ಶಿಕಾರಿ ಅಂತರ್ಜಾಲ ಆವೃತ್ತಿ ಭಾಗ – ೫

ಇದ್ದಕ್ಕಿದ್ದಂತೆ ಒಂದು ಬಗೆಯ ಜಿಗುಪ್ಸೆ. ನಿರುತ್ಸಾಹ, ದಣಿವು ಕೂಡಿದಂತಿದ್ದ ನಾಗಪ್ಪನ ದನಿ ದಸ್ತೂರನ ಉಕ್ಕುತ್ತಿದ್ದ ಉತ್ಸಾಹಕ್ಕೆ ಭಂಗ ತಂದಿತು. ಆದರೂ ಹಾಗೆಯೇ ತೋರಗೊಡದೆ, ತನಿಖೆಯನ್ನು ಆರಂಬಿಸಿದ ರೀತಿಯಲ್ಲಿಯ ಅವನ ಜಾಣ್ಮೆಯನ್ನು ಮೆಚ್ಚಿಕೊಂಡ ಫಿರೋಜ್ ಹಾಗೂ ಪಟೇಲರನ್ನು ಇನ್ನಷ್ಟು ಖುಶಿಗೊಳಿಸಲೆಂಬಂತೆ, ಸರಿಯಾಗಿದ್ದ ಗಂಟಲನ್ನೆ ಸರಿಮಾಡುವವನ ಹಾಗೆ ಸದ್ದುಮಾಡಿ ದೊಡ್ಡ ಗತ್ತುಗಾರಿಕೆಯಲ್ಲಿ ಪ್ರಶ್ನೆ ಬಿಚ್ಚಿದ :
“ನಾನು ಈಗ ಕೇಳಲಿದ್ದ ಪ್ರಶ್ನೆಯನ್ನು ಮಾತ್ರ ಲಕ್ಷ್ಯಗೊಟ್ಟು ಕೇಳಿರಿ_ It has serious implications….
“ಈಗ ಕಂಪನಿಯಲ್ಲಿಯ ನನ್ನ ಭವಿತವ್ಯಕ್ಕೇ ಧಕ್ಕೆ ಬಂದೀತು ಎಂದು ತಾನೇ ನಿಮ್ಮ ದ್ಮಕಿಯ ಒಳ ಅರ್ಥ ?”
ನಾಗಪ್ಪನ ಪ್ರಶ್ನೆಯ ಅರ್ಥ ತಿಳಿಯದಷ್ಟು ಧಡ್ಡ ತಾನಲ್ಲ ಎಂಬುದನ್ನು ಸೂಚಿಸುವ ಹಾಗೆ ತುಟಿಗಳ ಮೂಲೆಯಲ್ಲಿತುಂಟತನದ ನಗು ಮಿಂಚಿಸುತ್ತ ದಸ್ತೂರ್ ಮಾತನಾಡಿದ :
“ವಿಷಯ ಅಷ್ಟೊಂದು ಸರಳವಾಗಿದ್ದಾದರೆ ನಮ್ಮ ಚಿಂತೆ ಹುರುಳಿಲ್ಲದ್ದು ; ಈ ತನಿಖೆಯೇ ಅನಗತ್ಯವಾದದ್ದು. ಯಾಕೆಂದರೆ ನಿಮ್ಮಂತಹ ಅಸಾಧಾರಣ ಪ್ರತಿಭೆಯ ತಂತ್ರಜ್ಞರು ನಮಗೆ ಬೇಕೇ ಬೇಕು. ಆದರೆ ನಮಗೆ ಇದಿರಾದ ತೊಡಕು ಬಹಳ ಗಂಭೀರಸ್ವರೂಪದ್ದು_May I say, it has criminal implications which might involve the whole management ?”
ಬಿಯರಿನ ಪಾತ್ರೆ ಹಿಡಿದ ತನ್ನ ಕೈ ನಡುಗಿದ ರೀತಿಗೆ ಸ್ವತಃ ನಾಗಪ್ಪನೇ ಅತೀವ ನಾಚಿಕೆಪಟ್ಟ. ತುಂಬ ಪ್ರಯಾಸದಿಂದ ಮಗ್ಗನ್ನು ಟೀಪಾಯಿಯ ಮೇಲೆ ಇಡುವಷ್ಟರಲ್ಲಿ ಹಣೆಯಲ್ಲಿ ಬೆವರ ಹನಿಗಳ ತೋರಣ ಕಟ್ಟಿದ್ದವು. ಕಿಸೆಯಿಂದ ಕೈವಸ್ತ್ರವನ್ನು ಹೊರತೆಗೆದ.
ದಸ್ತೂರ್ ರಚಿಸಿಕೊಂಡ ಯುದ್ಧತಂತ್ರದ ಆಯಕಟ್ಟಿನ ಅಂಗವಾಗಿ ತೋರಿದ ಈ ಮಾತುಗಳು ಸ್ವತಃ ಫಿರೋಜ್- ಪಟೇಲರಿಗೇ ಅನಿರೀಕ್ಷಿತವಾದಂತಿದ್ದವು: “a master-stroke” ಎನ್ನುವುದನ್ನು ಒಪ್ಪಿಕೊಂಡು ಕಣ್ಣಹೊಳಪಿನಿಂದಲೇ ಪ್ರಶಂಸೆ ವ್ಯಕ್ತಪಡಿಸಿದ ಫಿರೋಜ್ ತನ್ನ ಉತ್ಸಾಹವನ್ನು ಹತೋಟಿಯಲ್ಲಿಡಲು ಪೈಪಿನ ಮೊರೆಹೋಗಬೇಕಾಯಿತು. ಪೆದ್ದ ಪಟೇಲ ಮಾತ್ರ ಬಂದ ಹುರುಪಿಗೆ ತೊಡೆ ಬಡೆದುಕೊಂಡು, ತನ್ನ ಅಚಾತುರ್ಯಕ್ಕೆ ತಾನೇ ಮುಜುಗರಪಟ್ಟು ತುಟಿ ಕಚ್ಚಿಕೊಂಡ. ನಾಗಪ್ಪ ಇವಕ್ಕೆಲ್ಲ ಕಣ್ಣು ಮುಚ್ಚಿದ್ದ : “Criminal implications” ಈ ಎರಡೇ ಶಬ್ಧಗಳು ಹಾಗೂ ಅವುಗಳನ್ನು ಉಚ್ಛರಿಸಿದಾಗಿನ ದನಿ ಮನಸ್ಸಿನ ಯಾವಯಾವವೋ ಆಳಗಳನ್ನು ತಟ್ಟಿದಾಗ ಮೇಲೆದ್ದು ಬರುತ್ತಿದ್ದ ಭಯ ಈ ಮೊದಲು ಎಂದೆಂದೂ ಅನುಭವಕ್ಕೆ ಬಂದಿರದಂಥದ್ದು. ದಸ್ತೂರನ ಮುಂದಿನ ಮಾತಂತೂ ಆಡಿದ ದಸ್ತೂರನೇ ಬಹಳ ಖುಶಿಪಡುವಂತಹದಾಯಿತು : ಮಾತು ಹೊಳೆಯುತ್ತಲೇ This beer is damn good_ ಎಂದು ಬಿಯರನ್ನು ಹೊಗಳಿದಂತೆ ನಟಿಸಿ, ಫಿರೋಜನ ಕಡೆಗೊಮ್ಮೆ ನೋಡಿ :

“ನಾನು ಈಗ ಹೇಳುವ ಮಾತುಗಳನ್ನಂತೂ ನೀವೊಬ್ಬರೇ ರುಜುವಾತುಗೊಳಿಸಬಲ್ಲಿರಿ. ಅವುಗಳಿಂದ ನಿಮಗೇ ಮನದಟ್ಟಾದೀತು_ನಾವು ನಿಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲು ಹೊರಟಿಲ್ಲ ಎನ್ನುವದು, ಹಾಗೇ. ನಮ್ಮ ಲಕ್ಷ್ಯಕ್ಕೆ ಬಂದ ಸಂಗತಿಗಳ ಬಗ್ಗೆ ನಮಗೆ ಅನ್ನಿಸುತ್ತಿದ್ದ ಕಾಳಜಿಯ ಅರ್ಥವೂ ನಿಮಗಾದೀತು.” ಎಂದ. ತಾನು ಹೇಳುತ್ತಿದ್ದ ಮುದ್ದೆಯನ್ನು ಸ್ಪಷ್ಟಪಡಿಸುವವನಹಾಗೆ, ಕ್ಷಣ ಕಾಲ ತಡೆದು_I mean….We did not go after the facts_they came to our notice,” ಎಂದ.
ನಾಗಪ್ಪನಿಗೆ ಈ ಎರಡು ಸಂಗತಿಗಳ ನಡುವಿನ ಸೂಕ್ಷ್ಮ ಅಂತರವನ್ನು ಅರಿಯುವ ತಾಳ್ಮೆಯಿರಲಿಲ್ಲ.
ದಸ್ತೂರ್ ಬಿಯರನ್ನು ಹೀರುತ್ತ ತಾನು ಈಗ ಎಸೆಯುತ್ತಿದ್ದದ್ದು ತುಂಬ ಪ್ರತಾಪಶಾಲಿಯಾದ ಅಸ್ತ್ರ ಎಂಬುದಕ್ಕೆ ಎಲ್ಲರ ಗಮನ ಸೆಳೆಯುವಂತೆ ಅವರ ಕಡೆಗೆ ನೋಡಿ, ವಿನಾಕಾರಣ ಗಂಟಲು ಸಡಿಲಿಸಿ :

“Some horrible incident in your childhood made you grow under the suspicion that you were a part of a suicide pact_albeit miscarried_of your parents….”

ರೀನಾ ರೀನಾ ರೀನಾ ! ಯಾಕೆ ಯಾಕೆ ಈ ವಿಶ್ವಾಸಘಾತ….?ತೀರ ವೈಯಕ್ತಿಕವಾದ ತನ್ನ ಯಾತನೆಯ ಗುಟ್ಟನ್ನು ರೀನಾಳಿಗೆ ಬಿಚ್ಚಬೇಕಾದ ಆ ಸನ್ನಿವೇಶವನ್ನು ನೆನೆಯುವುದು ಕೂಡ ನಾಗಪ್ಪನಿಗೆ ಅಸಾಧ್ಯವಾಯಿತು. ಸುಖದ ಪರಾಕಾಷ್ಠೆಯ ಸ್ಥಿತಿಯಲ್ಲೇ ತೀವ್ರವಾದ ನೋವನ್ನು ತಿಂದ ಗಳಿಗೆ ಅದು : ಇಷ್ಟೊಂದು ಸುಖವನ್ನು ಇನ್ನಾವ ಗಂಡಸಿನಿಂದಲೂ ಈವರೆಗೆ ಪಡೆದಿರಲಿಲ್ಲ ಎನ್ನುವುದನ್ನು ರೀನಾ ತನ್ನ ಅಪ್ಪುಗೆಯಲ್ಲಿ ನರಳುತ್ತ ಒಪ್ಪಿಕೊಂಡು, ಉಳಿದೆಲ್ಲ ಬಟ್ಟೆ ಕಳಚಿಯೂ ಅಂಗಿ ಕಳಚಲು ತಾನು ನಾಚಿದ್ದನ್ನು ನೆನಪು ಮಾಡಿಕೊಟ್ಟಾಗ ರೀನಾಳ ಅಲೌಕಿಕ ದೇಹವು ಕೊಟ್ಟ ಆನಂದದ ಅಮಲಿನಲ್ಲಿದ್ದ ನಾಗಪ್ಪ ವಿಷಾದ ತುಂಬಿದ ನಗು ನಗುತ್ತ ಹೇಳಿದ್ದ :“I hide there a great secret of my childhood both painful and shameful, ಆದರೆ ಏನೆಂದು ಸ್ಪಷ್ಟಪಡಿಸಿರಲಿಲ್ಲ. ಚಿನ್ನಾಟದ ಭರದಲ್ಲಿ ಬೆತ್ತಲೆ ಎದೆಯನ್ನು ಹುಡುಕುತ್ತ ಬನಿಯನ್ನಿನ ಕೆಳಗೆ ಹೊರಟ ರೀನಾಳ ಕೈಯನ್ನು ಅತ್ಯಂತ ಖುಶಿಯಿಂದಲೇ ಹೊರಗೆ ತೆಗೆದಿದ್ದ.
“ಹಂಚಿಕೆ_ಬಟ್ಟೆಗೆ ಬೆಂಕಿಯಿಕ್ಕಿ ಕೊಲ್ಲುವುದಾಗಿತ್ತೇ ?”
ಎಲ್ಲಿಂದಲೋ ತೂರಿಬಂದಂತೆ ಬಂದು ಕಿವಿಹೊಕ್ಕ ಈ ಪ್ರಶ್ನೆಯಿಂದ ನಾಗಪ್ಪನ ಮೋರೆ ಎಷ್ಟೊಂದು ಬಿಳಿಚಿಕೊಂಡಿತ್ತೆಂದರೆ ಅದನ್ನು ಕೇಳಿದ ದಸ್ತೂರನಿಗೇ ಒಂದು ಬಗೆಯ ಭಯವಾಯಿತು.
“ಕೊಲ್ಲುವ ಕಲೆಯಲ್ಲಿ ನಿಮ್ಮದು ಪಳಗಿದ ಕೈಯೆಂದು ತೋರುತ್ತದೆ, ಮಿಸ್ಟರ್ ದಸ್ತೂರ್. ಇಂತಹ ಮನೋವೈಜ್ಞಾನಿಕ ಮಸಲತ್ತುಗಳ ಬಗ್ಗೆ ಕೇಳಿ ಗೊತ್ತಿತ್ತು. ಅವುಗಳಿಗೆ ನಾನೇ ಬಲಿಯಾಗುತ್ತಿದ್ದದ್ದು ಮಾತ್ರ ಇದೇ ಮೊದಲು. ದಯಮಾಡಿ ನನ್ನನ್ನು ಕುಕ್ಕೂಬಾಳನೆಂದು ತಿಳಿಯಬೇಡಿ : Give up this blackmail. Come out with it straight. Tell me_how can I save your friend Phiroz ?”

ತದೇಕಚಿತ್ತದಿಂದ ಇವನನ್ನು ಆಲಿಸುತ್ತಿದ್ದ ಫಿರೋಜನಿಗೆ ನಾಗಪ್ಪ ತನ್ನ ಹೆಸರನ್ನು ಅಷ್ಟೊಂದು ಹಗುರವಾಗಿ ಎತ್ತಿದ ರೀತಿಯಿಂದ ಸಿಟ್ಟು ಮಸ್ತಕಕ್ಕೇರಬೇಕು. ಆದರೂ ನಿರುಪಾಯನಾದವನ ಹಾಗೆ ಅಸಾಧಾರಣವಾದ ಸಂಯಮ ತೋರಿ ಬಾಯಿ ತೆರೆದಾಗ ದನಿಯಲ್ಲಿಯ ನಡುಕವನ್ನು ಅಡಗಿಸುವದು ಅವನಿಗೆ ಕಷ್ಟಸಾಧ್ಯವಾಯಿತು :

ಇದು ನನ್ನನ್ನು ಉಳಿಸುವ ಪ್ರಶ್ನೆಯಲ್ಲ, ನಾಗ್_ಕಂಪನಿಯನ್ನು ಉಳಿಸುವ ಪ್ರಶ್ನೆ. ಆ‌ಒ‌ಆ ಆಗಿದ್ದರಿಂದ, ಫ್ಯಾಕ್ಟರಿಯ ಮುಖ್ಯ ಅಧಿಕಾರಿಯಾಗಿದ್ದರಿಂದ ಇದಕ್ಕೆಲ್ಲ ನಾನೇ ಜವಾಬ್ದಾರನೆಂಬುದನ್ನು ಪ್ಪಿಕೊಂಡಾಗಲೂ….”
“ಯಾವುದಕ್ಕೆಲ್ಲ ನೀನು ಜವಾಬ್ದಾರ, ಫಿರೋಜ್ ?”
“ಫ್ಯಾಕ್ಟರಿಯಲ್ಲಿ ಇಂಥ ಸಂಗತಿಗಳು ನಡೆಯುತ್ತವೆ ಎನ್ನುವುದಕ್ಕೆ….”
“ಎಂಥ ಸಂಗತಿಗಳು ? ನೀನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡುತ್ತಿದ್ದದ್ದು ನನಗೆ ಗೊತ್ತಿದೆಯೆಂದು ಗ್ರಹೀತ ಹಿಡಿಯುವದು ಸಾಧುವಲ್ಲ, ಫಿರೋಜ್. ಎಂಥ ಸಂಗತಿಗಳನ್ನು ನಿರ್ದೇಶಿಸಿ ಮಾತನಾಡುತ್ತಿದ್ದೀ ಎನ್ನುವದು ಸ್ಪಷ್ಟವಾಗಲಿ….”
ಫಿರೋಜ್, ದಸ್ತೂರ್ ಹಾಗೂ ಪಟೇಲರ ಕಡೆಗೆ ನೋಡಿದ. ಹೇಳಲು ಅಡ್ಡಿಯಿಲ್ಲ ಎನ್ನುವ ಇಷಾರೆ ಇಬ್ಬರಿಂದಲೂ ಸಿಕ್ಕಮೇಲೆ ಫಿರೋಜ್ ಹೇಳಲು ಉದ್ಯುಕ್ತನಾದ. ನಾಗಪ್ಪನ ಮೋರೆಗೆ ಮತ್ತೆ ಕಳೆಯೇರಿತು. ಬಹಳ ಹೊತ್ತಿನವರೆಗೆ ಮುಟ್ಟಿರದ ಬಿಯರ್-ಮಗ್ ಎತ್ತಿಕೊಂಡು ಬಿಯರ್ ಹೀರಿದ. ಆಗಿನಿಂದಲೂ, ಈ ಎಲ್ಲದಕ್ಕೆ ಕಾರಣನಾಗಿಯೂ ಅದರ ಹೊರಗೇ ಉಳಿದ ಫಿರೋಜನನ್ನು ನೇರವಾಗಿ ವಿಚಾರಣೆಗೆ ಒಳಪಡಿಸುವ ಈ ಸಂಧಿಯು ನಾಗಪ್ಪನ_ತಾತ್ಕಾಲಿಕವಾಗಿಯೇ ಆಗಲೊಲ್ಲದೇಕೆ_ಉತ್ಸಾಹಕ್ಕೆ ಕಾರಣವಾಯಿತು :
ಫಿರೋಜ್ : “You know about the pilferage of….”
ನಾಗಪ್ಪ : ಗೊತ್ತಿಲ್ಲವೆಂದು ತಿಳಿಯುವದೇ ಲೇಸೇನೋ….”
ಫಿರೋಜ್ : “ಓಕೇ. ಹತ್ತು ಟನ್ನಿನಷ್ಟು ಕೆಮಿಕಲ್ ನಂಬರ್ ೩೮೯….”
ನಾಗಪ್ಪ : ಕಳವಿಗೆ ಹೋದದ್ದು ೩೮೯ ಮಾತ್ರ ಎಂದು ನನಗನ್ನಿಸುವದಿಲ್ಲ….”
ನಾಗಪ್ಪನ ಈ ಮಾತಿಗೆ ಪಟೇಲ್, ದಸ್ತೂರ್ ಇಬ್ಬರೂ ದಿಗಿಲುಗೊಂಡು, ಈ ಸಂಗತಿ ತಮಗೆ ಗೊತ್ತಿರಲಿಲ್ಲ ಎನ್ನುವ ಹಾಗೆ ಫಿರೋಜನತ್ತ ನೋಡಿದರು. ಅವನು ನಿರುಪಾಯನಾದವನ ಹಾಗೆ :
“Yes_and a large qyantity of 387.”
ಇದನ್ನು ಕೇಳಿದ್ದೇ ತಡ ದಸ್ತೂರ್ ಗಾಬರಿ ತುಂಬಿದ ದನಿಯಲ್ಲಿ_ How much ? ಎಂದು ಕೇಳಿದ್ದಕ್ಕೆ ಫಿರೋಜನಿಂದ ಉತ್ತರ ಬರುವ ಮೊದಲೇ ನಾಗಪ್ಪನತ್ತ ತಿರುಗಿ, “You did not mention this in your letter” ಎಂದ.
“ಆ ಪತ್ರ ನಾನು ಬರೆದದ್ದಲ್ಲ, ಮಿಸ್ಟರ್ ದಸ್ತೂರ್, ನಾನದನ್ನು ಓದಿಲ್ಲಕೂಡ. ಅದೆಲ್ಲ ಮುಖ್ಯವಲ್ಲ. ನೀವು ಚಿಂತಿಸಬೇಕಾದ ಮಹತ್ವದ ಸಂಗತಿ `387 actual users’  licence’ ಪ್ರಕಾರ ಪರದೇಶದಿಂದ ಆಮದು ಮಾಡಿದ ಕೆಮಿಕಲ್ ಎಂಬುದು. ಕಳ್ಳಸಂತೆಯಲ್ಲಿ ಮಾರುವುದುಳಿಯಲಿ, ಅದನ್ನು ಇನ್ನೊಬ್ಬರಿಗೆ ಮಾರುವದೇ ದೊಡ್ಡ ಗುನ್ನೆಯೆಂಬುದು ನಿಮಗೆ ಗೊತ್ತಿರಬೇಕು….”

ಇದು ಹೌದೆ? ಎನ್ನುವ ದೃಷ್ಟಿಯಿಂದ ದಸ್ತೂರ್ ಫಿರೋಜನತ್ತ ನೋಡಿದ, ಅವನ ಮೋರೆಯ ಮೇಲೆ ಸ್ಪಷ್ಟವಾಗಿ ಮೂಡಿದ ಅಂಜಿಕೆಯೇ ಹೌದೆಂದು ಉತ್ತರ ಕೊಟ್ಟಿತು. ದಸ್ತೂರ್ ತನಗಾದ ತೀವ್ರ ಅಸಮಾಧಾನವನ್ನು ಅಡಗಿಸುವ ಪ್ರಯತ್ನ ಮಾಡದೇನೆ ಬಾತ್‌ರೂಮಿಗೆ ಹೋಗುವ ನೆಪ ಮಾಡಿ ಅಲ್ಲಿಂದ ಎದ್ದ : ಹೋಗುವ ಮೊದಲು_“Please read this….I will be back soon” _ಎನ್ನುತ್ತ ಚೆಂದವಾಗಿ ಟೈಪ್ ಮಾಡಿದ ರಿಪೋರ್ಟನ್ನು ಕೈಗೆ ಕೊಟ್ಟ. ಸನ್ನಿವೇಶ ತೆಗೆದುಕೊಂಡ ಈ ಹೊಸ ತಿರುವು ನಾಗಪ್ಪನಿಗೆ ಹುರುಪು ಕೊಟ್ಟಿತು. ಹೊಟ್ಟೆ ಚೆನ್ನಾಗಿ ಹಸಿದಿದೆ ಎಂಬುದನ್ನು ಈಗ ಅರಿತವನಂತೆ ಪ್ಲೇಟುಗಳಲ್ಲಿ ತಣ್ಣಗಾಗುತ್ತಿದ್ದ ಕಬಾಬ್‌ಗಳಲ್ಲಿ ಒಂದನ್ನೆತ್ತಿ, ಕೈಗಡಿಯಾರ ನೋಡಿಕೊಂಡು ಹುಬ್ಬೇರಿಸಿದ. ಆಗಲೇ ೧೨ಗಂಟೆ ದಾಟಿತ್ತು. ಫಿರೋಜ್ ಇಂತಹ ಸಮಯಗಳಲ್ಲೆಲ್ಲ ಮೊರೆಹೋಗುತ್ತಿದ್ದ ಪೈಪ್ ಕೈಗೆತ್ತಿಕೊಂಡು ತಂಬಾಕು ತುಂಬಹತ್ತಿದ್ದ_ ಆಗಿನಿಂದಲೂ ಅದನ್ನು ತುಂಬದೇ ಇದ್ದದ್ದೇ ಇದೀಗ ಬಹಿರಂಗವಾದದ್ದಕ್ಕೆ ಕಾರಣವಾಗಿತ್ತು ಎಂಬಂತೆ !

ಪಟೇಲ ದಸ್ತೂರ್ ಬಿಟ್ಟುಹೋದ ಫೈಲು ನೋಡುವ ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡಾಗ ಅದರೊಳಗಿಂದ ಎರಡು ಫೋಟೋಗಳು ಜಾರಿ ಕೆಳಗೆ ಬಿದ್ದವು. ಅವನ ಈ ಅಧಿಕಪ್ರಸಂಗಕ್ಕೆ ಬೇಸರಪಟ್ಟ ಫಿರೋಜ್ ನಾಗಪ್ಪ ನೋಡುವ ಮೊದಲೇ ಅವಸರ ಅವಸರವಾಗಿ ಫೋಟೋಗಳನ್ನು ನೆಲದಿಂದ ಎತ್ತಿ ಫೈಲಿನಲ್ಲಿ ಇಡುತ್ತ_ನೀನು ಕೂತಲ್ಲೇ ಕುಂಡೆ ಗಟ್ಟಿಮಾಡಿ ಕೂಕುಕೋ ಎನ್ನುವವನ ಹಾಗೆ ಅವುಡುಗಚ್ಚಿ_ “ Please, for heavens sake”  ಎಂದ. ನಾಗಪ್ಪ ಮಾತ್ರ ಇದಾವುಗಳ ಕಡೆಗೆ ಲಕ್ಷ್ಯ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಫಿರೋಜನ ಫಜೀತಿ ಮಾಡುವ ಹಗಲುಗನಸು ಕಾಣುತ್ತ ದಸ್ತೂರ್ ತನ್ನ ಸ್ಥಾನಕ್ಕೆ ಮರಳುವುದರ ಹಾದಿ ಕಾಯುತ್ತಿದ್ದ. ದಸ್ತೂರ್ ಬಂದ. ಬಂದವನೇ, ತನ್ನ ಫೈಲು ಜಾಗದಲ್ಲಿ ಇಲ್ಲದ್ದನ್ನು ಗಮನಿಸಿ_ಅದನ್ನು ತೆಗೆದದ್ದು ಯಾರು ಎಂಬುದು ತನಗೆ ಗೊತ್ತಿದೆ ಎನ್ನುವಂತೆ ಪಟೇಲನ ಕಡೆಗೆ ನೋಡಿ ಬೇಸರ ವ್ಯಕ್ತಪಡಿಸಿದ. ಈ ಎಲ್ಲ ನಾಟಕ ಮುಂದೆ ಬರುವ ಪೇಚಿನ ಪ್ರಶ್ನೆಗೆ ಹಿನ್ನೆಲೆಯಾಗಿತ್ತು ಎನ್ನುವುದರ ಕಲ್ಪನೆ ಕೂಡ, ನಿರಾತಂಕವಾಗಿ ರಿಪೋರ್ಟು ಓದಲು ಮೊದಲು ಮಾಡಿದ ನಾಗಪ್ಪನಿಗೆ, ಇರುವದು ಶಕ್ಯವಿರಲಿಲ್ಲ. ಆದರೆ ರಿಪೋರ್ಟು ಓದುತ್ತಹೋದಂತೆ ದೊಡ್ಡದಾಗುತ್ತಹೋದ ಕಣ್ಣುಗಳು ಸಣ್ಣವಾಗದಾದವು. ಮೈ ಸಣ್ಣಗೆ ನಡುಗುತ್ತ ಬೆವರಹತ್ತಿತು. ದೇವರೇ, ಬಾನಾವಳಿಯ ಔಷಧದಂಗಡಿಯಿಂದ ಬಾರ್ಬಿಚ್ಯುರೇಟ್ ಗುಳಿಗೆಗಳನ್ನು ಕೊಳ್ಳುವ ಧೈರ್ಯವಾಗದೇ ಅಥವಾ ಕೊಳ್ಳುವ ಧೈರ್ಯವಾಗಿಯೂ ಅವುಗಳನ್ನು ನುಂಗುವ ಧೈರ್ಯವಾಗದೇ ಬದುಕಿ ಉಳಿದರೆ_ನಿನ್ನಾಣೆ ಸ್ಟ್ಯಾಂಡ್ ಬುಕ್-ಸ್ಟಾಲಿನಲ್ಲಿ ಸೇಲ್ಸ್‌ಮನ್ನನಾಗುತ್ತೇನೆ. ಇಲ್ಲ ಖೇತವಾಡಿಯ ಗಲ್ಲಿಯೊಂದರಲ್ಲಿ ಪಾಗಡಿ ಕೊಟ್ಟಾದರೂ ನ್ಯೂಸ್‌ಪೇಪರ್ ಮಾರುವ ಅಂಗಡಿ ತೆರೆಯುತ್ತೇನೆ….ಕೋಳೀಗಿರಿಯಣ್ಣನ ಕೇರಿಯ ಸಾಲೆಯಲ್ಲಿ ಮಾಸ್ತರನಾಗುತ್ತೇನೆ. ಆದರೆ ಇದರಿಂದೊಮ್ಮೆ ಪಾರುಮಾಡು :
“What do you want me to do with this report. Mr.Dastur?”

undefinedಇದ್ದಕ್ಕಿದ್ದಂತೆ ತನ್ನ ದನಿಯಲ್ಲಿ ಅಳುಬುರುಕತನ ಸೇರಿಕೊಂಡುಬಿಟ್ಟಿದೆ ಎಂಬುದನ್ನು ಗಮನಿಸಿಯೂ ಅದರ ಬಗ್ಗೆ ಏನೂ ಮಾಡಲಾಗದವನ ಹಾಗೆ ಕೈ ಚೆಲ್ಲಿ ಕೂತ : ಈ ದಸ್ತೂರ್ ಇಂಥದ್ದರಲ್ಲೆಲ್ಲ ಪಳಗಿದ ಕೈಯೆಂದು ತೋರುತ್ತದೆ. ಆಗಿನಿಂದಲೂ ತನಿಖೆ ನಡೆಸಿದ ರೀತಿ ನೋಡಿದರೇನೇ ಗೊತ್ತಾಗುತ್ತದೆ_ಇದೆಲ್ಲ ತನ್ನನ್ನು ಮಾನಸಿಕವಾಗಿ ಮುರಿಯುವ ಮಸಲತ್ತು : ಒಮ್ಮೆ ತಾನು ಗೆದ್ದಂತೆ, ಮರುಗಳಿಗೆ ಅನಿರೀಕ್ಷಿತವಾದ ಪೇಚಿಗೆ ಸಿಕ್ಕಿ ತಾನೇ ಸೋತಂತೆ ನಟಿಸುವ ಈ ಕದೀಮ ಬಲು ಧೂರ್ತ. ಅವನ ವ್ಯವಸಾಯವೇ ಇದೆಂದು ತೋರುತ್ತದೆ. ಅಳುಕುತ್ತಲೇ ನಾಗಪ್ಪ ದಸ್ತೂರನ ಕಡೆಗೆ ನೋಡಿದ :ತನ್ನ ಮೇಲೇ ದೃಷ್ಟಿ ನೆಟ್ಟು ಕುಳಿತವನ ಕಣ್ಣುಗಳಲ್ಲಿ ಈವರೆಗೂ ಕಂಡಿರದ_ಒಂದು ಬಗೆಯ ಶ್ವಾಪದ ದೃಷ್ಟಿಯ_ತೀಕ್ಷ್ಣತೆ ಬಂದಿತ್ತು. ಮಾಟ ಮಾಡುವ ಬಲ ಬಂದಿತ್ತು : ತನ್ನನ್ನು ಸಪಾಟು ಮಾಡುವ ಸಿದ್ಧತೆಯ ಪ್ರತಿ ವಿವರವನ್ನು ತಾಲೀಮು ಮಾಡಿಯೇ ಬಂದ ತಂಡವಿದು ! ದಸ್ತೂರನ ಉತ್ತರದ ಹಾದಿ ಕಾಯುತ್ತಿದ್ದಾಗ ಕೆಲಹೊತ್ತಿನ ಮೊದಲಷ್ಟೇ ಪಟೇಲನ ಕೈಯಿಂದ ಜಾರಿ ಬಿದ್ದ ಫೊಟೋಗಳಲ್ಲಿಯ ಒಂದರಲ್ಲಿ ಹೈದರಾಬಾದ್ ವಿಮಾನ-ನಿಲ್ದಾಣದಲ್ಲಿ ತನ್ನನ್ನು ಕಂಡು ಮಾತನಾಡಿಸಿದ ಕಪ್ಪು ಕನ್ನಡಕ-ಧಾರಿಯಾದ ರೆಡ್ಡಿಯನ್ನು ಕಂಡಂತಿತ್ತು ಎಂಬುದು ಈಗ ಅವನ ನೆನಪಿಗೆ ಬಂದು ದಸ್ತೂರನನ್ನು ಇದಿರಿಸಿದ ಕಣ್ಣುಗಳು ದಿಗಿಲಿನಿಂದ ಮತ್ತೆ ದೊಡ್ಡವಾಗುತ್ತಿರುವಾಗ ದಸ್ತೂರ್ ಅಪ್ಪಣೆ ಮಾಡಿದ :

“Sign that report, Mr. Nagnath. Here is the pen.”
ದಸ್ತೂರನಿತ್ತ ಆಜ್ಞೆ ನಾಗಪ್ಪ ಈ ಮೊದಲೇ ಊಹಿಸಿಕೊಂಡದ್ದೇ ಆಗಿತ್ತಾದರೂ ನಿಷ್ಠುರವಾದ ಧ್ವನಿಯಲ್ಲಿ, ಖಚಿತವಾದ ಮಾತುಗಳಲ್ಲಿ ಅದು ಮೂಡಿಬಂದಾಗ ನಾಗಪ್ಪನ ಮೇಲೆ ಎಷ್ಟೊಂದು ಬಲವುಳ್ಳ ಆಘಾತ ಮಾಡಿತ್ತೆಂದರೆ ಕೈಯಲ್ಲಿ ಹಿಡಿದ ಆ ರಿಪೋರ್ಟನ್ನು ದಸ್ತೂರನ ಮೈಮೇಲೆ ಬಿಸಾಕಿದವನೇ ಧಡಕ್ಕನೆ ಕೂತಲ್ಲಿಂದ ಎದ್ದೇ ನಿಂತ :

“No, Mr. Dastur. Let us not act an is films. ಆ ರಿಪೋರ್ಟಿನ ಮೇಲೆ ನಾನು ಸಹಿ ಮಾಡಲಾರೆ. ಜಗತ್ತಿನಲ್ಲಿಯ ಎಲ್ಲ ಐಶ್ವರ್ಯವನ್ನು ತಂದು ನನ್ನ ಮುಂದೆ ರಾಶಿ ಹಾಕಿದರೂ ಶಕ್ಯವಿಲ್ಲ. ನಾ ಪಡೆದ ತಾಂತ್ರಿಕ ಶಿಕ್ಷಣ ಅಷ್ಟೊಂದು ಧಡ್ಡತನದ ರಿಪೋರ್ಟಿನ ಮೇಲೆ ಸಹಿಮಾಡಲು ಸರ್ವಥಾ ಬಿಡಲಾರದು. ನೀವು ಹೀಗೆ ಬೆದರಿಕೆ ಹಾಕುವಾಗಲಂತೂ ಅಲ್ಲ, If you are amenable for rational discussion, I am prepared to discuss other methods of saving Phiroz….”

“Stop that nonsense. I have heard enough of it….  ಮೊದಲು ನಿನ್ನನ್ನು ಉಳಿಸಿಕೋ. ಬೋಮೀ, ಒಂದು ಗಂಟೆಗೆ ಊಟದ ಅಪಾಂಯ್ಟಮೆಂಟ್ ಇದೆ ಎಂಬುದನ್ನು ಮರೆಯಬೇಡ.” ಫಿರೋಜ್ ಈ ರೀತಿ ಗುಡುಗಿದ್ದನ್ನು ಬಹಳ ದಿನಗಳಿಂದ ಕೇಳಿರದ ನಾಗಪ್ಪನ ಮೈಮೇಲೆ ಮುಳ್ಳು ನಿಂತವು. ನಿರ್ವಿಣ್ಣನಾಗಿ ಮತ್ತೆ ಕೂತ.

ದಸ್ತೂರ್ : ಆ ರಿಪೋರ್ಟಿನ ಮೇಲೆ ಸಹಿ ಮಾಡುವದು ಧಡ್ಡತನವೆಂದು ಯಾಕೆ ತಿಳಿಯುತ್ತೀರಿ ?”

ನಾಗಪ್ಪ : “ಅಲ್ಲದೇ ಏನು ಮತ್ತೆ ! ಯಾಕೆ ಎಂಬುದು ಫಿರೋಜನಿಗೂ ಗೊತ್ತಿಲ್ಲದೇ ಇಲ್ಲ. ಕೆಮಿಕಲ್ ೩೮೭_ಇದು ಅನ್‌ಸೆಚ್ಯುರೇಟೆಡ್ ಆಸಿಡ್. ನೀವು ಸಹಿ ಮಾಡಲು ಆದೇಶವಿತ್ತ ರಿಪೋರ್ಟಿನಲ್ಲಿ ಸೂಚಿಸಲ್ಪಟ್ಟ ಸರಕಿನ ಉತ್ಪಾದನೆಗೆ ಎಳ್ಳಷ್ಟೂ ಕೆಲಸಕ್ಕೆ ಬಾರದ್ದು : ಪೆರೋಕ್ಸೈಡ್ ಕೆಟೆಲಿಸ್ಟ್‌ದ ಉತ್ಪಾದನೆಗೆ ಬೇಕಾಗುವ ಥಲೇಟ್ ಪ್ಲಾಸ್ಟೀಸೈಝರಿನಲ್ಲಿ ಇದರ ಉಪಯೋಗ ಶಕ್ಯವಿಲ್ಲ. ಬೆಂಕಿ ಬಿದ್ದ ವಿಭಾಗಕ್ಕೂ ಇದಕ್ಕೂ ಇಂಥ ಬಾದರಾಯಣ ಸಂಬಂಧವನ್ನಾದರೂ ಜೋಡಿಸಿ, ಆ ಬೆಂಕಿಯಲ್ಲಿ ಈ ಮಾಲು ಸುಟ್ಟುಹೋಗಿದೆಯೆಂದು ತೋರಿಸಲು ಈ ರಿಪೋರ್ಟಿನ ಆಧಾರ ಪಡೆಯುವ ಹುನ್ನಾರವನ್ನು ಕಲ್ಪಿಸಿದ ತಲೆ ಬಹಳ ಧೂರ್ತತನದ್ದು. ಆದರೆ ಕೆಮಿಸ್ಟ್ರಿಯ ಗಂಧ-ಗಾಳಿಯಿಲ್ಲದ್ದು. ೩೮೭ ಆಮದು ಆದದ್ದು ಈ ಕೆಲಸಕ್ಕಾಗಿ ಅಲ್ಲವೇ ಅಲ್ಲ. ಅದರ ಉಪಯೋಗ ಪೋಲೀ‌ಎಸ್ಟರ್ ಉತ್ಪಾದನೆಯ ಮೇಲೆ ನಾನು ಹಾಗೂ ಇನ್ನಿಬ್ಬರು ಸಂಗಡಿಗರು ಕೂಡಿ ಸಿದ್ಧಗೊಳಿಸಿದ_ನಾನು ತುಂಬ ಅಭಿಮಾನಪಟ್ಟುಕೊಂಡ_ಪ್ರಾಜೆಕ್ಟ್-ರಿಪೋರ್ಟಿನಲ್ಲಿ ವಿವರಿಸಲ್ಪಟ್ಟಿದೆ. ಅದರ ಪ್ರತಿ ಫಿರೋಜನ ಹತ್ತಿರ ಇದೆಯೋ ಇಲ್ಲವೋ ನಾನರಿಯೆ. ಇದ್ದಿದ್ದರೆ ಹೊಚ್ಚಹೊಸ ಸರಕಿನ ಉತ್ಪಾದನೆಯನ್ನು ಸಮರ್ಥಿಸುವ ಪ್ರಾಜೆಕ್ಟ್-ರಿಪೋರ್ಟ್ ಹೇಗೆ ಇರುತ್ತದೆ_ಇರಬೇಕು ಎನ್ನುವುದಾದರೂ ಗೊತ್ತಾಗುತ್ತಿತ್ತು. ನೀವು ಈಗ ತೋರಿಸಿದ ರಿಪೋರ್ಟಿನ ಧಡ್ಡತನಕ್ಕೆ ನನ್ನ ಹೆಸರಿನ ಶಿಕ್ಕಾ ಬೀಳುವುದು ಶಕ್ಯವೇ ಇಲ್ಲ, ಮಿಸ್ಟರ್ ದಸ್ತೂರ್…..ಇಷ್ಟೇ, ನನ್ನ ಈ ಪೋಲೀ‌ಎಸ್ಟರ್ ಪ್ರಾಜೆಕ್ಟ್ ಬೋರ್ಡ್ ಆಫ್ ಡೈರೆಕ್ಟರ್ಸರಿಂದ ಸ್ವೀಕೃತವಾಗಿಯೂ ಅದು ಈವರೆಗೂ ಕಾರ್ಯರೂಪಕ್ಕೇಕೆ ಇಳಿಯಲಿಲ್ಲ ಎನ್ನುವುದರ ಕಾರಣ ಗೊತ್ತಾದದ್ದು ಮಾತ್ರ ಈಗಲೇ ಎನ್ನುವುದನ್ನು ಒಪ್ಪಿಕೊಳ್ಳಬೇಕು….” ನಾಗಪ್ಪನ ಕೊನೆಯ ಮಾತಿನಲ್ಲಿ ಸೇರಿಕೊಂಡ ವ್ಯಂಗ್ಯದಲ್ಲಿ ಅವನು ಬಯಸಿದ ಮೊನಚಿಗಿಂತ ದಸ್ತೂರ್ ಕೆಲಹೊತ್ತಿನ ಮೊದಲಷ್ಟೇ ಮಡಿದ ಸೂಚನೆ ಹುಟ್ಟಿಸಿದ ನಡುಕವೇ ದೊಡ್ಡದಾಗಿತ್ತು.

ನಾಗಪ್ಪ ಹೇಳಿದ ಯಾವ ಮಾತೂ ತನಗೆ ಅನಿರೀಕ್ಷಿತವಾದದ್ದಲ್ಲ ಎಂಬ ಧಾಟಿಯಲ್ಲಿ ದಸ್ತೂರ್ ಹೇಳಿದ :

“ಇದೆಲ್ಲದರ ಬಗ್ಗೆ ನಾವು ವಿಚಾರಮಾಡಲೇ ಇಲ್ಲ, ಮಿಸ್ಟರ್ ನಾಗಾನಾಥ್. ಮೊದಲನೆಯದಾಗಿ, ಈಗ ನೀವು ಸಹಿ ಮಾಡಲಿದ್ದ ರಿಪೋರ್ಟು_ಪೂರಾ ಕೇಳಿಕೊಳ್ಳುವ ಮೊದಲೇ ಹಾಗೆ ಸಿಟ್ಟಿಗೇಳಬೇಡಿ_ನೀವು ಸದ್ಯ ಬರೆದದ್ದೆಂದು ನಾವು ಹೇಳಲೇ ಇಲ್ಲ. ಎಂಟು ವರ್ಷಗಳ ಹಿಂದೆ ಬರೆದದ್ದೆಂದು ತೋರಿಸಿದ್ದೇವೆ. ರಿಪೋರ್ಟಿನ ತಾರೀಖನ್ನು ಈ ರೀತಿ ಬದಲಿಸಿದ್ದು ನಿಮ್ಮ ಲಕ್ಷ್ಯಕ್ಕೆ ಬಂದಿರಲಿಕ್ಕಿಲ್ಲ : ಪ್ರಾಜೆಕ್ಟ್-ರಿಪೋರ್ಟು ಬರೆಯುವ ಅನುಭವ ನಿಮಗೆ ಆಗ ಇದ್ದಿದ್ದರೆ ಆಶ್ಚರ್ಯವಲ್ಲ. ಮೇಲಾಗಿ ನೀವು ಈಗ ಉಲ್ಲೇಖಿಸಿದ ನಿಮ್ಮ ಇನ್ನೊಂದು ರಿಪೋರ್ಟಿಗಿಂತ ಇದು ಬಹಳ ಮುಂಚಿನದೆಂದು ತೋರಿಸಿದ ಹಾಗೂ ಆಗುತ್ತದೆ. ಎರಡನೆಯದಾಗಿ, ಈ ರಿಪೋರ್ಟಿನ ಉದ್ದೇಶ ನೀವು ತಿಳಿದಷ್ಟು ಹಿರಿದಾದ್ದಲ್ಲ_ತೀರ ಪರಿಮಿತವಾದದ್ದು ಹಾಗೂ ತಾತ್ಕಾಲಿಕವಾದದ್ದು. ರಸಾಯನ-ವಿಜ್ಞಾನಗಳ ಸಮಾಧಾನಕ್ಕಾಗಿ ಬರೆದದ್ದಂತೂ ಅಲ್ಲವೇ ಅಲ್ಲ. ಈಗ ಉದ್ಭವಿಸಿದ್ದ ಪೇಚಿಗೆ ಮೂಲಕಾರಣವಾದ ಆಡಿಟ್-ರಿಪೋರ್ಟು ಎತ್ತಿದ ಕೆಲವು ಆಕ್ಷೇಪಣೆಗಳನ್ನು ದೂರಮಾಡುವುದರ ಸಲುವಾಗಿ ಅಷ್ಟೇ. ಬರೇ ಆಡಿಟರರ ಸಮಾಧಾನಕ್ಕಾಗಿ. ಆಶ್ಚರ್ಯಪಡಬೇಡಿ : ರಿಪೋರ್ಟಿನ ಕಲ್ಪನೆಯನ್ನಷ್ಟೇ ಅಲ್ಲ. ಅದರ ಒಕ್ಕಣೆಯನ್ನು ಕೂಡ ಸೂಚಿಸಿದ್ದೇ ಅವರು. ಆಕ್ಷೇಪ ಎತ್ತಿದವರದೇ ಹರಕತ್ತು ಇಲ್ಲದಿದ್ದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ? ರಿಪೋರ್ಟಿನ ಮೇಲೆ ನಿಮ್ಮ ಸಹಿ ಇದ್ದರೆ ಒಳ್ಳೆಯದೆಂದು ಸಲಹೆ ಇತ್ತವರೂ ಅವರೇ. ಮೂರನೆಯದಾಗಿ_ಇದನ್ನು ಹೇಳುತ್ತಿದ್ದದ್ದು ಬರೀ ನಿಮ್ಮ ಸಮಾಧಾನಕ್ಕಾಗಿ : ೩೮೭,೩೮೯_ಇದೆಲ್ಲ ನಿರ್ಧಿಷ್ಟ ರಾಸಾಯನಿಕಗಳ ಹೆಸರುಗಳೇನಲ್ಲವಲ್ಲ ? ಕಂಪನಿಯವರೇ ತಮ್ಮ ಉತ್ಪಾದನೆಗೆ ಸಂಬಂಧಪಟ್ಟ ಗೌಪ್ಯವನ್ನು ಕಾಯ್ದುಕೊಳ್ಳಲು ನಿರ್ಮಿಸಿಕೊಂಡ ಸಂಕೇತಗಳು ತಾನೇ ? ಇವು ಆಗೀಗ ಬದಲಾಗಬಾರದೆಂಬ ನಿಯಮವೇನಾದರೂ ಇದೆಯೇ ? ಇದ್ದರೂ ಯಾರಾದರೂ ಕೈತಪ್ಪಿ ಒಂದರ ಬದಲು…..”

