀರು ಕೈಗೆ ಸೋಕಿತು, ತಾತಾ ಅಳುತ್ತಿದ್ದಾಳೆ,,,,ಕೆನ್ನೆ ಸವರಿದ.
ತಾತಾ ಅವನನ್ನು ಬಲವಾಗಿ ಅಪ್ಪಿಕೊಂಡು ಕಂಬಳಿಯೊಳಗೆ ಸೇರಿಸಿಕೊಂಡಳು. ಹಮೀದು ಕಂಬಳಿಯೊಳಗೆ ಕತ್ತಲಲ್ಲಿ
ಅವಳ ತುಟಿ ಸವರಿದ....ಕಣ್ಣು ಮೂಗು....ಹಾಗೇ ಸವರುತ್ತಲೇ ಹೋದ ಕನ್ಣಿಗೆ ಮಂಪರು ಕವಿಯಿತು.
ಬಾಣೆಯ ಕಡೆಯಿಂದ ಕುತ್ತಿರಿ ಚೂಡ ಹಕ್ಕಿ ‘ಲೂಽಽವು ಲೂಽಽಽವುಽ’ ಅಂತ ಊಳಿಡತೊಡಗಿತು. ಕೊರಗನ ಪೀಪಿಯ
ಸದ್ದು ನಿಂತುಹೋಗಿತ್ತು. ಸಾರಾ ತಾತಾ ಹಮೀದುವನ್ನು ಅಪ್ಪಿಕೊಂಡು ಸದ್ದಿಲ್ಲದೆ ಬಿಕ್ಕತೊಡಗಿದಳು.
ಬೆಳಿಗ್ಗೆ ಹಮೀದಿಗೆ ಕೊಟ್ಟಿಗೆಯ ಕಡೆಯಿಂದ ‘ಅಂಬ’ ಎಂಬ ಕರುವಿನ ಸದ್ದು ಕೇಳಿ ಎಚ್ಚರವಾಗುತ್ತಿದ್ದಂತೆ
‘ಅಮ್ಮೇಽಽ’ ಅಂತ ಕರುವಿನ ಮಾರ್ದನಿ ಕೂಡುವುದೂ ಕೇಳಿಸಿತು. ರೈಟರ್ ಹಸುವನ್ನು ಹಿಡಿದುಕೊಂಡು ಬಂದಿದ್ದರು.
ಹಮೀದಿಗೆ ಪಕ್ಕನೆ ಸಾರಾ ತಾತಾಳ ನೆನಪಾಗಿ ಪಕ್ಕಕ್ಕೆ ನೋಡಿದ, ಸಾರಾ ತಾತಾ ಇರಲಿಲ್ಲ.... ಬೆಳಿಗ್ಗೆಯೇ
ಎದ್ದು ಲೈನಿಗೆ ಹೋಗಿಬಿಟ್ಟಿದ್ದಳು.
ಹಮೀದಿಗೆ ಮತ್ತೆ ಕೊಟ್ಟಿಗೆಯ ಕಡೆಯಿಂದ ಕರು ಮತ್ತು ಹಸುವಿನ ‘ಅಂಬಾ’, ‘ಅಮ್ಮೇಽಽ’ ಎಂದು ಕೂಗು ಹಾಕುತ್ತಿರುವುದು
ಕೇಳಿಸಿತು.
ರಾತ್ರೆಯ ಕಥೆಯ ನೆನಪಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದ.....
ತಾ-೩೦-೩-೨೦೧೦
‘ಬರಹ’ಕ್ಕಿಳಿಸಿದವರು
ಸೀತಾಶೇಖರ್ ಮತ್ತು ಶೃತಿಶ್ರೀನಿ