ಓಹ್ ನಮ್ಮ ಬೆಂಗಳೂರು

ಒಹ್! ನಮ್ಮ ಬೆಂಗಳೂರು.

ಸಂಪ್ರದಾಯಸ್ಥ ಸುಂದರಿಗೆ
ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ
ಇಲ್ಲೊಂದು ಮಲ್ಲೇಶ್ವರವಿದೆ.
ವ್ಯಾಕ್ಸಿಂಗ್ ಮಾಡಿ ಮಾಡಿ
ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ.
ಶಿವಾಜಿನಗರ, ಕಳಾಸಿಪಾಳ್ಯಗಳ ಮೈ
ಇನ್ನೂ ನೆರೆತಿಲ್ಲ.
ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ
ಹುಟ್ಟುವಾಗಲೇ ಹರಿದಿದೆ.

ಇಲ್ಲೊಮ್ಮೆ ಸುತ್ತಿದಾಗ:
ರಾತ್ರಿ ರೈನ್ ಡ್ಯಾನ್ಸಿನಲಿ
ಅವಸರಿಸುವ ನೆರೆಮನೆ ಗರತಿ,
ಎದುರೇ ಸಿಕ್ಕಾಗ
ಅಪರಿಚಿತಳಾಗುವ ಹಳೆಯ ಗೆಳತಿ,
ಮಾತಿಗೂ ಸಿಗದ ಮನೆಯೊಡತಿ,
ಹೈಸ್ಕೂಲಿಗೇ ಮುಗಿದ ವರ್ಜಿನ್ ಪ್ರೀತಿ.
ಮಂದಿರದೊಳಗೆ ಸ್ಲೀವ್‌ಲೆಸ್ ಪ್ರದಕ್ಷಿಣೆ,
ಕ್ಲೀವೇಜ್ ಹಣ್ಣು-ಕಾಯಿ, ಸ್ಟೇರಿಂಗ್ ಆರತಿ.
ಅಪರೂಪಕ್ಕೊಮ್ಮೆ ಅಳೆದು ತೂಗಿ
ಮೆಚ್ಚಿದ ಹುಡುಗಿ-
ಮುಂಜಾವಿನಲಿ ಸುಪ್ರಭಾತ
ಸಂಜೆ ಪುರುಷಸೂಕ್ತ.

ಬೆಂಗಳೂರೆಂದರೆ-
ನಮ್ಮ ನಂಬಿಕೆಗಳ ಪವರ್‌ಹೌಸಿನಲ್ಲೇ
ನಮ್ಮೊಳಗಿನ ಅಪನಂಬಿಕೆಯ ಸ್ವಿಚ್ಚುಗಳು.
ಉರಿದರೂ ಬೆಳಗದ
ತಂತುಗಳಿಲ್ಲದ ಬಲ್ಬುಗಳು.

*****

Add Comment

Required fields are marked *. Your email address will not be published.