ದಸ್ತೂರನಿಗೆ ಏನು ಸೂಚಿಸಬೇಕಾಗಿದೆ ಎಂಬುದನ್ನು ಊಹಿಸಿಯೇ ದಿಗಿಲುಗೊಂಡ ನಾಗಪ್ಪನ ಬಾಯಿಯಿಂದ ಹೊರಟ_“ಒಥಿ ಉoಜ” ಎಂಬ ಉದ್ಗಾರ ಆಪೇಕ್ಷೆಯನ್ನು ಮೀರಿ ದೊಡ್ಡದಾದಾಗ ದಸ್ತೂರನ ವಾಕ್ಯ ಅರ್ಧಕ್ಕೇ ಉಳಿಯಿತು. ಕರುಳಲ್ಲಿ ಸೇರಿಕೊಂಡ ನಡುಕವನ್ನು ಹೇಗೆ ತಡೆಯುವದೆಂದು ಗೊತ್ತಾಗದೇ ತಬ್ಬಿಬ್ಬಾಗಿ ದಸ್ತೂರನ ಕಡೆಗೇ ನೋಡುತ್ತಿದ್ದ ನಾಗಪ್ಪನ ಕಣ್ಣು ತಿರುಗಿ ಅಗಲವಾಗಹತ್ತಿದವು. ತನಿಖೆಗೆ ಈಗ ಹೊಸತೇ ಒಂದು ತಿರುವು ಕೊಡುವವನ ಹಾಗೆ ದಸ್ತೂರ್ ಫೈಲ್ ತೊಡೆಯ ಮೇಲೆ ತೆಗೆದುಕೊಂಡ. ಬಿಚ್ಚಿದ. ಒಮ್ಮೆ ಅದನ್ನು ನೋಡಿದಂತೆ ಮಾಡಿ ಮತ್ತೆ ಮುಚ್ಚಿದ. ಆಮೇಲೆ ಮಹದ್ಗಾಂಭೀರ್ಯದಲ್ಲಿ ರಾಗವೆಳೆದ :

undefined “Look here, young man, I can easily appreciate your predicament. But as a student of human psychology let me tell you a few things….” ಹೀಗೆ ಹೇಳಿ ಕಿಸೆಯೊಳಗಿಂದ ತನ್ನ ಹೆಸರಿನ ವಿಸಿಟಿಂಗ್-ಕಾರ್ಡ್ ಒಂದನ್ನು ನಾಗಪ್ಪನ ಕೈಗೆ ಕೊಡುತ್ತ_ Not to impress upon you , but just to introduce myself properly.. ನಾನು M.A_ ಇಂಗ್ಲೆಂಡಿನ ‘ಸ್ಕೂಲ್-ಆಫ್-ಸೋಶಿಯಾಲಜಿ’ಯಿಂದ_ಇಂಡಸ್ಟ್ರಿಯಲ್ ಸಾಯ್ಕಾಲಜಿ ನನ್ನ ಮುಖ್ಯ ವಿಷಯ. ಮುಂದೆ ಹಾರ್ವಾರ್ಡಿನಿಂದ ಬಿಸಿನೆಸ್-ಮ್ಯಾನೇಜ್‌ಮೆಂಟಿನಲ್ಲಿ ಪೀ.ಎಚ್.ಡಿ, ಈವರೆಗಿನ ನನ್ನ ಮಾತುಕತೆಗೆ ನಾನು ಡಾಕ್ಟರ್ ದಸ್ತೂರ್ ಆಗಿರುವದು ಮುಖ್ಯ ಅಲ್ಲವಾಗಿದ್ದರಿಂದ ಬರೇ ಮಿಸ್ಟರ್ ದಸ್ತೂರ್ ಎಂದು ಪರಿಚಯ ಮಾಡಲು ಫಿರೋಜನಿಗೆ ನಾನೇ ತಿಳಿಸಿದ್ದೆ. By the way, your MD and I are contemporaries. ಇಂಗ್ಲೆಂಡಿನಲ್ಲಿ ಕಲವು ವರ್ಷ ಜೊತೆಗಿದ್ದೆವು ಕೂಡ. ನನಗೀಗ ವಯಸ್ಸು ೫೫. ಕಾಲು ಶತಮಾನಕ್ಕೂ ಮೀರಿ ವಿವಿಧ ದುಡಿಮೆಯ ಕ್ಷೇತ್ರಗಳಲ್ಲಿ ಅನುಭವ. ನಾನು ನಿಮ್ಮ ‘ಬಾಯೋ-ಡೇಟಾ’ ನೋಡಿದ್ದೇನೆ. ಮಿಸ್ಟರ್ ನಾಗಾನಾಥ್. ನೋಡಿ ಬಹಳ ಬಹಳ ಸಂತೋಷಪಟ್ಟಿದ್ದೇನೆ….(ನಾಗಪ್ಪ : ಬಹಳ ಬಹಳ ಸುಳ್ಳಾಡುತ್ತಾನೆ ಈ ಭೆಂಛೋದ್ !) ಯಾರೂ ಅಭಿಮಾನಪಡುವ ಹಾಗಿದೆ ಅದು_ತಲೆದೂಗುವ ಹಾಗಿದೆ. (ನಾ : ನೀನೂ ಈ ನಿನ್ನ ಇಬ್ಬರು ಧೂರ್ತ ಸಂಗಡಿಗರೂ ಈಗ ಬಿಯರಿನ ಭಾರದಿಂದ ತೂಗುತ್ತಿದ್ದ ಹಾಗೆಯೆ ?) ಆದರೆ ಈ ದುಷ್ಟ ಜಗತ್ತಿನಲ್ಲಿ ಇದೆಲ್ಲ ಯಾವ ಕೆಲಸಕ್ಕೂ ಬಾರದ್ದು. ಅಗಾಧವಾದ ವಿದ್ವತ್ತು, ಪಾಂಡಿತ್ಯ,ನಮ್ಮ ನಮ್ಮ ಪ್ರಾವೀಣ್ಯದ ಕ್ಷೇತ್ರಗಳಲ್ಲಿಯ ಸಾಧನೆ ಇವಷ್ಟೇ ಇದ್ದರೆ ಸಾಲದು. (ನಾ : ಉದ್ದುದ್ದ ಮೂಗುಗಳೂ, ದೊಡ್ಡ ದೊಡ್ಡ ಕುಂಡೆಗಳೂ, ದಪ್ಪದಪ್ಪ ತೊಗಲೂ ಇರಬೇಕು. ತಪ್ಪಿದರೆ ಇಂಗ್ಲೆಂಡಿನಿಂದಲೋ ಅಥವಾ ಅಮೇರಿಕೆಯಿಂದಲೋ ಸಾಧ್ಯವಾದರೆ ಎರಡೂ ಕಡೆಗಳಿಂದ ಆಮದು ಮಾಡಿಕೊಂಡ ಬಿರುದಾವಳಿಗಳಂತೂ ಬೇಕೇಬೇಕು. ಹಾಗೂ ಗಲಗಲ ಜೋತಾಡುತ್ತ ಒಣಗಿದ ಗೊರಟುಗಳ ಹಾಗೆ ಶೋಭಿಸುವ ಇವುಗಳನ್ನು ಬೇಕಾದಾಗ ಬೇಕಾದಷ್ಟೇ, ಗಾಳಿಗೆ ತೂರಿ ತೋರಿಸಬೇಕು ! ಇಲ್ಲಿ ನಾವು ವ್ಯವಹರಿಸಬೇಕಾಗಿ ಬರುವಂಥ ಜನ ಒಂದೆರಡು ತರಹದವರೇ !) ಅವರ ಸ್ವಭಾವಗಳಲ್ಲಿ ಎಷ್ಟು ವಿಧ! ಬೆಳವಣಿಗೆಯ ಮಟ್ಟಗಳಲ್ಲಿ, ಕಾರ್ಯಾಸಕ್ತಿಯ ಪ್ರೇರಣೆಗಳಲ್ಲಿ ಎಷ್ಟು ಪರಿ! (ನಾ : ಹೀಗೆ ಸತತವಾಗಿ ಕೊರೆಯುವ ಈ ಒಂದೂ ಮಕ್ಕಳ ಪಿರಿಪಿರಿಯಲ್ಲೇ ಎಷ್ಟೊಂದು ಪರಿ !) ನಾನು ಇಲ್ಲಿ ಬಂದಾಗಿನಿಂದ ಕೂಲಂಕುಷವಾಗಿ ಅವಲೋಕಿಸಿದ್ದೇನೆ. (ನಾ: ಗಿಡುಗನಜಾತಿಯವನಾದದ್ದು ಸಾರ್ಥಕವಾಯಿತು) ನಿಮ್ಮ ವ್ಯಕ್ತಿತ್ವದ ಅನೇಕ ಸ್ತರಗಳನ್ನು ಸ್ಪಷ್ಟವಾಗಿ ಗುರುತಿಸಿದ್ದೇನೆ _ ಆದರೆ ಹಲವು ಮುಖಗಳನ್ನು . (ನಾ :ಈ ವಕ್ರತುಂಡ ಮಹಾಕಾಯನಿಗೆ ಆರತಿಯ ಎತ್ತಿರೇ !)…….ಮೊದಲನೆಯದಾಗಿ ನಿಮ್ಮಲ್ಲಿಯ ಕ್ರಿಯೇಟಿವ್ ಆರ್ಟಿಸ್ಟ್_ ನೀವು ಪ್ರಖ್ಯಾತ ಲೇಖಕರೂ ಅಂತೆ . (ನಾ : You are well informed!) ಕ್ರಿಯೇಟಿವ್‌ಇಮ್ಯಾಜಿನೇಷನ್‌ದ ಮುಖಾಂತರ ಇನ್ನೊಬ್ಬರ ಭಾವನೆಗಳನ್ನು ಅನ್ನಿಸಿಕೆಗಳನ್ನು ತಟ್ಟನೆ ಗ್ರಹಿಸಬಲ್ಲಿರಿ ಅರ್ಥ ಮಾಡಿಕೊಳ್ಳಬಲ್ಲಿರಿ ……(ನಾ : Thanks for the compliments…..!) ಆದರೆ ಇದರ ಉಪಯೋಗ ನಿಮಗೆ ನಿಮ್ಮ ಸೃಷ್ಟಿಕಾರ್ಯದಲ್ಲಿ ಆಗುತ್ತಿರಬಹುದೇ ಹೊರತು ನಿತ್ಯ ವ್ಯವಹಾರದಲ್ಲಿ ಅಲ್ಲ ಎನ್ನುವುದನ್ನು ನೀವಿನ್ನೂ ಕಂಡುಕೊಂಡಂತಿಲ್ಲ. More over it makes you over -sensitive and sentimental, which you are. (ನಾ : Shut up ! !) ಎರಡನೆಯದಾಗಿ, ಮೂಲಭೂತವಾದ ಕೆಲವು ಮೌಲ್ಯಗಳಲ್ಲಿ ನಿಮಗೆ ನಂಬಿಕೆ ಇದ್ದಂತಿದೆ. ಅದರ ಜೊತೆಗೇ, ಉಳಿದವರಿಗೂ ಅವುಗಳಲ್ಲಿ ನಂಬಿಕೆ ಇದೆ ಎಂಬ ವಿಶ್ವಾಸ, ಇರಲೇಬೇಕೆಂಬ ಹಟ. ನೀವು ಮೊದಲಿನಿಂದಲೂ ನಮ್ಮೊಡನೆ ನಡೆದುಕೊಂಡ ರೀತಿ ನೋಡಿದರೆ_ ಸತ್ಯ ಹೇಗಾದರೂ ನನ್ನ ಬದಿಗಿದೆ. ಕೊನೆಯಲ್ಲಿ ಗೆಲ್ಲುವದು ಆ ಸತ್ಯವೊಂದೇ’ ಎಂಬ ಪುರಾಣ-ಕಲ್ಪನೆಗೆ ಜೋತುಬಿದ್ದವರ ಹಾಗೆ ತೋರುತ್ತೀರಿ. ವಾಸ್ತವ-ಸಂಗತಿಗಳನ್ನು ಪ್ರಸ್ತುತಗೊಳಿಸಿದರೆ ಸಾಕು_ಸತ್ಯ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತದೆ : ಬೆಳಕಿನಷ್ಟು ಸ್ಪಷ್ಟವಾಗುತ್ತ ನೋಡುವವರ ಕಣ್ಣು ತೆರೆಯಿಸುತ್ತದೆ ಎಂಬ ಮೂಢನಂಬಿಕೆಯ ಆಧಾರದ ಮೇಲೆ, ನೀವು ಅನ್ಯಾಯ ಎಂದು ತಿಳಕೊಂಡದ್ದರ ವಿರುದ್ಧ ವೇಳೆ ಅವೇಳೆಯಲ್ಲಿ ಹೀಗೆ ಸಿಡಿದೇಳುತ್ತೀರಿ : ತಾನೊಬ್ಬ ದೊಡ್ಡ ಬಂಡಾಯಗಾರನೆಂಬ ಸುಳ್ಳು ಜಂಭದಲ್ಲಿ ಓಲಾಡುತ್ತೀರಿ. ಬೆಳಕಿನಷ್ಟು ಸ್ಪಷ್ಟವಾದದ್ದಕ್ಕೆ ಕಣ್ಣು ತೆರೆಯಿಸುವ ಬಲವಿರಬಹುದು. ಮಿಸ್ಟರ್ ನಾಗನಾಥ್. ಆದರೆ ತೆರೆದ ಕಣ್ಣಿನಲ್ಲಿ ಮೂಡಿದ ನೋಟ ಮಾತ್ರ ಆಸಕ್ತಿಬದ್ಧವಾದದ್ದು ; ಅದು ನೋಡುವವನ ಸ್ವಾರ್ಥಕ್ಕೆ ಕಟ್ಟಿಬಿದ್ದದ್ದು ಎನ್ನುವುದರ ಕಲ್ಪನೆಯೂ ನಿಮಗಿಲ್ಲ. I have a great regard for the artist in you, Mr. Nagnath. But in matters that concernus the most as professionals, you are too naive and immature. Pardon me if I am blunt. The professional world is not a world of truth and values_not in any case of your imagination_but a world of self interests. Of course, there are the organisational objectives and the organisational structure that evoclves in the process of interlocking the individuals working for these objectives into a network of interpersonal relations and all that bullshit. Sorry for being so coarse. But I am sure you will agree with me when I say that the prime mover of the organisation_the motiveforce working behind the facade of its evolving structure and all that four-letter jargon_is theambition of the individuals to climb its tall ladder…. ನಾನು ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎನ್ನುವುದು ಗೊತ್ತಾಗುವುದಿಲ್ಲ ಅಲ್ಲವೇ ?_You look so cynical and bored.. ಆದರೆ ನೀವೂ ಈ ಮೇಲೇರುವ ದುಷ್ಟ ಪಂದ್ಯಾಟಕ್ಕೆ ಹೊರತಾದವರಲ್ಲ ಎಂಬುದನ್ನು ತೋರಿಸಿಕೊಟ್ಟಾಗ ನಿಮ್ಮ ಬೋರ್ಡಮ್ ಇದ್ದಕ್ಕಿದ್ದಂತೆ ಹಾರಿಹೋಗುತ್ತದೆ_ಕಾಳಜಿ ಮಾಡಬೇಡಿ. ಆದರೆ ಇಷ್ಟೇ. ನಿಮ್ಮ ಮಹತ್ವಾಕಾಂಕ್ಷೆಯನ್ನು ಸಾಧಿಸಲು ನೀವು ಆಯ್ದುಕೊಂಡ ಉಪಾಯಗಳು ಮಾತ್ರ ತೀರಾ ಭೋಳೇತನದವು_ಧಡ್ಡತನದವು. ಈಗ ನಡೆದದ್ದಕ್ಕೆಲ್ಲ ಮೂಲಕಾರಣ ಕೂಡ ಈ ಧಡ್ದತನದೇ. ಮೇಲೇರುವ ಹೆಬ್ಬಯಕೆ ಇದ್ದರಷ್ಟೇ ಸಲಾದು. ಮಿಸ್ಟರ್ ನಾಗನಾಥ್. ಬಯಕೆಯ ಜೊತೆ ಯೋಗ್ಯತೆ ಇದ್ದರೂ ಸಾಲದು. ಏಣಿ ಹತ್ತುವ ಚತುರೋಪಾಯಗಳೂ ಗೊತ್ತಿರಬೇಕು…..and that requires a political mind which you don’t have. Not that you are less ambitious but that….Please don’t try to interrupt me….  ನೇರವಾಗಿ ಮುದ್ದೆಗೇ ಬಂದುಬಿಡುತ್ತೇನೆ….ಇಷ್ಟು ದೊಡ್ಡ ಪೀಠಿಕೆ ಯಾಕೆ ಹಾಕಿದೆನೆಂದರೆ, ನೀವು ಮಾಡಿಯೇ ಇರದ ಗುನ್ನೆಯಲ್ಲಿ ನಿಮ್ಮನ್ನು ಸಿಕ್ಕಿಸುವ ಬೇತು ನಮ್ಮದಲ್ಲವೇ ಅಲ್ಲ ಎಂಬ ಭರವಸೆ ಈಯುವುದರ ಜೊತೆಗೆ ಗುನ್ನೆಯನ್ನು ನೋಡುವುದರಲ್ಲೇ ನಮ್ಮಿಬ್ಬರಲ್ಲಿರಬಹುದಾದ ದೃಷ್ಟಿ ಭೇದವನ್ನು ಸ್ಪಷ್ಟಪಡಿಸಲು. ಈಗ_ನಮ್ಮ ಲಕ್ಷ್ಯಕ್ಕೆ ಬಂದಿರುವ ಸಂಗತಿಗಳು ಹಾಗೂ ಅವುಗಳ ಆಧಾರದ ಮೇಲೆ ನಿಮ್ಮ ಒಟ್ಟೂ ವ್ಯಕ್ತಿತ್ವದ ಬಗ್ಗೆ ನಾವು ಕಟ್ಟಿದ ಚಿತ್ರವನ್ನು ಈಗ ನಿಮ್ಮ ಕಣ್ಣೆದುರಿಗೆ ಹಿಡಿದೆನೆಂದರೆ ನಿಮಗೆ ತಾನಾಗಿಯೇ ಗೊತ್ತಾಗಿಬಿಡುತ್ತದೆ : ನಾವು ಹೇಳಿದ ರಿಪೋರ್ಟಿನ ಮೇಲೆ ನೀವು ಸಹಿ ಮಾಡೆಯೇ ಮಾಡುತ್ತೀರಿ ಎನ್ನುವುದರಲ್ಲಿ ನಮಗಿಷ್ಟೊಂದು ವಿಶ್ವಾಸ ಯಾಕೆ ಎನ್ನುವುದು. ನಮಗೆ ಭರವಸೆ ಇದ್ದದ್ದು ನೀವು ಸಹಿ ಮಾಡುವುದರಲ್ಲಷ್ಟೇ ಅಲ್ಲ ಮತ್ತೆ. ಸಹಿಯ ತಾರೀಖನ್ನು ಕೂಡ ನಾವು ಹೇಳಿದ ಹಾಗೆ ತೋರಿಸುತ್ತೀರಿ ಎನ್ನುವುದರಲ್ಲೂ. ಯಾಕೆಂದರೆ, ಈ ಚಿತ್ರ ನೋಡಿದ ಕೂಡಲೇ ನೀವಾಗಿಯೇ ಒಪ್ಪಿಕೊಂಡುಬಿಡುತ್ತೀರಿ : ‘ಹೌದು, ನಡೆದದ್ದಕ್ಕೆಲ್ಲ ನಾನೇ ಜವಾಬ್ದಾರನು’ ಎಂದು. ಆಗ_ಈ ಹೊಸ ಜಗತ್ತಿನಲ್ಲಿಯ ಸತ್ಯದ ಹೊಸ ವ್ಯಾಖ್ಯೆಯೇನೆಂಬುದೂ ಗೊತ್ತಾದೀತು : ‘ವಿಸಂಗತಿ ಇಲ್ಲದ್ದು !’ ನೀವು ಕಲ್ಪಿಸಿಕೊಂಡ ಹಾಗೆ, ವಾಸ್ತವ ಸಂಗತಿಗಳ ಅಧಾರದ ಮೇಲೆ ಸತ್ಯ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳುವುದಿಲ್ಲ. ಸಿದ್ಧಪಡಿಸಿದ ಚಿತ್ರದ ಮುಖಾಂತರ ಪ್ರಕಟವಾಗುವ ಸತ್ಯ ತನ್ನನ್ನು ಕಟ್ಟಿದ ವಾಸ್ತವ ಸಂಗತಿಗಳಿಗೇ ಹೊಸ ಅರ್ಥ ತಂದುಕೊಡುತ್ತದೆ. ಕೆಲಿಡೋಸ್ಕೋಪಿನ ನಳಿಗೆಯಲ್ಲಿ ಬಿಡಿಬಿಡಿಯಾಗಿ ಗಿಲಿಗಿಲಿಸುವ ಗಾಜಿನ ತುಂಡುಗಳಿಗೆ ಯಾವ ಅರ್ಥವಿದೆ ? ಆದರೂ ನಳಿಗೆಗೆ ತಗಲಿದ ಆಕಸ್ಮಿಕ ಆಘಾತ ಹುಟ್ಟಿಸಿದ ಆಕೃತಿಗೆ ನೋಡುವ ಕಣ್ಣನ್ನು ಸೆರೆಹಿಡಿದು ನಿಲ್ಲಿಸುವ ಬಲ ಬಂದದ್ದು ಪ್ರತ್ಯೇಕವಾಗಿ ನಿರರ್ಥಕವಾದ ಮತ್ತು ನಿಷ್ಪ್ರಯೋಜಕವಾದ ಗಾಜಿನ ತುಂಡುಗಳೇ ಒಂದಕ್ಕೊಂದು ಹೊಂದಿಕೊಂಡಾಗ ಹುಟ್ಟುವ ಚಿತ್ರದ ಸುಸಂಗತಿಯ ಮೂಲಕ_ಅದರ ಅನನ್ಯ ಸಾಂಗತ್ಯದ ಮೂಲಕ. ನಳಿಗೆಯನ್ನು ಇನ್ನೊಮ್ಮೆ ಅಲುಗಾಡಿಸಿದಾಗ ಹುಟ್ಟುವುದು ಇನ್ನೊಂದೇ ಆಕೃತಿ : ಹೊಚ್ಚ ಹೊಸ ದೃಷ್ಟಿಸಂಭ್ರಮ ! ಅದೇ ಗಾಜಿನ ತುಂಡುಗಳು : ಆದರೆ ಹೊಂದಿಕೊಂಡ ರೀತಿ ಬೇರೆ : ತೆರೆದುಕೊಂಡ ಕಾಣ್ಕೆ ಬೇರೆ. ಗಾಜಿನ ತುಂಡುಗಳಿಗೆ ವ್ಯಯಕ್ತಿಕವಾಗಿ ಮಹತ್ವ ಇಲ್ಲ; ಹೊಂದಾಣಿಕೆಗಿದೆ. ಭೌತಿಕ ಪ್ರಪಂಚದ ಕೆಲಿಡೋಸ್ಕೋಪಿನೊಳಗಿನ ಆಕೃತಿವಿನ್ಯಾಸಕ್ಕೆ ಕಾರಣವಾಗುವ ಕೈಯ ಅಲುಗಾಟ. ಕೂಡಿಬರುವ ಹೊಂದಾಣಿಕೆ ಆಕಸ್ಮಿಕವಾದರೆ ನಾನು ಆಗಿನಿಂದಲೂ ನಿರ್ದೇಶಿಸಲು ಪ್ರಯತ್ನಿಸುತ್ತಿದ್ದ ಮಾನವಪ್ರಪಂಚದ ಕೆಲಿಡೋಸ್ಕೋಪಿನಲ್ಲಿ ಸತ್ಯದ ಆವಿಷ್ಕಾರಕ್ಕೆ ಕಾರಣವಾಗುವ ಚಾಲನೆ, ಅದು ಕೂಡಿ ತರುವ ಹೊಂದಾಣಿಕೆ_ಇವು ಉದ್ದೇಶಪೂರ್ವಕವಾದವುಗಳು. ಇತಿಹಾಸದಂತಹ ಇತಿಹಾಸ ಪ್ರಕಟಿಸುವ ಸತ್ಯವೇನು ಚಿರಾಯುವಾದದ್ದು ಎಂದು ತಿಳಿಯುವಿರಾ ! ಅದೂ ಕೂಡ ನಡೆದುಹೋದ ಘಟನೆಗಳನ್ನು ಎತ್ತಿಕೊಳ್ಳುವ, ಎತ್ತಿತೋರಿಸುವ ಕೈಬಲವನ್ನೇ ಅವಲಂಬಿಸಿದ್ದಲ್ಲವೇ ? ಹಾಡೇಹಗಲಲ್ಲಿ ಕೊಲೆಯಾದವನು ಹುಟ್ಟಿಯೇ‌ಇರಲಿಲ್ಲವೆಂದು ಸಿದ್ಧಮಾಡಿ ತೋರಿಸುವಷ್ಟರ ಮಟ್ಟಿಗಿನ ಸಾಮರ್ಥ್ಯವುಳ್ಳ ಕೈಯಲ್ಲಿ ಸತ್ಯ ಎಂಥ ಗಟ್ಟಿತನದ ಲೋಹವೆಂದಾಗಬೇಡವೆ ! ರಾಜಕೀಯದ ಗುಟ್ಟೇ ಇಲ್ಲಿದೆ, ಮಿಸ್ಟರ್ ನಾಗನಾಥ್. ನೀವು ನಿಮ್ಮದೇ ಆದ ಪ್ರಪಂಚದಲ್ಲಿ ನಿಂತು ಪ್ರೇರೇಪಿಸುವ ಕೃತಿಗಳು ಬೇರೆಯೇ ಒಂದು ಜಗತ್ತಿನಲ್ಲಿಯ ಹಿತಾಸಕ್ತಿಗಳಿಗೆ ಧಕ್ಕೆ ತಂದವು ; ಚಿಟಿಜ and in the process you set into action a whole set of counter forces. ಈಗ ನೀವು ಅರಿತೋ ಅರಿಯದೆಯೋ ಇದಿರುಹಾಕಿಕೊಂಡದ್ದು ತುಂಬಾ ಬಲಾಢ್ಯವಾದ ತಂಡವನ್ನು_ ಬಲಪ್ರಯೋಗದಲ್ಲಿ ಅಸಾಮಾನ್ಯವಾದ ಅನುಭವವಿದ್ದವರನ್ನು. ಸ್ವಲ್ಪದರಲ್ಲಿ ಹೇಳುವುದಾದರೆ : ಇವರು ಸಿದ್ಧಮಾಡಿ ತೋರಿಸಲು ಹೊರಟದ್ದಿಷ್ಟು : ನೀವೇ ಆಗ ಎದೆ ತಟ್ಟಿ ಹೇಳಿದಹಾಗೆ ಕಾರಖಾನೆಯಲ್ಲಿಯೂ ಬೆಂಕಿ ಹತ್ತಿದ್ದಲ್ಲ_ಹಚ್ಚಿದ್ದು, ಅದನ್ನು ಹಚ್ಚಿದವರು ನೀವು….Please take it easy…. ಹಾಗೆ ಒಮ್ಮೆಲೇ ಉದ್ರೇಕಗೊಳ್ಳಬೇಡಿ. ನಾವೇನು ನಿಮ್ಮ ಮೇಲೆ ಇಲ್ಲದ ಸಲ್ಲದ ಆರೋಪ ಹೊರಿಸಲು ಹೊರಟಿಲ್ಲ. ಪುರಾವೆ ಒದಗಿಸುತ್ತೇವೆ. ಬೆಳಿಗ್ಗೆ ಬಂದದ್ದೇ, ಪಾರ್ಸಿಗಳ ನ್ಯಾಯ-ಬುದ್ದಿಯಲ್ಲಿ ನೀವಾಗಿಯೇ ಪ್ರಕಟಿಸಿದ ವಿಶ್ವಾಸವನ್ನು ಇಷ್ಟು ಬೇಗ ಕಳೆದುಕೊಳ್ಳಬೇಡಿ. ಮೊದಲು, ನಾನು ಈಗ ಹೇಳುವುದನ್ನು ಪೂರ್ತಿಯಾಗಿ ಕೇಳಿಕೊಳ್ಳಿ. ಆಮೇಲೆ ಬೇಕಾದರೆ ನೀವು ಇದೆಲ್ಲ ಹೌದು, ಅಲ್ಲ ಅನ್ನಿ….ನಾವು ಕೇಳಿಕೊಳ್ಳುತ್ತೇವೆ. ನಾವೇನು ನೀವೇ ಪೆಟ್ರೋಲ್ ಇಲ್ಲ ಕೆರೋಸೀನ್ ಸುರಿದು ಕಡ್ಡಿ ಗೀರಿ, ಬೆಂಕಿ ಹಚ್ಚಿದಿರಿ ಎನ್ನಲು ಹೊರಟವರಲ್ಲ, ಮಿಸ್ಟರ್ ನಾಗನಾಥ್. ಕಡ್ಡಿ ಗೀರಿ ಹುಟ್ಟಿದ ಬೆಂಕಿಯೇ ಅಲ್ಲವಿದು ಎನ್ನುವುದನ್ನು ನಾವೂ ಒಪ್ಪುತ್ತೇವೆ : ನೀವೇ ನಿಮ್ಮ ಗೆಳತಿಯ ಇದಿರು ಬಣ್ಣಿಸಿದ ಕೆಮಿಕಲ್ ಫಾಯರ್…..ರಾಸಾಯನಿಕ ಉಪಕ್ರಮಗಳಿಂದ ಹುಟ್ಟಿಸುವಂಥಾದ್ದು ! ಸದ್ಯದ ಬೆಂಕಿಯೂ ಈ ಜಾತಿಯದಾಗಿತ್ತು : ನೀವೇ ನಿರ್ಮಿಸಿದ ಪೆರೊಕ್ಸಯ್ಡ್ ಕೆಟೆಲಿಸ್ಟದ ಹೊಸ ಫಾರ್ಮ್ಯುಲೇಶನ್ ಅದಕ್ಕೆ ಕಾರಣವಾಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಹತ್ತಿರವೇ ಇವೆ : ನಿಮ್ಮ ಗೆಳತಿ ಒದಗಿಸಿದ ಮಾಹಿತಿಯೊಂದೇ ಆಧಾರವಲ್ಲ ಮತ್ತೆ. ಈಗ ನಮ್ಮಲ್ಲಿ ಉತ್ಪಾದನೆಯಲ್ಲಿದ್ದ ಕೆಟೆಲಿಸ್ಟಿಗಿಂತ ಹೆಚ್ಚು ಚುರುಕಾದ ಕೆಟೆಲಿಸ್ಟುಗಳಿಗೆ ಗ್ರಾಹಕರಿಂದ ಬೇಡಿಕೆ ವ್ಯಕ್ತವಾದದ್ದು. ಅದಕ್ಕೆ ಉತ್ತರರೂಪವಾಗಿ ನಾವು ಇಂಥ ಕೆಟೆಲಿಸ್ಟುಗಳ ನಿರ್ಮಾಣ ಕೆಲಸ ನಿಮಗೆ ವಹಿಸಿಕೊಟ್ಟದ್ದು ಇಲ್ಲಿಯ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಇಂಥ ನಿರ್ಮಾಣಕಾರ್ಯದಲ್ಲಿ ತೊಡಗಿರುವಾಗಲೇ ಕೆಮಿಕಲ್-ಫಾಯರಿನ ಘಾತುಕ ಕಲ್ಪನೆ ನಿಮಗೆ ಹೊಳೆದಿರಬೇಕೆಂದು ನಮ್ಮ ಅಂದಾಜು ನಮ್ಮ ಪ್ರಕಾರ ಈ ಕಲ್ಪನೆಯ ಅಂತಃಪ್ರೇರಣೆ ಬೆಂಕಿಯ ಬಗ್ಗೆ ನಿಮಗಿದ್ದ ಅತಿರೇಕದ ಭಯ. ನೀವು ನಿಮ್ಮ ಗೆಳತಿಯ ಇದಿರು_`Just to teach blokes what chemical fires are like, I feel like changing the formulation and create one’ ಎಂದು ವ್ಯಕ್ತಪಡಿಸಿದ ಸಿಟ್ಟಿಗೆ ಕಾರಣವಾದದ್ದು ಕೂಡ ಕಾರ್ಮಿಕರ ಬಗ್ಗೆ ನಿಮಗಿದ್ದಿರಬಹುದಾದ ಆತಂಕವಲ್ಲ_ your neurotic fear of fire_which in recent monthshad grown to become an obsessiom, and once that happens the forces in the unconscious take charge of your thoughts and actions…. ನೀವು ಬೆಂಕಿಗೆ ಇಷ್ಟೊಂದು ಹೆದರುವುದರ ಕಾರಣ ನಮಗೆ ಗೊತ್ತಿದೆ ಮಿ. ನಾಗನಾಥ್_ You have our full sympathies. ನಿಮ್ಮ ಬಗ್ಗೆ ಕಲೆಹಾಕಿದ ಮಾಹಿತಿಯ ಅಧಾರದ ಮೇಲೆ, ಇದು ನೋಡಿ, ಒಂದು ಸಣ್ಣ ಟಿಪ್ಪಣೆ ನಾವು ಸಿದ್ಧಗೊಳಿಸಿದ್ದೇವೆ_ಆಮೇಲೆ ಓದಿ ನೋಡುವಿರಂತೆ. ನಿಮ್ಮ ಬದನಾಮಿ ಮಾಡುವ ಉದ್ದೇಶವಿಲ್ಲದ್ದರಿಂದ ಅದರಲ್ಲಿ ನಿಮ್ಮ ಹೆಸರನ್ನು ತೋರಿಸಿಲ್ಲ. ತಪ್ಪಿ ಬಂದದ್ದೆಲ್ಲ ನಾವೇ ಕಾಟು ಹಾಕಿದ್ದೇವೆ….There is enough material in it to support the portrait we have drawn of your psychological make-up…. ನಿಮ್ಮ ತಂದೆ-ತಾಯಿಗಳು, ನಿಮ್ಮ ಬಾಲ್ಯ, ಆಗ ಬೆಂಕಿಯ ಅಪಘಾತದಲ್ಲಿ ನೀವು ಸುಟ್ಟುಕೊಂಡದ್ದು, ಕಲಿಯುವ ದಿನಗಳಲ್ಲಿ ನೀವು ಪಟ್ಟ ಕಷ್ಟ, ಅನುಭವಿಸಿದ ಅಪಮಾನಗಳು, ತೀರ ಎಳೆವಯಸ್ಸಿನಲ್ಲೇ ಗೋವಾ-ಸರ್ಕಾರದಿಂದ ಜೈಲು ಕಂಡ ನಿಮ್ಮ ಅಣ್ಣ…..ಹಾಗೆ ಕಣ್ಣರಳಿಸಿ ನೀವು ನೋಡಬೇಡಿ…..ಆಶ್ಚರ್ಯವಾಗುತ್ತದೆಯಲ್ಲವೇ ?….ನಿಮ್ಮ ಬಾಲ್ಯದ ಬಗ್ಗೆ ನಿಮಗೇ ಸರಿಯಾದ ಕಲ್ಪನೆಯಿಲ್ಲ ಎನ್ನುವುದೂ ನಮಗೆ ಗೊತ್ತಿದೆ…. and he who is ignorant of his past is confused in his thoughts and actions because his ignorance is a make fona hidden fear….. ಹೀಗಾದಾಗ ನಮ್ಮನ್ನು ಹೆದರಿಸುವದುಯಾರಿಗೂ ಸುಲಭವಾಗುತ್ತದೆ…. ಯಾರು ಯಾರು ನಿಮ್ಮ ಬಗ್ಗೆ ಮಾಹಿತಿ ಒದಗಿಸುವುದರಲ್ಲಿ ಒಂದೆಡೆ ಬಂದಿದ್ದಾರೆ ಎಂದು ತಿಳಿದರೆ ಆಶ್ಚರ್ಯದ ಧಕ್ಕೆ ತಗಲೀತು. ಇವರೆಲ್ಲ ನಿಮ್ಮ ಬಗ್ಗೆ ದ್ವೇಶವಿದ್ದವರೆಂದು ತಿಳಿಯಬೇಡಿ. ಹೇಳಿದೆನಲ್ಲ : ವೈಯಕ್ತಿಕವಾಗಿ ಇವರೆಲ್ಲ ನಮ್ಮ ಕೆಲಿಡೋಸ್ಕೋಪಿನೊಳಗಿನ ಗಾಜಿನ ತುಂಡುಗಳು_ತಮ್ಮಷ್ಟಕ್ಕೇ ಯಾವ ಮಹತ್ವವೂ ಇಲ್ಲದವರು_ನಿಮ್ಮ ಗೆಳೆಯ ಶ್ರೀನಿವಾಸರಾವ್ ಒಳಗೊಂಡು. ಏತಕ್ಕೂ ಹೇಸದ ಮಹಾ ಫಟಿಂಗನೀತ_ಶ್ರೀನಿವಾಸರಾವ್ ! ಅವನು ಒದಗಿಸಿದ ಮಾಹಿತಿಯಲ್ಲಿ ಬಹಳಷ್ಟು ಖೋಟಾ ಎಂದು ನಾವೂ ಬಲ್ಲೆವು. ಆದರೂ ಅದನ್ನು ಬೇಕಾದಲ್ಲಿ ಬೇಕಾದಷ್ಟೇ ಉಪಯೋಗಿಸಿಕೊಂಡಿದ್ದೇವೆ. ನಿಮ್ಮ ಫಾರ್ಮ್ಯುಲೇಶನ್‌ದ ಮೂಲಕಲ್ಪನೆಯ ಅಂತಃಪ್ರೇರಣೆ ಏನೇ ಇರಲಿ, ಅದು ಕೊನೆಗೊಮ್ಮೆ ಸಿದ್ಧವಾದಮೇಲೆ ನೀವು ಮುಂಬಯಿಗೆ ಹೋದನಂತರವೇ_ಹೋದ ಕೆಲವು ವಾರಗಳಲ್ಲೇ-ಉತ್ಪಾದನೆಗೆ ಹೋದದ್ದು ಆಕಸ್ಮಿಕವಾದದ್ದಲ್ಲ_ಹೇತುಪೂರ್ವಕವಾದದ್ದು. ಪೂರ್ವಯೋಜಿತವಾದದ್ದು. ನಿಮ್ಮ ಕೃತ್ಯಕ್ಕೆ ಕಾಯದೆಯ ಸ್ವರೂಪ ಬರುವುದು ಇಲ್ಲಿಯೇ. ಹಾಗೆ ಹೆದರಬೇಡಿ ಮಿಸ್ಟರ್ ನಾಗನಾಥ್. ಇದನ್ನು ಪೋಲೀಸ್ ಕೇಸು ಮಾಡುವ ಮನಸ್ಸು ನಮಗೇನೂ ಇಲ್ಲ. ಕಾಯಿದೆ, ಪೋಲೀಸು ಎಂದಕೂಡಲೇ ನೀವು ಇಷ್ಟೊಂದು ಯಾಕೆ ನಡುಗುತ್ತೀರಿ ಎನ್ನುವುದರ ಕಾರಣ ನಿಮಗಿಂತ ಹೆಚ್ಚಾಗಿ ನನಗೆ ಗೊತ್ತಿದೆ. ಆ ಟಿಪ್ಪಣಿಯಲ್ಲಿಯ ನಿಮ್ಮ ಅಣ್ಣನ ಬಗೆಗಿನ ವಿಶ್ಲೇಷಣೆ ನೋಡಿ, ನನ್ನ ಮಾತಿನ ಅರ್ಥವಾದೀತು….ಕಾಯದೆಯ ಉಲ್ಲೇಖ ಯಾಕೆ ಮಾಡಿದೆನೆಂದರೆ ‘ಕ್ರಿಮಿನಲ್ ಲಾ, ದ ದೃಷ್ಟಿಯಲ್ಲಿ ಕೃತಿಯ ಹಿಂದಿನ ಪ್ರೇರಣೆಗೆ ಮಹತ್ವವಿಲ್ಲ : ಆದರೆ ಹೇತುವಿಗಿದೆ. Its prime concern is the intention of the act and not its motive. ಸರ್ವಸಾಧಾರಣವಾಗಿ ಹೊಸ ಫಾರ್ಮ್ಯುಲೇಶನ್ ಒಂದು ಸಿದ್ಧವಾದಾಗ ಅದರ ಉತ್ಪಾದನೆ ಹಾಗೂ ಉಪಯೋಗ ಎರಡೂ ಎಲ್ಲ ರೀತಿಯಿಂದಲೂ ನಿರಪಾಯಕಾರಿಯಾದವುಗಳು ಎಂಬುದನ್ನು ನಿರ್ಧರಿಸಿದಮೇಲೇ ಅದನ್ನು ಉತ್ಪಾದನಾ ವಿಭಾಗಕ್ಕೆ ಕಳಿಸುವುದಿರುತ್ತದೆ. ಆದರೆ ಇಂತಹ ಮುನ್ನೆಚ್ಚರದ ಸೂಚನೆ ಕೊಡುವ ಯಾವ ಒಂದು ಪ್ರಯೋಗದ ದಾಖಲೆಯೂ ನಿಮ್ಮ ಲ್ಯಾಬೋರೇಟರಿಯ ಲಾಗ್-ಬುಕ್‌ನಲ್ಲಿ ನೋಡಲು ಸಿಗುವುದಿಲ್ಲ. ಇಷ್ಟಾಗಿಯೂ ಈ ಫಾರ್ಮ್ಯುಲೇಶನ್ ಉತ್ಪಾದನೆಗೆ ಯೋಗ್ಯವಾಗಿದೆ ಎಂದು ಶಿಫಾರಸ್ಸು ಮಾಡುವ ಷರಾ ನಿಮ್ಮ ನೋಟ್‌ಬುಕ್ಕಿನಲ್ಲಿ ಓದಲು…. Please don’t protest so vehemently that it is not true ; you know my definition of truth….. ನನ್ನ ಮಾತನ್ನು ದಯಮಾಡಿ ಪೂರ್ತಿಯಾಗಿ ಕೇಳಿಕೊಳ್ಳಿ…. ಇದು ನಿರುಪಾಯಕಾರಿಯಾದದ್ದೆಂದು ಪ್ರಯೋಗ ಮಾಡದೇನೇ ನಿರ್ಧರಿಸುವುದು ನಿಮ್ಮಂತಹ ಬುದ್ಧಿವಂತ ನಿಷ್ಣಾತ ತಜ್ಞರಿಗೇನು ಕಠಿಣವಲ್ಲ ಬಿಡಿ. ಮೇಲ್ದೋರಿಕೆಗೆ ಈ ಷರಾದ ಅರ್ಥ ಹೀಗಾಗಬಹುದಾದರೂ ನಮ್ಮ ಪ್ರಕಾರ ಇದು ಮೇಲೆ ತೋರುವಷ್ಟು ನಿಷ್ಪಾಪವಾದ ಕೃತಿಯಲ್ಲ ; ಪೂರ್ವಯೋಜಿತ ಮಸಲತ್ತಿನದೇ ಅಂಗವಾಗಿತ್ತೆಂಬುದು ನಮ್ಮ ಅನ್ನಿಸಿಕೆ ; ನಿಮ್ಮ ಕರೀಯರ‍್ನಲ್ಲಿ ಹೇಳದೇ ಕೇಳದೇ ಎನ್ನುವಂತೆ ಬಂದೆರಗಿದ ಒಂದು ಬಿಕ್ಕಟ್ಟಿಗೆ ನೀವು ಕಂಡುಕೊಂಡ ಪರಿಹಾರ : ಈ ಬಿಕ್ಕಟ್ಟಿಗೆ_ನಿಮ್ಮ ಕಲ್ಪನೆಯ ಪ್ರಕಾರ_ಕಾರಣನಾದ ಜಲಾಲನನ್ನು ಈ ಹೊಲಸು ಕೆಲಸದಲ್ಲಿ ಸಿಕ್ಕಿಸುವುದು ಹಾಗೂ ನಿಮಗೆ ಮೊದಲಿನಿಂದಲೂ ಆಗದ ಫಿರೋಜನ ಮೇಲೆ ಸೇಡು ತೀರಿಸಿಕೊಳ್ಳುವುದು_ನಿಮ್ಮ ಬೇತಿನ ಒಳಮರ್ಮ. ವಿಸ್ಮಯದ ಸಂಗತಿಯೆಂದರೆ ಅತ್ಯಂತ ಘಾತುಕವಾದ ರೀತಿಯಲ್ಲೇ ಆಗಲೊಲ್ಲದೇಕೆ_ನಿಮ್ಮ ಬೇತು ತನ್ನ ಮೂಲ ಉದ್ದೇಶದಲ್ಲಿ ನಿರೀಕ್ಷೆಗೆ ಮೀರಿ ಸಫಲವಾದದ್ದು : ಜಲಾಲ ನಿಮ್ಮ ಸ್ಥಾನಕ್ಕೆ ಬರಲು ಎಳ್ಳಷ್ಟೂ ಯೋಗ್ಯನಲ್ಲ ಎಂದು ತೋರಿಸಿಕೊಡುವುದರಲ್ಲಿ ನೀವು ಗೆದ್ದದ್ದು….Please don’t shout …..ನಾವೀಗ ಇದ್ದದು ತಾಜಮಹಲಿನಂತಹ ಹೊಟೆಲಿನಲ್ಲಿ ಎನ್ನುವುದನ್ನು ಮರೆಯಬೇಡಿ…..ಏಕಾ‌ಏಕಿ ನಿಮಗೆ ಮುಂಬಯಿಗೆ ವರ್ಗವಾದದ್ದು, ನೀವು ಅಮೆರಿಕೆಗೆ ಹೋಗುವ ಯೋಜನೆ ಅನಿರ್ದಿಷ್ಟಕಾಲ ಮುಂದೆ ಬಿದ್ದದ್ದು_ಅದಕ್ಕೆಲ್ಲ ಜಲಾಲನೇ ಕಾರಣನೆಂದೂ ನಿಮ್ಮನ್ನು ಕೆಳಕ್ಕೆ ನೂಕಿ ಜಲಾಲನನ್ನು ಮೇಲೆಕ್ಕೆ ದೂಡುವುದು ಫಿರೋಜನ ಹುನ್ನಾರೆಂದೂ ನಿಮಗೆ ಗುಮಾನಿ ಇದ್ದದ್ದು ನಮಗೆ ಗೊತ್ತಿದೆ.ನೀವು ಮುಂಬಯಿಗೆ ವರ್ಗವಾಗಿ ಹೋದಮೇಲೆ ನಿಮ್ಮ ಸ್ಥಾನದಲ್ಲಿ ಬಂದ ಜಲಾಲನ ಕೈಯಿಂದ ಈ ಹೊಸ ಫಾರ್ಮ್ಯುಲೇಶನ್ ಉತ್ಪಾದನೆಗೆ ಹೋಗಬೇಕು ಎನ್ನುವುದು….. please have patience…. ನಮ್ಮ ಕೆಲಿಡೋಸ್ಕೋಪಿನಲ್ಲಿ ನಾವು ಕಂಡುಕೊಂಡ ಚಿತ್ರ _ ನಿಮ್ಮ ಪರಿಭಾಷೆಯಲ್ಲಿ, ಸತ್ಯ_ಏನೆಂಬುದನ್ನು ಮೊದಲು ತಿಳಿದುಕೊಳ್ಳಿರಿ. ಆಮೇಲೆ ನಿಮಗೆ ಮಾತನಾಡಲು ಅವಕಾಶ ಸಿಕ್ಕೇ ಸಿಗುತ್ತದೆ…..ಆದದ್ದೂ ಹಾಗೆಯೇ : ಜಲಾಲನೇ ಈ ಫಾರ್ಮ್ಯುಲೇಶನ್ ಉತ್ಪಾದನೆಗೆ ಕಳಿಸಿದ್ದೆಂದು ಈಗ ನಮಗೆ ತಿಳಿದುಬಂದಿದೆ. He was in dirty haste to claim credit for a new formulatiom which he did not develop_and he paid the price….. ಜಲಾಲ, ಈ ತನ್ನ ದುಡುಕಿನ ಕೃತಿಯಿಂದ ಇಂಥ ದೊಡ್ಡ ಜವಾಬ್ದಾರಿಯ ಹುದ್ದೆಗೆ ಯೋಗ್ಯನಲ್ಲ ಎಂಬುದನ್ನೇ ಸಿದ್ಧಮಾಡಿದ ಎಂದು ಫಿರೋಜನೂ ಈಗ ಒಪ್ಪುತ್ತಾನೆಂದರೆ ನಿಮಗೆ ಸಮಾಧಾನವಾದೀತೇನೋ….ತನಗೆ ಸಂಪೂರ್ಣ ಪರಿಚಯವಿಲ್ಲದ ಒಂದು ಹೊಸ ಉತ್ಪಾದನಾ-ಸೂತ್ರವನ್ನು ಆಚರಣೆಗೆ ತರುವ ಮೊದಲು ನೀವು ಮಾಡದೇ ಬಿಟ್ಟ ಪ್ರಯೋಗಗಳನ್ನು ಮಾಡುವ ಅವಶ್ಯಕತೆ ತೋರದಿರುವಾಗಲೂ ಕನಿಷ್ಠ ಪೂರ್ತಿ ಪ್ರಮಾಣದ ಉತ್ಪಾದನೆಗೆ ಕಳಿಸದೇ pilot-scale production ಮುಖಾಂತರ ಅದನ್ನು ಅವನು ಪರೀಕ್ಷಿಸಬೇಕಾಗಿತ್ತು ಎನ್ನುವದೂ ಫಿರೋಜನ ಅಭಿಪ್ರಾಯ_ that is the normal practice too, I understand. But poor Jalaal relied completely upon the genius of an experienced and a senior colleague….  ನಿಮ್ಮ ಎಣಿಕೆಯೂ ಅದೇ ಆಗಿತ್ತು. ಮಿಸ್ಟರ್ ನಾಗನಾಥ್. ಬಹಳ ಜಾಣತನದ ಲೆಕ್ಕಾಚಾರವಿದು. ಅಲ್ಲ ಎನ್ನುತ್ತೀರಾ ? ಮುಂಬಯಿಗೆ ಹೋದ ಮೇಲೆ ನಿಮ್ಮ ಹುದ್ದೆಯ ಅಂತಸ್ತಿಗೆ ಶೋಭಿಸುವ ಮನೆ ಹುಡುಕುವ ಪ್ರಯತ್ನವನ್ನೇ ಮಾಡದೇ ಖೇತವಾಡಿಯ ಹಳೇ ಕೋಣೆಗಳಲ್ಲೇ ಇರಲು ಯೋಚಿಸಿದ್ದು ನಿಮ್ಮ ಧೂರ್ತ ಲೆಕ್ಕಾಚಾರದ್ದೇ ಭಾಗವಾಗಿತ್ತೆನ್ನುವುದನ್ನೂ ಅಲ್ಲಗಳೆಯುತ್ತೀರಾ ? ‘ಆರ್ ಎಂಡ್ ಡೀ ಕೆಲಸಕ್ಕೆ ನನ್ನನ್ನು ವಾಪಸು ಕರೆಯದಿರುವುದು ಶಕ್ಯವೇ ಇಲ್ಲವೆಂದಮೇಲೆ ಮುಂಬಯಿಯ ಮೊಕ್ಕಾಮು ಬಹಳ ದಿನ ಸಾಗುವಂತಹದಲ್ಲ,’ ಎಂಬುದೇ ನಿಮ್ಮ ಅಹಂಕಾರದ ಭಾವನೆಯಾಗಿತ್ತು. ಇಷ್ಟರೊಳಗೇ ಧೈರ್ಯ ಬಿಟ್ಟುಕೊಡಬೇಡಿ, ಮಿಸ್ಟರ್ ನಾಗನಾಥ್. ನಾನು ಅವರಿಗೆ ಆಡಿದ್ದು ಸತ್ಯವಲ್ಲ ಎಂದು ತೋರಿಸುವ ಒಂದೇ ಒಂದು ಬಗೆಯೆಂದರೆ ಅದರೊಳಗಿನ ಬಿರುಕುಗಳನ್ನು ತೋರಿಸಿಕೊಡುವದು. ಆ ಅವಕಾಶ ನಮಗೆ ಸಿಕ್ಕೇ ಸಿಗುತ್ತದೆ. ಸದ್ಯ ಇನ್ನೊಂದು ಪ್ರಶ್ನೆ ಕೇಳುತ್ತೇನೆ : ನಾವು ರಜೆ ಪಡೆಯಿರಿ ಎಂದದ್ದೇ, ರಜೆ ಪಡೆದು ಮನೆಯಲ್ಲಿ ಕೂತದ್ದು ; ಹೈದರಾಬಾದಿಗೆ ಹೋಗಿ ಎಂದದ್ದೇ, ಹೋದದ್ದು ; ಬನ್ನಿ ಎಂದದ್ದೇ, ಬಂದದ್ದು_ಇದಕ್ಕೆಲ್ಲ ಏನೂ ಅರ್ಥವಿಲ್ಲ ಎಂದು ತಿಳಿಯಬೇಕೆ ? Do you really want us to believe that this could be the behaviour of an innocent person ? ಇಷ್ಟಾಗಿಯೂ_ ನೀವು ಬೋರ್ಡ್ ಸದಸ್ಯರಿಗೆ ಮೂಕರ್ಜಿಯ ಪ್ರತಿಗಳನ್ನು ತಿಳಿಸುವ ಧಡ್ಡತನ ಮಾಡದೇ ಇದ್ದಿದ್ದರೆ_ಇಷ್ಟರ ಒಳಗೇ ನೀವು ನಿಮ್ಮ ಮೊದಲಿನ ಸ್ಥಾನದ ಮೇಲೆ ಹೈದರಾಬಾದಿನಲ್ಲಿರುತ್ತಿದ್ದಿರಿ ಎಂದು ಹೇಳಿದರೆ ನಂಬುತ್ತೀರೋ ಇಲ್ಲವೋ. ಆ ಮೂಕರ್ಜಿಯ ಹಿಂದಿನ ಮೆದುಳು ನಿಮ್ಮದೇ ಎಂಬುದರಲ್ಲಿ ನಮಗೆ ಎಳ್ಳಷ್ಟೂ ಸಂಶಯವಿಲ್ಲ. ಯಾಕಂದರೆ ಅದರೊಳಗಿದ್ದ ಮಾಹಿತಿಯ ಕೆಲವು ವಿವರಗಳು ನಿಮ್ಮನ್ನು ಬಿಟ್ಟು ಇನ್ನಾರಿಗೂ ಗೊತ್ತಿರುವುದು ಶಕ್ಯವೇ ಇಲ್ಲ. ಫ್ಯಾಕ್ಟರಿಯ ಕೆಲವರ ಕೈಗೆ ಈ ಮಾಹಿತಿ ಸಿಕ್ಕದ್ದು ಮುಂಬಯಿಯಿಂದ ಬಂದ ಟಪಾಲಿನ ಮೂಲಕವೇ ಎನ್ನುವುದಕ್ಕೆ ಪುರಾವೆ ಇದೆ. ಅದನ್ನು ಒದಗಿಸಿದವರು ನೀವು ಎನ್ನುವುದು ಇನ್ನಾರಿಗೂ ಗೊತ್ತಿರಲಿಕ್ಕಿಲ್ಲ. ಆ ಮಾತು ಬೇರೆ. ನಿಮ್ಮನ್ನು ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಭೇಟಿಯಾಗಿ_ಆಶ್ಚರ್ಯ ಪಡುವುದರಲ್ಲಿ ಕೂಡ ಹಾಗೆ ಉತಾವಳಿ ಮಾಡಬೇಡಿ. ನೀವು ನಿಜಕ್ಕೂ ಬೆರಗುಗೊಳ್ಳಬೇಕಾದ ಕ್ಷಣ_ಈ ಭೇಟಿಯ ಮಾಹಿತಿ ನಮಗೆ ಹೇಗೆ ಸಿಕ್ಕಿತು ಎಂದು ಗೊತ್ತಾಗುವ ಕ್ಷಣ ಇನ್ನೂ ಮುಂದಿದೆ ! ನಿಮ್ಮನ್ನು ಭೇಟಿಯಾದವನು ಯಾರು ಎನ್ನುವದು ನಮಗೆ ಖಚಿತವಾಗಿ ಗೊತ್ತಿಲ್ಲ. ಅದೇ ರೆಸ್ಟೋರೆಂಟಿನಲ್ಲಿಕೂತು ಚಹ ಕುಡಿಯುತ್ತಿದ್ದ ನಮ್ಮ ಮಾಹಿತಿದಾರರಿಗೆ ಅವನ ಪರಿಚಯವಿಲ್ಲ. ಆದರೂ ಊಹಿಸಬಲ್ಲೆವು : ನಮ್ಮ ಬಳಿ ಇದ್ದ ಅವನ ಫೋಟೋ ಆಮೇಲೆ ನೋಡುವಿರಂತೆ. ಆದರೆ ಆ ಅಪರಿಚಿತನು ನಿಮ್ಮ ಕೈಗೆ ಕೊಟ್ಟ ಪತ್ರ ಆ ಮೂಕರ್ಜಿಯ ಪ್ರತಿಯಾಗಿತ್ತು ಎನ್ನುವುದು ನಮಗೀಗ ತಿಳಿದಿದೆ. ಇದು ನೋಡಿ, ನಾನು ಹೇಳುತ್ತಿರುವುದಕ್ಕೆ ಸಿಕ್ಕ ಪುರಾವೆ.”
undefinedಪ್ರಚಂಡವಾದ ವಿಜಯ ಗಳಿಸಿದ್ದೇನೆ ಎನ್ನುವಂತಹ ಗರ್ವದ ಭಾವನೆಯಿಂದ ಉಬ್ಬುತ್ತ ದಸ್ತೂರ್ ಫೈಲಿನೊಳಗಿಂದ ಒಂದು ಉದ್ದನ್ನ ಲಕ್ಕೋಟೆಯನ್ನು ಹೊರತೆಗೆದು ತುಂಬ ಜಾಗ್ರತೆಯಿಂದ ಅದರ ಬಾಯಿ ತೆರೆದು ಒಳಗಿದ್ದದ್ದು ಮುತ್ತು-ರತುನಗಳೋ ಎಂಬ ಬಿಂಕವನ್ನು ಪ್ರಕಟಿಸುತ್ತ ಮುಂದಿನ ಟೀಪಾಯಿಯ ಮೇಲೆ ಅದನ್ನು ಖಾಲಿ ಮಾಡಿದ್ದೇ ತಡ, ಆಗಲೇ ಬೆವರಿನ ಮುದ್ದೆಯಾಗಿದ್ದ ನಾಗಪ್ಪನ ಬಾಯಿಂದ_‘ಓ ನೋ….’ ಎಂಬ ಉದ್ಗಾರ ಸಭ್ಯತೆಯ ಸಂಯಮವನ್ನೂ ಗಾಳಿಗೆ ತೂರಿ ದೊಡ್ಡ ದನಿಯಲ್ಲಿ ಹೊರಗೆ ಬಂದಿತು. ಇಂದ್ರಜಾಲದ ಅಪರೂಪದ ಚಮತ್ಕಾರವನ್ನು ನೋಡುವವರ ಹಾಗೆ ನಾಗಪ್ಪನ ಜೊತೆಗೆ ಫಿರೋಜ್, ಪಟೇಲರು ಕೂಡ ಕಣ್ಣುಬಿಟ್ಟು ಟೀಪಾಯಿಯ ಮೇಲೆ ಹರಡಿ ಬಿದ್ದ ಕಾಗದದ ಚೂರುಗಳನ್ನು ನೋಡಹತ್ತಿದರು : ಹೈದರಾಬಾದ್ ಏರ್-ಪೋರ್ಟಿನಲ್ಲಿ ರೆಡ್ಡಿ ಕೊಟ್ಟ_ಓದುವ ಮೊದಲೇ ಲಕೋಟೆಯ ಸಮೇತ ಹರಿದೊಗೆದು ವಿಮಾನದ ಸೀಟಿನ ಕಿಸೆಯಲ್ಲಿ ತೂರಿದ_ಪತ್ರದ, ನೀಲಿಬಣ್ಣದ ಲಕೋಟೆಯ ಚೂರುಗಳು….! “ಓ ಥ್ರೀಟೀ! ಹೀಗೇಕೆ ಮಾಡಿದೆ ?” ನಾಗಪ್ಪನ ಬಾಯಿಂದ ಉದ್ಗಾರ ಹೊರಟಿತು.

“ಅವಳಿದನ್ನು ಮಾಡಿದ್ದು just out of curiosity_ ಆದರೆ ಇದು ನಮ್ಮ ಕಣ್ಣಮುಂದಿನ ಚಿತ್ರದಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ನೋಡಿ : ಪತ್ರದಲ್ಲಿಯ ಮಜಕೂರಿನ ಪ್ರತಿ ವಿವರವೂ ನಿಮಗೆ ಗೊತ್ತಿದೆ ಎನ್ನುವುದರ ಕಲ್ಪನೆ ಆ ಪತ್ರವನ್ನು ನಿಮಗೆ ಕೊಟ್ಟವನಿಗಿರಲಿಲ್ಲ. ನಿಮಗಿತ್ತು. ಅಂತೆಯೇ ಓದುವ ಮೊದಲೇ….”

ಮುಂದಿನ ಮಾತುಗಳನ್ನು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ, ನಾಗಪ್ಪ. ಥ್ರೀಟೀ ಮೂಡಿದ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಭಯವಾಗಿ ಕೂತಲ್ಲಿಂದ ಭಡಕ್ಕನೆ ಎದ್ದು ಕ್ಲೋಕ್-ರೂಮಿನ ಕಡೆಗೆ ಧಾವಿಸಿದ. ರೂಮು ಸೇರಿ ಕದ ಹಾಕಿಕೊಂಡ ; ವಾಶ್-ಬೇಸಿನ್ ಇದಿರು ನಿಂತು ಗಂಟಲಲ್ಲಿ ಕೈಹಾಕಿ ಬಕಬಕ ಕಾರಿಕೊಂಡ !

– ಭಾಗ ಆರು –
– ಅಧ್ಯಾಯ ಮೂವತ್ನಾಲ್ಕು –

ತಾಜಮಹಲ್ ಹೊಟೆಲ್ಲಿನಿಂದ ಹೊರಬಿದ್ದ ನಾಗಪ್ಪನಿಗೆ ಮೈಮೇಲೆ ಮುಳ್ಳು ನಿಲ್ಲಿಸುವಂತಹ ಒಂದು ವಿಲಕ್ಷಣ ಅನ್ನಿಸಿಕೆ : ಹೊಟೆಲ್ ಇದಿರಿನ ರಸ್ತೆ ದಾಟಿ ಸಮುದ್ರದ ದಂಡೆಗುಂಟ ಹರಿದ ಫುಟ್‌ಪಾತಿನ ಮೇಲೆ ನಡೆಯಹತ್ತಿದವನು ತಾನು ಅಲ್ಲವೇ ಅಲ್ಲ ; ತನ್ನ ದೇಹವನ್ನೇ ಕಂಬಳೀ ಕೊಪ್ಪೆಯ ಹಾಗೆ ಹಾಕಿಕೊಂಡು ಗೊತ್ತುಗುರಿಯಿಲ್ಲದೇ ನಡೆಯಹತ್ತಿದ ಯಾರೋ ಬೇರೆಯವನೇ ಇರಬೇಕು ! ಕೆಲ ಹೊತ್ತಿನ ಮೇಲಂತೂ ಹಾಗೆ ನಡೆಯಹತ್ತಿದವನು ಮನುಷ್ಯನೇ ಅಲ್ಲ ಎನ್ನುವಂತಹ ಭಾವನೆ ! ಕಂಪನಿಯ ಕೆಲಸಕ್ಕೆ ರಾಜೀನಾಮೆಯನ್ನು ಕೊಡುವುದನ್ನು ಅವನು ಎಂದೋ ನಿರ್ಧರಿಸಿದ್ದ. ಆದರೆ ಮನುಷ್ಯನಾಗಿ, ಗಂಡಸಾಗಿ, ಇಲ್ಲದ ಲಫಡಾದಲ್ಲಿ ತನ್ನನ್ನು ಸಿಲುಕಿಸಲು ನಡೆಸಿದ ಪಿತೂರಿಯನ್ನು ಬಯಲಿಗೆ ಎಳೆದ ನಂತರವೇ. ತನ್ನ ಹೆಸರಿಗೆ ಹತ್ತಿರಬಹುದಾದ ಕಲಂಕವನ್ನು ಅಳಿಸಿದನಂತರವೇ. ಈಗ ರಾಜೀನಾಮೆಯನ್ನೇನೋ ಕೊಟ್ಟಿದ್ದ. ನೀರಿದ್ದ ಗಂಡಸಿನ ಹಾಗೆಂದು ಮಾತ್ರ ಅನ್ನಿಸಲಿಲ್ಲ. ಮನುಷ್ಯನ ಹಾಗೆಂದೂ ಆನ್ನಿಸಲಿಲ್ಲ. ಕೋಳೀಗಿರಿಯಣ್ಣನ ಅಂಗಳದಲ್ಲಿಯ ಹುಲ್ಲು-ಬಣವೆಯ ಅಡಿಯಲ್ಲಿ ಬಿಲ ತೋಡಿ ತಲೆಮರೆಸಿ ಬದುಕಿತ್ತಿದ್ದ ದೊಡ್ಡ ಹೆಗ್ಗಣ ತಾನು ಎಂಬಂತಹ ಅನ್ನಿಸಿಕೆಯಿಂದ ಜಿಗುಪ್ಸೆ ಹುಟ್ಟುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ, ನಾಗಪ್ಪ. ಸ್ಕಾಯ್-ಸ್ಕ್ರೇಪರ್ ಜಗತ್ತು ಕೋಳೀಗಿರಿಯಣ್ಣನ ಕೇರಿಯನ್ನು ಉಧ್ವಸ್ತಗೊಳಿಸಿದ ರೀತಿಗೆ ಭಾವನೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಹಿಂದೆ, ಅನೇಕ ಸಂದರ್ಭಗಳಲ್ಲಿ, ಮನಸ್ಸನ್ನು ಅರೆಕ್ಷಣದ ಮಟ್ಟಿಗಾದರೂ ತಟ್ಟಿಹೋದ ಆತ್ಮಘಾತದ ವಿಚಾರ ಈಗ ತಪ್ಪಿ ಕೂಡ ಮನಸ್ಸನ್ನು ಹಾಯಲಿಲ್ಲ. ಅನೇಕ ಆಸೆ-ಅಪೇಕ್ಷೆಗಳಿಗೆ ಕಾರಣವಾದ ವ್ಯಾವಸಾಯಿಕ ಕ್ಷೇತ್ರದೊಡನೆಯ ದೀರ್ಘಕಾಲದ ಸಂಬಂಧವನ್ನು ಕಡಿದುಕೊಳ್ಳುವದು ಈಗ ಬರಿಯೆ ಒಂದು ಸಾಧ್ಯತೆಯಾಗಿ ಇಲ್ಲ ಸಂಕಲ್ಪವಾಗಿ ಉಳಿದಿರಲಿಲ್ಲ ; ಪ್ರತ್ಯಕ್ಷವಾಗಿ ನಡೆದು ಹೋದ, ಮುಟ್ಟಿನೋಡುವಷ್ಟರ ಮಟ್ಟಿಗೆ ಉರುಟುರುಟಾಗಿ ಗಟ್ಟಿಮುಟ್ಟಾದ ಘಟನೆಯಾಗಿತ್ತು. ಇದೀಗಿನ ಕ್ಷಣದಿಂದ ತಾನು ನೌಕರಿ ಇಲ್ಲದವನು : ಬಿಟ್ಟುಕೊಟ್ಟವನೋ ಕಳಕೊಂಡವನೋ ಎನ್ನುವದು ತನ್ನ ಆತ್ಮಪ್ರತಿಷ್ಠೆಯ, ಅಹಂಕಾರದ ಮೂಡನ್ನು ಅವಲಂಭಿಸಿದ್ದು : ಅದನ್ನು ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಅವಲಂಭಿಸಿದ್ದು. ಇದ್ದುದರಲ್ಲೇ ಸಮಾಧಾನ ಕೊಟ್ಟ ಸಂಗತಿಯೆಂದರೆ ತಾನು ಕೊನೆಗೂ ತನಿಖೆಯವರು ಸೂಚಿಸಿದ ರಿಪೋರ್ಟಿನ ಮೇಲೆ ಸಹಿ ಮಾಡದೇ ಇದ್ದದ್ದು. ಯಾರು ಬಲ್ಲರು : ಹೀಗೆ ನಿಂತ ಕಾಲ ಮೇಲೆ ತನ್ನಿಂದ ರಾಜೀನಾಮೆಯನ್ನು ಪಡೆಯುವದೇ ಈ ಎಲ್ಲ ನಾಟಕದ ಉದ್ದೇಶವಾಗಿರಲಿಕ್ಕಿಲ್ಲ ತಾನೇ ? ಎಂಬ ಗುಮಾನಿ ರಾಜೀನಾಮೆಯನ್ನು ಬರೆದು ಕೊಡಕೊಡುತ್ತಿರುವಾಗಲೇ ಹುಟ್ಟಿಬಂದು ಈ ಅಲ್ಪಸಮಾಧಾನವನ್ನು ಕೂಡ ನಿರರ್ಥಕಗೊಳಿಸಿತ್ತು…..

ಅರಿವಾಗುವ ಮೊದಲೇ ಗೇಟ್-ವೇ ದಾಟಿ ರೀಗಲ್ ಸಿನೇಮಾದ ಕಡೆಗೆ ಹೋಗುವ ರಸ್ತೆಗೆ ಹೋಗುತ್ತಿರುವಾಗ ಕುದುರೆ-ಟಾಂಗಾದವನೊಬ್ಬ, “ಆಯಿಯೇ ಸಾಬ್,” ಎಂದಾಗ ನಾಗಪ್ಪತನಗೆ ಹತ್ತಿದ ಗುಂಗಿನಿಂದ ಹೊರಗೆ ಬಂದಿದ್ದ. ಮುಂಬಯಿಯಲ್ಲಿ ಟಾಂಗಾ ಈಗ ಅಪರೂಪದ ವಸ್ತು. ನಗರದ ಈ ಭಾಗದಲ್ಲಿ ಹಾಗೂ ಗಿರ್ಗಾಂವ್, ಕಾಲ್ಟಾದೇವಿಗಳಲ್ಲಷ್ಟೇ ಕೆಲವು ಉಳಿದಿದ್ದವು. ಇನ್ನುಮುಂದೆ ಟ್ಯಾಕ್ಸೀ ವರ್ಜ್ಯವೇನೋ. ಟಾಂಗಾ ಹತ್ತಿ ಹೋಗಬಹುದಿತ್ತು. ಆದರೆ ಎಲ್ಲಿಗೆ ಎಂಬುದೇ ಗೊತ್ತಿರಲಿಲ್ಲ. ಖೇತವಾಡಿಗಂತೂ ಅಲ್ಲವೇ ಅಲ್ಲ. ಆದಷ್ಟು ಬೇಗ ಆ ನರಕದಿಂದ ಹೊರಗೆ ಬೀಳಬೇಕು ಎಂಬ ಅಸ್ಪಷ್ಟ ವಿಚಾರವೊಂದು ಮನಸ್ಸಿನಲ್ಲಿ ಸುಳಿದುಹೋಯಿತು : ತನ್ನ ಇಷ್ಟು ವರ್ಷಗಳ ಯಾತನೆಗೆ ಸ್ಮಾರಕಗಳು ಎದ್ದು ನಿಂತ ಎಲ್ಲ ಊರುಗಳಿಂದ ದೂರವಾದ ಯಾವುದಾದರೂ ಹೊಸ ಪ್ರದೇಶಕ್ಕೆ ಹೊರಟುಹೋಗಬೇಕು….ಟಾಂಗಾವಾಲಾ ನಿರಾಶನಾಗದೇ ಇನ್ನೊಮ್ಮೆ _“ಚಲಿಯೇ ಸಾಬ್,” ಎಂದ. ಕಳೆದ ಕೆಲವು ನಿಮಿಷಗಳಿಂದ ತಾನು ಹಾಗೇ ಟಾಂಗಾದ ಇದಿರಿಗೆ ನಿಂತುಬಿಟ್ಟಿದ್ದೇನೆ ಎನ್ನುವದು ಆಗ ಲಕ್ಷ್ಯಕ್ಕೆ ಬಂತು. ವಿಚಾರಮಾಡುವ ಮೊದಲೇ ಟಾಂಗಾ ಹತ್ತಿ ಕೂತ. ಟಾಂಗಾವಾಲಾ ಎಲ್ಲಿಗೆ ಹೋಗುವುದು ಎಂದು ಕೇಳಿದಾಗ_“ವೀಟೀ,ಟೈಮ್ಸ್-ಆಫ಼್-ಇಂಡಿಯಾ”_ ಎಂದ. ಆಶ್ಚರ್ಯ ! ಹಾಗೆ ಹೇಳಿದ ನಂತರವೇ ನೆನಪಿಗೆ ಬಂತು : ಸೀತಾರಾಮನಿಗೆ ಮಂಗಳವಾರ ನಿನ್ನನ್ನು ನಿನ್ನ ಆಫೀಸಿನಲ್ಲಿ ಕಾಣುತ್ತೇನೆ ಎಂದು ಚೀಟಿ ಇರಿಸಿ ಬಂದದ್ದು. ಕೈಗಡಿಯಾರ ನೋಡಿಕೊಂಡ_ಒಂದೂವರೆ ಗಂಟೆ. ತಾನು ತಲುಪುವುದರಲ್ಲಿ ಊಟ ಮುಗಿಸಿ ಬಂದಿರುತ್ತಾನೆ. ಊಟದ ವಿಚಾರ ಬಂದದ್ದೇ, ತಾನಿನ್ನೂ ಊಟ ಮಾಡಿಲ್ಲ ಎನ್ನುವದು ಲಕ್ಷ್ಯಕ್ಕೆ ಬಂತು. ಅಷ್ಟೆಲ್ಲ ಬಿಯರ್ ಕುಡಿಸಿದ್ದರು, ಸ್ನ್ಯಾಕ್ಸ್ ತಿನ್ನಿಸಿದ್ದರು, ಬೋಳಿಮಕ್ಕಳು. ಕಾರಿಕೊಂಡದ್ದು ಒಳ್ಳೆಯದೇ ಆಯಿತು. ಈಗ ಮತ್ತೆ ಊಟ ಬೇಡ. ಸೀತಾರಾಮನ ಆಫೀಸ್-ಕ್ಯಾಂಟೀನಿನಿಂದ ಚಹದ ಜೊತೆಗೆ ಏನಾದರೂ ತರಿಸಿದರಾಯಿತು ಎಂದುಕೊಂಡ. ಟಾಂಗಾ ಪರಿಚಿತ ರಸ್ತೆಯ ಮೇಲೆ ಓಡುತ್ತಿತ್ತು. ಅಂತೂ ಕೊನೆಗೊಮ್ಮೆ ಮುಗಿದುಹೋದದ್ದರ ವಾಸ್ತವತೆಗೆ ಕ್ರಮೇಣ ಒಗ್ಗಿಕೊಳ್ಳುತ್ತಿದ್ದ ಮನಸ್ಸು ಉದ್ವೇಗವನ್ನು ತೊರೆದು ತನಗೇ ಆಶ್ಚರ್ಯವನ್ನುಂಟುಮಾಡುವಷ್ಟರ ಮಟ್ಟಿಗೆ ನಿಶ್ಚಿಂತವಾಗತೊಡಗಿತ್ತು, ಶಾಂತವಾಗತೊಡಗಿತ್ತು. ಟಾಂಗಾ ಟೈಮ್ಸ್-ಆಫ಼್-ಇಂಡಿಯಾ ಆಫೀಸು ತಲುಪಿದ ಕೂಡಲೇ ಟಾಂಗಾವಾಲಾ ಬೇಡಿದ ಬಾಡಿಗೆಯ ಹಣ ಕೊಟ್ಟು ಸೀತಾರಾಮನ ಆಫೀಸು ಹೊಕ್ಕ.

ಸೀತಾರಾಮ ಆಫೀಸಿನಲ್ಲಿದ್ದ. ಅದೇ ಊಟಮಾಡಿ ಬಂದು ಸಿಗರೇಟನ್ನು ಹಚ್ಚಿ, ಎರಡೂ ಕಾಲುಗಳನ್ನು ಟೇಬಲ್ ಮೇಲೆ ನಿಡಿದಾಗಿ ಚಾಚಿ, ಗಾಳಿಯಲ್ಲಿ ಹೊಗೆಯ ವರ್ತುಲಗಳನ್ನು ಎಬ್ಬಿಸುವುದರಲ್ಲಿ ಗರ್ಕನಾಗಿದ್ದ. ಅವನ ಈ ಬೇಫೀಕೀರತೆಯೇ ನಾಗಪ್ಪನ ಅಸೂಯೆಗೆ ಕಾರಣವಾಯಿತು : ಐಷಾರಾಮಿನ ಬದುಕು ಒಂದೂ ಮಗನದು ಅನ್ನಿಸಿತು. “Oh ! the bossis relaxing ?” ಎಂದು ಕೇಳಿದ ಇವನ ದನಿಗೆ, ಧೂಮ್ರ-ವರ್ತುಲಗಳ ಜಾಲದಲ್ಲಿ ಸಿಕ್ಕಿಬಿದ್ದ ಸೀತಾರಾಮ ದಡಬಡಿಸಿದ. ಮೇಜಿನಮೇಲಿನ ಕಾಲುಗಳನ್ನು ಕೆಳಗಿಳಿಸಿ ಕುರ್ಚಿಯಲ್ಲಿ ಸರಿಯಾಗಿ ಕೂಡ್ರುವ ಪ್ರಯತ್ನ ಮಾಡುತ್ತ ಕಣ್ಣಮುಂದೆ ನಿಂತವನ ರೂಪ ಅರಿವಿನಲ್ಲಿ ಮೂಡಿದ್ದೇ, ‘ಅರೆ ನಾಗಪ್ಪ ! My God !What telepathy,_ ಮೂರುದಿನಗಳಿಂದ ನಿನ್ನ ನೆನಪು ಮಾಡಿದ್ದೇ ಮಾಡಿದ್ದು,” ಎಂದ. ಗೆಳೆಯ ತನ್ನನ್ನು ತನ್ನ ಮೂಲದ ಹೆಸರಿನಿಂದ ಕರೆದ ಸಣ್ಣ ಸಂಗತಿಯಿಂದಲೇ ಪುಲಕಿತನಾಗಿ_“ಯಾಕೆ ? ಮೊನ್ನೆ ನಿನ್ನ ಕೋಣೆಯ ಬೀಗಕ್ಕೆ ಸಿಕ್ಕಿಸಿದ ಚೀಟಿ ಸಿಗಲಿಲ್ಲವೆ ?” ಎಂದು ಕೇಳುತ್ತ ಕುರ್ಚಿಯೊಂದರಲ್ಲಿ ಕುಳಿತುಕೊಂಡ.

“ Don’t tell me you came to my room ?”

“Of course I did, and I needed you so badly to save me from.” ಅನಿರೀಕ್ಷಿತವಾಗಿಯೆಂಬಂತೆ ತನ್ನ ಬಾಯಲ್ಲಿ ಹುಟ್ಟಿದ ಈ ವಾಕ್ಯವನ್ನು ಪೂರ್ತಿಗೊಳಿಸುವುದು ನಾಗಪ್ಪನಿಗೆ ಸಾಧ್ಯವಾಗಲಿಲ್ಲ….`from a possible suicide’ ಎಂದು ಪೂರ್ತಿಯಾಗಬೇಕಾದ ವಾಕ್ಯ ಅರ್ಧಕ್ಕೇ ಉಳಿದುಬಿಟ್ಟಿತು. ಆದರೆ ಗೆಳೆಯನ ಮೋರೆಯ ಮೇಲೆ ತನ್ನ ಬಗೆಗೆ ಆತಂಕ ಮೂಡಿದನ್ನು ನೋಡಿ, ಸುಳ್ಳೇ ನಾಟಕವೇಕೆ ಎಂದುಕೊಂಡು_ “I resigned from my job,” ಮಾತಿನಲ್ಲಿಯ ಅಸಾಧಾರಣ ಸಹಜತೆ, ಸರಳತೆ ಇವುಗಳೇ ದಂಗುಬಡಿಸುವ ಸಂಗತಿಗಳಾಗಿದ್ದವು ಎಂಬಂತೆ ಸೀತಾರಾಮ_“Don’t tell me,” ಎಂದ. ಮರುಗಳಿಗೆ ನಾಗಪ್ಪನ ದನಿಯಲ್ಲಿಯ ಸರಳತೆಗೆ ವ್ಯತಿರಿಕ್ತವಾದ ನೋವಿನ ಕಳೆ ಅವನ ಮೋರೆಯ ಮೇಲೆ ಮೂಡುತ್ತಿದ್ದುದನ್ನು ನೋಡಿ_ “ಚಹ ತರಿಸಲೇ ?” ಎಂದು ಕೇಳಿದ. ನಾಗಪ್ಪ ಭಿಡೆ ಬಿಟ್ಟುಕೊಟ್ಟು “ನನ್ನದಿನ್ನೂ ಊಟವಾಗಿಲ್ಲ. ಆದರೆ ಹಸಿವೂ ಇಲ್ಲ. ಚಹದ ಜೊತೆ….”ನಾಗಪ್ಪನ ವಾಕ್ಯ ಪೂರ್ತಿಯಾಗುವ ಮೊದಲೇ ಸೀತಾರಾಮ ಕೈಯಲ್ಲಿದ್ದ ಸಿಗರೇಟನ್ನು ಆಷ್-ಟ್ರೇದಲ್ಲಿ ಮುರುಟಿ ಚೆಲ್ಲುತ್ತ _“ಕಮ್‌ಆನ್_ಕ್ಯಾಂಟೀನ್‌ಗೇ ಹೋಗೋಣ. ಏನಾದರೂ ತಿನ್ನುವಿಯಂತೆ. ಅಲ್ಲೇ ಕೂತು ಮಾತಾಡೋಣ.” ಎನ್ನುತ್ತ ನಾಗಪ್ಪನನ್ನು ಕುಳಿತಲ್ಲಿಂದ ಎಬ್ಬಿಸಿದ.

ಗೆಳೆಯರಿಬ್ಬರೂ ಎದ್ದು ಮೊದಲನೇ ಮಜಲೆಯ ಮೇಲಿದ್ದ ಕ್ಯಾಂಟೀನ್‌ಗೆ ಹೊರಡಲನುವಾಗುವಷ್ಟರಲ್ಲಿ ಕ್ಯಾಬಿನ್ನಿನ ಕದ ದೂಡಿ ಸೀತಾರಮನ ಸಹೋದ್ಯೋಗಿಯಾದ ರಂಜನಾ ಭೂಪೇಟ್ಕರ್ ಕೆಲವು ಕಾಗದ-ಪತ್ರಗಳೊಂದಿಗೆ ಒಳಗೆ ಬಂದಳು. ನಾಗಪ್ಪನನ್ನು ನೋಡಿದವಳೇ, “ಓಹೋಹೋ….ಪ್ರೊಫೆಸರರ ಸವಾರಿ ಅನೇಕ ವಾರಗಳ ನಂತರ….” ಎಂದು ಸುಖವಾಗಿ ನಗುತ್ತ, “By the way, my hearty congratulations. ಅಮೇರಿಕೆಗೆ ಹೋಗುತ್ತೀರಂತೆ….ಸೀತಾರಾಮನೇ ತಿಳಿಸಿದ….”ಎಂದು ಕೈ ಮುಂದೆ ಚಾಚಿದಳು. ನಾಗಪ್ಪ ಕೈ ಕುಲುಕಲಿಲ್ಲ. ಆದರೂ ಶಾಂತಚಿತ್ತನಾಗಿಯೇ ಹೇಳಿದ : “Not so lucky, Ranjana. Thank you all the same…. ಸೀತಾರಾಮನೇ ವಿವರಿಸುತ್ತಾನೆ ನಿನಗೆ, ಆಮೇಲೆ….” ಸೀತಾರಾಮನೂ ಆಮೇಲೆ ಹೇಳುತ್ತೇನೆ ಎನ್ನುವಂತೆ ಕಣ್ಣು ಮಿಟಿಕಿಸಿ_ “ನಾವೀಗ ಕ್ಯಾಂಟೀನಿಗೆ ಹೊರಟಿದ್ದೇವೆ. Will be back soon,” ಎಂದ. ರಂಜನಾ ತಬ್ಬಿಬ್ಬಾಗಿ ತಮ್ಮಿಬ್ಬರನ್ನು ನೋಡುತ್ತಿರುವಾಗಲೇ ಇಬ್ಬರೂ ಕ್ಯಾಬಿನ್ನಿನ ಹೊರಬಿದ್ದು ಕ್ಯಾಂಟೀನಿನ ಕಡೆಗೆ ನಡೆಯಹತ್ತಿದರು…..
undefined ಕಳೆದ ಎರಡು ವಾರಗಳಲ್ಲಿ ತಾನು ಪಟ್ಟ ಮಾನಿಸಿಕ ಪಾಡೆಲ್ಲ ಈಗ ಕೆಲವೇ ನಿಮಿಷಗಳಲ್ಲಿ ಗೆಳೆಯನಿಗೆ ಹೇಳಿ ಮುಗಿಸುವುದು ಅಸಾಧ್ಯವಾಗಿತೋರಿದರೂ ಅವನ ಜೆತೆಯಲ್ಲಿ ಹೀಗೆ ನಡೆಯುವದೇ ನಾಗಪ್ಪನಿಗೆ ಎಷ್ಟೊಂದು ಸುಖದಾಯಕವಾಗಿ ಕಂಡಿತೆಂದರೆ ತಾನು ಈ ಎರಡು ವಾರಗಳಲ್ಲಿ ಒಮ್ಮೆಯಾದರೂ ಹೇಗೆ ಅವನನ್ನು ಕಾಣಲು ಬರಲಿಲ್ಲ ಎನ್ನುವುದರ ಬಗೆಗೇ ಆಹ್ಚರ್ಯವೆನ್ನಿಸಿತು. ಮೊನ್ನೆಯೇನೊ ಒಮ್ಮೆ ಹೋಗಿದ್ದ. ಸೀತಾರಾಮ ಕೋಣೆಯಲ್ಲಿಲ್ಲದ ವೇಳೆಯಲ್ಲಿ. ಆದರೆ ಹಾಗೆ ಹೋಗುದರಲ್ಲಿ ಅವನನ್ನು ಆಗಿಂದಾಗ ಕಾಣಲೇಬೇಕೆನ್ನುವಂತಹ ತರಾತುರಿಯೇನಿರಲಿಲ್ಲ. ನಾಗಪ್ಪ ಮೌನಿಯಾಗಿದ್ದ.

ಇತ್ತ, ಸೀತಾರಾಮನೂ ತುಟಿ ಎರಡು ಮಾಡಲಿಲ್ಲ. ಇಂದೋ ನಾಳೆಯೋ ಅಮೇರಿಕೆಗೆ ಹೊರಡಲಿದ್ದ ಗೆಳೆಯ ಹೀಗೆ, ಇದ್ದಕ್ಕಿದ್ದ ಹಾಗೆ, ನೌಕರಿಯನ್ನೇ ಬಿಟ್ಟುಕೊಡಬೇಕಾದ ಪ್ರಸಂಗ : ಬದುಕಿನ ಬಿಸಿ ಇನ್ನೂ ತಾಕಿರದ_ಹುಂಬಗುತ್ತಿಗೆ ಎನ್ನುವಷ್ಟರ ಮಟ್ಟಿಗಿನ ಉತ್ಸಾಹ ತುಂಬಿದ_ಅವನ ಮನಸ್ಸು ಈ ಕ್ರಾಂತಿಕಾರಕ ಘಟನೆಯ ಅರ್ಥವನ್ನು ಗ್ರಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇಂತಹದೇನೋ ನಡೆದಿದೆ ಎನ್ನುವದನ್ನು ಮಾತ್ರ ಗೆಳೆಯನ ಮೋರೆಯೇ ಸ್ಪಷ್ಟವಾಗಿ ಸಾರುತ್ತಿತ್ತು. ತಾನು ಒಳಗೆ ಅನುಭವಿಸುತ್ತಿದ್ದ ನೋವನ್ನು ಮರೆಮಾಚುವುದು ಆ ಮೋರೆಗೆ ಸಾಧ್ಯವಾಗಿಲ್ಲ ಎನ್ನುವದು ಮಾತ್ರ ಸ್ವತಃ ಆ ಮೋರೆಯನ್ನು ಹೊತ್ತವನಿಗೇ ಗೊತ್ತಿರಲಿಲ್ಲ : ಇಷ್ಟೆಲ್ಲ ಮಾತನಾಡುವದಿದ್ದರೂ ಏನೂ ಮಾತನಾಡದೇ ಇಬ್ಬರೂ ಕ್ಯಾಂಟೀನಿಗೆ ಬಂದು ತಲುಪಿದ್ದರು.

ನೌಕರಿಯ ಮಾತು ಆಮೇಲೆ, ನಾವು ಸದ್ಯ ಇಲ್ಲಿ ಬಂದದ್ದು ಗೆಳೆಯನಿಗೆ ಹಸಿವೆಯಾಗಿದೆ ಎನ್ನುವ ಕಾರಣಕ್ಕಾಗಿ ಎಂಬುದರ ಅರಿವು ಇದ್ದವನ ಹಾಗೆ, ಸೀತಾರಾಮ ಮಾಣಿಯೊಬ್ಬನನ್ನು ‘ಗಜಾನನಾಽಽ’ ಎಂದು ಅವನ ಹೆಸರು ಹಿಡಿದು ಕರೆದ. ಗಜಾನನ ಓಡೋಡಿ ಬಂದ. ಅವನೂ ನಾಗಪ್ಪನ ಪರಿಚಯದವನೇ. ಹಲ್ಲು ತೋರಿಸಿ ನಕ್ಕು ನಮಸ್ಕಾರ ಮಾಡಿದ. ಮರಾಠಿಯಲ್ಲಿ_“ಬಹಳ ದಿನಗಳಾದವು ಸಾಹೇಬರನ್ನು ಕಾಣದೇ,” ಎಂದ. ಗಜಾನನ ಆತಂಕ ಕಂಡಿರದ ನಗು ನಾಗಪ್ಪನಿಗೆ ಸುಖ ಕೊಟ್ಟಿತು. ಆದರೆ ತನ್ನ ಹತೋಟಿ ಮೀರಿ ಒಳಗೆಲ್ಲೋ ಒಂದು ಬಿಕ್ಕಳಿಕೆ ಹೊರಟಂತಹ ಅನುಭವದಿಂದ ಕ್ಷಣಕಾಲ ತಬ್ಬಿಬ್ಬಾದ. ತನ್ನನ್ನು ಕೂಡಲೇ ಸಾವರಿಸಿಕೊಳ್ಳುತ್ತ ಗಜಾನನಿಗೆ ಉತ್ತರರೂಪವಾಗಿ ತಾನೂ ನಗಲು ಪ್ರಯತ್ನಿಸಿದ. ಸಾಹೇಬರದಿನ್ನೂ ಊಟವಾಗಿಲ್ಲವೆಂದು ತಿಳಿದೊಡನೆ, ತುಂಬ ಕೆಡುಕೆನೆಸಿ_“ಎಲ್ಲ ಮುಗಿದಿದೆ, ಸರ್. ಆದರೆ ಫಸ್ಟ್‌ಕ್ಲಾಸ್ ಮಸಾಲಾ ಆಮ್ಲೆಟ್ ?” ಎಂದು ಕೇಳಿದ. ನಾಗಪ್ಪ ಸೈ ಎಂದ. “ಎರಡು ಸ್ಲೈಸ್ ಬ್ರೆಡ್ ಹಾಗೂ ಎರಡು ಕಪ್ಪು ಚಹ,” ಎನ್ನುತ್ತ ಸೀತಾರಾಮನ ಮೋರೆ ನೋಡಿದ. ಸೀತಾರಾಮ ಮುಗುಳುನಗುತ್ತ, “ಔಞ. I will join you for tea,,” ಎಂದ.

ಎಲ್ಲಿಂದ ಮಾತು ಆರಂಭಿಸುವುದು ಎನ್ನುವದು ತಿಳಿಯದವನ ಹಾಗೆ ಸಿಗರೇಟೊಂದನ್ನು ಹೊತ್ತಿಸುತ್ತ, “You won’t believe, but you must,,” ಎಂದು ಆರಂಭಿಸಿ ಸೀತಾರಾಮ ಅರ್ಧಕ್ಕೇ ತಡೆದ. ಮಾತುಮಾತಿಗೆ ಆಣೆ-ಭಾಷೆ ಮಾಡುವ ಸೀತಾರಾಮನ ದುಷ್ಟಚಟ ನೆನಪಾಗಿ, ನಾಗಪ್ಪ, “I believe. You need not swear by your dead ancestors,” ಎಂದ. ಸೀತಾರಾಮನಿಗೆ ನಗು ಬಂತು. ಆದರೆ ಹೇಳಹೊರಟ ಮಾತಿಗೆ ಆ ನಗು ಶೋಭಿಸುವಂತಹದಲ್ಲವಾಗಿತ್ತೇನೋ , ತುಸು ಹೊತ್ತು ತಡೆದ. ಸಿಗರೇಟಿನ ಎರಡು ಜುರುಕೆಗಳ ನಂತರ ಬಾಯಿ ತೆರೆದ_“ಕಳೆದ ಎರಡು ತಿಂಗಳಿಂದ ನೀನು ಅಮೇರಿಕೆಗೆ ಹೋಗುವ ಸಂಗತಿಯನ್ನು ನಮ್ಮ ಲೀಗ್ ಸದಸ್ಯರಲ್ಲನೇಕರಿಗೆ ಮುಖತಃ ಹೇಳಿದ್ದೆ. ಹೊರಡುವ ಮೊದಲು ಒಂದು ಸತ್ಕಾರ-ಸಮಾರಂಭವನ್ನು ಕೂಡ…”ಇದನ್ನು ಕೇಳುತ್ತಿದ್ದ ನಾಗಪ್ಪನ ಕಣ್ಣುಗಳು ದೊಡ್ಡವಾಗುತ್ತಿದ್ದುದನ್ನು ನೋಡಿ ಏನೋ ಹೇಳಹೊರಡುವಷ್ಟರಲ್ಲಿ ಗಜಾನನ ಆಮ್ಲೆಟ್ ಹಾಗೂ ಬ್ರೆಡ್ ಮತ್ತು ಬೆಣ್ಣೆಗಳನ್ನು ತಂದ. ತಂದದ್ದನ್ನು ಟೇಬಲ್ ಮೇಲೆ ಸರಿಯಾಗಿ ಹಚ್ಚಿ ಇಡುತ್ತ, “ಚಹ ಈಗಲೇ ತರಲೇ, ಸರ್ ?” ಎಂದು ಕೇಳಿದಾಗ ನಾಗಪ್ಪನೇ, “ಹೌದು” ಎಂದ. ಆಮ್ಲೆಟ್ ನೋಡಿದೊಡನೆ ಹೊಟ್ಟೆ ಚೆನ್ನಾಗಿ ಹಸಿದಿದೆ ಎಂಬುದರ ಅರಿವು ಆದವನ ಹಾಗೆ, ‘ನೀನು ನಿಲ್ಲಿಸಬೇಡ. ನನಗೀಗ ಯಾವ ಸಂಗತಿಯೂ ಉದ್ರೇಕಕ್ಕೆ ಕಾರಣವಾಗಲಾರದು,’ ಎನ್ನುವ ಭಾವದಿಂದ ಸೀತಾರಾಮನತ್ತ ನೋಡುತ್ತ ಆಮ್ಲೆಟ್ ಮೇಲೆ ದಾಳಿ ಮಾಡಿದ.

ಗೆಳೆಯನ ರಾಜೀನಾಮೆ ಪ್ರಸಂಗಕ್ಕೆ ನೇರವಾಗಿ ಕೈ ಹಾಕುವ ಧೈರ್ಯವಾಗದೇ ಶ್ರೀನಿವಾಸನ ಕರಾಮತಿಗಳ ಬಗ್ಗೆ ತಾನು ವ್ಯಕ್ತಪಡಿಸುತ್ತ ಬಂದ ನಿಷೇಧವನ್ನು ಕುರಿತು ಮಾತನಾಡುವದೇ ಒಳ್ಲೆಯದೆಂದು ನಿಶ್ಚಯಿಸಿಕೊಂಡವನ ಹಾಗೆ, ಸೀತಾರಾಮ, ತಾನು ಅರ್ಧಕ್ಕೇ ಬಿಟ್ಟ ಮಾತಿಗೆ ಹಿಂತಿರುಗಿದ : “I knew you would protest…. ಬರೇ ವಾಮಮಾರ್ಗದಿಂದ ಹಣಮಾಡಿಕೊಂಡು ಮದುವೆ ಮುಂಜಿವೆ ಸಮಾರಂಭಗಳ ಕಾಲದಲ್ಲಿ ತಮ್ಮ ಹೆಂಡಂದಿರ ಮೈಮೇಲೆ ಮೆರೆಯುವ ಮಣಭಾರದ ದಾಗಿನೆಗಳ ಕಣ್ಣುಕುಕ್ಕಿಸುವ ಹೊಳಪಿನಿಂದಲೇ ಸಮಾಜದಲ್ಲಿ ತಾವು ಒಂದು ಪ್ರತಿಷ್ಠೆಯ ಸ್ಥಾನವನ್ನು ಗಳಿಸಿಕೊಂಡಿದ್ದೇವೆ ಎನ್ನುವ ಸುಳ್ಳು-ಅಭಿಮಾನದ ಬೋಳೀಮಕ್ಕಳೇ ಈ ಲೀಗಿನಲ್ಲಿ ತುಂಬಿದ್ದಾರೆ : ಪ್ರಿಂಟಿಂಗ್ ಪ್ರೆಸ್ಸಿನ ಶ್ರೀನಿವಾಸಾ ; ಉಡುಪೀ ಹೋಟೆಲ್ಲಿನ ನಾಯಕಾ ; ಬಿಲ್ಡಿಂಗ್ ಕಾಂಟ್ರಾಕ್ಟರ್ ಕಾಮತಾ ; ಪೌರೋಹಿತ್ಯವನ್ನು ಬಿಟ್ಟು ಲಗ್ನ-ಮುಂಜಿವಿಗಳ ಕಂತ್ರಾಟುದಾರನಾದ ಪಾಂಡ್ರಂಗಭಟ್ಟಾ_ಎಲ್ಲ ಎಲ್ಲ ಇಂಥವರೇ….! ನಿನ್ನ ಸತ್ಕಾರದ ಮಾತು ಎತ್ತಿದಾಗ ಅಸಡ್ಡೆ ತೋರಿಸಿದವನು ಶ್ರೀನಿವಾಸ ಎಂಬುದನ್ನು ನಂಬುತ್ತೀಯಾ ? ಯಾಕೆಂದು ಗೊತ್ತಿದೆಯೇ ? ಊಹಿಸಬಲ್ಲೆಯಾ ?_a wild guess ? ನಿನ್ನ ಕಾದಂಬರಿ ! ನೀನು ಕೊನೆಗೂ ಬರೆಯದೇ ಇದ್ದದ್ದು ! It all strated as a practical joke_ ಅಮ್ಮನ ಆಣೆಗೂ_ನೀನಿದನ್ನು ನಂಬಬೇಕು. ಹಿಂದೆ ಎಂದೋ ಒಮ್ಮೆ, ನೀನು ನೇತ್ರಾವತಿಯ ಬಗ್ಗೆ ಒಂದು ಕಾದಂಬರಿ ಬರೆಯಬೇಕು ಅಂದಿದ್ದೆ. ನಿನಗೆ ನೆನಪಿದೆಯೋ ಇಲ್ಲವೋ, ಇದನ್ನೇ ನಾನೊಮ್ಮೆ ಶ್ರೀನಿವಾಸನಿಗೆ ಹೇಳಿರಬೇಕು. ಯಾಕೆ ಹೇಳಿದೆನೋ ಅರಿಯೆ_may be just for the fun of scaring him…. ಆದರೆ ಬೋಳೀಮಗ ನಿಜಕ್ಕೂ ಹೆದರಿಕೊಂಡಿದ್ದ ಎನ್ನುವದು ಆಗ ಗೊತ್ತಾಗಲೇ ಇಲ್ಲ ನೋಡು. ಮುಂದೆ ನೀನು ಮುಂಬಯಿಗೆ ವರ್ಗವಾಗಿ ಬಂದಮೇಲೆ ಹೀಗೇ ಒಮ್ಮೆ ನಿನ್ನ ಬಗ್ಗೆ ಮಾತು ಬಂದಾಗ ಶ್ರೀನಿವಾಸ, “ಏಕಾ‌ಏಕೀ ಮುಂಬಯಿಗೆ ಬರಲು ಕಾರಣವೇನಂತೆ ?” ಎಂದು ಕೇಳಿದ. ನನಗೇನು ಹುಕ್ಕಿ ಬಂತೋ :the vulgar curiosity in his tone must have provoked me  : ನೀನಾಗಿ ಮುಂಬಯಿಗೆ ವರ್ಗಮಾಡಿಸಿಕೊಂಡು ಬಂದದ್ದು ಕಾದಂಬರಿ ಬರೆಯಲಿಕ್ಕೆ ಎಂದೆ…..ಖೇತವಾಡಿಯಲ್ಲಿ ನಡೆದ ದುರ್ಘಟನೆ ಕಾದಂಬರಿಯ ವಸ್ತುವಾಗಿದ್ದರಿಂದ ಅಲ್ಲೇ ಉಳಿದು ಬರೆಯುವ ಯೋಜನೆ ಎಂದೆ….ಅಮೇರಿಕೆಗೆ ಹೋಗುವ ಮೊದಲೇ ಮುಗಿಸುವ ಮನಸ್ಸಿದೆ ಎಂದು ಹೇಳಿದೆ….ಎಲ್ಲ ಸರಿಹೋದರೆ ಕೆಲವು ಭಾಗಗಳನ್ನಾದರೂ ಇಂಗ್ಲೀಷಿಗೆ ಭಾಷಂತರಿಸಿ ನಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿಸುವ ಭರವಸೆಯನ್ನು ನಾನೇ ಕೊಟ್ಟಿದ್ದೇನೆ ಎಂದೆ. ನಂಬಿದನೇ ಬೋಳೀಮಗ ! ಅಪ್ಪನಾಣೆ, ನಂಬಿದ. ಅಷ್ಟೇ ಅಲ್ಲ, ತನ್ನ ಧೈರ್ಯಕ್ಕೆ ಇನ್ನೂ ಕೆಲವರನ್ನು ಸೇರಿಸಿಕೊಂಡ. ಲೀಗಿನ ಕೆಲವು ಸದಸ್ಯರನ್ನು ಕುರಿತು ನೀನು ಕಾದಂಬರಿ ಬರೆಯಲು ಶುರುಮಾಡಿದ್ದೀ ಎನ್ನುವ ಸುದ್ದಿಯನ್ನು ತಾನೇ ಹರಡಿದ….”

ನಾಗಪ್ಪನ ಕಿವಿಗಳೇನೋ ಸೀತಾರಾಮನ ಮಾತುಗಳತ್ತವೇ ಇದ್ದವು. ಕಣ್ಣುಗಳು ಕೂಡ ಕೇಳುತ್ತಿದ್ದೇನೆ ಎನ್ನುವಂತಹ ನಂಬಿಕೆಯನ್ನೇ ಹುಟ್ಟಿಸುತ್ತುದ್ದವು. ಆದರೆ ಇದ್ದೆಲ್ಲವನ್ನೂ ಹೇಳಬೇಕೆನ್ನುವುದರಲ್ಲಿ ತನಗಿದ್ದ ಆಸ್ಥೆಗೆ ಪ್ರೇರಣೆಯಾದ ಜಗತ್ತಿನಿಂದ ನಾಗಪ್ಪ ಈಗ ಬಹಳ ದೂರ ನಡೆದಿದ್ದಾನೆ ಎನ್ನುವುದರ ಕಲ್ಪನೆ ಮಾತ್ರ ಸೀತಾರಾಮನಿಗಿರುವದು ಶಕ್ಯವೇ ಇರಲಿಲ್ಲ. ಮನುಷ್ಯಸಹಜವಾದ ಒಂದು ಕುತೂಹಲದಿಂದ, ಯಾವ ಆಸೆ-ಅಪೇಕ್ಷೆಗಳಿಗೂ ಕಟ್ಟಿ ಬಿದ್ದಿರದ, ಪರಿಶುದ್ಧವಾದ ಉತ್ಸುಕತೆಯಿಂದ ಸೀತಾರಾಮನ ಮಾತುಗಳನ್ನು ಕೇಳಕೇಳುತ್ತಿರುವಾಗ ಆ ಒಂದೂ ಮಗ ದಸ್ತೂರನ ಮಾತುಗಳು ಸೀತಾರಾಮ ಈಗ ಹೇಳುತ್ತಿದ್ದುದಕ್ಕೆ ಫಿಲ್ಟರ್ ರೀತಿ ಕೆಲಸಮಾಡಹತ್ತಿದ್ದವು : ‘ನೀನು ನಿನ್ನದೇ ಆದ ಜಗತ್ತಿನಲ್ಲಿ ನಿಂತು ಪ್ರೇರೇಪಿಸುವ ಕ್ರ್ತಿಗಳು ಇನ್ನೊಂದು ಜಗತ್ತಿನಲ್ಲಿಯ ಹಿತಾಸಕ್ತಿಗಳಿಗೆ ಧಕ್ಕೆತಂದವು….’ ಸೀತಾರಾಮನಿಗೆ, ಬರಿಯೆ ಒಂದು ‘ಆಟ’ವಾಗಿ ತೋರಿದ್ದು ಈ ಆತ್ಮ-ಪ್ರತಿಷ್ಠೆಯ ಪ್ರಪಂಚದ ಜನಕ್ಕೆ ತಮ್ಮ ಆಸಕ್ತಿಗಳಿಗೆ ಧಕ್ಕೆ ತರುವ ಹಲ್ಲೆಯಾಗಿ ತೋರಿರಬೇಕು. ಅಂತೂ ಶ್ರೀನಿವಾಸನಿಗೆ ತನ್ನ ಬಗ್ಗೆ ಮೊದಲಿನಿಂದಲೂ ಇದ್ದ ಹಗೆ ಮತ್ತೆ ಹೆಡೆಬಿಚ್ಚುವಂತೆ ಮಾಡಿದ್ದು ಈ ಸೀತಾರಾಮನ ಬೇಫೀಕೀರತೆಯೇ ಹಾಗಾದರೆ_ಎಂಬ ಗುಮಾನಿ ಅರೆಕ್ಷಣದ ಮಟ್ಟಿಗಾದರೂ ಹುಬ್ಬೇರಿಸುವಂತೆ ಮಾಡಿತು.

ಸೀತಾರಾಮ ಮಾತನಾಡುವ ಭರದಲ್ಲಿ ಗೆಳೆಯನು ಸದ್ಯ್ ಇಲ್ಲಿಗೆ ಬರಲು ಕಾರಣವಾದ ಸಂದರ್ಭವನ್ನೇ ಮರೆತಹಾಗಿತ್ತು.ಹುರುಪಿನಿಂದ, ಒಂದು ಬಗೆಯ ರೊಚ್ಚಿನಿಂದ, ಶ್ರೀನಿವಾಸನ ಬಗ್ಗೆ, ಲೀಗಿನ ಇತರ ಸದಸ್ಯರ ಬಗ್ಗೆ ಮಾತನಾಡಿಯೇ ಆಡಿದ : ಆಮ್ಲೆಟ್-ಬ್ರೆಡ್ ಮುಗಿಸಿ ಚಹ ಕುಡಿಯುವ ಹೊತ್ತಿಗೆ, ಶ್ರೀನಿವಾಸನನ್ನು ಕುರಿತು ತಾನು ಹಿಂದೆಂದೂ ಹೇಳಿರದ ಹೊಸ ಸಂಗತಿಗಳಿಗೆ ನಾಗಪ್ಪನಿಂದ ಈಗ ದೊಡ್ಡ ಪ್ರತಿಕ್ರಿಯೆಯನ್ನು ಸೀತಾರಾಮ ಅಪೇಕ್ಷಿಸಿರಬೇಕು. ಅಂತಹದೇನೂ ಆಗದೇ ಇದ್ದುದಕ್ಕೆ ವಿವರಣೆಯೆಂಬಂತೆ ನಾಗಪ್ಪನೇ ತುಂಬ ಸಂತವಾಗಿ ಹೇಳಿದ : “ಬೋಳೀಮಕ್ಕಳು ತನಿಖೆಯ ಹೊತ್ತಿಗೆ ಖಂಡಾಪಟ್ಟಿ ಬಿಯರು ಕುಡಿಸಿಬಿಟ್ಟರು….ಹೌದು, ಈ ಹೊತ್ತು ನನ್ನ ಬಗ್ಗೆ ಒಂದು ತನಿಖೆಯಿದ್ದದ್ದು ನಿನಗೆ ಗೊತ್ತಿದ್ದಂತಿಲ್ಲ. ಶ್ರೀನಿವಾಸ ನಿನಗೆ ಹೇಗೆ ತಿಳಿಸಲಿಲ್ಲವೋ_ಆಶ್ಚರ್ಯ ಎನ್ನಿಸುತ್ತದೆ : He has played a big part in it….” ಈ ಮಾತಿನಿಂದ ಒಮ್ಮೆಲೇ ಉತ್ತೇಜಿತನಾದ ಸೀತಾರಾಮ ತೊಡೆಗ ಮೇಲೆ ಬಲವಾಗಿ ಬಡೆದುಕೊಂಡು_“That rascal….! ಈಗ ಅರ್ಥವಾಗುತ್ತದೆ….. ‘ನಿನ್ನ ಗೆಳೆಯನಿಗೆ ಕಾದಿರುವ ದೊಡ್ಡ ಸತ್ಕಾರ ನೋಡುವಿಯಂತೆ’ ಅಂದಿದ್ದ ಎಂಟು ದಿನಗ ಹಿಂದೆ…Oh my God…..We will fight him….fight him to the finish….” ಎಂದ.

ನಾಗಪ್ಪನ ಮೇಲೆ ಇದಾವುದರ ಪರಿಣಾಮವೇ ಆಗುತ್ತಿರಲಿಲ್ಲ. ಹಸಿದ ಹೊಟ್ಟೆಗೆ ಆಮ್ಲೆಟ್-ಚಹ ನೆಮ್ಮದಿ ತರಿಸಿದಮೇಲೆ ಬಿಯರಿನ ಅಮಲು ಸಂಪೂರ್ಣ ಇಳಿದಿರದ ಕಣ್ಣುಗಳು ನಿದ್ದೆಯಿಂದ ಬಾಡಹತ್ತಿದವು : “ಈಗ ಬೇಡ ಸೀತಾರಾಮ. ಇದೆಲ್ಲದರ ಬಗ್ಗೆ ನಿನ್ನ ಜತೆಗೆ ಬಹಳ ಮಾತನಾಡುವದಿದೆ. ಸಂಜೆ ಮತ್ತೆ ಭೆಟ್ಟಿಯಾಗೋಣ. ಈಗ ಮನೆಗೆ ಹೋಗಿ ಗಡದ್ದಾಗಿ ಒಂದು ನಿದ್ದೆ ಮಾಡಬೇಕು. ಅಲ್ಲಿಯತನಕ ಇದನ್ನಿಷ್ಟು ಓದಿನೋಡು : ನನ್ನ ಬಗ್ಗೆ ತನಿಖೆಯವರು ಸಿದ್ಧಪಡಿಸಿದ confidential report. ಓದಿ ಸಿಟ್ಟಿನಿಂದ ತಲೆ ಕೆಡಿಸಿಕೊಳ್ಳಬೇಡ ಮತ್ತೆ. ಅದರಲ್ಲಿ ವರದಿಯಾದ ಕೆಲವು ಸಂಗತಿಗಳು ಪ್ರತ್ಯೇಕವಾಗಿ ನಿಜವಾದವುಗಳು. ಉಳಿದವುಗಳು ನನಗೇ ಗೊತ್ತಿಲ್ಲದವು. ಬಿಡಿಸಿದ ಒಟ್ಟೂ ಚಿತ್ರ ಮಾತ್ರ ಸುಳ್ಳಿನ ಬೊಂತೆ ! ಈ ವರದಿಯನ್ನು ಬರೆದವನು ಸಾಮಾನ್ಯನೆಂದು ತಿಳಿಯಬೇಡ : ಇಂಥ ಸುಳ್ಳುಗಳ ಬೊಂತೆಯನ್ನೇ ಅಪ್ಪಟ ಸತ್ಯವೆಂದು ಮೆರೆಯಿಸುವ ಸಾಮರ್ಥ್ಯದ ಬಗ್ಗೆ, ಕಟ್ಟುವ ದೃಷ್ಟಿಕೋನದ ಬಗ್ಗೆ ದೊಡ್ಡ ಸಿದ್ಧಾಂತವೇ ಇದೆ ಅವನ ಬಳಿ. ತನಿಖೆಯ ಆದ್ಯಂತವೂ ಅದನ್ನು ಕುರಿತು ಕೊರೆದದ್ದೇ ಕೊರೆದದ್ದು ! ಓದಿ ನೋಡು. ಸಂಜೆ ಭೇಟಿಯಾದಾಗ ಚರ್ಚಿಸುವಾ….and you will know what I have resigned from….” ಎನ್ನುತ್ತ ದಸ್ತೂರ್ ಕೊಟ್ಟ ರಿಪೋರ್ಟಿನ ಪ್ರತಿಯನ್ನು ಸೀತಾರಾಮನ ಕೈಯಲ್ಲಿ ಇರಿಸಿದ : “ಜೋಪಾನವಾಗಿ ಇಟ್ಟುಕೋ. ಬೇರೆ ಪ್ರತಿಯಿಲ್ಲ. ಊಟಕ್ಕೆ ಹೊರಗೇ ಹೋಗೋಣ. ‘ಪ್ಲೋರಾ’ಗೆ ? You will be my guest….Thanks for the lunch.” ಕೈ ಕುಲುಕಿ ಬೀಳ್ಕೊಳ್ಳುವಾಗ ಸೀತಾರಾಮನ ಮೋರೆಯ ಮೇಲೆ ಮೂಡಿದ ಏನೋ ನಾಗಪ್ಪನನ್ನು ಬಲವಾಗಿ ತಟ್ಟಿತು.

undefined- ಅಧ್ಯಾಯ ಮೂವತ್ತೈದು –

ಕಳೆದ ಹದಿನಾಲ್ಕು ದಿನಗಳಲ್ಲಿ ತಾನು ಪಟ್ಟ ಯಾತನೆ ಕೊನೆಗೊಂಡ ರೀತಿಯ ನಿಜವಾದ ಅರ್ಥ ಒಂದು ಆಘಾತದ ಬಲದಿಂದ ನಾಗಪ್ಪನಿಗೆ ಹೊಳೆದದ್ದು ನಿದ್ದೆಯಿಂದ ಎಚ್ಚರಗೊಂಡು ಹಾಸಿಗೆಯಲ್ಲಿ ಕುಳಿತಾಗಲೇ.

ಕೈಗಡಿಯಾರ ನೋಡಿಕೊಂಡ : ಆರು ಹೊಡೆಯಲು ಬಂದಿತ್ತು. ಆಗಿನಿಂದಲೂ ಒಂದು ಬಗೆಯ ಹುಂಬು ಧೈರ್ಯ ತುಂಬಿದಂತಿದ್ದ ಬಿಯರಿನ ಅಮಲು ಈಗ ಸಂಪೂರ್ಣವಾಗಿ ಇಳಿದಿತ್ತು. ಬದಿಯ ಬೋಳು ಕಿಡಕಿಯಿಂದ ಕಾಣುತ್ತಿದ್ದ ಇದಿರಿನ ಚಾಳು, ಅಸ್ತಕೆ ಹೊರಟ ಸೂರ್ಯನ ಹಳದೀ ಬಣ್ಣದ ಬಿಸಿಲಲ್ಲಿ, ಎಲ್ಲ ಆತ್ಮೀಯತೆಯ ಬಿಸಿಯನ್ನೂ ಕಳಕೊಂಡ ನಿರ್ಜೀವ ಗೆಳೆತನದ ಮುಸುಕೆಳೆದು ನಿಂತಂತೆ, ನಿಂತಿತ್ತು. ತಾನು ಸಿಲುಕಿಕೊಂಡ ಸನ್ನಿವೇಶದ ಸರಿಯಾದ ಪರಿಚಯ ಈಗ ಆಯಿತೆನ್ನುವಂತೆ ಬದುಕಿನಲ್ಲಿ ಈವರೆಗೂ ಅನುಭವಿಸಿರದ ತೀವ್ರತೆಯಿಂದ ಅರಿವಿಗೆ ಬಂದ ತನ್ನ ಏಕಾಕಿತನ ಚೀರಿಕೊಳ್ಳುವಷ್ಟರ ಮಟ್ಟಿಗೆ ಹೆದರಿಸಿ ನಡುಗಲು ಹೆಚ್ಚಿತು : ಅತ್ತುಬಿಡಬೇಕು ಎನ್ನುವಷ್ಟು ಮನಸ್ಸು ಭಾವಾವಿಷ್ಟವಾಗಿತ್ತು. ಮುಂದಿನ ಚಾಳಿನ ಮೇಲೆ ಬಿದ್ದ ಅರಿಸಿಣ ಬಣ್ಣದ ಬಿಸಿಲೇ ಈ ಭಾವುಕತೆಗೆ ಕಾರಣವಾಗಿತ್ತು ಎಂಬ ಅನ್ನಿಸಿಕೆಯಿಂದ ಎಂಬಂತೆ ಹಾಸಿಗೆಯಿಂದ ಎದ್ದು ಕಿಡಕಿಯ ಕದ ಮುಚ್ಚಿ ದೀಪ ಹಾಕಿದ. ನೆಮ್ಮದಿಯೆನ್ನಿಸುವ ಬದಲು ಜೀವಕ್ಕೆ ಹತ್ತಿದ ಹೆದರಿಕೆ ಹೆಚ್ಚೇ ಆಯಿತು. ಇಲ್ಲ, ಹೀಗೆ ಒಬ್ಬನೇ ರೂಮಿನಲ್ಲಿ ಕೂತುಬಿಟ್ಟರೆ ಹುಚ್ಚೇ ಹಿಡಿದೀತು, ಅನ್ನಿಸಿತು. ಥಟ್ಟನೆ ಹೊಳೆದ ಒಂದು ಕಲ್ಪನೆಯಿಂದ ಚುರುಕುಗೊಂಡವನ ಹಾಗೆ ಕಿಡಕಿಯ ಕದ ತೆರೆದು ಹೊರಗೆ ಹೋಗುವ ತಯಾರಿ ಮಾಡಹತ್ತಿದ : ಮೋರಿಗೆ ಹೋಗಿ ಮೋರೆ ತೊಳೆದುಕೊಂಡ. ಕೈಗೆ ಸಿಕ್ಕ ಶರ್ಟು ಪ್ಯಾಂಟು ಧರಿಸಿದ. ಹಳೆಯ ಬೂಟು ಹಾಕಿಕೊಳ್ಳುವ ಮನಸ್ಸಾಗದೇನೇ ಚಪ್ಪಲಿ ಮೆಟ್ಟಿಕೊಂಡ. ಬೆಳಿಗ್ಗೆ ಹಾಕಿಕೊಂಡ ಪ್ಯಾಂಟಿನ ಕಿಸೆಯೊಳಗಿಂದ ಹಣದ ಪಾಕೀಟು ತೆಗೆದುಕೊಂಡ. ಕದಕ್ಕೆ ಬೀಗ ಹಾಕಿ ಜಿನ್ನೆಯ ಕಡೆಗೆ ನಡೆಯುವಾಗ ಚಾಲಿನಲ್ಲಿಯ ಒಬ್ಬರ ಪರಿಚಯವೂ ತನಗಿಲ್ಲ ಎನ್ನುವ ರೀತಿ, ಅತ್ತಿತ್ತ ಕಣ್ಣುಹಾಯಿಸದೇ, ಮೂಗಿನ ನೇರಕ್ಕೆ ಹೆಜ್ಜೆ ಹಾಕಹತ್ತಿದ. ಮನಸ್ಸು ಒಂದನ್ನೇ ಕುರಿತು ಧೇನಿಸುತ್ತಿದ್ದವನ ಹಾಗೆ ಭಡಭಡ ಜಿನ್ನೆ ಇಳಿದು ಕೆಳಗಿನ ರೆಸ್ಟೋರಂಟಿಗೆ ಹೋದ. ಟೆಲಿಫೋನ್ ಕೆಟ್ಟಿದೆ ಎಂಬ ಸುದ್ದಿ ಸಿಕ್ಕಾಗ ತುಸು ನಿರಾಶನಾದ. ಇನ್ನೊಂದು ಫೋನು ಆರನೇ ಗಲ್ಲಿಯ ಕೊನೆಯಲ್ಲಿತ್ತು. ಅಲ್ಲಿಗೇ ಹೋದ. ಹಿಂದೊಮ್ಮೆ, ರೆಸ್ಟೋರಂಟೀಗೆ ಫೋನ್ ಮಾಡಲು ಬಂದಾಗ ಭೇಟಿಯಾದ ಹುಡುಗಿಯೇ ಮಾತನಾಡುತ್ತಿದ್ದದ್ದು ಕಂಡಿತು.ಇವನ ಗುರುತು ಹಿಡಿದ ಹುಡುಗಿ ಮೋಹಕವಾಗಿ ನಕ್ಕಳು_ಇದೀಗ ಮುಗಿಸುತ್ತೇನೆ ಎನ್ನುವ ಸನ್ನೆಯನ್ನು ಕಣ್ಣಿನಿಂದಲೇ ಮಾಡುತ್ತ, ಅವಳ ನಗು ಒಳಗೆ ಗೆಲುವು ಚಿಗುರಲು ಕಾರಣವಾಯಿತು. ರಾಣಿ ನೆನಪಿಗೆ ಬಂದಳು. ಈ ಹೊತ್ತು ಅವಳು ಬೇಕೇಬೇಕು ಅನ್ನಿಸಿತು. ಆದರೆ ಸದ್ಯ ಮಾಡಬೇಕಾದ ಜರೂರಿಯ ಕೆಲಸ ಸೀತಾರಾಮನಿಗೆ ಫೋನ್ ಮಾಡುವುದಾಗಿತ್ತು. ಭರವಸೆ ಕೊಟ್ಟ ಹಾಗೇ ಹುಡುಗಿ ಫೋನ್ ಬಿಟ್ಟುಕೊಟ್ಟಿದ್ದಳು. ಚಂದವಾಗಿ ಇನ್ನೊಮ್ಮೆ ನಕ್ಕು_“It is all yours, Sir,” ಎಂದಳು. ‘ಥ್ಯಾಂಕ್ಸ್’ ಎನ್ನುವಾಗ, ತುಂಬ ದಿಟ್ಟ ಹುಡುಗಿ ಎಂದುಕೊಂಡು, ತನ್ನಷ್ಟಕ್ಕೇ ನಕ್ಕ.

ಸೀತಾರಾಮನ ಫೋನ್ ನಂಬರ್ ಡಾಯಲ್ ಮಾಡಿದ. ಆಪರೇಟರ್ ಲೈನ್ ಮೇಲೆ ಬಂದು, “ಪ್ಲೀಜ್ ಹೋಲ್ಡಾನ್,” ಎಂದಾಗ ಒಂದೂ ಮಗ ಇದ್ದರೆ ಸಾಕು ; ಇಷ್ಟರೊಳಗೇ ಹೋಗಿರದಿದ್ದರೆ ಸಾಕು ಎನ್ನುವ ಕಾತರದಿಂದ ಸೀತಾರಾಮ ಫೋನ್ ಮೇಲೆ ಬರುವುದನ್ನು ಕಾಯಹತ್ತಿದ. ಅವನು ಫೋನ್ ಮೇಲೆ ಬಂದು, ಮಾತನಾಡಿಸುತ್ತಿದ್ದವನು ನಾಗಪ್ಪನೆಂದು ತಿಳಿದದ್ದೇ ತಡ_ಒಥಿ My God ! I have really started believing in telepathy…. ನೀನು ನಂಬಬೇಕು ನಾಗಪ್ಪಾ ! ಒಂದೇ ಒಂದು ಕ್ಷಣದ ಮೊದಲಷ್ಟೇ ನಿನ್ನನ್ನು ನೆನೆದಿದ್ದೆ,” ಎಂದ. ಏಕೋ ಸೀತಾರಾಮನ ಮಾತಿನ ಧಾಟಿ ಎಂದಿನದಾಗಿ ತೋರಲಿಲ್ಲ. ಅದರಲ್ಲಿ ಏನೋ ಏನೋ ಕಡಿಮೆಯಾಗಿತ್ತು. ಏನೆನ್ನುವದು ನಾಗಪ್ಪನಿಗೆ ಸ್ಪಷ್ಟವಾಗಲಿಲ್ಲ. ತಾನು ಫೋನ್ ಮಾಡಲು ಬಂದ ಉದ್ದೇಶ ತಿಳಿಸುವ ಮನಸ್ಸಾಗಲಿಲ್ಲ. ‘ಏಕೋ ಮಾಧ್ಯಾಹ್ನದ ನಿದ್ದೆಯಿಂದ ಎಚ್ಚರವಾದದ್ದೇ, ಆಽಽ ಎನ್ನುತ್ತ ಎದ್ದು ಬಂದ ಏಕಾಕಿತನ ಎಷ್ಟೊಂದು ಹೆದರಿಸಿಬಿಟ್ಟಿತೆಂದರೆ ಈಗಲೇ ನಿನ್ನ ಆಫೀಸಿಗೇ ಬಂದುಬಿಡುತ್ತೇನೆ ಟ್ಯಾಕ್ಸಿಯಿಂದ, ನಿನ್ನ ಹತ್ತಿರ ಮಾತನಾಡುವುದು ಬಹಳವಿದೆ_ಎಂದು ತಿಳಿಸಲು ಈಗ ಫೋನ್ ಮಾಡುತ್ತಿದ್ದೇನೆ ಎನ್ನುವದಿತ್ತು. ಸೀತಾರಾಮನ ದನಿ ಕೇಳಿಸಿದಮೇಲೆ ಹಾಗೆ ಅನ್ನಬೇಕೆಂದು ತೋರಲಿಲ್ಲ. ನೋವಿನ ಸಂಗತಿಯೆಂದರೆ, ಸೀತಾರಾಮ ಆ ಸಂಧಿಯನ್ನೇ ಅವನಿಗೆ ಕೊಡಲಿಲ್ಲ : ಒಂದೇ ಕ್ಷಣದ ಮೊದಲು ತನಗೆ ನಾಗಪ್ಪನ ನೆನಪಾದದ್ದರಿಂದಲೇ ಅವನೀಗ ಫೋನ್ ಮಾಡುತ್ತಿದ್ದಾನೆ ಎನ್ನುವದನ್ನು ಗ್ರಹೀತ ಹಿಡೆದೇ ಮಾತನಾಡುವವನ ಹಾಗೆ_“I just can’t believe it,” ಎಂದ.

“What is it that you can’t believe ?” _ನಾಗಪ್ಪನ ಗುಮಾನಿ ಗಟ್ಟಿಯಾಗಹತ್ತಿತ್ತು : ಇವನು ನಾಲ್ಕೇ ನಾಲ್ಕು ತಾಸುಗಳ ಹಿಂದೆ ಭೇಟಿಯಾದ ಸೀತಾರಾಮನೇ ಅಲ್ಲ ಅನ್ನಿಸಿತು.

ಸೀತಾರಾಮನೇ ಮಾತನಾಡಿದ : “ನೀನು ಆಗ ಕೊಟ್ಟ ರಿಪೋರ್ಟನ್ನು ಓದಿದೆ,” ಎಂದು, ತಾನು ನಂಬಲಾರೆನೆಂದದ್ದು ಆ ರಿಪೋರ್ಟು ಎನ್ನುವುದನ್ನು ಸ್ಪಷ್ಟಪಡಿಸಿದ.

“ನಂಬಬೇಡ ಸೀತಾರಾಮ್. ಅದು ಚಿತ್ರಿಸಿದ ವ್ಯಕ್ತಿತ್ವ ನನ್ನದೆಂದೂ ನಂಬುತ್ತೀಯಾ ? ಅದಕ್ಕೇ ಬರುವವನಿದ್ದೆ ನಿನ್ನ ಜೊತೆ ಮಾತನಾಡಲು : ಮಾನವ-ಜೀವಿಗಳನ್ನು ಬೇರೆಯೇ ಒಂದು ದೃಷ್ಟಿಕೋನದಿಂದ ನೋಡುವ ವಿಲಕ್ಷಣ ಲೋಕವೊಂದು ಇದೇ ಮಹಾನಗರದಲ್ಲಿ ಹೇಗೆ ಬೇರೂರಿದೆ ಎಂಬುದರ ಬಗ್ಗೆ….”

ಸೀತಾರಾಮ ಒಮ್ಮೆಲೇ ತಾಳ್ಮೆಗೆಟ್ಟವನ ಹಾಗೆ : “Come on Nagappa. A point of view can interpret facts ; it cannot create them…. ನಿನ್ನ ಅಪ್ಪ-ಅಮ್ಮ ಬ್ರಾಹ್ಮಣರಾಗಿರಲಿಲ್ಲ ಎನ್ನುವದೂ ಸುಳ್ಳೇ ? ಸುಳ್ಳಲ್ಲವೆಂದು ಗೊತ್ತಿದ್ದೂ ನೀನು….”

“ಇದು ನಿಜವಲ್ಲ, ಸೀತಾರಾಮ, ನನ್ನ ಅಪ್ಪ-ಅಮ್ಮರ ಬಗ್ಗೆ ಖಚಿತವಾಗಿ ನಾನೇನೂ ಅರಿಯೆ, ಇಷ್ಟೆ, “I care a damm if they were not Brahmins….”

ಹೌಽಽಽದೆ ? ಬಹಳ ದೊಡ್ಡ ಕ್ರಾಂತಿಕಾರಿ ನೀನು ಎಂದು ತೋರಿಸಿಕೊಳ್ಳಬೇಡ. ನಿನ್ನ ತಾಯಿಯಾಗಲೀ ಅಪ್ಪನಾಗಲೀ ಬ್ರಾಹ್ಮಣರಾಗಿರಲಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಶ್ರೀನಿವಾಸನ ಹತ್ತಿರ. ಅವನು ಒದಗಿಸಿದ ಮಾಹಿತೆಯೇ ಈ ರಿಪೋರ್ಟಿಗೆ ಆಧಾರವಾಗಿದೆ…. ಅರ್ಧಗಂಟೆಯ ಮೊದಲಷ್ಟೆ ಶ್ರೀನಿವಾಸ ಇಲ್ಲಿ ಬಂದಿದ್ದ. ನಿನ್ನ ಫೋನ್ ಬರುವ ಎರಡೇ ಎರಡು ಮಿನಿಟುಗಳ ಮೊದಲು ಹೊರಟುಹೋದ. ಅವನು ಬಂದದ್ದರಿಂದಲೇ ಆಫೀಸಿನಲ್ಲಿ ಇಷ್ಟು ಹೊತ್ತು ಕೂಡ್ರುವುದಾಯಿತು. ಇಂದು ಸಂಜೆ ಏಳು ಗಂಟೆಗೆ ಸ್ಕಾಲರ‍್ಶಿಪ್ ಲೀಗಿನ ವರ್ಕಿಂಗ್ ಕಮಿಟಿಯ ಒಂದು ಎಮರ್ಜನ್ಸೀ ಮೀಟಿಂಗ್ ಕರೆಯಲಾಗಿದೆ….”
“ಅದಕ್ಕೂ ನನಗೂ ಏನು ಸಂಬಂಧ ?”
“ನೀನು ಮಾಡಿದಂಥ ಮೋಸ ಮತ್ತೆ ಆಗದಿರಲು ನಾವು ಕೈಗೊಳ್ಳಬೇಕಾದ ಉಪಕ್ರಮಗಳ ಚರ್ಚೆ….”

ನಾಗಪ್ಪನ ಸಿಟ್ಟು ಮಸ್ತಕಕ್ಕೇರಹತ್ತಿತು. ಇವನು ಟೆಲಿಫೋನ್ ಮೇಲೆ ತೆಗೆದುಕೊಳ್ಳುತ್ತಿದ್ದ ವೇಳೆಗೆ ಬೇಸರಪಟ್ಟು ಅದೇ ಬೂಥಿಗೆ ಬಂದ ಇನ್ನಿಬ್ಬರು ಹಾಗೇ ಹೊರಟುಹೋದರು :
“ಇದರಲ್ಲೆಂಥ ಮೋಸ ? ಇದೆಲ್ಲ ಶ್ರೀನಿವಾಸನ ಕಿತಾಪತಿ. ಇವನಿಗೆ ನನ್ನ ಬಗ್ಗೆ ಇಷ್ಟೊಂದು ಹಗೆ ಯಾಕೊ ?_ಇನ್ನೂ ಅರ್ಥವಾಗುವುದಿಲ್ಲ.”

“ನಿನ್ನ ಅಪ್ಪ-ಅಮ್ಮ ಬ್ರಾಹ್ಮಾಣರಲ್ಲ ಎನ್ನುವುದನ್ನು ಈಗ ತನಿಖೆಯ ಆಯೋಗದ ಇದಿರು ನೀನೂ ಒಪ್ಪಿಕೊಂಡೀದ್ದೀಯಂತಲ್ಲ. ನೀನು ಹದಿನೆಂಟು ಅರ್ಷದವನಿದ್ದಾಗಲೇ ಈ ಸಂಗತಿ ನಿನಗೆ ತಿಳಿದಿತ್ತೆಂದು ಕೂಡ….ನನಗಿದೆಲ್ಲ ಹೇಗೆ ಗೊತ್ತಾಯಿತೆಂದು ಆಶ್ಚರ್ಯವಾಗುತ್ತಿರಬೇಕು ಅಲ್ಲವೆ ? ಶ್ರೀನಿವಾಸನೇ ಹೇಳಿದ : ತನಿಖೆ ಮುಗಿದ ನಂತರ ಆ ಆಯೋಗದ ಮಂದಿಯ ಜೊತೆಗೇ ತಾಜಮಹಲಿನಲ್ಲೇ ಊಟ ಮಾಡಿದ…..”

ನಾಗಪ್ಪನಿಂದ ನಂಬುವುದಾಗಲಿಲ್ಲ….ಕ್ಲೋಕ್-ರೂಮಿನಿಂದ ಹೊರಗೆ ಬಂದಮೇಲೆ ರಾಜೀನಾಮೆ ಕೊಡುವ ತನ್ನ ನಿರ್ಧಾರವನ್ನು ದಸ್ತೂರನಿಗೆ ತಿಳಿಸುವ ಕೆಲವೇ ಕ್ಷಣಗಳ ಮೊದಲಷ್ಟೇ_ಈವರೆಗಿನ ಮಾತುಕತೆಗೆ ಯಾವ ಪೂರ್ವಾಪರ ಸಂಬಂಧವೂ ಇಲ್ಲದ_ಅಪ್ಪ-ಅಮ್ಮರ ಜಾತಿಯ ಪ್ರಶ್ನೆಯಿಂದ ಅವನು ತನ್ನನ್ನು ಕೆಣಕಿದಾಗ ಸಿಟ್ಟಿನಿಂದ ಕೊಟ್ಟ ಒಂದು ನಾಟಕೀಯವಾದ ಉತ್ತರ ಕೂಡ ಶ್ರೀನಿವಾಸನ ಕಿವಿಯನ್ನು ಇಷ್ಟು ಬೇಗ ಮುಟ್ಟಬೇಕಾದರೆ….! ಶ್ರೀನಿವಾಸನ ಸಮಾಧಾನಕ್ಕಾಗಿಯೇ ದಸ್ತೂರ್ ಆ ಪ್ರಶ್ನೆಯನ್ನು ಆ ಗಳಿಗೆಯಲ್ಲಿ ಕೇಳಿರಬೇಕು….ಸೀತಾರಾಮನಿಗೀಗ ಏನೂ ಹೇಳಿ ಏನೂ ಉಪಯೋಗವಿಲ್ಲ ಎಂದು ತೋರಿದವನ ಮನಸ್ಸು ಹೊಸ ನಿರ್ಧಾರಕ್ಕೆ ಗಟ್ಟಿಯಾಗುತ್ತಿತ್ತು…. ಇವನ ಮೌನವನ್ನು ತಪ್ಪಾಗಿ ತಿಳಿದ ಸೀತಾರಾಮನೇ ಮುಂದುವರಿಸಿದ :

“ಇದರರ್ಥ : ಸಾರಸ್ವತ ಬ್ರಾಹ್ಮಣ ವಿದ್ಯಾರ್ಥಿಗಳಿಗೇ ಮೀಸಲಾಗಿಟ್ಟ ಈ ಸ್ಕಾಲರ‍್ಶಿಪ್ ಸಲುವಾಗಿ ಅರ್ಜಿ ಮಾಡುವಾಗ, ಮುಂದಿನ ಎಂಟು ವರ್ಷಗಳವರೆಗೆ ಅದನ್ನು ಪಡೆಯುವಾಗ ನೀನು ಬ್ರಾಹ್ಮಣನಲ್ಲ ಎನ್ನುವುದು ನಿನಗೆ ಗೊತ್ತಿತ್ತು….”

“ಈಗಲೂ ಗೊತ್ತಿಲ್ಲ. ಮೇಲಾಗಿ ಸ್ಕಾಲರ‍್ಶಿಪ್ ಸಲುವಾಗಿ ಅರ್ಜಿ ಮಾಡಿದಾಗ ನನಗೆ ಬರೇ ಹನ್ನೆರಡು ವರ್ಷ ಪ್ರಾಯ. ಅದೂ ಒಂದು ಲೋನ್ ಸ್ಕಾಲರ‍್ಶಿಪ್ ಸಲುವಾಗಿ, ಪೈ ಬಿಡದೇ ಹಿಂತಿರುಗಿಸಿದ್ದೇನೆ….”

“ಮುಖ್ಯ ಮುದ್ದೆ ಅದು ಅಲ್ಲವೇ ಅಲ್ಲ….The point is_you and ypur father were capable of misrepresenting facts if it…..”

undefined“ಸೀತಾರಾಮ್ ಜೋಕೆ !…. I know you and your dirty trlbe. ಬಾಯಿ ಬಿಗಿ ಹಿಡಿದು ಮಾತನಾಡು. ನೀನು ಯಾವ ಜಾತಿಯವನು ಎನ್ನುವುದು ನಿನ್ನ ಈಗಿನ ವರ್ತನೆಯಿಂದ ಗೊತ್ತಾಗುತ್ತದೆ. ಲಫಂಗರೆಲ್ಲ ಒಂದೆಡೆ ಕೂಡಿ ನನ್ನನ್ನು ಮುರಿಯಲು ಹೂಡಿದ ಸಂಚಿನ ಅಂಗವಾಗಿ ಸಿದ್ಧಪಡಿಸಿದ ಒಂದು ಹೊಲಸು ರಿಪೋರ್ಟನ್ನು ಓದಿದ ಕ್ಷಣಾರ್ಧದಲ್ಲಿ ನಮ್ಮ ಗೆಳೆತನವನ್ನು ಕೂಡ ಮರೆತುಬಿಡುವಷ್ಟು ಹೀನ ಮಟ್ಟಕ್ಕೆ ನೀನು ಇಳಿಯಬಹುದೆಂದು ನಾನು ಬಗೆದಿರಲಿಲ್ಲ. ನಮ್ಮ ಇಷ್ಟು ದಿನದ ಗೆಳೆತನದ ಹಿನ್ನೆಲೆಯಲ್ಲಿ ನೀನದರ ಅರ್ಥ ಮಾಡುತ್ತೀ ಎಂಬ ಧೈರ್ಯದ ಮೇಲೇ ನಿನ್ನ ಕೈಯಲ್ಲಿ ಆ ರಿಪೋರ್ಟನ್ನು ನಾನಾಗಿಯೇ ಕೊಟ್ಟಿದ್ದೆ….”

“ಬೆದರಿಕೆ ಹಾಕುತ್ತೀಯೇನೋ ? ಅಪ್ಪ-ಅಮ್ಮರ ಬಗ್ಗೇ ಸರಿಯಾಗಿ ಗೊತ್ತಿಲ್ಲ ಎನ್ನುವ ನೀನು ಎಂಥವನೆಂಬುದು ಗೊತ್ತಾಗುವುದಿಲ್ಲವೇನೋ ? ನೀನು ರಾಜೀನಾಮೆ ಕೊಟ್ಟ ಪರಾಕ್ರಮದ ಹಿಂದಿನ ಗುಟ್ಟು ನನಗೆ ಗೊತ್ತಿಲ್ಲವೆಂದು ತಿಳಿಯಬೇಡ : ರಾಜೀನಾಮೆ ನೀನು ಕೊಟ್ಟದ್ದಲ್ಲ ; ನಿನ್ನಿಂದ ಕೊಡಿಸಿದ್ದು. ಪ್ರಕರಣವನ್ನು ಅಷ್ಟಕ್ಕೇ ಮುಗಿಸಿ ನಿನ್ನ ಬಿಡುಗಡೆ ಮಾಡಿದರೆನ್ನುವುದು ಪೂರ್ವಜನ್ಮದ ಪುಣ್ಯವೆಂದು ತಿಳಿ. ನಮ್ಮ ಗೆಳೆತನವನ್ನು ನಂಬಿ ಆ ಕಾನ್ಫಿಡೆನ್ಶಿಲ್ ರಿಪೋರ್ಟಿನ ಕಾಪಿ ನನ್ನ ಕೈಲಿ ಕೊಟ್ಟೆಯಲ್ಲವೆ ! ಸೀತಾರಾಮನೆಂಬ ಗೆಳೆಯನಿದ್ದುದರ ನೆನಪು ಈಗ ಆಯಿತಲ್ಲವೆ ? ಆದರೆ ಸಸ್ಪೆಂಡ್ ಮಾಡಿದಾಗ ಮಾತ್ರ ಶ್ರೀನಿವಾಸನೇ ಬೇಕಾದ : ಹೋಗಿದ್ದೆಯಂತಲ್ಲ ಅವನ ಕಾಲು ಹಿಡಿಯಲು. ಕಾಲಿಗೆ ಬೂಟು ಹಾಕುವ ಪುರುಸತ್ತೂ ಇಲ್ಲದವನ ಹಾಗೆ ಅವನ ಮನೆ ಬಿಟ್ಟು ಓಡಿಬಂದೆಯಂತಲ್ಲ : ಕಂಡ ನೆರೆಹೊರೆಯವರೆಲ್ಲ ಆಡಿಕೊಳ್ಳುತ್ತಿದ್ದಾರಂತೆ ! ಶ್ರೀನಿವಾಸ ನಿನ್ನ ಈ ಪ್ರಕರಣದ ಬಗ್ಗೆ ತಾನಾಗಿಯೇ ಬಾಯಿಬಿಟ್ಟು ಏನೂ ಹೇಳಲಿಲ್ಲ. ಬಾಯಿ ಬಿಟ್ಟು ಹೇಳುವ ವಿಷಯವೇ ಅಲ್ಲವಾದರೆ ಅವನಾದರೂ ಏನು ಮಾಡಿಯಾನು. ಪಾಪ, ಆದರೂ ನಿನ್ನನ್ನು ಬಲ್ಲ ನಾನು ನಡೆದಿರಬಹುದಾದದ್ದನ್ನು ಸಹಜವಾಗಿ ಊಹಿಸಬಲ್ಲೆ….ರಿಪೋರ್ಟು ನೀನು ಕೊಡದಿದ್ದರೂ ನನಗೆ ಸಿಕ್ಕೇ ಸಿಗುತ್ತಿತ್ತು. ಶ್ರೀನಿವಾಸನೇ ಅದರ ಪ್ರತಿಯೊಂದನ್ನು ಕೊಟ್ಟು ಹೋಗಿದ್ದಾನೆ. ಅದರಲ್ಲಿ ಈ ರಿಪೋರ್ಟು ಯಾರ ಬಗ್ಗೆ ಇದೆ ಎನ್ನುವದು ತಿಳಿಯದ ಹಾಗೆ ನೀನು ಕೊಟ್ಟ ಪ್ರತಿಯಲ್ಲಿಯಂತೆ ನಿನ್ನ ಹೆಸರನ್ನು ಕಾಟು ಹಾಕಿಲ್ಲ. ಝಳಝಳವಾಗಿ ಎಲ್ಲ ಕ್ಯಾಪಿಟಲ್ ಅಕ್ಷರಗಳಲ್ಲೇ ಬರೆದಿದ್ದಾರೆ : ನಾಗನಾಥ ಎಲಿಯಾಸ್ ನಾಗಪ್ಪಾ ಸಾಂತಯ್ಯಾ ಮಾಪ್ಸೇಕರ್ ! ಮಾಪ್ಸೇಕರ್ ! ಈಗ ಚಕ್ಕನೆ ಬೆಳಕು ಬೀಳುತ್ತದೆ ನೋಡು_ಸ್ವಚ್ಛವಾಗಿ ಕಣ್ಣು ತೆರೆಯಿಸುವ ಹಾಗೆ….ಥತ್ ಸೂಽಽಳೇಮಗನೇ….ನಿನ್ನ ಅಣ್ಣ_ಅವನು ಇನ್ನೊಬ್ಬ….”

ಸೀತಾರಾಮ್ ಕೇಳಿಲ್ಲಿ. ಕಿವಿಗೊಟ್ಟು ಕೇಳು. ಹೀಗೆ ಮಾತನಾಡುದ ಧೈರ್ಯ ನಿನ್ನಂತಹ ನೀರಿಲ್ಲದ ಹೇಡಿಗೆ ಬಂದದ್ದು ಈ ಮಾತುಕತೆ ನಡೆದದ್ದು ಟೆಲಿಫೋನ್ ಮೇಲೆ ಎಂಬ ಕಾರಣಕ್ಕೇ. ಇದಿರಿಗೆ ಸಿಕ್ಕರೆ ಹಲ್ಲುಗಳನ್ನೆಲ್ಲ ಉದುರಿಸಿ ಹೊಟ್ಟೆಯಲ್ಲಿರಿಸುತ್ತಿದ್ದೆ….ನನ್ನ ಆಫೀಸಿನ ಜನ ನನ್ನ ಬಗ್ಗೆ ನಡೆಸಿದ ಪಿತೂರಿಯ ಅರ್ಥ ನಾನು ಮಾಡಿಕೊಳ್ಳಬಲ್ಲೆ. ಕೇವಲ ಆತ್ಮರಕ್ಷಣೆಯೇ_ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬರದ ಹಾಗೆ ನೋಡಿಕೊಳ್ಳುವದೇ_ಅದರ ಹಿಂದಿನ ಪ್ರೇರಣೆಯೆಂದು ತಿಳಿದಿದ್ದೇನೆ. ಶ್ರೀನಿವಾಸನಿಗೆ ನನ್ನ ಬಗ್ಗೆ ಇದ್ದ ದ್ವೇಷದ ಅರ್ಥವಾಗಿರದಿದ್ದರೂ ಕಾಲಕಾಲಕ್ಕೆ ಅದಕ್ಕೆ ಪ್ರೋತ್ಸಾಹವಿತ್ತ ಸಂಗತಿಗಳ ಅರ್ಥವಾದರೂ ಆಗುತ್ತದೆ. ಆದರೆ ಯಾವ ಕಾರಣವೂ ಇಲ್ಲದೇನೆ, ಇಷ್ಟು ದಿವಸ ಶ್ರೀನಿವಾಸನನ್ನು, ಈಗ ಒಮ್ಮೆಲೇ ನನ್ನನ್ನು ದ್ವೇಷಿಸುವ ನೀನು ಅರ್ಥವಾಗುತ್ತಿಲ್ಲ. ಜರ್ನಲಿಸ್ಟ್ ಅನ್ನಿಸಿಕೊಳ್ಳುತ್ತೀಯಾ, ಮೇಲಾಗಿ, ಯಾವುದೇ ಕಮ್ಮಿಟ್‌ಮೆಂಟ್ ಇಲ್ಲದ ಎಡಬಿಡಂಗಿ ನೀನು_ an uncommitted cancer cell which multiplies and kills with out purpose…. ಇಲ್ಲಿ ಟೆಲಿಫೋನಿಗೆ ಕ್ಯೂ ಬೆಳೆಯುತ್ತಿದೆ. ನಿನ್ನೊಡನೆ ಮಾತನಾಡುತ್ತಿರುವಾಗಲೇ ಒಂದು ನಿರ್ಧಾರಕ್ಕೆ ಬಂದೆ ನೋಡು : ಕೆಲಸಕ್ಕೆ ರಾಜೀನಾಮೆ ಕೊಟ್ಟಮೇಲೆ ಏನು ಮಾಡಲಿ ಎಂದು ಇನ್ನೂ ನಿಶ್ಚಯಿಸಿರಲಿಲ್ಲ. ಈಗ ಸರಕ್ಕನೆಂಬಂತೆ ಮನಸ್ಸು ಗಟ್ಟಿಯಾಯಿತು : ಈ ಶ್ರೀನಿವಾಸರನ್ನು, ಸೀತಾರಾಮರನ್ನು, ಬಂದೂಕುವಾಲಾ-ದಸ್ತೂರರನ್ನು ನಾನು ವೈಯಕ್ತಿಕವಾಗಿ ದ್ವೇಷಿಸಿ ಉಪಯೋಗವಿಲ್ಲ. ಅವರು ವ್ಯವಹರಿಸುತ್ತ ಭದ್ರಗೊಳಿಸುತ್ತಿರುವ ನೆದಡಿಯ ಈ ಹೊಸ ಜಗತ್ತನ್ನೇ ನಾನು ಬಯಲಿಗೆಳೆಯಬೇಕಾಗಿದೆ. ಜೊತೆಗೆ ಅದರ ಕಪ್ಪು ಕರಾಮತಿಗಳಿಗೆ ಸುಣ್ಣ ಬಳೆಯುವ ನಿನ್ನ ಲೀಗಿನಂಥ ಅನೇಕ ಸಂಘಸಂಸ್ಥೆಗಳನ್ನೂ, ನನ್ನ ಉಳಿದ ಆಯುಷ್ಯವನ್ನೀಗ ಇದಕ್ಕೇ ಮೀಸಲಿರಿಸುತ್ತೇನೆ : ನಿಮ್ಮಂತಹರ ನಿಜವಾದ ಬಣ್ಣ ತೋರಿಸಿಕೊಡಲು ಅನುವು ಮಾಡಿಕೊಡಬಹುದಾದಂತಹ ಜರ್ನಲಿಸಮ್‌ಗೆ….”ಟೆಲಿಫೋನ್ ಕೆಳಗಿರಿಸಿದ್ದೇ, ಬೂಥಿನಲ್ಲೇ ಮುಗ್ಗರಿಸಿ ಬೀಳುವಂತೆ ಆದದ್ದಕ್ಕೆ ಕಾರಣ ತನಗೆ ಬಂದ ಮೂರ್ಛೆ ಎಂದು ತಿಳಿಯಲು ಕೂಡ ನಾಗಪ್ಪನಿಗೆ ಕೆಲ ಹೊತ್ತು ಹಿಡಿಯಿತು. ಮೂರ್ಛೆಯಿಂದ ತಿಳಿದೆದ್ದು ಕಣ್ತೆರೆದಾಗ ತಾನಿನ್ನೂ ಟೆಲಿಫೋನ್ ಬೂಥ್ ಇದ್ದ ಫುಟ್‌ಪಾಥಿನ ಮೇಲೇ ಕುಕ್ಕುರುಗಾಲಲ್ಲಿ ಕೂತಿದ್ದೇನೆ, ಐದಾರು ಜನ ತನ್ನನ್ನು ಸುತ್ತುವರಿದು ನಿಂತಿದ್ದಾರೆ ಎನ್ನುವದು ಲಕ್ಷ್ಯಕ್ಕೆ ಬಂದದ್ದೇ ತಡ, ತುಂಬ ಮುಜುಗರಪಟ್ಟವನ ಹಾಗೆ ಸರಕ್ಕನೆ ಎದ್ದು ನಿಂತು, I am sorry ಎಂದ. ಸುತ್ತುವರಿದು ನಿಂತವರಲ್ಲಿಯ_ಸಪೂರಾದ ಬಿಳಿಯ ಪ್ಯಾಂಟಿನ ಮೇಲೆ ಮೊಣಕಾಲು ಮುಚ್ಚುವಷ್ಟು ಉದ್ದವಾದ ಕಪ್ಪುಬಣ್ಣದ ಕೋಟು ; ತಲೆಗೆ ಅದೇ ಬಣ್ಣದ ಗೋಲಾಕಾರದ ಟೋಪಿ ; ದೊಡ್ಡ ಮೂಗಿನ ಮೇಲೆ ಕಾಯಂ ಆಗಿ ತಳವೂರಿದಂತಿದ್ದ_ಬೆಳ್ಳಿಯಂಥ ಲೋಹದ ಫ್ರೇಮ್ ಇದ್ದ_ಕನ್ನಡಕ ಧರಿಸಿದ ಮುದುಕನೊಬ್ಬ ತುಂಬಿದ ಸಹಾನುಭೂತಿಯಿಂದ ಹೆಗಲ ಮೇಲೆ ಕೈಯಿಟ್ಟು _ ‘ನಿಮ್ಮ ಮನೆ ಇಲ್ಲಿಂದ ಬಹಳ ದೂರವಿದೆಯೆ ?” ಎಂದು ಕೇಳಿದ. ಮುದುಕ ಪಾರ್ಸಿ ಎಂದು ಅವನ ವೇಷಭೂಷಣಗಳೇ ಸಾರುತ್ತಿದ್ದವು. ಅನುನಾಸಿಕಪ್ರಧಾನವಾದ ಇಂಗ್ಲೀಷೂ ಅದನ್ನು ಇನ್ನಷ್ಟು ಸ್ಪಷ್ಟಪಡಿಸಿತು. ಮುದುಕನ ಕೈಯ ಸ್ಪರ್ಶಕ್ಕೆ ಮೆತ್ತಗಾದ ನಾಗಪ್ಪ, “ಗಲ್ಲಿಯ ಕೊನೆಯಲ್ಲೇ ಇದೆ ಮನೆ, ನಾನೀಗ ಆರಾಮವಾಗಿದ್ದೇನೆ,” ಎಂದು ಹೊರಡಲನುವಾದಾಗ, ಮುದುಕ “Of course ! of course you are all right….” ಎಂದು, ಮಗುವನ್ನು ಪುಸಲಾಯಿಸುವ ಧಾಟಿಯಲ್ಲಿ, ಅನ್ನುತ್ತ ಅವನ ಜತೆಯಾಗಿಯೇ ನಡೆದು, ಖೇಮರಾಜಭವನದ ಹೆಬ್ಬಾಗಿಲವರೆಗೂ ಬಂದ. ಈ ಮೊದಲು ಸುತ್ತುಗಟ್ಟಿ ನಿಂತವರೆಲ್ಲ ಒಬ್ಬೊಬ್ಬರೇ ಚದುರಿದ್ದರು. ಮುದುಕ ಇನ್ನೊಮ್ಮೆ ನಾಗಪ್ಪನ ಬೆನ್ನು ಸವರುತ್ತ_“ಯಾಕೆ ಹೇಳುತ್ತಿದ್ದೇನೋ ಗೊತ್ತಿಲ್ಲ. ಆದರೆ ಹೇಳಬೇಕೂ ಅನ್ನಿಸುತ್ತದೆ….I was watching you when you were talking on the phone…. ಯಾರೋ ನಿಮ್ಮ ಸಿಟ್ಟಿಗೆ ಕಾರಣವಾಗಿರಬೇಕು. ಆದರೆ ಇಷ್ಟೊಂದು ಸಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ನಡುಗುತ್ತಿದ್ದ ರೀತಿಯಿಂದ, ಕೈ ಎತ್ತಿದ ಮಾತನಾಡುವ ಬಗೆಯಿಂದ ಹೊರಗೆ ನಿಂತ ನಮಗೆಲ್ಲ ನೀವೆಲ್ಲಿ ಭೂಥಿನ ಗ್ಲಾಸು ಒಡೆಯುತ್ತೀರೋ ಎಂಬ ಭಯವಾಯಿತು. ನಿಮಗೆ ಬಂದ ಸಿಟ್ಟನ್ನು ನೋಡಿದರೆ ನೀವು ಯಾರೊಡನೆ ಮಾತನಾಡುತ್ತಿದ್ದಿರೋ, ಅವರೊಬ್ಬರೇ ಅದಕ್ಕೆ ಕಾರಣವಾಗಿರಲಿಕ್ಕಿಲ್ಲ. ಅನ್ನಿಸುತ್ತದೆ. ವಿಚಾರಮಾಡಿ ನೋಡಿ. ಮೊದಲು ಎಲ್ಲವನ್ನೂ ಮರೆತು ಸ್ವಸ್ಥ ನಿದ್ದೆ ಮಾಡಿರಿ.” ಎಂದವನೇ ಅಲ್ಲಿ ಹೆಚ್ಚು ಹೊತ್ತು ನಿಲ್ಲದೇ, ಬಿಟ್ಟು ಬಂದ ಟೆಲಿಫೋನ್ ಬೂಥಿನ ಕಡೆಗೆ ಹಿಂತಿರುಗಿ ಹೊರಟೇಬಿಟ್ಟ.

ಅಚಾನಕವಾಗಿ ಬೇಟಿಯಾದ ಈ ನುದುಕನ ವರ್ತನೆಯಿಂದ ನಾಗಪ್ಪ ಥಕ್ಕಾಗಿ ನಿಂತೇಬಿಟ್ಟ. ಮನಸ್ಸು ತುಂಬ ಆರ್ದ್ರವಾಗಿತ್ತು. ಮುದುಕ ತನ್ನತ ತಿರುಗಿದ್ದನ್ನೊಮ್ಮೆ ನೋಡಿ ಹೋಗಬೇಕೆನಿಸಿತು. ಆದರೆ ಮುದುಕ ಹೀತಿರುಗಿ ನೋಡಲಿಲ್ಲ. ಯಾವುದೇ ರೀತಿಯ ಭಾವುಕತೆಗೆ ಎಡೆಕೊಡಬಾರದೆಂದು ನಿರ್ಧರಿಸಿಯೂ ಮನಸ್ಸಿನಲ್ಲಿಯೇ ಮುದುಕನನ್ನು ವಂದಿಸಿದ. ಮರುಕ್ಷಣ ಕೂಡಲೇ ಕೋಣೆಯನ್ನು ತಲುಪಲು ಕಾತರಗೊಂಡವನ ಹಾಗೆ ಓಡೋಡಿ ಮೆಟ್ಟಿಲು ಹತ್ತಿ ಕೊನೆಯ ಮಜಲೆಗೆ ಬಂದವನೇ ಅದೇ ಅವಸರದಿಂದ ಕೋಣೆಯ ಕಡೆಗೆ ನಡೆದ. ಅರ್ಜುನರಾವರ ಮನೆಯ ಕದ ಮುಚ್ಚಿತ್ತು. ಶಿಂಪಿಯವರ ಮನೆಗೂ ಇನ್ನೂ ಬೀಗವಿತ್ತು. ಕೋಣೆಗೆ ಬಂದಾಗ ಕದದ ಇದಿರಿಗೇ ತಾನು ಶ್ರೀನಿವಾಸನ ಮನೆಯಲ್ಲಿ ಬಿಟ್ಟುಬಂದ ಬೂಟಿನ ಜೋಡಿ ! ಶ್ರೀನಿವಾಸನ ಮನೆಯಿಂದ ಯಾರೋ ಬಂದು ಬಿಟ್ಟು ಹೋಗಿರಬೇಕು. ಕದ ತೆರೆದು ಒಳಗೆ ಹೋದರೆ ಎರಡು ಪತ್ರಗಳು : ಒಂದು ಪತ್ರ ಹುಬ್ಬಳ್ಳಿಯಿಂದ ಬಂದದ್ದು_ಸಂಪಾದಕ ಮಿತ್ರನದು ! ದಪ್ಪವಾಗಿತ್ತು. ಇದೇನು ನನಗೆ ಪತ್ರ ಬರೆಯುವ ಹುಕ್ಕಿ ಬಂತಪ್ಪ ಇದ್ದಕ್ಕಿದ್ದ ಹಾಗೆ ನಮ್ಮ ಈ ಕ್ರಾಂತಿಕಾರೀ ಸಂಪಾದಕನಿಗೆ ? ಎಂದು ಕುತೂಹಲವಾಯಿತು. ಇನ್ನೊಂದು ಹ್ಯಾಂಡ್-ಡೆಲಿವರಿಯಿಂದ ಬಂದ ದಪ್ಪ ಲಕ್ಕೋಟೆಯಾಗಿತ್ತು. ಟೈಮ್ಸ್ ಪತ್ರಿಕೆಯ ಅಂಕಿತವಿದ್ದದ್ದು. ಬಹುಶಃ ಸೀತಾರಾಮ ತಾನು ಕೊಟ್ಟ ರಿಪೋರ್ಟಿನ ಪ್ರತಿಯನ್ನು ಹಿಂತಿರುಗಿಸಿರಬೇಕು : ಖುದ್ದಾಗಿ ಬಂದವನು ಶ್ರೀನಿವಾಸನ ಪ್ರೆಸ್ಸಿನ ಆಳಿರಬೇಕು_ಬೂಟು ತಂದವನೇ ಅದನ್ನೂ ತಂದಿರಬಹುದು. ಅದನ್ನೇ ಮೊದಲು ತೆರೆದು ನೋಡಿದ. ಈ ಮೊದಲು ಬಂದ ಸಂಶಯವೇ ನಿಜವಾಗಿತ್ತು : ‘ನೀನು ಕೊಟ್ಟು ಹೋದ ರಿಪೋರ್ಟಿನ ಪ್ರತಿಯನ್ನು ಹಿಂತಿರುಗಿಸುತ್ತಿದ್ದೇನೆ. ಶ್ರೀನಿವಾಸನಿಂದ ಇನ್ನೊಂದು ಕಾಪಿ ಸಿಕ್ಕಿದೆ. ಖುದ್ದು ಬಂದು ಕೊಟ್ಟು ಹೋದ. ಆದ ಅಪಘಾತದಿಂದ ಚೇತರಿಸಿಕೊಳ್ಳಲು, ಇನ್ನೂ ಕೆಲ ಸಮಯ ಬೇಕಾದೀತು. ಸಂಜೆ ಊಟಕ್ಕೆ ಬರಲಾಗುವದಿಲ್ಲ_ಸೀ.’ ಇಂಗ್ಲೀಷಿನಲ್ಲಿ ಬರೆದ ಚೀಟಿಯಲ್ಲಿ ‘ಮಾಯ್ ಡಿಯರ್’ ವಗೈರೇ ಯಾವುದೇ ರೀತಿಯ ಔಪಚಾರಿಕ ಆರಂಭವಿರಲಿಲ್ಲ. ಯಾರಿಗೆ ಬರೆದದ್ದೆಂದು ಕೂಡ ತಿಳಿಯುತ್ತಿರಲಿಲ್ಲ.

ಸದ್ಯ, ಚೀಟಿ ರಿಪೋರ್ಟುಗಳನ್ನು ಬದಿಗಿರಿಸಿ, ಹುಬ್ಬಳ್ಳಿಯ ಪತ್ರವನ್ನು ಉಸಿರು ಬಿಗಿಹಿಡಿದ ಕುತೂಹಲದಿಂದ ತೆರೆದ : ನಾಲ್ಕೇ ನಾಲ್ಕು ಸಾಲುಗಳಿದ್ದ ಚೀಟಿಯ ಜತೆಗೆ ಕನ್ನಡ ಸರಿಯಾಗಿ ಬಾರದ ಯಾರೋ ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದಂಥ ಲಂಬಾಚೌಡಾ ಪತ್ರ ! ಸಂಪಾದಕನ (ಅವನ ಹೆಸರೇ ನೆನಪಿಗೆ ಬರದಾಯಿತು !) ಪತ್ರವನ್ನು ಒದುತ್ತಿದ್ದ ಹಾಗೆ ಮತ್ತೆ ಸಿಟ್ಟು ಮಸ್ತಕಕ್ಕೇರಹತ್ತಿ ಮೂಗಿನ ಹೊರಳೆಗಳು ಅರಳಿದವು : “ಜತೆಗಿರಿಸಿದ ಪತ್ರ ನಿಮ್ಮ ವೈರಿಗಳೊಬ್ಬರು ಬರೆದಂತೆ ಕಾಣುತ್ತಿದ್ದರೂ ಅದು ನಿಜವೇ ಬರೆಯಿಸಿದ್ದು ಎಂಬುದು ತಿಳಿಯದಷ್ಟು ಧಡ್ಡನಲ್ಲ ನಾನು. ಯಾಕೆಂದರೆ ಎಲ್ಲರನ್ನು ಬಿಟ್ಟು ಖಟ್ಟಾ ಬ್ರಾಹ್ಮಣ ದ್ವೇಶಿಯಾದ ನನಗೇ, ನೀವು ಬ್ರಾಹ್ಮಣರಲ್ಲ ಎನ್ನುವುದಕ್ಕೆ ಪುರಾವೆ ಒದಗಿಸಿ, ಪತ್ರ ಬರೆಯುವಷ್ಟು ಮಟ್ಟಿಗಿನ ಮೂರ್ಖಬ್ರಾಹ್ಮಣನಿರಬಹುದೆಂಬುದನ್ನು ನಾನು ನಂಬಲಾರೆ. ಯಾಕೆಂದರೆ ಬ್ರಾಹ್ಮಣರ ಮುಖ್ಯ ಲಕ್ಷಣವೇ ಅವರ ಜಾಣತನ, ಹಾಗೂ ಈ ಜಾಣತನವನ್ನು ಅತ್ಯಂತ subtle ಆದ_ಕೇವಲ ಬ್ರಾಹ್ಮಣರಿಗಷ್ಟೇ ಸಾಧ್ಯವಾದ_ರೀತಿಯಲ್ಲಿ ಪ್ರಕಟಿಸಿದ್ದರ ಶ್ರೇಷ್ಠ ಉದಾಹರಣೆ ನೀವು ಬರೆಯಿಸಿದ ಪತ್ರ ! ಇದು ನೀವು ಬರೆದದ್ದೆಂದು ತಿಳಿಯಬಾರದೆಂದೇ ಕನ್ನಡದ ಕಾಗುಣಿತ ಕಲಿಯುತ್ತಿರುವಂತಹನ ಕೈಯಿಂದ ಇಂತಹ ದರಿದ್ರ ಕನ್ನಡದಲ್ಲಿ ನಿಮಗೆ ತಿಳಿಸಬೇಕಾಗಿದ್ದ ಮಜಕೂರನ್ನು ತಿಳಿಸಿದ್ದು ! ನನ್ನ ಹಾರ್ದಿಕ ಅಭಿನಂದನೆಗಳು. ಪತ್ರವನ್ನು ತಿರುಗಿಕಳಿಸುತ್ತಿದ್ದೇನೆ. ಯಾಕೆಂದರೆ ನನ್ನ ಕಡ್ಡಿಪೆಟ್ಟಿಗೆಯೊಳಗಿನ ಕಡ್ಡಿಯ ಬೆಂಕಿಯಲ್ಲಿ ಸುಡುವ ಯೋಗ್ಯತೆ ಕೂಡ ಅದಕ್ಕೆ ಇಲ್ಲದ್ದು.”

ಈ ಚೀಟಿಯ ಜತೆಗಿದ್ದ ಸಹಿ ಇಲ್ಲದ ಪತ್ರದ ಹಿಂದಿನ ತಲೆ ಶ್ರೀನಿವಾಸನದೆಂದು ತಿಳಿಯಲು ನಾಗಪ್ಪನಿಗೆ ಹೊತ್ತು ಹಿಡಿಯಲಿಲ್ಲ. ಅವನ ಧಡ್ಡತನಕ್ಕೆ ನಗು ಬಂತು : ಒಂದೂ ಮಗನಿಗೆ ಈ ಪತ್ರಿಕೆಯ ಹೊರತು ಕನ್ನಡದಲ್ಲಿ ಬೇರೆ ಪತ್ರಿಕೆಗಳಿವೆ ಎನ್ನುವದು ಮೊದಲು ಗೊತ್ತಿರಬೇಕಲ್ಲ ! ಅವನ ಅಮ್ಮನ ಬಗ್ಗೆ ನಾನು ಬರೆದ ಕತೆ ಪ್ರಕಟವಾದದ್ದೇ ಈ ಪತ್ರಿಕೆಯಲ್ಲಿ. ನನ್ನ ಕತೆಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತವೆ ಎಂದು ತಿಳಿದದ್ದೇ, ಅದಕ್ಕೆ ಚಂದಾದಾರನಾದನೇ ! ಆದರೆ ಸದ್ಯ_ಅವನ ಪತ್ರಕ್ಕೆ ಸ್ಪೂರ್ತಿಯಾದದ್ದಕ್ಕೆ ತೀರ ವಿರುದ್ಧವಾದ ಕಾರಣಕ್ಕಾಗಿ_ಈ ಪತ್ರಿಕೆ ನನ್ನ ಕತೆಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ ಎಂಬುದು ಮಾತ್ರ ಗೊತ್ತಿದ್ದಂತಿಲ್ಲ. ಸನ್ನಿವೇಶದಲ್ಲಿಯ ವಿಡಂಬನ ಲಕ್ಷ್ಯಕ್ಕೆ ಬರುತ್ತಲೇ, ನಗು ಬರದಿರಲಿಲ್ಲ. ಎರಡೂ ಪತ್ರಗಳನ್ನು ಹರಿದೊಗೆಯುವವ : ನಡುವೆಯೇ ತಡೆದ. ಏನೋ ಥಟ್ಟನೆ ಹೊಳೆದವನ ಹಾಗೆ ಕೂತಲ್ಲಿಂದ ಎದ್ದು ಒಳಗೆ ಹೋಗಿ ಕಡ್ಡಿ ಪೆಟ್ಟಿಗೆಯನ್ನು ತಂದು ಕಡ್ಡಿಗೀರಿ ಎರಡೂ ಪತ್ರಗಳನ್ನು ಸುಟ್ಟುಹಾಕಿದ : ಹತ್ತೂ ಮಗ ದಸ್ತೂರ್ ಈ ಬೆಂಕಿಯನ್ನು ನೋಡಿದ್ದರೆ ಅದಕ್ಕೆ ಯಾವ ಅರ್ಥ ಹಚ್ಚುತ್ತಿದ್ದನೋ ! ತನ್ನ ಮಟ್ಟಿಗಂತೂ ಇದು ಅರ್ಥಪೂರ್ಣವಾದದ್ದು : ನೆಲದ ಸತ್ವವನ್ನೇ ಹೀರಿಬಿಡುವ ಇಂತಹ ಕಳೆಯನ್ನೆಲ್ಲ ಕಿತ್ತು ಸುಟ್ಟುಹಾಕಿದಾಗಲೇ ಬೆಳೆ ಕೊಡುವ ಹಸಿರು ಹುಲುಸಾಗಿ ಲವಲವಿಕೆಯಿಂದ ಚಿಗುರಿಕೊಂಡೀತು….ಪತ್ರಗಳು ಉರಿದು ಕಪ್ಪು ಕಾರ್ಬನ್ ಆದೊಡನೆ, ಪುಡಿಪುಡಿ ಮಾಡಿ, ಮೂಲೆಯೊಂದರಲ್ಲಿ ಚೆಲ್ಲಿ ಮೋರಿಗೆ ಹೋಗಿ ಕೈ ತೊಳೆದುಕೊಂಡು ಬಂದ.
undefined ತೊಳೆದ ಕೈಗಳನ್ನು ಟವೆಲ್ಲಿನಿಂದ ಒರೆಸಿಕೊಳ್ಳುತ್ತಿದ್ದಂತೆ ಮೂರು ದಿನಗಳಿಂದ ಕೆಲಸದ ಮುದುಕಿಯನ್ನೇ ನೋಡಿಲ್ಲ ಎನ್ನುವದು ಅರಿವಿಗೆ ಬಂತು : ಮನೆಯೊಳಗಿನ ಕಸ ಗುಡಿಸಿರಲಿಲ್ಲ ; ಮೋರಿಯಲ್ಲಿ ಒಟ್ಟಾಗಿ ಬಿದ್ದ ಸ್ನಾನದ ಅರಿವೆಗಳಿನ್ನೂ ಒಗೆದಿರಲಿಲ್ಲ. ಹಾಲಿನವನೂ ಮೂರುದಿನಗಳಿಂದ ಬಂದಿರಲೇ ಇಲ್ಲ. ನಡುವೆಯೇ ಶಿಂಪಿಯವರ ನೆನಪು ಬಂದು_ಅರೆ ! ಇದೇಕೆ ಇವರ ಮನೆಗೆ ಇನ್ನೂ ಬೀಗವಿದೆ, ಎಂದುಕೊಂಡ. ಇವೆಲ್ಲ ಒಂದಕ್ಕೊಂದು ಸಂಬಂಧ ಇದ್ದವುಗಳು ಎಂದು ಅನ್ನಿಸಿ ಇದಕ್ಕೆ ಉತ್ತರ ಅರ್ಜುನ್‌ರಾವರ ಮನೆಯಲ್ಲಿದೆ ಎಂಬಂತೆ ಅಲ್ಲಿ ಹೋಗುವುದನ್ನು ನಿಶ್ಚಯಿಸಿ ಚಪ್ಪಲಿ ಮೆಟ್ಟಿದಮೇಲೆಯೇ ಹೊಳೆಯಿತು : ಅರ್ಜುನ್‌ರಾವ್ ಇನ್ನೂ ಮನೆಗೆ ಬಂದಿರಲಿಕ್ಕಿಲ್ಲ. ತುಸು ಹೊತ್ತು ಕಾದು ನೋಡೋಣ ಎಂದುಕೊಂಡು ಕುರ್ಚಿಯಲ್ಲಿ ಕೂಡ್ರಬೇಕು ಎನ್ನುವಷ್ಟರಲ್ಲಿ ಕದದ ಮೇಲೆ ಬಡಿದ ಸದ್ದು ಕೇಳಿಸಿತು. ಜಾನಕಿ ಇರಬಹುದೇ ? ಎಂಬ ಸಂಶಯದಿಂದಲೇ ಎದೆ ಡವಡವಿಸುತ್ತಿರುವಾಗ ಕದ ತೆರೆದು ನೋಡಿದರೆ ಅರ್ಜುನ್‌ರಾವರ ಹೆಂಡತಿ : “ನಿಮಗೆ ಫೋನ್ ಇದೆ ನಮ್ಮ ಮನೆಯಲ್ಲಿ, ತುಂಬ ಅರ್ಜೆಂಟ್ ಅಂತೆ,” ಎಂದಳು. ಯಾರಿರಬಹುದೆಂದು ಅನುಮಾನಿಸುತ್ತಲೇ ಅವರ ಮನೆಗೆ ಹೋಗಿ ಟೆಲಿಫೋನ್ ಎತ್ತಿಕೊಂಡು, “Hello,” ಎಂದ.

“ಎಲ್ಲೊ ಣಗ್, ಥಿಸ್ ಇಸ್ ಂಅರ್ಯ್.” ಎಂದು ಸಾರಿದ ಮೇರಿಯ ದನಿ ಕೇಳಿಸಿದ್ದೇ ಆದ ಆಶ್ಚರ್ಯ, ಅದರ ಹಿಂದೆಯೇ ಬಂದ ಸಿಟ್ತುಗಳಿಂದಾಗಿ ನಾಗಪ್ಪನಿಂದ ಮಾತೇ ಹೊರಡದಾಯಿತು. ಮಾತನಾಡದೇ ಸುಮ್ಮನೆ ರಿಸೀವರ್ ಕಿವಿಗೆ ಗಿಡಿದು ನಿಂತ. ಮೇರಿಯೇ ಮುಂದುವರಿದು, “I am Mary here, Nag. Hou are you ?” ಎಂದಳು.

ನಾಗಪ್ಪ ‘To hell with you and all that put-up sweetness….’ ಎನ್ನುವವ. ಆದರೆ ಏಕೋ ಅವನ ಕೊರಳು ತನ್ನಿಂದ ತಾನೇ ಬಿಗಿದುಕೊಳ್ಳುತ್ತಿತ್ತು. ತನ್ನ ನಿರ್ಧಾರದ ವಿರುದ್ಧ ಕಣ್ಣುಗಳು ತೇವಗೊಳ್ಳುತ್ತಿದ್ದವು. ಮಾತನಾಡದೇ ರಿಸೀವರನ್ನು ಹಾಗೇ ತೆಪ್ಪಗೆ ಕೆಳಗಿಡುವವನು. ಮೇರಿಯ ಸುದೈವ : ಅವಳಿಗೂ ಅದೇ ಸಂಶಯ ಬಂದಿರಬೇಕು : ಚಟ್ಟನೆ_ “Please speak here to Dr. Patel..” ಎಂದಳು. ನಾಗಪ್ಪನಿಂದ ತಂತಾನೆ ‘ಓಽಽ’ ಎಂಬ ಉದ್ಗಾರ ಹೊರಟಿತು. ಮಾತನಾಡಲಿರುವವರು ಪಟೇಲರೆಂದು ತಿಳಿದದ್ದೇ ತಡ, ಹೊಸ ಉತ್ಸಾಹ ತುಂಬಿದವನ ಹಾಗೆ, ಸಮೀಪದ ಕುರ್ಚಿಯೊಂದನ್ನೆಳೆದು ಕುಳಿತುಕೊಂಡ. ಮನೆಯಲ್ಲಿ ಅರ್ಜುನ್‌ರಾವರ ಹೆಂಡತಿಯೊಬ್ಬಳೇ ಇದ್ದಂತೆ ತೋರಿತು. ಪಟೇಲರು ಗಂಟಲು ಸರಿಪಡಿಸಿಕೊಳ್ಳುತ್ತ, “ಹೆಲ್ಲೋ ನಾಗ್,” ಎಂದರು.

ನಾಗಪ್ಪ ಎಂದಿನಂತೆ ಅವರನ್ನು ಅವರ ಮೊದಲ ಹೆಸರಿನಿಂದ ಕರೆಯುತ್ತ “ಹೆಲ್ಲೋ ಜೀಥೂ, ಯಾವಾಗ ಬಂದೆ ?” ಎಂದು ಕೇಳಿದ.

“ನಿನ್ನೆ ರಾತ್ರೆ….”
“Oh ! well timed isn’t it ?”
“ Timed for what ?”
“ಕಮ್ ಆನ್ ಜೀಥೂ_ನಾವೇನು ಎರಳು ಚೀಪುವ ಕೂಸುಗಳಲ್ಲ_ಅಲ್ಲವೆ ?”
“Nag, I want to withdraw your resignation….”
“ಅಂದರೆ ನಿನಗೆ ಈಗಾಗಲೇ ಗೊತ್ತಾಗಿದೆ ಹಾಗಾದರೆ ?….”
“ Listen Nag, let us not discuss on the phone. Why don’t you join me for dinner tonight ?”

ಸೀತಾರಾಮನ ಜೊತೆಗೆ ಊಟಮಾಡುವ ಸಂಧಿ ತಪ್ಪಿಹೋದ ಬಗೆ ನೆನಪಿಗೆ ಬಂದು ನಗು ಬಂತು. ಆ ನಗುವಿನಲ್ಲಿ ಖಿನ್ನತೆಯ ಅಂಶವೇ ದೊಡ್ಡದಾಗಿತ್ತು. ಇಷ್ಟೊಂದು ತರಾತುರಿಯ ಕೆಲಸ ಈಗ ಏನಿರಬಹುದು_ಎಲ್ಲ ಮುಗಿದುಹೋದಮೇಲೆ ? ಅಷ್ಟೆಲ್ಲ ಯಾತನೆಯ ಕೊನೆಯಲ್ಲಿ ಕೊಟ್ಟ ರಾಜೀನಾಮೆಯನ್ನು ಯಾಕೆ ನಾನು ಹಿಂದೆಗೆದುಕೊಳ್ಳಬೇಕು ?ಸರಿಯಾಗಿ ಗಂಟು ಕಟ್ಟಿ ಅಟ್ಟದ ಮೇಲೆ ಇಟ್ಟುಬಿಟ್ಟದ್ದನ್ನು ಈಗ ಪುನಃ ಯಾಕೆ ಬಿಚ್ಚಲು ನಾನು ಹೋಗಬೇಕು ? ಬೇಡ : ತಿರುಗಿ ಹೊಸತೇ ಒಂದು ಆಸಕ್ತಿಯ ಜಗತ್ತು ತೆರೆಯುವ ಆಮಿಷಗಳ ಜಾಲದಲ್ಲಿ ಸಿಕ್ಕಿಸಿಕೊಳ್ಳುವ ಧೈರ್ಯವಾಗಲಿಲ್ಲ. ಆ ತಾಕತ್ತೂ ತನಗೀಗ ಉಳಿದೆ\ಇದೆಯೆಂದು ತೋರಲಿಲ್ಲ : “Sorry Jithu, I wan’tbe able to make it. Thank you all the same….” ಉತ್ತರರೂಪವಾಗಿ ಆ ಬದಿಯಿಂದ ಬಂದ ಹೆಣ್ಣು-ದನಿಯನ್ನು ಕೇಳಿ ನಾಗಪ್ಪ ಚಕಿತನಾದ. ಮಾತನಾಡುತ್ತಿದ್ದವಳು ಮತ್ತೆ ಮೇರಿಯಾಗಿದ್ದಳು !“Listen Nag, please listen_for my sake…. ಡಾ. ಪಟೇಲರು ಬಂದೂಕವಾಲಾರ ಜೊತೆಗೆ ಮಗ್ಗುಲ ಕೋಣೆಗೆ ಹೋಗಿದ್ದಾರೆ. ತಾನು ಮಾತನಾಡುತ್ತಿದ್ದದ್ದು ನಿನ್ನೊಡನೆ ಎಂಬುದನ್ನು ತೋರಿಸಿಕೊಳ್ಳುವದು ಬೇಡವಾಗಿತ್ತವರಿಗೆ, ರಾತ್ರಿ ಬಾ. ನಾನೂ ಇರುತ್ತೇನೆ ಅಲ್ಲಿ. ಹಾಗೂ ಇನ್ನೂ ಕೆಲವು ಗೆಳೆಯರು. MD has fabulous plans for you. He is so upset_believe me, so very upset by what has happened….. ಊಟ ಎಮ್‌ಡೀ ಅವರ ಮನೆಯಲ್ಲೇ ಇದೆ.It is a smaal group. There will be a car to drop both of us home after dinner….”

ಮೇರಿಯ ದನಿ ಕೊನೆಯ ವಾಕ್ಯಕ್ಕೆ ಬಂದಾಗ ಏನೋ ಗುಟ್ಟಿನ ಮಾತನ್ನು ಕೇಳುವ ಹಾಗೆ ಅದು ಒಮ್ಮೆಲೇ ತಲೆ ತಗ್ಗಿತ್ತು. ಥತ್ ದಿ ಬಿಚ್ ! ನನಗೆ ಮಾಟಾ ಮಾಡ್ತಾಳೆ. ಫಿರೋಜ್ ಈಗ ಅಲ್ಲಿಗೆ ಬಂದದ್ದು ಸುಳ್ಳು. ಇದೆಲ್ಲ ಮೇರಿಯ ಮುಖಾಂತರ ನನ್ನ ಮೇಲೆ ಒತ್ತಡ ತರುವ ಚತುರೋಪಾಯ : ನಾಗಪ್ಪ ಈಗ ಯಾವುದೇ ಬಗೆಯ ಉದ್ವೇಗಕ್ಕೆ ಒಳಗಾಗದೇ ಉತ್ತರ ಕೊಟ್ಟ : “Thank you, Mary, for the most tempting offer…. ಆದರೆ ನನಗೀಗ ಇದಾವುದರಲ್ಲೂ ಆಸ್ಥೆಯೇ ಉಳಿದಿಲ್ಲ. ನನ್ನ ಮಾತಿನಲ್ಲಿ ಕಹಿಯಿದೆಯೆಂದು ತಿಳಿಯಬೇಡ, ಮೇರಿ. ನನಗೆ ಸಿಟ್ಟೂ ಬಂದಿಲ್ಲ. ನಾನು ಬದಲಾಗಿಬಿಟ್ಟಿದ್ದೇನೆ ಎನ್ನುವದು ಮಾತ್ರ ನಿಜ. ನಾನು ರಾಜೀನಾಮೆಯನ್ನು ಕೊಟ್ಟದ್ದು ಬರೇ ಕಂಪನಿಯ ಕೆಲಸಕ್ಕಷ್ಟೇ ಅಲ್ಲ, ಮೇರೀ : ವ್ಯಾವಸಾಯಿಕ ಜಗತ್ತು ಪ್ರತಿನಿಧಿಸುವ ಎಲ್ಲದಕ್ಕೂ ! ನನ್ನ ನಿರ್ಧಾರವನ್ನೀಗ ಯಾರೂ ಬದಲಿಸಲಾರರು.(Not even the most tentalizing charms of the bitch called Mary !) If you don’t mind, Mary, let us say good-bye to each other. ಡಾ. ಪಟೇಲರಿಗೆ ನನ್ನ ಧನ್ಯವಾದಗಳನ್ನು ತಿಳಿಸಲು ಮಾತ್ರ ಮರೆಯಬೇಡ….”

ಆ ಬದಿಯಿಂದ ಮೇರಿ ಆರ್ಜವ ತುಂಬಿದ ದನಿಯಲ್ಲಿ_ಪ್ಲೀಸ್ ನಾಗ್, ತಡೆ, ನನ್ನ ಮಾತು ಕೇಳು,” ಎಂದರೂ ಕೇಳದೆ ನಾಗಪ್ಪ ಟೆಲಿಫೋನ್ ಕೆಳಗಿಟ್ಟುಬಿಟ್ಟ. ಇಟ್ಟದ್ದೇ ತಡ, ತಾನು ಎಲ್ಲಿ ಇದ್ದೇನೆ ಎನ್ನುವದೂ ಕೂಡ ನಾಗಪ್ಪನಿಗೆ ತಿಳಿಯಲಿಲ್ಲ. ಇದೆಲ್ಲ ಆಗುತ್ತಿದ್ದದ್ದು ತನಗೇ ಎಂಬುದರ ಮೇಲೆ ನಂಬಿಕೆಯಾಗುತ್ತಿರಲಿಲ್ಲ_ಎಲ್ಲರನ್ನು ಬಿಟ್ಟು ತನ್ನಂಥ ತನಗೆ ! ಬದುಕಿನಿಂದ ಬಹಳಷ್ಟನ್ನು ಬೇಡಿರದ ಕೋಳೀಗಿರಿಯಣ್ಣನ ಕೇರಿಯ ಈ ನಾಗಪ್ಪನಿಗೆ ! ಕುರ್ಚಿಯಲ್ಲಿ ಕೂತದ್ದೇ ನಾಗಪ್ಪನ ಕಣ್ಣುಗಳು ತುಂಬಿಬರಹತ್ತಿದವು : ಏನಿರದಿದ್ದರೂ ಬದುಕಬಹುದೇನೋ. ಆದರೆ ಪ್ರೀತಿಯಿಲ್ಲದೆ ? ಗೆಳೆತನವಿಲ್ಲದೆ ? ಮಾನವೀಯ ಅಂತಃಕರಣವಿಲ್ಲದೆ ? ಸಹಾನುಭೂತಿಯಿಲ್ಲದೆ ? ತಾನು ಸ್ಪಷ್ಟವಾಗಿ ಒಪ್ಪಿಕೊಂಡಿರದಿದ್ದರೂ ಸೀತಾರಾಮನ ಗೆಳೆತನವನ್ನು ಕಳಕೊಂಡ ರೀತಿಗೆ ಮನಸ್ಸು ಇನ್ನೂ ಹೊಂದಿಕೊಂಡಿರಲಿಲ್ಲ : ಹದಿನಾಲ್ಕೇ ದಿನಗಳಲ್ಲಿ ಎಷ್ಟೊಂದನ್ನೆಲ್ಲ ಕಳಕೊಂಡವನಿಗೆ ಎಲ್ಲವೂ ವ್ಯರ್ಥ ಅನ್ನಿಸಹತ್ತಿದಾಗ ಕಣ್ಣಮುಂದೆ ನಿಂತು ತನ್ನನ್ನೇ ನೋಡುತ್ತಿದ್ದ ವ್ಯಕ್ತಿಯ ಗುರುತು ಹಿಡಿಯುವದೂ ಕಠಿಣವಾಗುತ್ತಿದ್ದವನ ಹಾಗೆ : It is too much for anyone_for so much to happen in so short a time,” ಎಂದ. ಕಣ್ಣುಗಳು ತೇವಗೊಂಡಿದ್ದರೂ ನೋಡುವ ದೃಷ್ಟಿ ಖಾಲಿಯಾಗಿತ್ತು. ಯಾರ ಇದಿರಿಗೋ ಆಡದ ಮಾತುಗಳಾದರೂ ಅವುಗಳಲ್ಲಿ ತನ್ನಷ್ಟಕ್ಕೇ ಆಡಿಕೊಂಡ ಮಾತಿನ ಧ್ವನಿ ಮೂಡಿತ್ತು. ಕಣ್ಣಮುಂದೆ ನಿಂತವರು ಅರ್ಜುನ್‌ರಾವ್ ಎಂದು ಗೊತ್ತಾದದ್ದು. ಅವರೇ ಹಿಂದೆ ಎಂದೂ ತೋರಿಸಿರದ ಸಹಾನುಭೂತಿಯಿಂದ ನನ್ನ ಹೆಗಲ ಮೇಲೆ ಕೈಯಿಟ್ಟು : Take it easy, me young friend. It is just a phase in our life. It will pass off….”  ಎಂದಾಗ, ನಡುಬಾಗಿಲಲ್ಲಿ ಬಂದು ನಿಂತ ತಮ್ಮ ಹೆಂಡತಿಗೆ ಎರಡು ಕಪ್ಪು ಚಹ ಮಾಡಲು ಹೇಳಿ, “ಅಮ್ಮ ಎಲ್ಲಿ ?” ಎಂದು ಕೇಳಿದರು. “ಎರಡನೇ ಮಜಲೆಯ ತೋರಟೆಯವರ ಮನೆಗೆ ಹೋಗಿದ್ದಾರೆ. ಜಾನಕಿ ಬಂದಿದ್ದಾಳೆ ಅಲ್ಲಿ. ನಿಮಗೆ ಆಫೀಸಿನಿಂದ ಬಂದಕೂಡಲೇ….” ಅವಳು ಹೇಳಹೊರಟಿದ್ದರ ಅರ್ಥವಾಯಿತೆನ್ನುವಂತೆ, “ಮೊದಲು ಚಹ ಮಾಡು,” ಎನ್ನುತ್ತ ಮುಂದಿನ ಬಾಗಿಲು ಹಾಕಿಕೊಂಡರು. ಹಾಗೂ, ನಾಗಪ್ಪನಿಗೆ “ಈ ಕುರ್ಚಿಯಲ್ಲಿ ಕೂತುಕೊಳ್ಳಿ. ಮೆತ್ತಗಿದೆ ನೋಡಿ. ತುಸು ಹೊತ್ತು ಆರಾಮ ಮಾಡಿರಿ. ಚಹ ಬರುವಷ್ಟರೊಳಗೆ ಡ್ರೆಸ್ ಬದಲಿಸಿ ಬರುತ್ತೇನೆ,” ಎಂದು ಹೇಳಿ, ಕೈಯಲ್ಲಿ ಹಿಡಿದ ಆಫೀಸಿನ ಕಾಗದ-ಪತ್ರಗಳೊಂದಿಗೆ ಒಳಗೆ ನಡೆದರು.

ಅರ್ಜುನ್‌ರಾವ್ ಏಳಿ ಎಂದದ್ದೇ ಎದ್ದದ್ದು, ಈ ಕುರ್ಚಿಯಲ್ಲಿ ಕೂತುಕೊಳ್ಳಿ ಎಂದದ್ದೇ ಕೂತದ್ದು ಪೂರ್ಣ ಎಚ್ಚರದ ಸ್ಥಿತಿಯಲ್ಲಿ ನಡೆದ ಕ್ರಿಯೆಗಳು ಎಂದು ನಾಗಪ್ಪನಿಗೆ ಅನ್ನಿಸಲಿಲ್ಲ. ಯಾರೋ ತನ್ನ ಮೇಲೆ ಮಾಟ ಮಾಡಿದ್ದಾರೆ. ಇಲ್ಲಿಗೆ ಬರುವಾಗ ರೂಮಿನ ಕದ ಮುಚ್ಚಿದ್ದೇನೋ ಇಲ್ಲವೋ ಎನ್ನುವದು ಕೂಡ ನೆನಪಾಗಲಿಲ್ಲ. ಎದ್ದು ಹೋಗಿ ನೋಡಿ ಬರೋಣವೆಂದರೆ ಕೂತಲ್ಲಿಂದ ಏಳುವ ಮನಸ್ಸಾಗಲಿಲ್ಲ. ಯಾಕೆಂದರೆ ಯಾರೋ ಕೂತುಕೊಳ್ಳಿ ಅಂದಿದ್ದರು. ಎಲ್ಲ ಮುಗಿಸಿ ಬಂದಿದ್ದೇನೆ. ಈಗ ಮುಂದಿನ ಹಾದಿ ಹುಡುಕಬೇಕಾಗಿದೆ ಎಂದು ಅನ್ನಿಸಿದ ಗಳಿಗೆಯಲ್ಲೇ ಶ್ರೀನಿವಾಸ_ಸೀತಾರಾಮ, ಇತ್ತ ಪಟೇಲ_ಮೇರಿ ಮತ್ತೆ ಹೊಸ ಸಾಧ್ಯತೆಗಳನ್ನು ತೆರೆಯುತ್ತಿದ್ದಾರೆ. ಬೇಡವೆಂದು ಬಿಟ್ಟು ಬಂದ ಜಗತ್ತಿಗೇ ಎಳೆಯುತ್ತಿದ್ದಾರೆ, ನನ್ನನ್ನು. ಮೇರಿಯೊಡನೆ ವರ್ತಿಸಿದ್ದು ಉದ್ಧಟತನವಾಯಿತೆ ? ಕ್ರೂರವಾಯಿತೆ ? ಬಿಟ್ಟುಬಂದದ್ದರತ್ತ ಕಣ್ಣು ತಿರುವಬಾರದಾದರೆ ಎಲ್ಲ ಸುಳ್ಳು ಸಂಬಂಧಗಳನ್ನು ಕಡಿದು….
“ನಿದ್ದೆ ಹತ್ತಿತೆ ?”
ಮುಂದೆ ನಿಂತವಳು ಅರ್ಜುನ್‌ರಾವರ ಹೆಂಡತಿ. ಚಹದ ಕಪ್ಪನು ಕೈಗೆ ಕೊಡುತ್ತ_“ಇವರು ಇದೀಗ ಬರುತ್ತಾರೆ. ನೀವು ತೆಗೆದುಕೊಳ್ಳಿ.” ಎಂದಳು. ಇವನು ಕಪ್ಪನ್ನು ಕೈಗೆ ತೆಗೆದುಕೊಳ್ಳುವ ಹೊತ್ತಿಗೆ ಅರ್ಜುನ್‌ರಾವ್ ಅವರೂ ಬಂದರು_ತಮ್ಮ ಚಹದ ಕಪ್ಪನ್ನಿ ಕೈಯಲ್ಲಿ ಹಿಡಿದುಕೊಂಡು, ಬಿಸಿಬಿಸಿ ಚಹದ ಗುಟುಕೊಂದನ್ನು ಸದ್ದು ಮಾಡಿ ಹೀರುತ್ತ_“In a way it is good that it is all over,” ಎಂದರು. ಆವರೆಗೂ ಅರ್ಜುನ್‌ರಾವರ ಜಗತ್ತಿಗೆ ಬಂದಿರದ ನಾಗಪ್ಪನ ಕಿವಿಗಳು ಒಮ್ಮೆಲೇ ನಿಗುರಿಕೊಂಡವು. ನಾಗಪ್ಪ ತನ್ನತ್ತ ನೋಡಿದ ರೀತಿಯನ್ನು ಅರ್ಥಮಾಡಿಕೊಂಡವನ ಹಾಗೆ_“ಶ್ರೀನಿವಾಸ ಸಾರ್ ಬಂದಿದ್ದರು ನಮ್ಮ ಆಫೀಸಿಗೆ. ನೀವು ಕೆಲಸಕ್ಕೆ ರಾಜೀನಾಮೆ ಕೊಡಬೇಕಾಯಿತಂತೆ, ಅಲ್ಲವೆ ? ಕೇಳಿ ಬಹಳ ಕೆಡುಕೆನಿಸಿತು ನೋಡಿ,” ಎಂದರು : ಶಿಕಾರಿಯವರ ತಂಡ ದೊಡ್ಡದಾಗುತ್ತ ನಡೆದಿದೆ. ನಾಯಿಗಳ ಕೂಗು, ಕಿವಿಗಳನ್ನು ಗಡಚಿಕ್ಕುವ ಹಲಗೆಗಳ ಸದ್ದು ಸುತ್ತುವರಿಯುತ್ತಿದೆ. ರಾಜೀನಾಮೆ ಇದೆಲ್ಲದರ ಕೊನೆ ಎಂದು ತಿಳಿದಿದ್ದೆ. ಈಗ ಬರೀ ಹೊಸ ಆರಂಭವೆಂದು ತೋರುತ್ತದೆ. ಈ ಅರ್ಜುನ್‌ರಾವ್ ಹಿಂದಿನ ಎಷ್ಟೊಂದು ಹಗೆಗಳಿಗೆ ಹೆಡೆ ಬಿಚ್ಚುತ್ತಾನೋ : ಇದೀಗ ಮಾತನಾಡಿದಾಗಿನ ದನಿ ಸಹಜವಾದದ್ದೆಂದು ತೋರಲಿಲ್ಲ. ಇವನಿಂದ ಮತ್ತೆ ಹೊಸ ಸಂಗತಿಗಳನ್ನು ತಿಳಿಯುವ ಸಾಮರ್ಥ್ಯ ಮಾತ್ರ ತನಗೀಗ ಎಳ್ಳಷ್ಟೂ ಇರಲಿಲ್ಲ. ಸಹನಶಕ್ತಿಗೂ ಮಿತಿಯೆಂಬುದು ಇರಬೇಡವೆ : ದಮ್ಮಯ್ಯಾ ಮಾರಾಯ, ಬೆಳಗ್ಗಿನಿಂದ ಅನುಭವಿಸಿದ್ದೇ ಸಾಕಾಗಿಬಿಟ್ಟಿದೆ. ಕೂಡ್ರಲು ಮೆತ್ತಗಿನ ಕುರ್ಚಿ ಕೊಟ್ಟೆ_ಕೂತಿದ್ದೇನೆ. ಬಿಸಿಬಿಸಿ ಚಹ ಕೈಯಲ್ಲಿರಿಸಿದೆ_ಕುಡಿಯುತ್ತೇನೆ. ಆಮೇಲೆ ಕೋಣೆಗೆ ಹೋಗಿ ಸುಖವಾಗಿ ನಿದ್ದೆ ಮಾಡುತ್ತೇನೆ. ಆಗ ಒಬ್ಬ ಪಾರ್ಸೀ ಯುವಕ ಭೆಟ್ಟಿಯಾಗಿದ್ದ ; ಮನೆಗೆ ಹೋಗಿ ಪ್ರಾರ್ಥನೆ ಮಾಡು ಎಂದ. ನನ್ನಿಂದ ಸಾಧ್ಯ ಎನಿಸುವದಿಲ್ಲ. ಬಾನಾವಳಿಯಲ್ಲಿ ಹೋಗಿ ಬಾರ್ಬಿಚ್ಯುರೇಟ್ ಗುಳಿಗೆ ತರಲೆ ? ಇದೇಕೆ ಈಗ ಇದ್ದಕ್ಕಿದ್ದಂತೆ ನಿದ್ದೆಯ ಗುಳಿಗೆಯೆಂದರೆ ನನಗೆ ಭಯವಾಗುತ್ತಿದೆ ?
“ಅರೆ ! ನಿಮ್ಮ ಚಹ ತಣ್ಣಗಾಗ್ತಾ ಇದೆ.” ಅರ್ಜುನ್‌ರಾವರ ಮಾತಿಗೆ ನಾಗಪ್ಪ ಬೆಚ್ಚಿಬಿದ್ದ. ನಡುಗಿದ ಕೈಯನ್ನು ಸ್ತಿಮಿತಕ್ಕೆ ತರುತ್ತ ಚಹ ಕುಡಿಯಹತ್ತಿದ. ಚಹ ರುಚಿ ಕಳೆದುಕೊಂಡಿತ್ತು. ತನ್ನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಈ ಯಕಃಶ್ಚಿತ್ ಅರ್ಜುನ್‌ರಾವ್ ಕೂಡ ಭಯಕ್ಕೆ ಕಾರಣನಾಗಹತ್ತಿದ್ದ : ‘ರಾಜೀನಾಮೆಯನ್ನು ಕೊಟ್ಟಿರಂತೆ’ ಅನ್ನಲಿಲ್ಲ ಬೋಳೀಮಗ, ‘ಕೊಡಬೇಕಾಯಿತಂತೆ !’ ನೋಡ್ತಾನೆ ಎರಡೂ ಮಗ ತನ್ನ ಹೈನಾ ತರಹ ಕಣ್ಣುಬಿಡುತ್ತ ಗುರುಗುಟ್ಟಿದನೆ ? ಹಲ್ಲು ಕಿಸಿದನೆ ….?
“ತನಿಖೆಯವರು ಸಿದ್ಧಪಡಿಸಿದ ಕಾನ್ಫಿಡೆನ್ಶಲ್ ರಿಪೋರ್ಟು ಶ್ರೀನಿವಾಸರಾವರ ಕೈಗೆ ಹೇಗೆ ಬಂತೋ. ನನ್ನ ಕೈಯಲ್ಲೂ ಒಂದು ಪ್ರತಿ….”
undefinedನಾಗಪ್ಪ ನಂಬದಾದ. ಅವನ ಮೋರೆಯ ಮೇಲಿನ ಅಪನಂಬಿಕೆಯ ಛಾಯೆಯನ್ನು ಗಮನಿಸಿದ ಅರ್ಜುನ್‌ರಾವ್ ಚಹದ ಕಪ್ಪನ್ನು ಇಡುವ ನೆಪ ಮಾಡಿ ಒಳಗೆ ಹೋದರು. ಬರುವಾಗ ಕೈಯಲ್ಲೊಂದು ಲಕ್ಕೋಟೆ ಹಿಡಿದುಕೊಂಡು ಹೊರಗೆ ಬಂದರು : “ಇದು ನೋಡಿ,” ಎನ್ನುತ್ತ ಲಕ್ಕೋಟೆಯನ್ನು ನಾಗಪ್ಪನ ಮುಂದೆ ಹಿಡಿದರು. ನಾಗಪ್ಪ ಅದಕ್ಕೆ ಕೈ ಹಚ್ಚಲಿಲ್ಲ. ಅರ್ಜುನ್‌ರಾವರನ್ನೇ ನೋಡುತ್ತ ಕುಳಿತುಬಿಟ್ಟ. ನಾಗಪ್ಪ ಇಷ್ಟು ಮೆತ್ತಗಾದದ್ದನ್ನು ಅರ್ಜುನ್‌ರಾವ್ ನೋಡಿರಲಿಲ್ಲ ; ಮೆತ್ತಗಾಗುವ ಮನುಷ್ಯನೆಂದು ತಿಳಿದೇ ಇರಲಿಲ್ಲ :“It is no use getting so sentimental. You must fight this Shrinivas Rao_fight him legally if necessary…. ನೀವು ಕಾದಂಬರಿ ಬರೆಯುತ್ತೀರಿ ಎನ್ನುವುದರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವಂತೆ ತೋರುತ್ತದೆ. ಮುಖ್ಯವಾಗಿ ನನ್ನ ಸಮಾಜದವರ ಕಣ್ಣಲ್ಲಿ ನೀವು ಅವರ ಬದನಾಮಿ ಮಾಡುವ ಮೊದಲೇ ನಿಮ್ಮ ಬದನಾಮಿ ಮಾಡುವ ಹುನ್ನಾರು…. ನಿಮ್ಮ ತಂದೆ-ತಾಯಿಗಳ ಬಗ್ಗೆ ಏನೇನೋ ಮಾಹಿತಿ ಒಟ್ಟು ಮಾಡಿದಂತಿದೆ…..ನಿಮ್ಮ ಅಣ್ಣನ ಬಗ್ಗೆಯೂ…. ಈ ಹೊತ್ತು ಮಠದಲ್ಲಿ ನಿಮ್ಮ ಜಾತಿಯವರ….” ನಾಗಪ್ಪನ ಮೋರೆಯ ಮೇಲೆ ಮುಗುಳುನಗೆ ಮೂಡುತ್ತಿದ್ದುದನ್ನು ನೋಡಿ ಗೊಂದಲಕ್ಕೀಡಾದ ಅರ್ಜುನರಾವರ ಮಾತು ಅರ್ಧಕ್ಕೇ ಉಳಿದಿತು. ಆದರೂ ಹಿಂದೆಗೆಯಲು ಒಪ್ಪದವರ ಹಾಗೆ_“Please don’t mistake me…. ನಾನು ಬಲ್ಲೆ. ನಿಮಗಿಂಥದ್ದರಲ್ಲಿ ಎಳ್ಳಷ್ಟೂ ವಿಶ್ವಾಸವಿಲ್ಲ ಎನ್ನುವುದನ್ನು. ನನಗೂ ಇಲ್ಲ. ಆದರೆ ಇದು ಬರಿಯೆ ಹುಟ್ಟಿನ ಬಗೆಗಿನ ವಿಶ್ವಾಸದ ಪ್ರಶ್ನೆಯಲ್ಲ ; ನಮ್ಮ ಅಬರೂದ ಪ್ರಶ್ನೆ ; ಮೋಸ ಮಾಡಿದ್ದೀರಿ ಎಂಬ ಆರೋಪದ ಪ್ರಶ್ನೆ…. You must take interest in investigating your pastand collact facts to refute those presanted by Shrinivas Rao. If you want I will help you….. ಸನ್ನಿವೇಶದಲ್ಲಿಯ ವ್ಯಂಗ್ಯವನ್ನು ನಾನು ಸುಲಭವಾಗಿ ಗ್ರಹಿಸಬಲ್ಲೆ : ಜಾತೀಯತೆಯಲ್ಲಿ ವಿಶ್ವಾಸ ಇಲ್ಲದವನೇ ತಾನು ಹುಟ್ಟಿನಿಂದ ಬ್ರಾಹ್ಮಣನೇ ಎಂದು ಸಿದ್ಧಪಡಿಸಿ ತೋರಿಸಬೇಕಾಗಿ ಬಂದ ಅವಶ್ಯಕತೆ….”

ಇಲ್ಲ, ಅರ್ಜುನ್‌ರಾವರ ಮಾತಿನ ಧಾಟಿಯನ್ನು ಗುರುತಿಸುವುದರಲ್ಲಿ ನಾಗಪ್ಪ ತಪ್ಪಲಿಲ್ಲ. ಗಾಳದ ಕೊಂಡಿಗೆ ಸಿಕ್ಕಿಸಿದ ಆಮಿಷ ಸ್ಪಷ್ಟವಾಗಿ ಏನು ಎಂಬುದು ಗೊತ್ತಾಗದಿದ್ದರೂ ಅದು ‘ಇದೆ’ ಎಂಬುದನ್ನು ಮರೆಮಾಚುವುದು ಅವರಿಗೆ ಸಾಧ್ಯವಾಗಲಿಲ್ಲ. ತರ್ಕಶುದ್ಧವಾದ, ಒಂದಕ್ಕೊಂದು ಚೊಕ್ಕವಾಗಿ ಹೆಣೆದುಕೊಂಡ ಮಾತಿನ ಸರಣಿ. ಮಾತಿಗೆ ಮೂಲಪ್ರೇರಣೆಯಾದದ್ದನ್ನು ಅಡಗಿಸಲು ಹೆಣಗುತ್ತಿತ್ತು : ತನ್ನೊಬ್ಬನ ಸ್ವಾರ್ಥದ ಸೀಮಾ-ರೇಖೆಯ ಆಚೆ ದೃಷ್ಟಿ ಚೆಲ್ಲಿ ಗೊತ್ತಿರದ ಈ ಗೃಹಸ್ಥ ಒಮ್ಮೆಲೇ ತನ್ನ ಬಗೆಗಿನ ಸದ್ಭಾವನೆಯಿಂದ ಇಷ್ಟೊಂದು ಪುಳಕಿತನಾಗುವದು ಸಾಮಾನ್ಯ ವ್ಯಾಪಾರವಲ್ಲ. ಇದನ್ನು ಕೆದಕಿ ನೋಡಬೇಕೆನಿಸಿತು :

“ಆ ರಿಪೋರ್ಟಿನಲ್ಲಿ ನನ್ನ ಜಾತಿಯ ಹೊರತು ಇನ್ನೂ ಅನೇಕ ಆಶ್ಚರ್ಯಕಾರಕ ಸಂಗತಿಗಳಿವೆ….”

“ಬಲ್ಲೆ. ಅವುಗಳಿಗೆ ನಾನು ವಿಶೇಷ ಮಹತ್ವ ಕೊಡಲಾರೆ. ಮೇಲಾಗಿ ಅವುಗಳಲ್ಲಿ ಬಹಳಷ್ಟು ನಿಮ್ಮ ಆಫೀಸಿಗೆ ಸಂಬಂಧಪಟ್ಟವುಗಳು ಇಷ್ಟೇ: ನಿಮ್ಮ psychological make -up ನಿಮ್ಮ ವ್ಯಕ್ತಿತ್ವದಲ್ಲಿಯ criminal tendencies ಗುರುತಿಸುವುದು , ಅದಕ್ಕೆ ಪುರಾವೆ ಎನ್ನುವಂತೆ ನಿಮ್ಮ ಅಣ್ಣ ಎಳೆ ವಯಸ್ಸಿನಲ್ಲೇ ಜೈಲು ಕಂಡ ಘಟನೆಯನ್ನು ಉಲ್ಲೇಖಿಸುವುದು ನನಗಂತೂ ಬಹಳ ಧಾರ್ಷ್ಟ್ಯದ ಮಾತುಗಳಾಗಿ ತೋರುತ್ತವೆ. ಅದೆಲ್ಲ ನಿಮ್ಮ ಮೇಲೆ ಮಾನಸಿಕ ಒತ್ತಡ ತರುವ ದುಷ್ಟ ಉಪಾಯವೆಂದು ತಿಳಿಯುತ್ತೇನೆ . ಆದರೂ ಒಂದನ್ನು ಮಾತ್ರ ಒಪ್ಪಿಕೊಳ್ಳಲೇಬೇಕು: ರಿಪೋರ್ಟಿಗಾಗಿ ಮಾಹಿತಿ ಒಟ್ಟು ಮಾಡಿದವನ ತಲೆ ಮಾತ್ರ ಯಾರೂ ತಲೆದೂಗುವಂತಹುದು. ಎಲ್ಲೆಲ್ಲಿಂದ ಒಟ್ಟು ಮಾಡಿದರೋ! ತುಂಬ ಪರಿಶ್ರಮ ಪಟ್ಟಂತಿದೆ ಒಂದು ಸಂಗತಿಯನ್ನು ಇನ್ನೊಂದಕ್ಕೆ , ಇನ್ನೊಂದನ್ನು ಮತ್ತೊಂದಕ್ಕೆ ಪುರಾವೆಯಾಗಿಸುವ ಒಕ್ಕಣಿಕೆ ಯಾರನ್ನೂ ಮರುಳುಗೊಳಿಸುವಂತಹುದು: ಇದನ್ನು ನಂಬದೇ ಇರುವುದು ಶಕ್ಯವೇ ಇಲ್ಲವೆನ್ನುವ ಹಾಗಿದೆ……”

ನಾಗಪ್ಪನಿಗೆ ಸಂಶಯವೇ ಉಳಿಯಲಿಲ್ಲ. ಹೆಡೆ ಬಿಚ್ಚದೇ ಪೂತ್ಕರಿಸುತ್ತ ಹರಿದಾಡುವ ಈ ಜಂತು ಕಾಣುವಷ್ಟು ನಿರುಪದ್ರವಿಯಾದದ್ದಲ್ಲ. ಆ ದೃಷ್ಟಿಯಿಂದ ನಾಗಪ್ಪ ನೋಡಿರಬೇಕು: ಅರ್ಜುನ್‌ರಾವರ್ ಮಾತು ಅರ್ಧಕ್ಕೇ ನಿಂತಿತು. ಅದೇ ಹೊತ್ತಿಗೆ ನಡುಬಾಗಿಲಲ್ಲಿ ಬಂದು ನಿಂತ ಹೆಂಡತಿಯನ್ನು ನೋಡಿದ ಕೂಡಲೇ, ಈ ಮೊದಲೇ ಮಾತನಾಡಿಕೊಂಡ ಒಂದು ವಿಷಯ ನೆನಪಾದವರ ಹಾಗೆ ……”ಹೌದು, ಇವಳು ಹೇಳುತ್ತಾಳೆ; ಈವತ್ತು ನೀವು ನಮ್ಮಲ್ಲೇ ಊಟಕ್ಕೆ ಇರಬೇಕೆಂದು…..” ನಾಗಪ್ಪ ಆಗಬಹುದೆನ್ನುವ ಹಾಗೆ ಅರ್ಜುನ್‌ರಾವರ ಹೆಂಡತಿಯ ಕಡೆಗೆ ನೋಡಿ, “ಥ್ಯಾಂಕ್ಸ್” ಎಂದ.

ಆಗ , ಮುಂದಿನ ಬಾಗಿಲ ಮೇಲೆ ತುಂಬ ಜಾಗ್ರತೆಯಿಂದ ತಟ್ಟಿದ್ದು ಕೇಳಿಸಿ, ಅರ್ಜುನ್‌ರಾವ್ ಎದ್ದು ಹೋಗಿ ಕದ ತೆರೆದರೆ — ಮೇರಿ ! “Excuse me. is Mr Nagnath….” ನಾಗಪ್ಪ ತನ್ನ ಕಣ್ಣುಗಳನ್ನು ನಂಬದಾದ. “Hello Mary,” ಎನ್ನುತ್ತ ಕುರ್ಚಿಯಿಂದ ಎದ್ದ. ಅರ್ಜುನ್‌ರಾವರಿಗೆ ಅವಳ ಪರಿಚಯ ಮಾಡಿಕೊಡುತ್ತ …..”This is a colleague or rather an ex-colleague mine,” ಎಂದ. ಹಾಗೂ, “ನಿಮ್ಮನ್ನು ಅಮೇಲೆ ಮತ್ತೆ ಬಂದು ಕಾಣುತ್ತೇನೆ,” ಎಂದು ಅರ್ಜುನ್‌ರಾವರಿಂದ ಬೀಳ್ಕೊಂಡು “This is a colleague or rather an ex-colleague mine,” ಎಂದು ಅವಳ ಜತೆಗೆ ತನ್ನ ರೂಮಿನತ್ತ ನಡೆಯಹತ್ತಿದ.

– ಅಧ್ಯಾಯ ಮೂವತ್ತೆರಡು –

ಅಚ್ಚನೀಲೀ ಬಣ್ಣದ ಜಾರ್ಜೆಟ್ ಸೀರೆ. ಅದೇ ಬಣ್ಣದ ತೋಳುಗಳಿಲ್ಲದ ಬ್ಲೌಸ್. ತಲೆಗೆ ಬೇರೆ ಕೊಂಡು ತಂದ ಡೋನಟ್ ಕೂದಲು. ಗೌರವರ್ಣದ ಮೈಯಿಂದ ತರಲವಾಗಿ ಸೂಸುತ್ತಿದ್ದ ಫೆಂಚ್ ಸುಗಂಧ (ಒ‌ಆ ಕೊಟ್ಟಿದ್ದಿರಬಹುದೆ ?). ಮೊದಲೇ ಚೆನ್ನಾದ ಎತ್ತರವಿದ್ದವಳು ಹಾಯ್-ಹೀಲ್ಸ್ ಮೆಟ್ಟಿದ್ದರಿಂದ ಇನ್ನಷ್ಟು ಎತ್ತರವಾಗಿ ತೋರುತ್ತಿದ್ದಳು : ಮೇರಿ ಇಷ್ಟೊಂದು ಸುಂದರಳೆಂಬ ಕಲ್ಪನೆಯೇ ಇದ್ದಿರಲಿಲ್ಲ ಎನ್ನುವವನ ಹಾಗೆ, ನಾಗಪ್ಪ, ಮೆಚ್ಚಿಕೆ ತುಂಬಿದ ಕಣ್ಣುಗಳಿಂದ ಅವಳನ್ನು ನೋಡಿಯೇ ನೊಡಿದ. ಮರುಗಳಿಗೆ ಇಷ್ಟೊಂದು ಸುಂದರಳಾದ, ಮೋಹಕಳಾದ ಹೆಣ್ಣಿಗೆ ಖೇಮರಾಜ ಭವನದಂಥ ಹೊಲಸು ಹಾಳಿ ಒಪ್ಪುವುದಂತಹದಲ್ಲ ಎಂಬ ಅರಿವಿನಿಂದ ಹಿಂಸೆಯಾಯಿತು. ಚಾಳಿನಲ್ಲಿನ ಹಲವಾರು ಮನೆಗಳ ಕದಗಳು ತೆರೆದುಕೊಂಡಿದ್ದವು. ಏನೋ ಗಮ್ಮತ್ತು ನೋಡುವ ಕುತೂಹಲದಿಂದ ಅನೇಕ ಕಣ್ಣುಗಳು ಅರಳಿ ನಿಂತಿದ್ದವು. ಕೋಣೆಯ ಕದ ತೆರೆದೇ ಇದ್ದದ್ದು ಈಗ ಗಮನಕ್ಕೆ ಬಂತು ! ಒಳಗೆ ಬಂದು ದೀಪ ಹಾಕಿದ. ಕಿಡಕಿಯ ಬಳಿಯ ಕುರ್ಚಿಕಳೆರಡನ್ನೂ ತುಸು ಒಳಗೆಳೆದು ಒಂದನ್ನು ಮೇರಿಗೆ ಕೊಟ್ಟ. ಕೂಡ್ರುವ ಮೊದಲು, Why don’t you shut the door ?” ಎಂದಳು, ಲಗುಬಗೆಯಿಂದ ಹೋಗಿ ನಾಗಪ್ಪ ಹಾಗೇ ಮಾಡಿ ಬಂದ. ಅವನು ಅಗಳಿ ಹಾಕದೇ ಇದ್ದುದನ್ನು ನೋಡಿ ನಗುತ್ತ, ಮೇರಿ ತಾನೇ ಎದ್ದು ಹೋಗಿ ಅಗಳಿ ಹಾಕಿ ಬಂದಳು.

ಕೋಣೆ ದೊಡ್ಡದಲ್ಲವಾಗಿದ್ದರೂ ಹೇರಿಸಿಟ್ಟ ಪುಸ್ತಕಗಳಿಂದಾಗಿ ಅದಕ್ಕೆ ತನ್ನದೇ ಆದ ಗಾಂಭೀರ‍್ಯ ತುಂಬಿದ ಶೋಭೆ ಬಂದಿತ್ತು. ಕೆಲಹೊತ್ತು ಈ ಪುಸ್ತಕಗಳನ್ನು ಕೌತುಕ ತುಂಬಿದ ಕಣ್ಣುಗಳಿಂದ ನೋಡುತ್ತ ಕುಳಿತುಬಿಟ್ಟಳು, ಮೇರಿ. ಅರ್ಧಗಂಟೆಯ ಮೊದಲಷ್ಟೇ ಟೆಲಿಫೋನಿನ ಮೇಲೆ ಮಾತಾನಾಡುವಾಗ ‘ಬಿಚ್’ ಎಂದುಕೊಂಡದ್ದು ನೆನಪಾಗಿ ನಾಗಪ್ಪನಿಗೆ ನಾಚಿಕೆಯಾಯಿತು. ಅನ್ನಿಸಿಕೆಗಳ, ಭಾವನೆಗಳ ಸ್ವರೂಪವನ್ನೇ ಬದಲಿಸಿಬಿಡುವಂತಹ ರೂಪವಿದು. ಅದರ ಸಾನ್ನಿಧ್ಯದಲ್ಲಿ ಮನಸ್ಸು ತನ್ನ ವಿಮರ್ಶಶಕ್ತಿಯನ್ನೇ ಕಳಕೊಳ್ಳುತ್ತದೆ : ತನ್ನನ್ನು ಎವೆಯಿಕ್ಕದೆ ಕೌತುಕದಿಂದ ನೋಡುತ್ತಿದ್ದ ನಾಗಪ್ಪನನ್ನು ತಪ್ಪಾಗಿ ಅಳೆದ ಮೇರಿ :“Let me warm you, Nag ! You are going to get ready in the next fifteen minutes ! You are coming with me to the MD’s house for dinnar ! The car is waiting downstairs….” ಮೇರಿಯ ಮಾತುಗಳಲ್ಲಿ ಹಿಪ್ನೋಟಿಸ್ಟನ ಅದೇಶದ ಧಾಟಿ ಬಂದಿತ್ತು. ಆದರೆ ಅವುಗಳಲ್ಲಿ ತಾನು ಬಯಸಿದ ಮಾಂತ್ರಿಕ ಬಲ ಬಂದಿರಲಿಲ್ಲ ಎಂಬುದು ಗೊತ್ತಾದದ್ದು ನಾಗಪ್ಪನ ಮೋರೆ ಒಮ್ಮೆಗೆಲೆ ಬದಲಾಗುತ್ತಿದ್ದುದನ್ನು ಗಮನಿಸಿದಾಗ :

“Please Nag. for my sake….Just don’t throw away such a golden opportunity” ಎಂದು ಯಾಚಿಸಿದಳು.

ಹಾಗೆ ಹೇಳಿದಾಗಿನ ಅವಳ ಮೋರೆಯನ್ನು ನೋಡಿದ್ದೇ ತಡ. ನಾಗಪ್ಪನಿಗೆ ಅದೇನಾಯಿತೋ : ಕೇಳಕೇಳುತ್ತಿರುವಂತೆ ತುಂಬ ಮೆತ್ತಗಾದ. ರಮಿಸುವಷ್ಟು ಮೃದುವಾದ ದನಿಯಲ್ಲಿ :

“ಕ್ಷಮಿಸು ಮೇರೀ, ಈ ಮೊದಲೇ ಬೇರೆ ಕಡೆಗೆ ಊಟಕ್ಕೆ ಬರುವೆನೆಂದು ಹೇಳಿಬಿಟ್ಟಿದ್ದೇನೆ…. ನನಗೆ ಏನನ್ನೋ ತಿಳಿಸುವುದಕಾಗಿಯೇ ಒ‌ಆ ನಿನ್ನನ್ನು ಇಲ್ಲಿಗೆ ಈಗ ಕಳಿಸಿರಬೇಕು ಅಲ್ಲವೆ ? ಹೇಳು : ಅವರಿಗೆ ನನ್ನಿಂದೇನಾಗಬೇಕಂತೆ_ಈಗ ?”

ನಾಗಪ್ಪ ಬಾಯಿಮುಚ್ಚಿ ಕೂತುಬಿಟ್ಟ : ನೀನೇ ಮಾತನಾಡು, ಮೇರೀ_ನಾನು ಬರೇ ಕೇಳಿಸಿಕೊಳ್ಳುತ್ತೇನೆ, ಎನ್ನುವ ರೀತಿ. ನನ್ನನ್ನು ಎವೆಯಿಕ್ಕದೆ ನೋಡುತ್ತಿರುವಾಗಲೂ ತನ್ನಿಂದ ದೂರವಾದ ಪ್ರದೇಶದಲ್ಲಿ ವಿಹರಿಸುತ್ತಿದ್ದವನ ಹಾಗೆ ತೋರುವವನ ಮೋರೆಯ ಮೇಲೆ, ಕಣ್ಣುಗಳಲ್ಲಿ ಕಂಡಂತೆ ಭಾಸವಾದ ವಿಷಾದ ತುಂಬಿದ ಅನಾಸಕ್ತಿ ಮೇರಿಯನ್ನು ಕಲಕಿಬಿಟ್ಟಿತು. ತನಗೆ ಒಪ್ಪಿಸಿಕೊಟ್ಟ ಕೆಲಸದಲ್ಲಿ ತಾನೀಗ ಸೋಲುತ್ತಿದ್ದೇನೆ ಎನ್ನುವ ಅನ್ನಿಸಿಕೆಯಿಂದ ಅವಳಿಗೆ ಅಳು ಬರುವಂತಾಯಿತು :

“ಪ್ಲೀಜ್ ನಾಗ್….ನಾನು ಇದಿರಿಗೆ ಕೂತಿರುವಾಗಲೂ ಹೀಗೆ ಒಮ್ಮೆಗೇ ಆಮೆಯ ಹಾಗೆ ನನ್ನನ್ನು ನಿನ್ನ ಚಿಪ್ಪಿನೊಳಕ್ಕೆ ಎಳೆದುಕೊಳ್ಳಬೇಡ. ಹೊರಕ್ಕೆ ಬಾ ! ಹೊರಗೇ ಇರು : ಕೆಲವೇ ನಿಮಿಷಗಳ ಮಟ್ಟಿಗಾದರೂ ನನ್ನ ಸಹವಾಸದಲ್ಲಿ ತೆರೆದುಕೋ ! ಉದಾರನಾಗು : ಮನಸ್ಸನ್ನು ತೆರೆದೇ ಇಡು ! ಇಲ್ಲಿ ಕೇಳು : ಕಳೆದ ಎರಡು ವಾರಗಳಲ್ಲಿ ನೀನು ಅನುಭವಿಸಿದ್ದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ. ನಿನ್ನ ಎಲ್ಲ ಯಾತನೆಯನ್ನೂ ಕೊನೆಗೊಳಿಸುವ ಸುದ್ದಿ ತಂದಿದ್ದೇನೆ_ the most exciting news you could ever imagine…. ಆ ಸುದ್ದಿಯನ್ನು ಒಡೆದ ಕೂಡಲೇ ನಿನಗಾಗುವ ಖುಶಿಯನ್ನು ಕಲ್ಪಿಸಿಕೊಂಡೇ ನಾನು ಇಷ್ಟೊಂದು ಖುಶಿಯಾಗಿದ್ದೇನೆ. ನಾಗ್, ನಂಬು ! ಪ್ರತಿಯೊಂದನ್ನೂ ಸಂಶಯದಿಂದ ನೋಡುತ್ತ ನಿನ್ನ ಮನಸ್ಸನ್ನು ಬಾಗಲತ್ತ ಬಿಡಬೇಡ. ನಿನ್ನನ್ನು ಮರುಳು ಮಾಡಲು ಹೀಗೆ ಸಿಂಗರಿಸಿ ಬಂದಿಲ್ಲ. ಬರೇ ನನಗಾದ ಖುಶಿಯಿಂದಾಗಿ : ಸುದ್ದಿಯನ್ನು ನಿನಗೆ ಒಡೆ‌ಒಡೆಯುತ್ತಿರುವಾಗಲೇ ಎಲ್ಲಿ ಅತ್ತುಬಿಟ್ಟೇನೋ ಎಂಬ ಭಯವಾಗಿ ಕದ ಮುಚ್ಚಿಸಿದೆ. ಆದರೆ ನೀನು ಹೀಗೆ ಯಾವುದರಲ್ಲೂ ಈಗ ಆಸ್ಥೆಯೇ ಇಲ್ಲದವನ ಹಾಗೆ ಕೈಕಟ್ಟಿ ಕುಳಿತುಬಿಟ್ಟರೆ ನನ್ನಿಂದ ಮಾತೇ ಹೊರಡಲಾರದು…..ನಾಗ್….Please help me to articulate me joy into wrods that will make you change your decision….MD ನಬ್ಬಿಬ್ಬರ ಗೆಳೆತನದಲ್ಲಿ ಭರವಸೆ ಇಟ್ಟು ನನಗೆ ವಹಿಸಿಕೊಟ್ಟ ಈ ಕೆಲಸವನ್ನು_ಲವಲವಿಕೆಯಿಂದ ನಾನಾಗಿ ಒಪ್ಪಿಕೊಂಡದ್ದನ್ನು_ನಿರ್ವಹಿಸುವುದರಲ್ಲಿ ನೆರವು ನೀಡು. ಈ ಸುಖದ ಸಮಾಚಾರವನ್ನು ಸ್ವತಃ ತಾವೇ ನಿನಗೆ ತಿಳಿಸಬೇಕೆನ್ನುವುದು ಒ‌ಆ ಯವರ ಇಚ್ಛೆಯಾಗಿತ್ತು. ಆದರೆ ನಿನ್ನ ಮೊಂಡುತನವನ್ನು ಅರಿತ ಅವರು ನನ್ನನ್ನು ಕಳಿಸಿದ್ದಾರೆ. ಇಷ್ಟೊಂದು ಹಟದವನಾಗಿಯೂ ನೀನು ಆ‌ಒ‌ಆ ಆದರೆ ಕಪಟನಾಟಕಕ್ಕೆ ಇಷ್ಟು ಸುಲಭದಲ್ಲಿ ಮೋಸಹೋದದ್ದು ಅತಿ ಆಶ್ಚರ್ಯ, ನಾಗ್. ಒ‌ಆ ಯವರು ನಿನ್ನ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ಸ್ವೀಕರಿಸಲಾರರು_ಎಂದೆಂದಿಗೂ ! ಬದಲು ನಿನ್ನನ್ನು ಕೂಡಲೇ ಮೇಲಿನ ಜಾಗಕ್ಕೆ ಬಡತಿ ಮಾಡಿದ್ದಾರೆ. ಯಾವ ಸ್ಥಾನಕ್ಕೆ ಗೊತ್ತೇ ? ಊಹಿಸಬಲ್ಲೆಯಾ ? ಕಂಪನಿಯ ಟೆಕ್ನಿಕಲ್-ಡೈರೆಕ್ಟರ್ರ ಸ್ಥಾನಕ್ಕೆ ನಿನ್ನ ಪ್ರೊಮೋಶನ್, ನಾಗ್ ! Congrats Nag, and cheer up ! ಅಮೇರಿಕನ್ ಕಂಪನಿಯ ವೈಸ್-ಪ್ರೆಸಿಡೆಂಟರಾದ ರಟ್ಟರ್ ಅವರೇ ಬೋರ್ಡ್-ಅಫ್-ಡೈರೆಕ್ಟರ್ಸ್ ಸದಸ್ಯತ್ವಕ್ಕೆ ನಿನ್ನ ಹೆಸರನ್ನು ಸೂಚಿಸುತ್ತಾರೆ_ನಂಬುವಿಯಾ ? ಮುಂದಿನ ತಿಂಗಳ ಬೋರ್ಡ್ ಮೀಟಿಂಗಿಗೆ ಅವರು ಸ್ವತಃ ಬರುವವರಿದ್ದಾರೆ. ಅನಂತರ-ಕಂಪನಿಯ ಟೆಕ್ನಿಕಲ್-ಡೈರೆಕ್ಟರನಾಗಿಯೇ ಅಮೇರಿಕೆಗೆ ಪ್ರಯಾಣ ನಿನ್ನದು….ಚಿಯರಪ್ ನಾಗ್ _ ಚಿಯರಪ್ _ ನಿನ್ನ ಈ ಮೊಂಡುತನವನ್ನು ಇನ್ನು ಬಿಟ್ಟುಬಿಡು ನಾಗ್, ಬಾಗಿಲವರೆಗೆ ಬಂದ ಭಾಗ್ಯವನ್ನು ಬಿಸಾಡಬೇಡ. ಆ‌ಒ‌ಆ ಯವರ ಮೋಸವೇ ಗೆಲ್ಲಲು ಬಿಡಬೇಡ. ಆ‌ಒ‌ಆ ಅವರಿಗೆ ನಿನ್ನ ಈ ಬಡತಿಯ ಸುದ್ದಿ ಇನ್ನೂ ತಿಳಿದಿಲ್ಲ. ರಾತ್ರಿ ನೀನು ಊಟಕ್ಕೆ ಬಂದಾಗಲೇ ಎಲ್ಲರ ಇದಿರು ಈ ಸಂತೋಷದ ಸಂಗತಿಯನ್ನು ಜಾಹೀರುಪಡಿಸುವುದಿದೆ. ಒ‌ಆ ಅವರಿಗೆ ಆ‌ಒ‌ಆ ಕೂಡ ಊಟಕ್ಕೆ ಬರುತ್ತಾರೆ…. Please cancel the other engagement and come with me…. ನೀನು ರಾಜೀನಾಮೆ ಕೊಟ್ಟ ವರ್ತಮಾನ ತಿಳಿದದ್ದೇ ಒ‌ಆ ಯವರು ಜರಿದುಹೋದ ರೀತಿ ನೀನು ನೋಡಬೇಕಿತ್ತು, ನಾಗ್…. ಸ್ವತಃ ತನಿಖೆಗೆ ಮೂಲ ಕಾರಣರಾದ ಆ‌ಒ‌ಆ ಕೂಡ ! ನೀನು ರಾಜೀನಾಮೆ ಕೊಡುವಷ್ಟರ ಮಟ್ಟಿಗೆ ಉದ್ರೇಕಗೊಳ್ಳಬಾರದು. ನಾಟಕ ಈ ವಿಕೋಪಕ್ಕೆ ಹೋಗಬಹುದೆಂದು ಅವರೂ ಎಣಿಸಿರಲಿಲ್ಲ : It came as a bolt from the blue by his own admission to the MD…. . ತಾಜಮಹಲಿನಲ್ಲಿತ್ತಂತೆ ತನಿಖೆ ಅಲ್ಲವೆ? ಆಫೀಸಿನಲ್ಲಿ ಯಾರಿಗೂ ಗೊತ್ತಿರಲಿಲ್ಲ. ತನಿಖೆಯಲ್ಲಿ ಏನೇನಾಯಿತು ಎನ್ನುವದೂ ಒ‌ಆ ಗೆ ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಡಾ. ದಸ್ತೂರ್ ಎಂಬುವರು ತನಿಖೆಯ ಹೊತ್ತಿಗೆ ಕೈತಪ್ಪಿದರಂತೆ_He carried it too far and provoked you too much ಅಂತೆ_ ಹೌದೆ ? ಆದರೂ ನಿನ್ನಿಂದ ರಾಜೀನಾಮೆಯನ್ನು ಅಪೇಕ್ಷಿಸಿರಲಿಲ್ಲ ಎನ್ನುವದು ಆ‌ಒ‌ಆ ಯಿಂದಲೇ ತಿಳಿಯಿತು. ಆ‌ಒ‌ಆ ಜರ್ಜರಿತವಾದ ರೀತಿ ನೀನು ನೋಡಿಯೇ ನಂಬುವಂತಹದು !….ಮೂಲ ಯೋಜನೆಯ ಪ್ರಕಾರ ತನಿಖೆಯನ್ನು ಆ‌ಒ‌ಆ ಒಬ್ಬರೇ ನಡೆಸುವವರಿದ್ದರಂತೆ. ಕಂಪನಿಗೆ ಸಂಬಂಧವೇ ಇಲ್ಲದ ಇನ್ನಿಬ್ಬರನ್ನು ಸೇರಿಸಿಕೊಂಡದ್ದು ಯಾಕೆ ? ಯಾವಾಗ ? ಎನ್ನುವುದರ ಬಗ್ಗೆ ಒ‌ಆ ಗೆ ಇನ್ನೂ ಆಶ್ಚರ್ಯ. ಆ‌ಒ‌ಆ ಗೆ ಈ ತನಿಖೆಯಿಂದ ಬೇಕಾದದ್ದಾದರೂ ಏನು ಎಂಬುದೂ ಅವರಿಗಿನ್ನೂ ಗೊತ್ತಾಗಿಲ್ಲ….ಆದರೆ ಇದೆಲ್ಲ ಈಗ ನಿರ್ಜೀವ ಇತಿಹಾಸ, ನಾಗ್…. ಆನಂದಾತಿಶಯದಿಂದ ನೀನು ಉಬ್ಬಬೇಕಾದ ಇಡೀ ಭವಿತವ್ಯ ಮುಂದಿದೆ ! ಅಮೇರಿಕನ್ ಡೈರೆಕ್ಟರರಿಗೆ ನಿನ್ನ ಬಗ್ಗೆ ಬಹಳ ಆದರ ಇದೆಯಂತೆ : ಒ‌ಆ ಯವರಿಂದ ತಿಳಿದಾಗ ಎಷ್ಟು ಸಂತೋಷವಾಯಿತು ಗೊತ್ತೇ ? I am proud of you, Nag,. I am….”
undefinedಈವರೆಗೂ ಕಾಡುತ್ತ ಬಂದ ಭಯ ಆತಂಕ ಆಸೆ-ಆಕಾಂಕ್ಷೆ ಮುಂತಾದ ಎಲ್ಲ ಭಾವನೆಗಳನ್ನೂ ಕೆಳಕ್ಕೆ ದೂಡಿ ಬೋರ್ಡಮ್ ತಂತಾನೆ ಮೇಲಕ್ಕೆದ್ದು ಬರಹತ್ತಿದಾಗ ನಾಗಪ್ಪನಿಗೆ ತನಿಖೆ ಬಂದ ಆಕಳಿಕೆಯನ್ನು ತಡೆಯುವದು ಕಠಿಣವಾಯಿತು :

“ಕ್ಷಮಿಸು ಮೇರೀ, ಕಳೆದ ಎಂಟು ದಿನಗಳಿಂದ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ ನೋಡು. ಈ ಹೊತ್ತು ಗಡದ್ದಾಗಿ ನಿದ್ದೆ ಮಾಡಬೇಕು. ಆಗ ಪರಿಚಯ ಮಾಡಿಕೊಟ್ಟಿದ್ದೆನಲ್ಲ_ಅರ್ಜುನ್‌ರಾವ್_ಅವರ ಮನೆಯಲ್ಲೇ ಊಟಕ್ಕೆ ಕರೆದಿದ್ದಾರೆ. ಬರುತ್ತೇನೆಂದು ಹೇಳಿಯಾಗಿದೆ. ಮೇಲಾಗಿ, ಹೊರಗೆ ಹೋಗುವ ಉತ್ಸಾಹವೇ ಇಲ್ಲವಾಗಿದೆ ನೋಡು….ಈಗ….ನೀನು ತಂದ ಸುದ್ದಿಯಿಂದ ನನಗೆ ಖಿಶಿಯಾಗಿಲ್ಲವೆಂದಲ್ಲ ಮೇರೀ_ತುಂಬ ತುಂಬ ಖುಶಿಯಾಗಿದೆ. ಆದರೆ ನೀನು ತಿಳಿದಿರಬಹುದಾದ ಕಾರಣಕ್ಕಾಗಿಯಲ್ಲ. ಯಾವ ಕಾರಣಕ್ಕಾಗಿ ಎನ್ನುವುದು ನನಗೂ ಸ್ಪಷ್ಟವಾಗಿಲ್ಲ : ನಾನು ರಾಜೀನಾಮೆಯನ್ನು ಕೊಯ್ಯ್ಟ್ಟಿದ್ದು ಬರೀ ನೌಕರಿಗಲ್ಲ ಮೇರೀ. ಹೀಗೇ ಬರಿಯೆ ನಮ್ಮ ನಮ್ಮ ಸ್ವಾರ್ಥಕ್ಕಾಗಿ, ಭಯಗಳಿಗಾಗಿ, ಒಬ್ಬರನ್ನೊಬ್ಬರು ಉಪಯೋಗಿಸಿಕೊಳ್ಳುವಂತೆ ಮಾಡುವ ಈ ವ್ಯಾವಹಾರಿಕ ಲೋಕಕ್ಕೆ ! ನೀನು ತಿಳಿದಹಾಗೆ, ನಾನು ಈ ನಿರ್ಧಾರವನ್ನು ಒಂದು ಪ್ರಕ್ಷುಬ್ಧ ಗಳಿಗೆಯಲ್ಲೇ ಮಾಡಿರಬಹುದಾದರೂ ಅದು ಸ್ವತಃ ನಾನೇ ತಿಳಿದದ್ದಕ್ಕಿಂತ ಹೆಚ್ಚು ಗಟ್ಟಿಮುಟ್ಟಾದದ್ದೆಂದು ಗೊತ್ತಾದದ್ದು ಮಾತ್ರ ಇದೀಗ_ನೀನು ನನ್ನ ಬಡತಿಯ ಸುದ್ದಿ ಒಡೆದಾಗ ! ಅಮೇರಿಕನ್-ಡೈರೆಕ್ಟರರಿಗೆ ನನ್ನ ಬಗ್ಗೆ ಆದರ ಇದ್ದುದನ್ನು ತಿಳಿದಾಗ ! ನನ್ನ ನಿರ್ಧಾರದ ನಿಶ್ಚಲತೆ ಅಹಂಕಾರದಲ್ಲಿ ಬೇರುಬಿಟ್ಟಿದ್ದಲ್ಲವೆಂದು ನನ್ನ ಪ್ರಾಮಾಣಿಕವಾದ ಅನ್ನಿಸಿಕೆ : ದೀರ್ಘಕಾಲದ ಯಾತನೆಯ ಕೊನೆಯಲ್ಲಿ ಹುಟ್ಟಿದ ಜಾಣತನವಿದು ಎಂದು ನಂಬಲೇ ? ನೌಕರಿಯ ಆಮಿಷ ಇಲ್ಲದಿದ್ದರಿಂದಲೇ ಸ್ವಚ್ಛವಾದ, ತಿಳಿಯಾದ ದೃಷ್ಟಿಗೆ, ನಿನ್ನ ಮಾತುಗಳನ್ನು ಕೇಳುತ್ತಿರುವಾಗ ಹೊಳೆದದ್ದು ಹೇಳಲೆ ? ಕೇಳು : ಈ ರಾಜಕಾರಣ ನೀನು ತಿಳಿದದ್ದಕ್ಕಿಂತ ಹೆಚ್ಚು ಆಳದ್ದು, ಮೇರೀ : ಲಕ್ಷಗಟ್ಟಲೆ ರೂಪಾಯಿಗಳ ಮಾಲು ಕಳುವಾಗಿಹೋದದ್ದು, ಹೋದ ರೀತಿ_ಇವು ಯಾರ ಕಿವಿಗೆ ಹೋದರೂ ಅಡ್ಡಿಯಿಲ್ಲ ; ಶೇರುದಾರರ ಕಿವಿಗೆ ಮಾತ್ರ ಹೋಗಕೂಡದು : ಹಾಗೆ ಆಗುವುದು ಕಂಪನಿಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಹಾನಿಕರವಾದದ್ದು. ಕಂಪನಿಯ ಆಡಳಿತ ಇಂಥವರ ಕೈಯಲ್ಲಿದೆ ಎನ್ನುವುದು ತಿಳಿಯಿತೆಂದರೆ ಅದರಿಂದಾಗಿ ಡೈರೆಕ್ಟರರಿಗೆ ಕಾದಿರುವ ತೊಂದರೆ ಅಷ್ಟಿಷ್ಟಲ್ಲ. ಸುತ್ತಲಿನ ಪರಿಸರದಲ್ಲಿಯ ತನ್ನ ಕೀರ್ತಿಯನ್ನು ಕಾಯ್ದುಕೊಳ್ಲುವುದು ಪ್ರತಿಯೊಂದು ಕಂಪನಿಗೆ ಭವಿತವ್ಯದ ದೃಷ್ಟಿಯಿಂದ ಅತ್ಯವಶ್ಯವಾಗಿರುತ್ತದೆ. ಇದನ್ನು ಅಮೇರಿಕೆಯ ಡೈರೆಕ್ಟರರು ಕಂಡುಕೊಂಡಷ್ಟು ಸ್ಪಷ್ಟವಾಗಿ ನಮ್ಮ ಒ‌ಆ ಆಗಲೀ ಆ‌ಒ‌ಆ ಆಗಲೀ ಕಂಡುಕೊಂಡಂತಿಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಕೆಳಗೆಳೆಯುವ ಆಟವೇ ದೊಡ್ಡದಾಗಿಬಿಟ್ಟಿತು ! ಒ‌ಆ ಯವರನ್ನು ಕೇಬಲ್ ಮುಖಾಂತರ ಅಮೇರಿಕೆಗೆ ಕರೆಯಿಸಿದ್ದು ಇದನ್ನು ಚರ್ಚಿಸಲು : ನೀನು ತಪ್ಪು ತಿಳಕೊಂದಂತೆ ಒ‌ಆ ಯವರ ಬಡತಿಯನ್ನಲ್ಲ ! ಮೂಕರ್ಜಿಯ ಪ್ರತಿ ಅಮೇರಿಕನ್ ಡೈರೆಕ್ಟರರ ಕೈ ಸೇರಿದ್ದೇ ಇದಕ್ಕೆಲ್ಲ ಕಾರಣ. They must have wanted him to just hush up the whole affair ! ನನ್ನ ಮತ್ತೊಂದು ಊಹೆ ಹೇಳಲೆ ? ಮೂಕರ್ಜಿಗೆ ಕಾರಣವಾದ ಮಾಹಿತಿಯನ್ನು ಅದು ಸಿಗಬಾರದವರ ಕೈಗೆ ಸಿಗುವಂತೆ ಮಾಡಿದವರು ಸ್ವತಃ ಒ‌ಆ ಅವರೇ ! ಪ್ಲೀಜ್ ಮೇರೀ_ಹಾಗೆ ಒಮ್ಮೆಲೇ ಬಿಳಚಿಕೊಳ್ಳಬೇಡ. ನನಗೆ ಹೇಗೆ ಗೊತ್ತು ಎಂದು ಭಯವಾಯಿತು ಅಲ್ಲವೆ ?_Simple : the logic of all actions having their roots in selfish motives ! ಬಹುಶಃ ನಿನಗೂ ನಾನು ಈಗ ಹೇಳುತ್ತಿದ್ದ ಸಂಗತಿ ಗೊತ್ತಿರಲಿಕ್ಕಿಲ್ಲ : ಆಡಿಟ್-ರಿಪೋರ್ಟಿನಲ್ಲಿದ್ದ ಗುಟ್ಟಿನ ಸಂಗತಿಗಳನ್ನು ಹೊರಗೆಡವಿದ್ದು ಕೂಡ ಒ‌ಆ ಅವರೇ ಎನ್ನುವದು. ಅಥವಾ ಗೊತ್ತಿರಲೂಬಹುದು. ಆದರೆ ನನ್ನ ಊಹೆ ದಿಟವಾದದ್ದು ಎನ್ನುವುದಕ್ಕೆ ನಾನೀಗ ಒದಗಿಸುವ ಪುರಾವೆ ಸರಿಯಾದದ್ದೋ ಅಲ್ಲವೋ ಎನ್ನುವುದನ್ನು ಮಾತ್ರ ನೀನೇ ಖಚಿತಪಡಿಸಬಲ್ಲೆ. ಹೇಳಲೇ ?_ನನ್ನನ್ನು ಮುಂಬಯಿಗೆ ವರ್ಗ ಮಾಡಿಸಿಕೊಂಡವರೂ ಒ‌ಆ ಯವರೇ ! ಪ್ಲೀಜ್ ಮೇರೀ, ಅಷ್ಟೊಂದು ಹೆದರಿಕೊಳ್ಳಬೇಡ. ನಾನೇನು ನಿನ್ನ ಮೇಲೆ ಆರೋಪ ಹೊರಿಸಲು ಹೊರಟಿಲ್ಲ_ನಿನಗೆ ಗೊತ್ತಿದ್ದೂ ನೀನು ನನಗೆ ತಿಳಿಸಲಿಲ್ಲವೆಂದು…. please relax and enjoy this game of guessing the motives : ಆ‌ಒ‌ಆ ಯವರನ್ನು ಪೇಚಿನಲ್ಲಿ ಸಿಕ್ಕಿಸುವ ತಮ್ಮ ಆಟ ಆರಂಭವಾದಾಗ ನಾನು ಹೈದರಾಬಾದಿನಲ್ಲಿದ್ದರೆ ತನ್ನ ಭೋಳೇತನದಿಂದಾಗಿ ಈ ಪೇಚಿನಿಂದ ಹೊರಬೀಳುವ ಉಪಾಯವನ್ನು ನಾನೇ ಏನಾದರೂ ಆ‌ಒ‌ಆ ಗೆ ಸೂಚಿಸಿಕೊಟ್ಟೇನೋ ಎಂಬುದು ಒ‌ಆ ಯವರ ಭಯವಾಗಿತ್ತು. He did not want take any chances and thought it safer to keep me away from the DMD! ಆದದ್ದೂ ಹಾಗೆಯೇ : ತಾನು ಸಿಕ್ಕಿಕೊಂಡ ಪೇಚಿನಿಂದ ತಪ್ಪಿಸಿಕೊಳ್ಳಲು ನನ್ನಿಂದ ಬೇಕಾದ ಸಹಾಯವೇ ಆ‌ಒ‌ಆ ಏರ್ಪಡಿಸಿದ ತನಿಖೆಯ ಉದ್ದೇಶವಾಗಿರಬೇಕು ! ಇಷ್ಟೇ, ಸಹಾಯವನ್ನು ಬೇಡಲಿಲ್ಲ. ಹೀಗೇ ಕೇಳಿದರೆ ಅದು ಸಿಗಲಾರದೆಂದು ಬಗೆದು ಹೆದರಿಸುವ ಉಪಾಯ ಹೂಡಿದರು. ಕಾರಣ : ಮೂಕರ್ಜಿಯ ಹಿಂದಿನ ತಲೆ ನನ್ನದೆನ್ನುವ ಗುಮಾನಿ ! ತನಿಖೆ ನಡೆದ ರೀತಿ ನೋಡಿದರೆ ಅದರ ಪೂರ್ವತಯಾರಿ ಬಹಳ ದಿನಗಳದ್ದೆಂದು ಗೊತ್ತಾಗುತ್ತದೆ. ನಿನ್ನ ಕಣ್ಣುಗಳಲ್ಲಿ ಇದೀಗ ಮಿಂಚಿದ ಹೊಳಪಿನ ಅರ್ಥವಾಗುತ್ತದೆ, ಮೇರೀ : ಒ‌ಆ ನಿನ್ನನ್ನೀಗ ಇಷ್ಟೊಂದು ತರಾತುರಿಯಲ್ಲಿ ಕಳಿಸಿದ್ದೇ ಇದಕ್ಕಾಗಿ_ಕನಿಷ್ಠ ತನಿಖೆಯ ಹೊತ್ತಿಗೆ ಏನೇನಾಯಿತು ಎನ್ನುವುದನಾದರೂ ತಿಳಿದು ಬರುವುದಕ್ಕಾಗಿ_ಅಲ್ಲವೆ ? ನಿನ್ನನ್ನು ತಪ್ಪು ತಿಳಿಯಲಾರೆ, ಮೇರೀ_ಹೆದರಬೇಡ. It is all in the game. ಈ ಆಟವನ್ನು ಎಷ್ಟು ಚೆನ್ನಾಗಿ ನಾನೀಗಾಗಲೇ ಅರಿತಿದ್ದೇನೆ ಎನ್ನುವುದಾದರೂ ನಿನಗೆ ಗೊತ್ತಾಗಲಿ ಎಂದು ಹೇಳುತ್ತೇನೆ : ಕಾರಖಾನೆಯಲ್ಲಿಯ ಬೆಂಕಿಗೂ ಕಳವಾದ ಮಾಲಿಗೂ ಬಾದರಾಯಣ-ಸಂಬಂಧ ಜೋಡಿಸುವಂತಹ ಸುಳ್ಳು ರಿಪೋರ್ಟಿನ ಮೇಲೆ ನನ್ನ ಸಹಿ ಬೇಕಿತ್ತು, ತನಿಖೆಯವರಿಗೆ ! ಮೂಲ ಯೋಜನೆಯ ಪ್ರಕಾರ ಆ‌ಒ‌ಆ ಸ್ವತಃ ಈ ತನಿಖೆ ನಡೆಸುವವರಿದ್ದರು_ಖಂಬಾಟಾನಂತೂ ನನಗೆ ಹಾಗೆಂದು ತಿಳಿಸಿದ್ದ. ತನಿಖೆಗೆ ಒ‌ಆ ಯವರ ಒಪ್ಪಿಗೆ ಪಡೆಯಲು ಏನು ಕಾರಣ ಕೊಟ್ಟಿದ್ದರೋ ನಾನರಿಯೆ. ಒ‌ಆ ಯವರೂ ಧೂರ್ತರೇ : ತನಿಖೆಗೆ ಕಾರಣ ಯಾವುದೇ ಇರಲೊಲ್ಲದೇಕೆ – ಒಮ್ಮೆ ಅದು ಆರಂಭವಾದಮೇಲೆ ಮಾತ್ರ ಆ‌ಒ‌ಆ ಹಾಗೂ ಅವರ ಚೇಲಾರನ್ನು ಒಳಗೊಳ್ಳುವಂತೆ ಅದರ ಜಾಲ ಪಸರಿಸಬಹುದು ಎನ್ನುವದು ಅವರ ಯೋಜನೆ ಇದ್ದಿರಬೇಕು. ಒ‌ಆ ಅಮೇರಿಕೆಗೆ ಹೋದ ಮೇಲೆ ಮಾತ್ರ ಆ‌ಒ‌ಆ ಗೆ ತನಗೆ ಸಲಹೆ ಇತ್ತ ದಸ್ತೂರ್ ಹಾಗೂ ಪಟೇಲರನ್ನೇ ಈ ತನಿಖೆಯ ಆಯೋಗದಲ್ಲಿ ಸೇರಿಸಿಕೊಳ್ಳುವ ಮನಸ್ಸಾಗಿರಬೇಕು. ತನಿಖೆಯ ಹೊತ್ತಿಗೆ ಆ ದಸ್ತೂರ್ ಬಿಚ್ಚಿದ ಸುಳ್ಳಿನ ಕಂತೆಗೆ ನಾನು ಹೆದರಲಿಲ್ಲ. ಮೇರೀ_ He made me sick by his lies : ಪಾಪ ! ಜಲಾಲ್ ಇನ್ನೂ ಆರ್ ಆಂಡ್ ಡೀ ಮ್ಯಾನೇಜರ್ ಆಗದೇ ಇದ್ದದ್ದು ನನಗೆ ಗೊತ್ತಿಲ್ಲ ಎಂದು ತಿಳಿದನೋ ! ಬೆಂಕಿ ಹುಟ್ಟಿಸಲು ಶಕ್ಯವೇ ಇಲ್ಲದ ನನ್ನ ಹೊಸ ಫಾರ್ಮ್ಯುಲೇಶನ್ ಇನ್ನೂ ಉತ್ಪಾದನೆಗೆ ಹೋಗಿಯೇ‌ಇಲ್ಲ ಎಂದು ನನಗೆ ಗೊತ್ತಿರುವುದನ್ನು ಅರಿಯನೋ ! ನಿಜ ಹೇಳಲೇ ?_‘ನಿನಗೆ ನಿನ್ನ ಅಪ್ಪ-ಅಮ್ಮರ ಬಗೆಗೇ ಸರಿಯಾಗಿ ಗೊತ್ತಿಲ್ಲದ್ದೇ ಈ ಬೆಂಕಿಗೆ ನೀನೇ ಕಾರಣ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ’ ಎಂದು ಅವರೇನಾದರೂ ಅಂದಿದ್ದರೆ ನಾನು ನಂಬಿಬಿಡುತ್ತಿದ್ದೇನೇನೋ. ಔಜಿ Of course, the MD will be interested to know that I did not sign that report_if that is what you wanted to know….ಆದರೆ ಒಂದು ವಿಚಿತ್ರ ಗಳಿಗೆಯಲ್ಲಿ ನಾನು ರಾಜೀನಾಮೆಯನ್ನು ಬರೆದು ಕೊಡುವುದಕ್ಕೆ ಕಾರಣವಾದದ್ದು ಮಾತ್ರ ಆ‌ಒ‌ಆ ಊಹಿಸಿಕೊಂಡದ್ದಲ್ಲ. ಕಾರಣವಾದದ್ದು ಬೇರೆಯೆ : ಈ ತನಿಖೆಗೂ ತಮಗೂ ಎಳ್ಳಷ್ಟೂ ಸಂಬಂದವಿಲ್ಲದಿದ್ದರೂ ಕೂಡ ನನ್ನ ಬಗ್ಗೆ ತುಂಬ ಆದರ, ಕಾಳಜಿ ವ್ಯಕ್ತಪಡಿಸಿದ ಇಬ್ಬರೂ ಹುಡುಗಿಯರು ಒಂದು ಸಂದುಕಟ್ಟಿನ ಗಳಿಗೆಯಲ್ಲಿ ಹುಟ್ಟಿಸಿದ ವಿಲಕ್ಷಣ ಭೀತಿ ! ಆ ಮೂಕರ್ಜಿಯ ಪ್ರತಿ ನನ್ನ ಕೈಯಲ್ಲೂ ಬಂದಿತ್ತು. ಮೇರಿ. ಅದನ್ನು ಓದುವ ಮೊದಲೇ ಹರಿದೊಗೆದಿದ್ದೆ. ನಿನ್ನ ಗೆಳತಿ ಥ್ರೀಟೀ ಇದ್ದಳು ಆಗ ಪ್ಲೇನಿನಲ್ಲಿ. ಮೂಕರ್ಜಿಯನ್ನು ಹರಿದು ಪ್ಲೇನ್ ಸೀಟಿನ ಕಿಸೆಯಲ್ಲಿ ತುರುಕುವಾಗ ಅವಳು ನೋಡಿಲ್ಲ ಎಂದುಕೊಂಡಿದ್ದೆ. ಆದರೆ ನೋಡಿರಬೇಕೆ. ಬರೇ ಕುತೂಹಲಕ್ಕಾಗಿ ಎತ್ತಿಕೊಂಡಿರಬೇಕು. ತಾನು ನಿಜಕ್ಕೂ ನನ್ನನ್ನು ಭೇಟಿಯಾಗಿ ಮಾತನಾಡಿದ್ದಳು ಎನ್ನುವುದಕ್ಕೆ ಪುರಾವೆ ಒದಗಿಸಲು ನಿನಗೆ ತೋರಿಸಿರಬೇಕು. ಈಗ ಸ್ಪಷ್ಟವಾಗುತ್ತದೆ : ಫಿರೋಜನ ಕೈಗೆ ನಾನು ಹರಿದೊಗೆದು ಮೂಕರ್ಜಿ ಸೇರಿದ್ದು ನಿನ್ನ ಮುಖಾಂತರ ಎಂದು ! ಆದರೆ ಆಗ_ತನಿಖೆಯ ಹೊತ್ತಿಗೆ ಮಾತ್ರ_ಬಂದಗುಮಾನಿಯೇ ಹೆಚ್ಚು ಭಯಾನಕವಾಗಿತ್ತು. ಇಷ್ಟೇ : ಆ ಗಳಿಗೆಗೆ ನೀನು ಆ‌ಒ‌ಆ ಪರವಾಗಿದ್ದವಳು ಎಂದು ತಿಳಿದಿದ್ದೆ. ಈಗ ಗೊತ್ತಾಯಿತು : ಫಿರೋಜನ ಪಾರ್ಟಿಗೆ ಹೋಗಿ ನಿನಗೆ ಒ‌ಆ ಗಿಂತ ಆ‌ಒ‌ಆ ಹೆಚ್ಚು ಸೇರುತ್ತಾರೆ ಎಂದು ನನಗೆ ತೋರಿಸಿಕೊಂಡೆ ! ಆ ಕಾಗದದ ತುಂಡುಗಳನ್ನು ಫಿರೋಜನಿಗೆ ಒಪ್ಪಿಸಿ ಮೂಕರ್ಜಿಗೆ ನಾನೇ ಕಾರಣ ಎಂದು ಅವನಿಗಿದ್ದ ಗುಮಾನಿ ಗಟ್ಟಿಯಾಗುವಂತೆ ಮಾಡಿದೆ ! You are doing a marvellous job for the MD. Hope you are paid well Mary…… ಒಂದು ಕಾಲಕ್ಕೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ, ಮೇರೀ. ನನ್ನ ಪ್ರೀತಿಯನ್ನು ನಿನ್ನಿದಿರು ಒಪ್ಪಿಕೊಳ್ಳುವ ಧೈರ್ಯ ಮಾತ್ರವಿರಲಿಲ್ಲ. ನೀನೂ ನನ್ನನ್ನು ಪ್ರೀತಿಸುತ್ತೀ ಎಂದು ಭಾವಿಸಿದ್ದೆ_and that was much before you joined the MD’s game of using me for his own benefit….. ನಾನು ನನ್ನ ರಾಜೀನಾಮೆಯನ್ನು ಹಿಂತೆಗೆದುಕೊಳ್ಳದಿದ್ದರೆ ಒ‌ಆ ಯವರಿಗೆ ತುಂಬ ಅನಾನುಕೂಲವಾಗುತ್ತದೆ ಎನ್ನುವುದನ್ನು ನಾನೂ ಒಪ್ಪುತ್ತೇನೆ. ಅಮೇರಿಕನ್ ಡೈರೆಕ್ಟರರೇ ಖುದ್ದಾಗಿ ಸೂಚಿಸಿದ ಬಡತಿಯನ್ನು ನಾನು ಸ್ವೀಕರಿಸಿಬಿಟ್ಟರೆ ಮಾತ್ರ ಫ್ಯಾಕ್ಟರಿಯಲ್ಲಿ ಆ‌ಒ‌ಆ ಯವರಿಗೆ ಈಗಿದ್ದ ಪ್ರಭಾವವನ್ನು ಕಡಿಮೆ ಮಾಡಲು ನನ್ನನ್ನು ಉಪಯೋಗಿಸಬಹುದಾಗಿತ್ತು. ಆದರೂ ಕಾಳಜಿ ಮಾಡಬೇಡ. ನಾನು ಆ ರಿಪೋರ್ಟಿನ ಮೇಲೆ ಸಹಿ ಮಾಡಿಲ್ಲ ಎನ್ನುವದು ಈಗ ನಿನ್ನಿಂದ ಗೊತ್ತಾಯಿತೆಂದರೆ ತಾವು ಹಾಕಿದ ಕರಾರುಗಳಿಗೆಲ್ಲ ಆ‌ಒ‌ಆ ಒಪ್ಪುವಂತೆ ಮಾಡಿ ನನ್ನ ರಾಜೀನಾಮೆಯನ್ನು ಸ್ವೀಕರಿಸಲು ತಾವೇ ಮುಂದಾಗುತ್ತಾರೆ. ಒ‌ಆ ! ಅಮೇರಿಕನ್ ಡೈರೆಕ್ಟರರು ಕೇಳಿರದ ದಸ್ತೂರ್ ನನ್ನ ಬಗ್ಗೆ ಸಿದ್ಧಪಡಿಸಿದ ರಿಪೋರ್ಟಿನ ಪ್ರತಿಯನ್ನು ಸ್ವತಃ ಒ‌ಆ ಯವರೇ ಅವರಿಗೆ ಕಳಿಸುತ್ತಾರೆ !ಈ ಘಟನೆಯಿಂದ ತಮಗಾದ ಸಂತಾಪ, ನಿರಾಸೆಗಳ ಜೊತೆಗೆ ನನ್ನ ರಾಜೀನಾಮೆಯನ್ನು ಸ್ವೀಕರಿಸದೇ ಇರುವುದರಲ್ಲಿಯ ತಮ್ಮ ಅಸಹಾಯಕತೆಯನ್ನು ನಯನಾಜೂಕಿನಿಂದಲೇ ವ್ಯಕ್ತಪಡಿಸುತ್ತಾರೆ ! ಏನೆಂದರೂ ಇಂತಹ ರಾಜಕೀಯದಲ್ಲಿ ಆ‌ಒ‌ಆ ಯಂಥ ಧೂರ್ತನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಗಟ್ಟಿತನ ನನ್ನಲ್ಲಿ ಇಲ್ಲದ್ದನ್ನು ಒ‌ಆ ಯವರೇನು ಅರಿಯದವರೇ ! ಆದರೂ ಇಷ್ಟೊಂದನ್ನು ಅವರಿಗೆ ತಪ್ಪದೇ ತಿಳಿಸು : ಅವರು ಬೇರೆ ಏನೇ ತಿಳಿಯಲಿ, ಏನೇ ಮಾಡಲಿ, ಟೆಕ್ನಿಕಲ್-ಡೈರೆಕ್ಟರ್ ಆಗುವ ನನ್ನ ಯೋಗ್ಯತೆಯನ್ನು ಕೊನೆಗೆ ಸಾವಿರಾರು ಮೈಲು ದೂರವಿದ್ದ ಅಮೇರಿಕನ್ನರಾದರೂ ಕಂಡುಹಿಡಿದರಲ್ಲ ಎಂದು ನನಗೆ ತುಂಬ ತುಂಬ ಸಂತೋಷವಾಗಿದೆ ಎಂದು. Belive me, Mery, the experience of the last two weeks has made me an expert in guessing motives behind human behaviour…….. ಈಗ ನಮ್ಮ ನೆರೆಮನೆಯ ಅರ್ಜುನ್‌ರಾವ್ : ರಾತ್ರಿ ಊಟಕ್ಕೆ ಕರೆದಿದ್ದಾರೆ. ಸಂಜೆ ನಿನ್ನ ಫೋನ್ ಬಂದಾಗ ಅಲ್ಲಿಗೇ ಹೋಗಿದ್ದೆ. ಆಗಲೇ ಸಿಹಿಸಿಹಿಯಾಗಿ ಮಾತನಾಡಿಸಿದ್ದಾರೆ. ನಾಳೆ ಬೆಳಗಾಗುವುದರೊಳಗೆ ಇಲ್ಲಿ ಒಂದು ದೊಡ್ಡ ನಾಟಕ ನೆಡೆಯುತ್ತದೆ : ಬದಿಯಲ್ಲಿ ಬಾಗಿಲಿಗೆ ಬೀಗವಿದ್ದ ಮನೆ ಇದೆಯಲ್ಲ, ಅಲ್ಲಿಯ ಒಬ್ಬ ಹೆಣ್ಣಿಗೆ ಈ ನಾಟಕದಲ್ಲಿ ದೊಡ್ಡ ಪಾತ್ರ ಸಿಗುತ್ತದೆ. ನಾಟಕದ ಉದ್ದೇಶ : ನನ್ನನ್ನು ಈ ಮನೆಯಿಂದ ಓಡಿಸುವುದು ! ಇನ್ನು ಓಡಲಾರೆ ಮೇರೀ_ನೋಡುತ್ತಿರುವಿಯಂತೆ. ನೀನು ಮಾತ್ರ ಈ ಮನೆಗೆ ಮತ್ತೆ ಬರುತ್ತೀಯೋ ಇಲ್ಲವೋ. ಬಹಳ ಸಣ್ಣ ಮನೆಯಿದು. ತುಂಬ ಹೊಲಸು ಚಾಳು. ಇಂದಿನಿಂದ ನಾನು ತೀರ ಸಣ್ಣ ಮನುಷ್ಯ. ನೌಕರಿ ಇಲ್ಲದವನು. ಯಾಕಾದರೂ ಬಂದೀಯಾ ?….”

ಏಕೋ ತಾನು ತನ್ನಷ್ಟಕ್ಕೇ ಮಾತನಾಡಿಕೊಳ್ಲುತ್ತಿದ್ದೇನೆ ಎಂಬ ಸಂಶಯ ಬಂದು ಮುಚ್ಚಿಕೊಂಡ ಕಣ್ಣುಗಳನ್ನು ತೆರೆದರೆ ಮುಂದಿನ ಕುರ್ಚಿ ಖಾಲಿಯಾಗಿತ್ತು ! ಆಗಿನಿಂದಲೂ ಹನಿಗೂಡುತ್ತಿದ್ದ ಕಣ್ಣುಗಳಿಂದ ನೀರು ಕೋಡಿವರೆಯಿತು. ಮೇರೀ ಯಾವಾಗ ಹೊರಟುಹೋದಳೋ ತಿಳಿಯಲಿಲ್ಲ. ಬಾಗಿಲು ತೆರೆದೇ ಇತ್ತು. ಅರೆ ! ಎನ್ನುತ್ತ ಕುರ್ಚಿಯಿಂದ ದಡಬಡಿಸಿ ಎದ್ದ. ಮೋರೆ ತೊಳೆಯಲು ಮೋರಿಗೆ ಹೋಗಬೇಕು ಎನ್ನುವಷ್ಟರಲ್ಲಿ ಅರ್ಜುನ್‌ರಾವ್ ಬಾಗಿಲಲ್ಲಿ ಹಾಜರ್ : “ಊಟಕ್ಕೆ ಸಿದ್ಧವಾಗಿದೆ, ನಿಮ್ಮ ಗೆಳತಿ ಬಹಳ ಹೊತ್ತು ಕೂಡ್ರಲೇ ಇಲ್ಲ, ಅಲ್ಲವೆ ? ಓಡೋಡಿಯೇ ಎನ್ನುವಂತಹ ಅವಸರದಲ್ಲಿ ಹೊರಟುಹೋದಳಂತೆ_ನಮ್ಮ ಮಗ್ಗುಲ ಮನೆಯವರು ಹೇಳಿದರು” ಎಂದರು.

undefined- ಅಧ್ಯಾಯ ಮೂವತ್ತೇಳು –

ಬೆಳಿಗ್ಗೆ ಎಚ್ಚರವಾದಾಗ ಹೊತ್ತು ಚಲೋ ಏರಿತ್ತು : ಕಿಡಕಿಯ ಕದಗಳೆಲ್ಲವನ್ನು ಮುಚ್ಚಿದ್ದರೂ ಸಂದಿಗಳೊಳಗಿಂದ ತೂರಿಬರುತ್ತಿದ್ದ ಕಿರಣಗಳು, ಕಿಡಕಿಯ ಆಚೆಯ ಜಗತ್ತಿನ ನಿತ್ಯಪರಿಚಯದ ಸದ್ದು, ಇವೆಲ್ಲ ಹೊತ್ತು ಎಂಟು ಗಂಟೆಯಾದರೂ ಆಗಿರಬೇಕು ಎಂಬುದನ್ನು ಸಾರುತ್ತಿದ್ದವು. ಏಳಬೇಕು ಅನ್ನಿಸಲಿಲ್ಲ. ನಿದ್ದೆಯ ಗುಳಿಗೆ ತೆದುಕೊಳ್ಳದೇ, ಬಿಯರಿನ ಅಮಲಿಗೆ ಮೊರೆಹೋಗದೇ ಇಷ್ಟೊಂದು ಗಾಢವಾಗಿ ಸದ್ಯಕ್ಕಂತೂ ನಿದ್ದೆಮಾಡಿದ್ದರ ನೆನಪು ನಾಗಪ್ಪನಿಗೆ ಇಲ್ಲವೇ ಇಲ್ಲ. ಎಲ್ಲದರಿಂದ ಬಿಡಿಸಿಕೊಂಡಂಥ ಸಂತ-ಭಾವನೆಯೊಂದು ಅದರ ಹುಟ್ಟಿಗೆ ಕಾರಣವಾದ ಸಂಗತಿಯನ್ನು ನೆನೆಯುವ ಆಸೆಯೊಡ್ಡಿತು. ಮರುಕ್ಷಣ ಅರಿವಿಗೆ ಬಂದಿತು : ತಾನು ತನ್ನ ಬದುಕಿನಲ್ಲೇ ಪ್ರಥಮ ಬಾರಿ ಎಂಬಂತೆ ಅಂಗಿ, ಬನಿಯನ್ ಕಳಚಿ ಬೋಳುಮೈಯಲ್ಲಿ ಮಲಗಿದ್ದೇನೆ ಎನ್ನುವುದು ! ಕಳೆದ ಮೂವತ್ತು ವರ್ಷಗಳಿಗೂ ಮಿಕ್ಕಿದ ಕಾಲಾವಧಿಯಿಂದ ತನ್ನನ್ನು ಸುಳ್ಳು ಸುಳ್ಳೇ ಹೆದರಿಸಿ ಗಾಸಿಗೊಳ್ಳುತ್ತ ಬಂದ_ತನ್ನ ಭೂತಕಾಲದ ಪ್ರತೀಕದಂತಿದ್ದ_ಬೆತ್ತಲೆ ಎದೆಯನ್ನು ಕಣ್ಣುಬಿಟ್ಟು ನೋಡುವ ಧೈರ್ಯ ಇದೀಗ ಬಂದಿತ್ತು ! ಇನ್ನು ಮುಂದೆಯೂ ಅದು ಸಾರುತ್ತಿದ್ದ ಭೀಕರ ಸತ್ಯವನ್ನು ತಾನು ಬಚ್ಚಿಯೇ ಇಡಬಹುದು. ಆದರೆ ಅದಕ್ಕೆ ತಾನೇ ಹೆದರುತ್ತೇನೆ ಎಂಬ ಕಾರಣಕ್ಕಾಗಿ ಅಲ್ಲ : ಉಳಿದವರನ್ನು ಹೆದರಿಸಬಾರದು ಎಂಬ ಉದ್ದೇಶದಿಂದ, ಅಷ್ಟೆ.

ನೆನ್ನೆ ಒಂದು ತೀರ ಅನಿರೀಕ್ಷಿತ ಕ್ಷಣದಲ್ಲಿ, ತೀರ ನಾಟಕೀಯವಾದ ರೀತಿಯಲ್ಲಿ ಅರ್ಜುನ್‌ರಾವ್, ಅವರ ಹೆಂಡತಿ, ತಾಯಿ, ಜಾನಕಿ, ಜಾನಕಿಯ ಗಂಡ, ನೆರೆಮನೆಗಳ ಕೆಲವರು_ಇವರೆಲ್ಲರ ಇದಿರು ಅವರು ಮಾಡಿದ ಒಂದು ದುಷ್ಟ ಆರೋಪಕ್ಕೆ ಉತ್ತರವಾಗಿ ಅಂಗಿ, ಬನಿಯನ್ ತೆಗೆದು ಬೆತ್ತಲೆ ಎದೆ, ಹೊಟ್ಟೆಗಳನ್ನು ತೋರಿಸಿದ್ದರ ರಭಸಕ್ಕೆ ನೆರೆದವರ ಬಾಯಿಂದ ‘ಕೀಂಂ’ ಎಂಬ ಚೀತ್ಕಾರ ಮೊಳಗಿತ್ತು. ಆರೋಪಕ್ಕೆ ಮೂಲ ಸ್ಪೂರ್ತಿಯಾದ ಜಾನಕಿಯ ಗಂಡನಂತೂ ಮೂರ್ಛೆಹೋಗುವ ಸ್ಥಿತಿಯಲ್ಲಿದ್ದ. ನಾಳೆ ಬೆಳಗಾಗುವುದರೊಳಗೆ ಇಲ್ಲಿ ಒಂದು ನಾಟಕ ನಡೆಯುತ್ತದೆ ಎಂದು ಬರಿಯೆ ಊಹೆಯಿಂದ ಮೇರಿಯ ಇದಿರು ಆಡಿ ತೋರಿಸಿದ್ದು ಈಗ ವಾಸ್ತವ ಘಟನೆಯಾಗಿ ನಡೆದುಹೋಗಿತ್ತು ! ಜಾನಕಿಯ ಚಲ್ಲಾಟದ ಮುರಕ ಕೂಡ ತನ್ನನ್ನು ಈ ಕೋಣೆಗಳಿಂದ ಓಡಿಸುವ ಸಂಚಿನದೇ ಅಂಗವಾಗಿತ್ತೆನ್ನುವದು ಗೊತ್ತಾದದ್ದು ಆಗಲೇ : ಅವಳ ಗಂಡನಿಗೆ ಟೇಲರಿಂಗ್ ಶಾಪ್ ತೆರೆಯಲು ಆ ಕೋಣೆಗಳು ತುಂಬ ಅನುಕೂಲವಾಗಿದ್ದವು ! ಈ ಎಲ್ಲ ಸಂಚಿಗೆ ಅರ್ಜುನ್‌ರಾವ್ ಹಾಗೂ ಶ್ರೀನಿವಾಸರ ಬೆಂಬಲವೂ ಇದ್ದರೆ ಆಶ್ಚರ್ಯ ಪಡಬೇಕಾದದ್ದಿಲ್ಲ. ಆದರೆ ಸಿದ್ಧಪಡಿಸಿದ ಆರೋಪ ಮಾತ್ರ ದಂಗುಬಡಿಸುವಂತಹದಾಗಿತ್ತು : ಅವನು ಚಾಳಿನ ಗಂದಸರೆಲ್ಲ ಕೆಲಸಕ್ಕೆ ಹೋದಾಗ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಜಾನಕಿಯನ್ನು ಸಂಧಿಸಿ ಅವಳಿಗೆ ಇಲ್ಲದ ಲೈಂಗಿಕ ಸನ್ನೆಗಳನ್ನು ಮಾಡುತ್ತಾನಂತೆ ! ಇದಕ್ಕೆಲ್ಲ ಹೆದರಿಯೇ ಪಾಪ ! ಅವಳು ಕಳೆದ ಕೆಲವು ದಿನ ಅಣ್ಣನ ಮನೆಯಲ್ಲಿ ಹೋಗಿ ಉಳಿದಳಂತೆ ! ಅವನು ಮಾಡುತ್ತಿದ್ದ ಹೊಲಸು ಸನ್ನೆಗಳನ್ನು ಪಟ್ಟಿ ಮಾಡಿ ಹೇಳುತ್ತ ಹೋದ ಅರ್ಜುನ್‌ರಾವರ ಮುದಿತಾಯಿ ಅವನಿಗೆ ಇನ್ನೂ ಅರ್ಥವಾಗಿರದ ಕ್ರೌರ‍್ಯದಿಂದ ಮೈಮೇಲಿನ ಭಾರ ಮರೆತವಳ ಹಾಗೆ ಅಸಹ್ಯ ಹಾವಭಾವಗಳೊಂದಿಗೆ_ “ಅಂಗಿಯ ಗುಂಡಿಗಳನ್ನು ಬಿಚ್ಚಿ ಬೆತ್ತಲೆ ಛಾತಿಯ ಕೂದಲು ತೋರಿಸುವಷ್ಟರ ಮಟ್ಟಿಗಿನ ಫಾಜೀಲತನ ಕೇಳಿ ಕೂಡ ಗೊತ್ತಿಲ್ಲದ್ದವ್ವ_ಇದೇನು ಫೋರಾಸ ರೋಡ್ ಎಂದು ತಿಳಿದನೋ….ಒಂದೋ ಮದುವೆಯಾಗಲಿ, ಇಲ್ಲ ಚಾಳು ಬಿಟ್ಟು ಹೋಗಲಿ,” ಎಂದಿದ್ದಳು ! ಮಾತಿಗಿಂತ ಹೆಚ್ಚಾಗಿ ಅವುಗಳ ಹಿಂದಿನ ಕುರೂಪ ಮನಸ್ಸು. ಅದಕ್ಕೆ ಪ್ರತಿಸ್ಪಂದಿಯಾದವರ ಕಣ್ಣುಗಳಲ್ಲಿ ವ್ಯಕ್ತವಾದ_ವಿಚಿತ್ರ ರೀತಿಯಿಂದ ಬಾಯಿ ಚಪ್ಪರಿಸುವಂತಹ ಕ್ರೂರ ಸಮಾಧಾನ, ಇವು ನಾಗಪ್ಪನ ಕ್ಷೋಭೆಗೆ ಕಾರಣವಾಗಿದ್ದವು….ಕಳಚಿದ ಅಂಗಿ ಬನಿಯನ್ನುಗಳನ್ನು ಕೈಯಲ್ಲಿ ಹಿಡಿದೇ ಅರ್ಜುನ್‌ರಾವ್ ರವರ ಮನೆ ಬಿಟ್ಟಾಗ ನೆರೆದವರಲ್ಲೊಬ್ಬರೂ ಚಕಾರ ಶಬ್ದ ಎತ್ತಲಿಲ್ಲ. ಸೀದ ಮನೆಗೆ ಬಂದು ಹಾಸಿಗೆಯಲ್ಲಿ ಅಡ್ಡಾದವನಿಗೆ ಬಹಳ ಹೊತ್ತಿನವರೆಗೆ ಬಾಧಿಸಿದ್ದು ಆ ನಿಃಶಬ್ದತೆಯೇ. ಮೌನ ತುಂಬಿದ ಕೋಣೆಯ ಕತ್ತಲೆಯಲ್ಲಿ ಮೂಡಿಬಂದ ಜಾನಕಿಯ ಮಾದಕ ದೇಹದ ನೆನಪು ಕೂಡ ಮೊದಲ ಬಾರಿ ಒಂದು ಬಗೆಯ ಭಯ ತುಂಬಿದ ವಿಷದಕ್ಕೆ ಕಾರಣವಾಯಿತು. ಮರುಗಳಿಗೆ, ಗೊತ್ತಾಗದ ರೀತಿಯಲ್ಲಿ ಒಂದು ಬಗೆಯ ಕೃತಜ್ಞತಾ ಭಾವಕ್ಕೆ ಕೂಡ ! ತನ್ನನ್ನು ತನ್ನಿಂದಲೇ ಪರಾರಿಯಾಗುವಂತೆ ಮಾಡಿದ ಎಲ್ಲವನ್ನೂ ಸ್ವೀಕರಿಸುವ ಧೈರ್ಯ ಕೊಟ್ಟ_ಕಳೆದ ಹದಿನಾಲ್ಕು ದಿನಗಳ_ನಾಟಕದ ಉಚ್ಚಾಂಕವೇ ನಿನ್ನೆ ರಾತ್ರಿಯ ಘಟನೆಯಾಗಿತ್ತು ! ತನ್ನ ಸೋದರತ್ತೆಗೆ ಸೇರಿದ ಈ ಕೋಣೆಗಳು ; ಗುಣವಾಗದ ರೋಗದ ಚಿಕೆತ್ಸೆಗೆಂದು ಮುಂಬಯಿಗೆ ಬಂದಾಗ ಇವೇ ಕೋಣೆಗಳಲ್ಲಿ ಒದಗಿದ ಅಮ್ಮನ ಸಾವು ; ತಂಗಿ ಇಲ್ಲಿಯದೇ ಜನಜಂಗುಳಿಯಲ್ಲಿ ಕಾಣೆಯಾದದ್ದು ; ಊರಿಗೆ ಹಿಂತಿರುಗಿದ ನಂತರ ಆದ ಬೆಂಕಿಯ ಅಪಘಾತ ; ಅಪ್ಪನ ಆತ್ಮಹತ್ಯೆ ; ಸೋದರತ್ತೆಯ ಮರಣ….ಎಲ್ಲ ಎಲ್ಲವನ್ನೂ ಸರಿಯಾದ ಬೆಳಕಿನಲ್ಲಿ ನೆನೆಯುವ ಧೈರ್ಯ ಮೊಳೆಯುತ್ತಿದ್ದಂತೆಯೇ ನಿರಾತಂಕವಾದ ಗಾಢ ನಿದ್ದೆ ಸೇರಿದ್ದ….ಈಗ ಎಲ್ಲ ನೆನಪಾಗತೊಡಗಿತು…..

ಮೈಮೇಲಿನ ಹೊದಿಕೆಯನ್ನು ಕಿತ್ತೊಗೆದವನೇ ಎರಡೂ ಕೈಗಳನ್ನು ಎದೆಯ ಮೇಲೆ, ಹೊಟ್ಟೆಯ ಮೇಲೆ, ಆಡಿಸಿಕೊಂಡ : ಕಣ್ಣು ತಮ್ಮಿಂದ ತಾವೇ ಮುಚ್ಚಿಕೊಂಡವು. ಹೊತ್ತು ಹೋದ ಹಾಗೆ ತಮ್ಮಿಂದ ತಾವೇ ತುಂಬಿಕೊಳ್ಳಹತ್ತಿದವು : ತಾನೇ ನೋಡಿಕೊಳ್ಳಲು ಹೆದರುತ್ತಿದ್ದುದನ್ನು‌ಒಂದೇ ಒಂದು ಜೀವ ಮಾತ್ರ ಅತ್ಯಂತ ಸಹಜವಾದ ಕೈಯ ಸ್ಪರ್ಶದಿಂದಲೇ ಸಹಾನುಭೂತಿ ಪ್ರೀತಿಗಳನ್ನು ವ್ಯಕ್ತಪಡಿಸುತ್ತಿತ್ತು_ರಾಣಿ : ಕೂಡಲೇ ಏಳುವುದಕ್ಕೆ ಕಾರಣವಾದವಳು ಅವಳೇ ! ಮಾತನ್ನೇ ಬೇಡದ ಈ ಸಂಬಂಧ ಕೊಡುತ್ತಿದ್ದ ಸುಖವನ್ನು ಮಾತಿನಲ್ಲಿ ವಿಶ್ಲೇಷಿಸಿ ಹಾಳುಮಾಡುವ ಮನಸ್ಸಾಗಲಿಲ್ಲ. ಯಾಕೆ ಎಂದು ಕೇಳುವುದು ಕೂಡ ಅಪ್ರಸ್ತುತವೆನಿಸಿತು. ಈಗಿಂದೀಗ ಹೋಗಿ ತನ್ನ ರಾಣಿಯನ್ನು ಕಾಣಬೇಕು ಅನ್ನಿಸುತ್ತದೆ. ಆದ್ದರಿಂದಲೇ ಆದಷ್ಟು ಬೇಗ ಸಿದ್ಧನಾಗಿ ಹೊರಡಬೇಕು ಅನ್ನಿಸುತ್ತದೆ, ಎಂದುಕೊಂಡ. ಎಲ್ಲದಕ್ಕೂ ಕಾರಣ ಬೇಡುವ, ಎಲ್ಲದರ ಉದ್ದೇಶ ಅರಿಯುವ ಮನಸ್ಸಿನ ದುಷ್ಟ ಹವ್ಯಾಸಕ್ಕೆ ಉತ್ತರವೆಂಬಂತೆ : ಎರಡೂ ಗಲ್ಲಗಳಲ್ಲಿ ಕುಳಿ ಬೀಳಿಸಿ ಮೊದಲೇ ಸಣ್ಣದಾದ ಕಣ್ಣುಗಳನ್ನು ಇನ್ನಷ್ಟು ಸಣ್ಣದಾಗಿಸಿ ಸುಂದರವಾಗಿ ನಗುವ ಅವಳ ಮೋರೆಯನ್ನು ನೋಡದೇ ಎಷ್ಟು ದಿನಗಳಾದವು…..ಹಾಗೆಂದೇ ಈಗಿಂದೀಗ ಹೊರಡಬೇಕು…..

ಪ್ರಾತರ್ವಿಧಿಗಳನ್ನು ಮುಗಿಸಿದ್ದೇ ಮೇರಿಗೆ ತುಂಬ ಪ್ರಿಯವಾದ, ಚೇತನಾ ಮೆಚ್ಚಿಕೊಂಡ ಕ್ರೀಮ್-ಕಲರ್ ಪ್ಯಾಂಟು, ನೀಲೀ ಬಣ್ಣದ ಬುಶ್‌ಶರ್ಟುಗಳನ್ನು ಧರಿಸಿದ. ನಿನ್ನೆ ಶ್ರೀನಿವಾಸ ಹಿಂತಿರುಗಿಸಿದ ಕರಿಯ ಬೂಟುಗಳನ್ನೇ ಹಾಕಿಕೊಂಡ. ಕನ್ನಡಿಯಲ್ಲೊಮ್ಮೆ ಮೋರೆ ನೋಡಿಕೊಂಡ : ತಾನಿದೀಗ ತುಂಬ ಖುಶಿಯಲ್ಲಿದ್ದೇನೆ ಅನ್ನಿಸಿಯೇ ಖುಶಿಯಾಯಿತು. ಕೊನೆಗೂ, ಬದುಕಿನ ಸುಖ ಇಂತಹ ಈ ಖುಶಿಯ ಕ್ಷಣಗಳಲ್ಲಷ್ಟೇ ನೆಲೆಸಿದ್ದೇನೋ ಎಂದು ಅದೇ ಹುಟ್ಟಿದ ವಿಚಾರವನ್ನು ಅರಿವಿಗೆ ತಂದುಕೊಳ್ಳುವ ಮನಸ್ಸಾಗಲಿಲ್ಲ. ನೇರವಾಗಿ ‘ಸಂತೋಷಭವನ’ಕ್ಕೆ ಹೋಗಿ ನಾಸ್ತಾ ಮುಗಿಸುವುದು ಹಾಗೂ ಅಲ್ಲಿಂದಲೇ ರಾಣಿಯ ಮನೆಗೆ ಹೋಗುವದು ಎಂದು ನಿಶ್ಚಯಿಸಿದ. ರಾಣಿಯ ಮನೆಗೆ ಹೀಗೆಂದು ಬೆಳಗ್ಗಿನ ಹೊತ್ತಿಗೆ ಹೋದವನಲ್ಲ. ಇಂದು ಮಾತ್ರ ಈಗಿಂದೀಗ ಹೋಗಿ ಅವಳನ್ನು ಕಾಣದೇ ಇರುವುದು ಅಸಾಧ್ಯ ಅನ್ನಿಸಿತು…..

ಬೆನ್‌ಹ್ಯಾಮ್-ಹಾಲ್-ಲೇನ್ ಸೇರಿದೊಡನೆ ತನ್ನನ್ನು ದಾದಾ ಎಂದು ಕರೆದು ಹೂವು ಮಾರಿದ ಹುಡುಗಿಯನ್ನು ಹುಡುಕಹತ್ತಿದ. ಕಾಣಲಿಲ್ಲವಾದ್ದರಿಂದ ನಿರಾಸೆಯಾಯಿತು. ಆದರೆ ಅದೇ ಜಾಗದಲ್ಲಿ ಕೂತ ಹುಡುಗನಿಂದ ಎರಡು ಮಲ್ಲಿಗೆ ಹೂವಿನ ಜಡೆಗಳನ್ನು ಕೊಂಡುಕೊಂಡ.‘ಯಾರಿಗಾಗಿ ?’ ಎಂಬ ನವಿರೆಬ್ಬಿಸುವ ಅರಿವೇ ‘ಯಾತಕ್ಕಾಗಿ ?’ ಎಂಬ ಪ್ರಶ್ನೆಯನ್ನು ಅಪ್ರಸ್ತುತಗೊಳಿಸಿತ್ತು ! ಹೂಜಡೆಗಳ ಆಹ್ಲಾದದಾಯಕ ಸುಗಂಧ ಅದಾಗಲೇ ಸ್ಥಾಯಿಯಾದ ಗೆಲುವಿಗೆ ಇನ್ನಷ್ಟು ಕಳೆ ತಂದಿತು. ‘ಸಂತೋಷಭವನ’ ಸೇರಿದ್ದೇ ತಡ, ಇದಿರಾದ ನಾಯಕ ವಿಚಿತ್ರ ರೀತಿಯಿಂದ ಹಲ್ಲು ಕಿಸಿದು ಬಾ ಎಂದ. ‘ನಿನ್ನೆ ಶ್ರೀನಿವಾಸನೇ ಎಲ್ಲ ಹೇಳಿದ,’ ಎಂದು ಆರಂಭಿಸುತ್ತಾನೆ ಒಂದೂ ಮಗ ಎಂದು ಊಹಿಸಿಕೊಂಡ ರೀತಿಯಲ್ಲೇ ನಾಯಕ ಆರಂಭಿಸಿದ್ದರಿಂದ ಮೋರೆಯ ಮೇಲೆ ನಗು ಮೂಡಿ_“ಹೌದೆ ? ಹಾಗಾದರೆ ನನ್ನ ಕೆಲಸ ಅಷ್ಟರಮಟ್ಟಿಗೆ ಹಗುರವಾಯಿತು.” ಅಲ್ಲಿ ನಿಲ್ಲದೇ ಸೀದ ಒಳಗೆ ಹೋಗಿ ತಾನು ಯಾವಾಗಲೂ ಕೂಡ್ರುತ್ತಿದ್ದ ಕೋಣೆಗೇ ನಡೆದ. ಎಂದಿನ ಮಾಣಿ ಇವನನ್ನು ನೋಡಿಯೂ ನೋಡದವನ ಹಾಗೆ ಇನ್ನೊಬ್ಬ ಗಿರಾಕಿಯತ್ತ ನಡೆದ : ಇವನಿಗೂ ಅದು ಗೊತ್ತಾಗಿರಬೇಕು. ಶ್ರೀನಿವಾಸ ಹಂಚುತ್ತ ನಡೆದ ‘ಹ್ಯಾಂಡ್‌ಬಿಲ್’ ಇವರೆಲ್ಲರ ಕೈಸೇರಿರಬೇಕು ಎಂದುಕೊಂಡು ಕಣ್ಣಮುಂದೆ ನಿಂತ ಮಾಣಿಗೆ_“ಗೋಪಾಲನನ್ನು ಕಳಿಸು,”ಎಂದಾಗ ಗೋಪಾಲನೇ ಅಳುಕುತ್ತ ಬಂದು ಮೋರೆ ಸಣ್ಣದು ಮಾಡಿ ನಿಂತ. ನಾಗಪ್ಪ ಮಾತನಾಡಿಸುವ ಮೊದಲೇ_“ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದರಂತೆ ಹೌದೆ ಸರ್ ?” ಎಂದು ಕೇಳಿದ. ನಾಗಪ್ಪ ಉತ್ತರವನ್ನು ಹೇಳುವ ಗೋಜಿಗೇ ಹೋಗಲಿಲ್ಲ. ಈಗ ಏನನ್ನೂ ಹೇಳಿ ಯಾವ ಪ್ರಯೋಜನವೂ ಇಲ್ಲ. ಸತ್ಯವನ್ನು ಅರಿಯುವ ಕುತೂಹಲದಿಂದ ಹುಟ್ಟುವ ಪ್ರಶ್ನೆಗಳೇ ಅಲ್ಲ ಇವು. ಈ ಪ್ರಶ್ನೆಗಳಿಗೆ ಒಳಗಾದ ಸನ್ನಿವೇಶದಲ್ಲಿ ಸಿಕ್ಕಿಕೊಂಡವನು ತಾನಲ್ಲವಲ್ಲ ಎಂಬುದೇ ಅವನ್ನು ಕೇಳುವುದರ ಹಿಂದಿನ ಧೈರ್ಯ : ಮನೆ ಕುಸಿದುಬಿದ್ದು ಜನ ಸತ್ತದ್ದು, ಬೆಂಕಿ ಹತ್ತಿ ನರಳಿದ್ದು, ಕೊಲೆಯಾದದ್ದು_ಎಲ್ಲ ಒಂದೇ : ಮಾತಿನಲ್ಲಿ ಮೂಡುವ ಸಹಾನುಭೂತಿಯ ಅಡಿಗೆ ನಾಲಗೆ ಚಪ್ಪರಿಸುತ್ತಿದ್ದ ದುಷ್ಟ ಕುತೂಹಲ ! ಹಿಂದೆ ಹಲವು ಸರತಿ ಅಂದುಕೊಂಡದ್ದನ್ನೇ ಇನ್ನೊಮ್ಮೆ ಅಂದುಕೊಂಡು_“ಇಡ್ಲಿ ಬಿಸಿ ಇದ್ದರೆ ಒಂದು ಪ್ಲೇಟು ಇಡ್ಲೀ ಹಾಗೂ ಬಿಸಿ ಬಿಸಿ ಕಾಫಿ ತಗೊಂಡು ಬಾ,” ಎಂದ. ತನ್ನ ಪ್ರಶ್ನೆಗೆ ಉತ್ತರ ಬರದಿದ್ದುದನ್ನು ಕಂಡು ತುಸು ಕಿರಿಕಿರಿಯಾದ ಮಾಣಿ_“ಮಾಲಕರೇ ಹೇಳಿದರು,” ಎಂದ. ಇದಕ್ಕೂ ನಾಗಪ್ಪ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಕಾಫಿ ಇಡ್ಲಿ ಬಂದ ಕೂಡಲೇ ತೀರ ಯಾಂತ್ರಿಕವಾಗಿ ಎನ್ನುವಂತೆ ಎರಡನ್ನೂ ಮುಗಿಸಿ ಬಿಲ್ಲಿನ ಹಣ ಕೊಟ್ಟು ಹೊರಗೆ ಬಿದ್ದ. ನಾಯಕ ಯಾರಿಗೋ ತನ್ನ ಬಗ್ಗೆ ಹೇಳುತ್ತಿದ್ದದ್ದು ಕೇಳಿಸಿದರೂ ಅದರತ್ತ ಲಕ್ಷ್ಯವನ್ನೇ ಕೊಡದೆ ನೇರವಾಗಿ ಅಪೆರಾ-ಹೌಸಿನತ್ತ ನಡೆಯಹತ್ತಿದ. ಅಲ್ಲಿ ತಲುಪಿದ ಕೂಡಲೇ ಆವರೆಗೂ ಅನ್ನಿಸಿರದ ಆತುರದಿಂದ ರಾಣಿಯ ಮನೆಯಿದ್ದ ಕೆನಡೀ ಬ್ರಿಜ್ ಕಡೆಗೆ ಹೆಜ್ಜೆ ಇಡಹತ್ತಿದ.

ಕೈಯಲ್ಲಿ ಹೂವಿನ ಜಡೆಗಳಿದ್ದ ಎಲೆಗಳ ಪೊಟ್ಟಣವಿತ್ತು. ರಾಣಿಯ ಮನೆ ಹತ್ತಿರವಾಗುತ್ತಿದ್ದ ಹಾಗೆ ಎದೆ ಡವಗುಟ್ಟಹತ್ತಿತು : ಅನೇಕ ದಿನಗಳ ಗೈರು ಹಾಜರಿಯ ನಂತರ ಬಂದ ಮನೆ. ವಿಲಕ್ಷಣ ರೀತಿಯಿಂದ, ಕಣ್ಣು ಅರ್ದ್ರಗೊಳ್ಳಲು ಕಾರಣವಾಯಿತು. ತೀರ ಪರಿಚಯದ ಕಬ್ಬಿಣದ ಸ್ಟೈರಲ್ ನಿಚ್ಚಣಿಕೆಯಿಂದ ಮೂರನೇ ಮಜಲೆಗೆ ಹೋಗುತ್ತಿರುವಾಗಂತೂ ಮನಸ್ಸನ್ನು ಮುತ್ತಿ ನಿಂತ ಭಾವನೆಗಳಿಗೆ ಮಾತು ಹುಡುಕುವುದು ಕಠಿಣವಾಯಿತು.

ಭಾವನೆಗಳ ಗುಂಗಿನಲ್ಲಿದ್ದಾಗಲೇ ಮನೆಯನ್ನು ತಲುಪಿಯಾಗಿತ್ತು. ಅಲ್ಲಿ ಬಂದು ಮುಟ್ಟಿದ ನಂತರವೇ ಈ ಹೊತ್ತಿಗೆ ಬರಬಾರದಾಗಿತ್ತೆಂದು ಅನ್ನಿಸಹತ್ತಿತು : ಕಾರ್ರಿಡಾರಿನ ಮೇಲೆ ಕೂತ ಇಬ್ಬರು ಹುಡುಗಿಯರು, ಇವನನ್ನು ಕಂಡವರೇ, ಸರಿಯಾದ ವೇಷ-ಭೂಷೆಯಲ್ಲಿ ಇಲ್ಲದ ಕಾರಣ ಗಾಬರಿ ತುಂಬಿದ ನಾಚಿಕೆಯಿಂದ ಒಳಕ್ಕೆ ಓಟ ಕಿತ್ತರು. ಅವರಲ್ಲೊಬ್ಬಳು ನಾಗಪ್ಪನ ಪರಿಚಯದವಳೇ_ರಾಣಿಯ ಗೆಳತಿ. ಹೆಸರು ಗೊತ್ತಿರಲಿಲ್ಲ. ರಾಣಿಯ ಮನೆಗೆ ಬೀಗವಿತ್ತು. ಬೀಗವನ್ನು ನೋಡುತ್ತಿದ್ದಂತೆಯೇ, ತನ್ನಿಂದ ಅವಳಿಗಾದ ಅನ್ಯಾಯದ ಅರಿವಾಯಿತೆನ್ನುವಂತೆ ಮನಸ್ಸು ಖಿನ್ನಗೊಂಡಿತು. ಹಾಗೆ, ಬೀಗವಿದ್ದ ಮನೆಯ ಇದಿರು ಖಿನ್ನ ಮನಸ್ಕನಾಗಿ ನಿಂತಿರುವಾಗಲೇ ಈ ಮೊದಲು ಒಳಗೆ ಓಡಿಹೋದ ಗೆಳತಿ ಸರಿಯಾಗಿ ಬಾಚಿಕೊಂಡ ಕೂದಲನ್ನು ಹೆಗಲ ಮೇಲೆ ಬಿಟ್ಟು, ಬೇರೆ ಸೀರೆ ಉಟ್ಟು, ನಗುತ್ತ ಹೊರಗೆ ಬಂದಳು. ಇವನನ್ನು ಸಮೀಪಿಸಿ_“ಇಷ್ಟು ದಿನ ಬರಲೇ ಇಲ್ಲ ?” ಎಂದು ಲವಲವಿಕೆಯ ಆತ್ಮೀಯತೆ ಪ್ರಕಟಿಸುತ್ತ ಕೇಳಿದಳು. ‘ರಾಣಿ ನಿಮ್ಮ ಹಾದಿ ಕಾದಳು.’ ಎನ್ನುವದಿತ್ತೇ ?- ಅವಳು ಸ್ಪಷ್ಟಪಡಿಸಲಿಲ್ಲ. ಅವಳ ಮುಂದಿನ ಮಾತಿನ ಹಾದಿ ಕಾಯುತ್ತಿದ್ದಾಗ, “ಈ ಮನೆಯಲ್ಲೀಗ ರಾಣಿ ಇರುವುದಿಲ್ಲ. ಬೇರೊಬ್ಬಳು ಬರುವವಳಿದ್ದಾಳೆ.” ಎಂದಳು, ತುಸು ತಡೆದು. “ರಾಣಿ ಮುಂಬಯಿ ಬಿಡುವವಳಿದ್ದಾಳೆ,” ಎಂದಳು. ಆ ಹೊತ್ತಿಗೆ ಇನ್ನಿಬ್ಬರು ಹುಡುಗಿಯರು ಬಂದು ನಾಗಪ್ಪನನ್ನು ಸುತ್ತುವರಿದು ನಿಂತು, “ಒಬ್ಬ ಶ್ರೀಮಂತ ಶೇಠಜೀ ಅವಳನ್ನು ಅಹಮ್ಮದಾಬಾದಿಗೆ ಕರೆದೊಯ್ಯುತ್ತಾನಂತೆ ಇನ್ನೆರಡು ದಿನಗಳಲ್ಲಿ. ನಿನ್ನೆ ಸಂಜೆ ಅಣ್ಣನ ಮನೆಗೆ ಹೋಗಿದ್ದಾಳೆ. ಅಣ್ಣನೇ ಬಂದಿದ್ದ ಅವಳನ್ನು ಕರೆದೊಯ್ಯಲು….”ಎಂದು ಒಬ್ಬಳು ಹೇಳುತ್ತಿರುವಾಗಲೇ ಇನ್ನೊಬ್ಬಳು ಗಂಡು-ದನಿಯನ್ನು ಹೋಲುವ ಗೊಗ್ಗರುದನಿಯಲ್ಲಿ, “ನಿಮ್ಮ ನೌಕರಿ ಹೋಯಿತಂತೆ, ಪಾಪ. ನಿನ್ನೆ ರಾಣಿಯ ಅಣ್ಣನೇ ಹೇಳಿದ,” ಎಂದಳು. ಇಲ್ಲವಾದರೆ ರಾಣಿ ಇಲ್ಲಿಂದ ಹೋಗುತ್ತಿರಲೇ ಇಲ್ಲವೆಂದು ಅವಳಿಗೆ ಹೇಳುವದಿತ್ತೇ ? ನಾಗಪ್ಪನಿಗೆ ಇದಾವುದರ ಅರ್ಥವೇ ಆಗುತ್ತಿರಲಿಲ್ಲ ! ಶಬ್ದ ಸೂಚಿಸುವ ಅರ್ಥಪ್ರಪಂಚದಾಚೆ ಎಲ್ಲೋ ಸುತ್ತಾಡುತ್ತಿದ್ದ ಅವನ ಮನಸ್ಸು ಈ ಹುಡುಗಿಯರು, ಅವರು ತನ್ನತ್ತ ನೋಡುವ ವಿಚಿತ್ರ ರೀತಿ, ಅವರಾಡುತ್ತಿದ್ದ ವಿಚಿತ್ರ ಮಾತುಗಳು_ಇವಾವುಗಳನ್ನೂ ಗ್ರಹಿಸುವ ಸ್ಥಿತಿಯಲ್ಲೇ ಇದ್ದಂತಿರಲಿಲ್ಲ ! ತಾನು ಎಲ್ಲಿ ಬಂದಿದ್ದೇನೆ ? ಯಾಕೆ ಬಂದಿದ್ದೇನೆ ? ಎನ್ನುವುದರ ಬಗೆಗೇ ದಿಗಿಲುಗೊಂಡಿದ್ದ. ನಿದ್ದೆಯಲ್ಲೆದ್ದು ನಡೆಯುವವನ ರೀತಿ ನಿಚ್ಚಣಿಕೆಯ ಕಡೆಗೆ ಹೆಜ್ಜೆ ಇಡುತ್ತಿದ್ದವನ ದೃಷ್ಟಿ ಶೂನ್ಯವಾಗಿತ್ತು. ರಾಣಿಯ ಗೆಳತಿ ಅವನ ಜೊತೆಗೆ ನಡೆಯುತ್ತ ನಿಚ್ಚಣಿಕೆಯವರೆಗೆ ಬಂದು_“ಇವತ್ತು ರಾತ್ರಿ ಬರುತ್ತೀರಾ ? ನಿಮ್ಮ ಹಾದಿ ಕಾಯುತ್ತೇನೆ,” ಎಂದಳು. ಶೂನ್ಯಮನಸ್ಕನಾಗಿಯೇ ರಾಣಿಗಾಗಿ ತಂದ ಹೂವಿನ ಜಡೆಗಳನ್ನು ಅವಳ ಕೈಯಲ್ಲಿಟ್ಟ. ಮಾತನಾಡಲಿಲ್ಲ : ಕಣ್ಣಿನಲ್ಲಿ ಮೂಡಿದವಳು ಅವಳಾಗಿಯೇ ಇರಲಿಲ್ಲ ! ಯಾರೂ ಆಗಿರಲಿಲ್ಲ !

ನಿಚ್ಚಣಿಕೆಯ ಮೊಟ್ಟಮೊದಲ ಮೆಟ್ಟಿಲ ಮೇಲೆ ನಿಂತು ಕೆಳಗೆ ನೋಡುತ್ತಿರುವಾಗ ಜೊತೆಗೆ ಬಂದ ಹುಡುಗಿ, “ನನ್ನ ಹೆಸರು ವತ್ಸಲಾ,” ಎಂದಳು : ಹೂವಿನ ಜಡೆಗಳನ್ನು ಅವಳು ತಪ್ಪಾಗಿ ತಿಳಿದಳೆ ? ಸರಿಯಾಗಿ ತಿಳಿಯುವುದೆಂದರೇನು ಎಂಬುದರ ಅರ್ಥ ಮೊದಲು ಆಗುತ್ತಿದ್ದರಲ್ಲವೆ ? ಕಣ್ಣುಗಳಲ್ಲಿ ಪರದೆಯಾಗುತ್ತಿದ್ದ ನೀರಿನ ಒಳಗಿನಿಂದ ಕಾಣುತ್ತಿದ್ದ ಮೂರು ಮಜಲು ಕೆಳಗಿನ ನೆಲ ಅಸ್ಪಷ್ಟವಾಗಿತ್ತು. ಆದರೆ ಅದರತ್ತ ಒಂದೊಂದೇ ಮೆಟ್ಟಿಲು ಇಳಿಯುತ್ತ ಕೆಳಗೆ ಸಾಗಿದ ನಾಗಪ್ಪನಿಗೆ ಜನ್ಮದಲ್ಲೇ ಮೊದಲ ಬಾರಿ ಎನ್ನುವಂತೆ ತನ್ನ ಹೆಜ್ಜೆಯ ಸದ್ದು ತನಗೇ ಸ್ಪಷ್ಟವಾಗಿ ಕೇಳಿಸುತ್ತಿತ್ತು ! ಮನಸ್ಸಿನ ಆಳದಲ್ಲೆಲ್ಲೋ ಗಟ್ಟಿಯಾಗಹತ್ತಿದ ನಿಶ್ಚಯವೊಂದು ಮಾತನ್ನು ಹುಡುಕುತ್ತಿತ್ತು : “ನನ್ನ….ಮಟ್ಟಿಗೆ…. ಇನ್ನೂ…. ಕಂಡಿರದ…. ಅಣ್ಣನನ್ನು…. ಕಾಣೆಯಾದ…. ತಂಗಿಯನ್ನು ಹುಡುಕಿ ತೆಗೆಯುವದೇ…. ನನ್ನ…. ಇನ್ನುಮುಂದಿನ….. ಆಯುಷ್ಯದ…. ಗುರಿಯಾಗಬೇಕು…..” ನೆಲ ಇನ್ನೂ ಹತ್ತಿರವಾಗುತ್ತಿದ್ದ ಹಾಗೆ ಅದರ ಕೆಲವು ವಿವರಗಳು ಸ್ಪಷ್ಟವಾಗಹತ್ತಿದವು : ಅದಾಗಲೇ ಬೆಚ್ಚಗಾಗಹತ್ತಿದ ಬಿಸಿಲಲ್ಲಿ ಉದ್ದನ್ನ ನೆರಳು ಚಾಚಿ ನಿಂತ ದೊಡ್ಡ ಆಲದ ಮರ. ಅದರಡಿಯಲ್ಲಿ ಬಿಳಿಯ ಧೋತರ, ಕಪ್ಪು ಕೋಟು, ಕೆಂಪು ರುಮಾಲು ಧರಿಸಿ ಕೂತ ಮುದುಕ ಇಲ್ಲಿ ಬರುವ ಮೊದಲು ನೋಡಿದವನೇ : ಹಸಿರು ಹಳದೀ ಬಣ್ಣಗಳ ಜೋಡಿ ಹಕ್ಕಿಗಳು ಕೂತ ಪಂಜರದ ಇದಿರು ಭವಿಷ್ಯ ಹೇಳುವ ಕಾಗದದ ಹಾಳೆಗಳನ್ನು ಹರಡಿ ಕೂತವನಿಗೆ ಈಗ ಇದ್ದಕ್ಕಿದ್ದ ಹಾಗೆ ವೋಮು ಮನಃಪಟಲವನ್ನು ವ್ಯಾಪಿಸಿ ನಿಂತ : ತಾನು ಈ ಮುಂದೆ ಹಿಡಿಯಬಹುದಾದ ಇನ್ನೊಂದೇ ದಾರಿಯ ಪ್ರತೀಕನೀತ ~ ಆಗೀಗ ಇದಿರಾಗಿ ಅಹ್ವಾನಿಸುತ್ತಾನೆ ಅನ್ನಿಸಿತು. ಅವನು ಸಂಕೇತಿಸುವ ದಾರಿಯನ್ನು ತುಳಿಯುವ ಧೈರ್ಯ ಮಾತ್ರ ಇನ್ನೂ ಬಂದಿಲ್ಲ. ಬಂದೇ ಬಂದೀತು ಒಂದು ದಿನ_‘ಯಾರೋ’ ಆಗಿ ಮೆರೆದವನು ‘ಯಾರೂ ಅಲ್ಲ’ವಾಗುವ ಧೈರ್ಯ ಬಂದಾಗ ~ ವನವಾಸ ಈಗಷ್ಟೇ ಮುಗಿದಿದೆ. ಅಜ್ಞಾತವಾಸವಿನ್ನೂ ತೊಡಗಲಿದೆ. ಆಗ ಬರುತ್ತೇನೆ. ವೋಮೂ, ನಿನ್ನ ಕಡೆಗೆ_ನಾನಾಗಿಯೇ. ಸದ್ಯ, ಇನ್ನೂ ಸಿಕ್ಕಿರದ ಅಣ್ಣ-ತಂಗಿಯರನ್ನೂ ಹುಡುಕಹೊರಟಿದ್ದೇನೆ. ಇದೋ….

ನಿಚ್ಚಣಿಕೆಯ ಅಡಿಯಲ್ಲಿ ಅವರು ಆಗಿನಿಂದಲೂ ತನ್ನ ದಾರಿ ಕಾಯುತ್ತ ನಿಂತಿದ್ದಾರೆ ಎಂಬ ತವಕದಿಂದ ಎಂಬಂತೆ ಕೊನೆಕೊನೆಯ ಮೆಟ್ಟಿಲುಗಳನ್ನು ಓಡೋಡಿಯೇ ಇಳಿದು ನಾಗಪ್ಪ, ನೆಲ ಮುಟ್ಟಿದ.

*****
ಕನ್ನಡಸಾಹಿತ್ಯ.ಕಾಂ ಪ್ರಕಟಣೆ : -೫-೨೦೦೮

Add Comment

Required fields are marked *. Your email address will not be published.